More

    ಪಿಲಿಕುಳದಲ್ಲಿ ಕೇಳಿಸಲಿದೆ ಬಿಳಿ ಹುಲಿಗಳ ಗರ್ಜನೆ

    ಮಂಗಳೂರು: ಹೊಸ ವರ್ಷದ ಆರಂಭದಲ್ಲೇ ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ನಿಸರ್ಗಧಾಮಕ್ಕೆ ಅಪರೂಪದ ಅತಿಥಿಗಳು ಆಗಮಿಸಲಿದ್ದಾರೆ. ಆಂಧ್ರಪ್ರದೇಶ ಮತ್ತು ಗುಜರಾತ್‌ನಿಂದ ಎರಡು ಬಿಳಿ ಹುಲಿಗಳು ಪಿಲಿಕುಳಕ್ಕೆ ಬರಲಿವೆ.

    ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ಮೃಗಾಲಯ ಹಾಗೂ ಗುಜರಾತ್‌ನ ರಾಜ್‌ಕೋಟ್ ಮೃಗಾಲಯಗಳಿಂದ ತಲಾ ಒಂದೊಂದು ಬಿಳಿ ಹುಲಿಗಳನ್ನು ಪಿಲಿಕುಳ ಪ್ರಾಣಿ ಸಂಗ್ರಹಾಲಯಕ್ಕೆ ತರುವ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಒಪ್ಪಂದ ನಡೆದಿತ್ತು. ಆದರೆ ಕರೊನಾ ಕಾರಣದಿಂದ ಅಂತಾರಾಜ್ಯ ಸಂಚಾರ ಅಸಾಧ್ಯವಾದ್ದರಿಂದ ತಡೆಯಾಗಿತ್ತು.
    ಈಗ ಮೃಗಾಲಯಗಳು ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳುತ್ತಿದ್ದು, ಹುಲಿಗಳನ್ನು ಪಿಲಿಕುಳಕ್ಕೆ ತರಲು ಬೇಕಾದ ಪ್ರಕ್ರಿಯೆಗಳು ನಡೆಯುತ್ತಿವೆ. ಜನವರಿ 15ರ ಒಳಗೆ ಹೊಸ ಅತಿಥಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಪಿಲಿಕುಳದ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪಿಲಿಕುಳದಲ್ಲಿ ಪ್ರಸ್ತುತ 11 ಹುಲಿಗಳಿವೆ. ಆದರೆ ಬಿಳಿ ಹುಲಿಗಳಿಲ್ಲ. ಹೈದರಾಬಾದ್ ಮೃಗಾಲಯಕ್ಕೆ ಪಿಲಿಕುಳದಿಂದ ಹುಲಿ ಕಳುಹಿಸುವ ಬಗ್ಗೆಯೂ ಪ್ರಕ್ರಿಯೆಗಳಾಗುತ್ತಿವೆ. ಇತರ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲೂ ಇತರ ಮೃಗಾಲಯಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ.

    ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ:
    ಪಿಲಿಕುಳ ನಿಸರ್ಗಧಾಮ 150 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. 20 ವರ್ಷಗಳ ಹಿಂದೆ ಪ್ರಾರಂಭಗೊಂಡ ನಿಸರ್ಗಧಾಮ ಕೇಂದ್ರ ಮೃಗಾಲಯ ಪ್ರಾಧಿಕಾರದ ಅಡಿಯಲ್ಲಿ ಬರುವ ರಾಜ್ಯದ ಏಕೈಕ ಮೃಗಾಲಯ. 1200ಕ್ಕೂ ಅಧಿಕ ಪ್ರಾಣಿ, ಪಕ್ಷಿ, ಸರೀಸೃಪಗಳಿವೆ. ಇದರ ನಿರ್ವಹಣೆಗೆ ಸರ್ಕಾರದ ಅನುದಾನ ಇಲ್ಲದೆ ಇರುವುದರಿಂದ ಪ್ರವಾಸಿಗರ ಟಿಕೆಟ್‌ಗಳಿಂದ ಬರುವ ಆದಾಯದಿಂದಲೇ ಆಗಬೇಕಾಗಿದೆ. ಹಿಂದೆ ಕೆಲವು ಕಂಪನಿಗಳ ಸಿಎಸ್‌ಆರ್ ನಿಧಿ ಹಾಗೂ ಸಾರ್ವಜನಿಕರು ದತ್ತು ಯೋಜನೆ ಅಡಿಯಲ್ಲಿ ನಿರ್ವಹಿಸಲಾಗುತ್ತಿತ್ತು. ಈಗ ಕಂಪನಿಗಳು, ದತ್ತು ಪಡೆಯುವವರು ಮುಂದೆ ಬರುತ್ತಿಲ್ಲ. ಇದರಿಂದಾಗಿ ನಿಸರ್ಗಧಾಮ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ.

    ಆಂಧ್ರಪ್ರದೇಶ ಹಾಗೂ ಗುಜರಾತ್‌ನಿಂದ ಎರಡು ಬಿಳಿ ಹುಲಿಗಳನ್ನು ತರುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಜನವರಿಯಲ್ಲಿ ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ. ಇದರ ಜತೆಗೆ ಇತರ ಪ್ರಾಣಿಗಳ ವಿನಿಮಯವೂ ನಡೆಯಲಿದೆ. ಕರೊನಾ ಕಾರಣದಿಂದ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಮೃಗಾಲಯಕ್ಕೆ ಪ್ರವಾಸಿಗರ ಆಗಮನ ಹೆಚ್ಚಾಗುತ್ತಿದೆ.
    – ಜಯಪ್ರಕಾಶ್ ಭಂಡಾರಿ, ನಿರ್ದೇಶಕ, ಪಿಲಿಕುಳ ನಿಸರ್ಗಧಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts