More

    ಪಿಂಕಾದವೋ ಕಣ್ಣು… ಹೆಚ್ಚಿದ ಬೇನೆ: ಪಿಂಕ್ ಐ, ರೆಡ್ ಐ, ಮದ್ರಾಸ್ ಐ ಉಲ್ಬಣ; ಹವಾಮಾನ ವೈಪರೀತ್ಯದಿಂದ ತೀವ್ರತೆ

    | ಪಂಕಜ ಕೆ.ಎಂ. ಬೆಂಗಳೂರು 
    ಹವಾಮಾನ ವೈಪರೀತ್ಯದಿಂದಾಗಿ ದೇಶದ ಹಲವೆಡೆ ಕಣ್ಣಿನ ಜ್ವರ ‘ಕಂಜಕ್ಟಿವೈಟಿಸ್’ (ಪಿಂಕ್ ಐ, ಮದ್ರಾಸ್ ಐ, ರೆಡ್ ಐ) ಉಲ್ಬಣಗೊಂಡಿದ್ದು, ಕಳೆದ ಮೂರು ವಾರಗಳಲ್ಲಿ ಕರ್ನಾಟಕದಲ್ಲಿ ಶೇ.17ರಷ್ಟು ಪ್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನ ಮಿಂಟೋ ಹಾಗೂ ನಾರಾಯಣ ನೇತ್ರಾಲಯದಲ್ಲಿ ಪ್ರತಿನಿತ್ಯ 250ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ.

    ಕಣ್ಣಿನ ಸೋಂಕಿನಿಂದ ಬಳಲುತ್ತಿರುವವರಲ್ಲಿ ಹಲವರಿಗೆ ಕಣ್ಣಿನ ಒಳಗಿರುವ ಬಿಳಿಯ ಭಾಗ ಗುಲಾಬಿ ಬಣ್ಣಕ್ಕೆ (ಪಿಂಕ್ ಐ) ತಿರುಗುತ್ತಿದ್ದರೆ, ಕೆಲವರಿಗೆ ಕೆಂಪು ಬಣ್ಣ (ರೆಡ್ ಐ), ಉರಿ ಹಾಗೂ ಊತ ಕಾಣಿಸಿಕೊಳ್ಳುತ್ತಿದೆ. ಆದರೆ, ಇವೆಲ್ಲವೂ ಮದ್ರಾಸ್ ಐ ಲಕ್ಷಣವೇ ಆಗಿದೆ ಎನ್ನುತ್ತಾರೆ ವೈದ್ಯರು. ಮಳೆಗಾಲದಲ್ಲಿ ಈ ರೀತಿಯ ಪ್ರಕರಣಗಳು ಸಾಮಾನ್ಯವಾದರೂ ಈ ವರ್ಷದಲ್ಲಿ ದೇಶದ ಕೆಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಸಂಬಂಧ ಖಾಸಗಿ ಸಂಸ್ಥೆ ಸಮೀಕ್ಷೆ ನಡೆಸಿದೆ. ರಾಜಧಾನಿ ದೆಹಲಿ ಹಾಗೂ ಮುಂಬೈ, ಪುಣೆ, ನಾಗ್ಪುರ ಸೇರಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತು ರಾಜ್ಯದಲ್ಲಿ ಕಣ್ಣಿನ ಜ್ವರ ಹೆಚ್ಚಿರುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಕಲುಷಿತವಾದ ಕೈ ಹಾಗೂ ವಸ್ತುಗಳ ಬಳಕೆಯು ಕಂಜೆಕ್ಟಿವೈಟಿಸ್ ಸೋಂಕು ವೇಗವಾಗಿ ಹರಡಲು ಕಾರಣ ಎನ್ನಲಾಗಿದೆ.

    ಪುರುಷರಲ್ಲಿ ಹೆಚ್ಚು: ದೆಹಲಿಯಲ್ಲಿ ಶೇ.27 , ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಶೇ.17 ಕಂಜಕ್ಟಿವೈಟಿಸ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಶೇ. 66 ಪುರುಷರು ಹಾಗೂ ಶೇ.34 ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ. ಒಬ್ಬರಿಗೆ ಸೋಂಕು ಕಾಣಿಸಿಕೊಂಡರೆ ಅವರಿಂದ ಮನೆಯವರೆಲ್ಲ ಸೋಂಕಿಗೆ ಒಳಗಾಗುತ್ತಿದ್ದಾರೆ. ತೀವ್ರವಾದ ಮಳೆ ಹಾಗೂ ಪ್ರವಾಹದಿಂದಾಗಿ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚಿದ್ದು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಿತ್ಯ ಚಿಕಿತ್ಸೆಗೆ ಬರುವ 600 ಹೊರ ರೋಗಿಗಳಲ್ಲಿ 100-150 ಹಾಗೂ ನಾರಾಯಣ ನೇತ್ರಾಲಯದಲ್ಲಿ ನಿತ್ಯ ನೂರಕ್ಕೂ ಅಧಿಕ ಇಂಥ ಪ್ರಕರಣಗಳು ವರದಿಯಾಗುತ್ತಿವೆ.

    ಮೂರು ವಿಧದ ಸೋಂಕು: ಕಂಜಕ್ಟಿವೈಟಿಸ್ ಮೂರು ವಿಧಗಳಲ್ಲಿ ಹರಡುತ್ತದೆ. ಬ್ಯಾಕ್ಟೀರಿಯಾ, ವೈರಲ್ ಮತ್ತು ಅಲರ್ಜಿ ಕಣ್ಣಿನ ಜ್ವರ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ವಯಸ್ಕರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಶಾಲೆಗೆ ಹೋಗುವ ಮಕ್ಕಳು ಹೆಚ್ಚಿನ ಅಪಾಯ ಎದುರಿಸಬೇಕಾಗಿದೆ. ಶಾಲೆಯಲ್ಲಿ ಸೋಂಕಿಗೆ ಒಳಗಾಗುವ ಮಕ್ಕಳಿಂದ ಮನೆಯಲ್ಲಿ ಇರುವವರು ಕಾಯಿಲೆಗೆ ಒಳಗಾಗುತ್ತಿದ್ದಾರೆ.

    ಹರಡಲು ಕಾರಣಗಳು: ಕಲುಷಿತ ಕೈಗಳು, ವಸ್ತುಗಳು, ನೀರು ಹಾಗೂ ಗಾಳಿ ಸಂಪರ್ಕದಿಂದ ಕಂಜಕ್ಟಿವೈಟಿಸ್ ಅಪಾಯ ಹೆಚ್ಚಾಗುತ್ತದೆ. ಕಣ್ಣಿನಲ್ಲಿ ಜಿಗುಟಾದ ಕೀವು ಉಂಟು ಮಾಡುತ್ತದೆ. ಇದು ಅಲರ್ಜಿ ಪ್ರಕ್ರಿಯೆಯಿಂದ ಉಂಟಾಗುತ್ತದೆ. ಅಂದರೆ ಪರಾಗ, ಪ್ರಾಣಿಗಳು, ಸಿಗರೇಟ್ ಹೊಗೆ, ಈಜುಕೊಳದ ನೀರಿನಲ್ಲಿರುವ ಕ್ಲೋರಿನ್, ಆಟೋಮೊಬೈಲ್ ಹೊಗೆ ಹಾಗೂ ಪರಿಸರದಲ್ಲಿನ ಇತರೆ ಕಲುಷಿತ ಅಂಶಗಳಿಂದ ಹರಡುತ್ತದೆ. ಇದು ಸಾಮಾನ್ಯವಾಗಿ 5-7 ದಿನಗಳವರೆಗೆ ಇರುತ್ತದೆ. ಗಂಭೀರ ಸಂದರ್ಭದಲ್ಲಿ 14 ದಿನಗಳವರೆಗೂ ಕಾಡಲಿದೆ. ಹೀಗಾಗಿ ನಿರ್ಲಕ್ಷ್ಯ ಮಾಡದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಎನ್ನುತ್ತಾರೆ ನೇತ್ರ ತಜ್ಞರು.

    ಮಳೆ ಹಾಗೂ ತಂಪು ವಾತಾವರಣದಿಂದ ವೈರಾಣು ಸಕ್ರಿಯವಾಗಿದ್ದು, ಗಾಳಿಯಲ್ಲಿ ವೇಗವಾಗಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ನಿರ್ಲಕ್ಷಿಸದೆ ವೈದ್ಯರಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು.
    | ಡಾ. ಸುಜಾತಾ ರಾಥೋಡ್, ಮಿಂಟೋ ಆಸ್ಪತ್ರೆ ನಿರ್ದೇಶಕಿ

    ತಂಪು ವಾತಾವರಣದಲ್ಲಿ ಕಣ್ಣಿನ ಸೋಂಕು ಪ್ರಕರಣಗಳು ಸಾಮಾನ್ಯ. ಈ ಬಾರಿ ಪ್ರಕರಣಗಳ ಸಂಖ್ಯೆ ಸ್ವಲ್ಪ ಹೆಚ್ಚಿದೆ. ಜನರು ಕೋವಿಡ್ ನಿಯಮಗಳನ್ನು ಪಾಲಿಸದಿರುವುದು ಸಹ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಮಕ್ಕಳು, ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ಬೇಗ ಹರುಡುತ್ತದೆ. ಹೀಗಾಗಿ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.
    | ಡಾ. ರೋಹಿತ್ ಶೆಟ್ಟಿ, ನಾರಾಯಣ ನೇತ್ರಾಲಯದ ಅಧ್ಯಕ್ಷ

    ಸೋಂಕಿನ ಲಕ್ಷಣಗಳು

    • ಕಣ್ಣಿನಲ್ಲಿ ಉರಿ ಹಾಗೂ ಊತ
    • ಕಣ್ಣಿನ ಒಳಗಿರುವ ಬಿಳಿಯ ಭಾಗ ಗುಲಾಬಿ/ಕೆಂಪು ಬಣ್ಣಕ್ಕೆ ತಿರುಗುವುದು
    • ಕಣ್ಣಿನಲ್ಲಿ ಸದಾ ನೀರು ಸುರಿಯುವುದು
    • ಕಣ್ಣಿನಲ್ಲಿ ಅತಿಯಾದ ತುರಿಕೆ ಆಗುವುದು
    • ದೃಷ್ಟಿ ಮಂಜು ಮಂಜಾಗುವುದು
    • ಕಣ್ಣಿನಲ್ಲಿ ಕೀವು ರೀತಿಯಲ್ಲಿ ಅಂಟು ಬರುವುದು
    • ನಿದ್ರಿಸಿದ ನಂತರ ಕಣ್ಣಿನ ರೆಪ್ಪೆ ಅಂಟಿಕೊಂಡಿರುವುದು

    ಎಚ್ಚರಿಕೆ ಕ್ರಮಗಳು

    • ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು
    • ಅಶುಚಿ ಕೈಗಳಿಂದ ಕಣ್ಣು ಸೇರಿ ಮುಖ ಮುಟ್ಟಿಕೊಳ್ಳದಿರುವುದು
    • ಹೊರಗೆ ಹೋಗುವಾಗ ಕನ್ನಡಕ ಬಳಸುವುದು
    • ಸೋಪು, ಟವೆಲ್, ಮೇಕಪ್ ಸೇರಿ ಸೋಂಕಿತ ವ್ಯಕ್ತಿ ಬಳಸುವ ವಸ್ತುಗಳನ್ನು ಬಳಸಬಾರದು
    • ಸೋಂಕಿತ ವ್ಯಕ್ತಿ ಗುಣಹೊಂದುವವರೆಗೂ ಮನೆಯಿಂದ ಹೊರಗೆ ಹೋಗಬಾರದು
    • ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷಿಸದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು
    • ಕಣ್ಣುಗಳನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳುವುದು
    • ಔಷಧಗಳನ್ನು ಕ್ರಮವಾಗಿ ಬಳಸುವುದರ ಜತೆಗೆ ವೈದ್ಯರ ಸಲಹೆಗಳನ್ನು ಪಾಲಿಸುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts