More

    ಕೊಳ್ಳೇಗಾಲ ಪ್ರವೇಶ ದ್ವಾರಗಳಲ್ಲಿ ಹೆಚ್ಚುತ್ತಿದೆ ಕಸದ ರಾಶಿ

    ಕೊಳ್ಳೇಗಾಲ: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರವೇಶ ದ್ವಾರಗಳು ತ್ಯಾಜ್ಯ ವಿಲೇವಾರಿ ಘಟಕಗಳಾಗಿ ಮಾರ್ಪಟ್ಟಿದ್ದು, ಈ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

    ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ದೂರಿನ ಮೇರೆಗೆ ಕಸ ತೆರವು ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದರು. ಆದರೂ ನಗರಸಭೆ ಅಧಿಕಾರಿಗಳು ಕಾರ್ಯೋನ್ಮುಖರಾಗದಿರುವುದು ಡಿಸಿ ಸೂಚನೆಗೂ ಡೋಂಟ್ ಕೇರ್ ಎಂಬುದನ್ನು ತೋರಿಸುತ್ತಿದೆ.

    ಪಶ್ಚಿಮ ದಿಕ್ಕಿನಲ್ಲಿರುವ ಮುಳ್ಳೂರಿನಿಂದ ಪಟ್ಟಣಕ್ಕೆ ಪ್ರವೇಶಿಸುವ ದ್ವಾರ ಹಾಗೂ ಪೂರ್ವ ದಿಕ್ಕಿನಲ್ಲಿರುವ ನೂರ್ ಮೊಹಲ್ಲ ಬಡಾವಣೆ ದ್ವಾರದಲ್ಲಿ ಪ್ಲಾಸ್ಟಿಕ್, ಮಾಂಸದಂಗಡಿಗಳ ತ್ಯಾಜ್ಯ, ಕಸದ ರಾಶಿ ರಾರಾಜಿಸುತ್ತಿದೆ. ಇದರಿಂದ ಪಟ್ಟಣದ ಪ್ರಮುಖ ರಸ್ತೆಯ ಸೌಂದರ್ಯವೇ ಕಳೆಗುಂದಿದೆ.

    ಡಿಸಿ ಸೂಚನೆಗೂ ಕಿಮ್ಮತ್ತಿಲ್ಲ: ಡಿ.30 ರಂದು ನಗರಸಭೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಸಭೆಯಲ್ಲಿ ಸದಸ್ಯರು ಈ ಸಂಬಂಧ ದನಿ ಎತ್ತಿದ್ದರು. ಜತೆಗೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿ, ದ್ವಾರಗಳಲ್ಲಿ ತ್ಯಾಜ್ಯ ಸುರಿಯದಂತೆ ಕ್ರಮವಹಿಸಬೇಕೆಂದು ಖಡಕ್ ಸೂಚನೆ ನೀಡಿದ್ದರು. ವಿಪರ್ಯಾಸವೆಂದರೆ ಸಭೆ ನಡೆದು ಏಳೆಂಟು ದಿನವಾದರೂ ಕಸ ತೆರವಿಗೆ ಅಧಿಕಾರಿಗಳು ಮುಂದಾಗಿಲ್ಲ.

    ಎಸ್ಸಿ-ಎಸ್ಟಿ ಸಭೆಯಲ್ಲೂ ಚರ್ಚೆ: ಜ.6ರಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಹಿತರಕ್ಷಣಾ ಸಭೆಯಲ್ಲೂ ಸ್ವಚ್ಛತೆ ಕುರಿತು ಮುಖಂಡರು ದೂರು ನೀಡಿದ್ದರು. ಬಳಿಕ ಆಯುಕ್ತ ಎ.ರಮೇಶ್ ಅವರಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಶಾಸಕರು ಸೂಚನೆ ನೀಡಿದ್ದರು. ಆದರೆ ಮಾತ್ರ ಸಮಸ್ಯೆಗೆ ಪರಿಹಾರ ದೊರಕಿಲ್ಲ.

    ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ: ಸಾರ್ವಜನಿಕರ ಕುಂದು ಕೊರತೆ ಸಭೆ, ನಗರಸಭೆ ಸಾಮಾನ್ಯಸಭೆಯಲ್ಲಿ ನಡೆದ ಚರ್ಚೆ ಹಾಗೂ ನಡಾವಳಿಗಳಿಗೆ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಮೇಲಧಿಕಾರಿಗಳು ಕೊಟ್ಟ ಸೂಚನೆಯನ್ನೂ ಪಾಲಿಸುತ್ತಿಲ್ಲ. ಇಚ್ಛಾಶಕ್ತಿ ಕೊರತೆಯಿಂದ ಸ್ವಚ್ಛತೆ ಕೊರತೆ ಪಟ್ಟಣವನ್ನು ಕಾಡುತ್ತಿದೆ ಎಂಬುದು ಸಾರ್ವಜನಿಕರ ದೂರು.

    ನಗರಸಭೆಗೆ ಹೊಸದಾಗಿ ಆಯುಕ್ತರು ಬಂದಿದ್ದಾರೆ. ಅವರಿಗೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಡವಳಿಯ ಬಗ್ಗೆ ಮಾಹಿತಿ ನೀಡಲಗುವುದು. ಡಿಸಿ ಅವರ ಸೂಚನೆಯಂತೆ ಪ್ರವೇಶ ದ್ವಾರದಲ್ಲಿರುವ ತ್ಯಾಜ್ಯವನ್ನು ತೆರವು ಮಾಡಲಾಗುವುದು/
    ಚೇತನ್ ಹೆಲ್ತ್ ಇನ್ಸ್‌ಪೆಕ್ಟರ್, ನಗರಸಭೆ, ಕೊಳ್ಳೇಗಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts