More

    ಯಾಲಕ್ಕಿ ನಗರಿಯಲ್ಲಿ ಪಿಗ್ ಪ್ರಾಬ್ಲಂ

    ಹಾವೇರಿ: ಯಾಲಕ್ಕಿ ಕಂಪಿನ ನಗರದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಒಂದೆಡೆ ಸಿದ್ಧತೆ ನಡೆದಿದೆ. ಇನ್ನೊಂದೆಡೆ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ನಗರದ ನೈರ್ಮಲ್ಯ ಹಾಳಾಗುವ ಜತೆಗೆ ಸಣ್ಣಮಕ್ಕಳು, ವೃದ್ಧರು ಬೀದಿಯಲ್ಲಿ ಸಂಚರಿಸಲು ಭಯಪಡುವ ವಾತಾವರಣ ನಿರ್ವಣವಾಗಿದೆ.

    ಅಕ್ಷರ ಜಾತ್ರೆಯ ಆತಿಥ್ಯ ವಹಿಸಿರುವ ನಗರದಲ್ಲಿ ತುರ್ತಾಗಿ ಹಂದಿಗಳ ಕಾಟ ನಿಗ್ರಹಿಸುವುದು ಅನಿವಾರ್ಯವೆನಿಸಿದೆ. ಅದಕ್ಕಾಗಿ ಹಂದಿಗಳನ್ನು ಸ್ಥಳಾಂತರಿಸುವಂತೆ ಮಾಲೀಕರಿಗೆ ನಗರಸಭೆ ನೀಡಿದ್ದ ಗಡುವು ಮುಕ್ತಾಯವಾಗಿದ್ದು, ಶೀಘ್ರದಲ್ಲಿ ಕಾರ್ಯಾಚರಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಜನರಿಂದ ಕೇಳಿಬರತೊಡಗಿದೆ.

    ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಆದರೆ, ಹಂದಿ ಹಾವಳಿ ವಿಪರೀತವಾಗಿದ್ದು, ಗಲ್ಲಿಗಲ್ಲಿಗಳೂ ಗಬ್ಬೆದ್ದು ನಾರುವಂತಾಗಿದೆ. ಎಲ್ಲೆಂದರಲ್ಲಿ ಹಂದಿಗಳ ಹಿಂಡು ಕಾಣುತ್ತಿದ್ದು, ಕೊಚ್ಚೆಯನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಿವೆ. ಸಮ್ಮೇಳನದೊಳಗಾಗಿ ಹಂದಿ ಉಪಟಳ ತಪ್ಪಿಸದಿದ್ದರೆ ಬರುವ ಸಾಹಿತ್ಯಾಸಕ್ತರು ಇದು ಯಾಲಕ್ಕಿ ಕಂಪಿನ ನಗರವೋ ಅಥವಾ ಪಿಗ್ ಸಿಟಿಯೋ ಎಂದು ವ್ಯಂಗ್ಯವಾಡುವುದು ನಿಶ್ಚಿತ. ಹೀಗಾಗಿ ನಗರಸಭೆ ಜವಾಬ್ದಾರಿ ಈಗ ಹೆಚ್ಚಿದ್ದು, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.

    ನಗರದ ಸೌಂದರ್ಯವು ವಿಪರೀತ ಹಂದಿ ಕಾಟದಿಂದ ಕುಂದುವಂತಾಗಿದೆ. ಪರ ಊರುಗಳಿಂದ ಬಂದವರು ಇಲ್ಲಿರುವ ಹಂದಿ ಹಾವಳಿ ನೋಡಿ ಅಸಹ್ಯ ಪಟ್ಟುಕೊಳ್ಳುವಂತಾಗುತ್ತಿದೆ. ರಸ್ತೆ, ಚರಂಡಿ ಅಷ್ಟೇ ಅಲ್ಲದೆ, ಅಂಗಡಿ-ಮುಂಗಟ್ಟುಗಳನ್ನೂ ಅವು ಬಿಡುತ್ತಿಲ್ಲ. ರಾತ್ರಿ ರಸ್ತೆಯಲ್ಲಿ ಹಂದಿಗಳ ಇರುವಿಕೆ ಗೊತ್ತಾಗದೇ ಕೆಲ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಆಗಾಗ ನಡೆಯುತ್ತಿವೆ. ಇತ್ತೀಚೆಗೆ ಬಸವೇಶ್ವರ ನಗರದಲ್ಲಿ ಬೈಕ್​ಗೆ ಹಂದಿ ಅಡ್ಡಬಂದಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.

    ನಗರ ಬೆಳೆದಂತೆಲ್ಲ ಕೊಳಚೆ, ತ್ಯಾಜ್ಯ ಹೆಚ್ಚಿದ್ದರಿಂದ ಹಂದಿಗಳ ಸಂತತಿಯೂ ಹೆಚ್ಚುತ್ತಿವೆ. ಈಗ ಅದರ ನಿಯಂತ್ರಣ ನಗರಸಭೆಗೆ ಸವಾಲಾಗಿ ಪರಿಣಮಿಸಿದೆ. ಜತೆಗೆ, ಖಾಲಿ ನಿವೇಶನಗಳಲ್ಲಿ ಕಸ, ತ್ಯಾಜ್ಯ ಎಸೆಯುತ್ತಿರುವುದರಿಂದ ಅವು ಹಂದಿಗಳ ಆವಾಸ ತಾಣವಾಗುತ್ತಿವೆ. ಪೌರಕಾರ್ವಿುಕರು ನಗರ ಸ್ವಚ್ಛತೆಗೆ

    ಎಷ್ಟೇ ಶ್ರಮಿಸುತ್ತಿದ್ದರೂ ಹಂದಿಗಳು ಅವರ ಶ್ರಮ ವ್ಯರ್ಥಗೊಳಿಸುತ್ತಿವೆ. ಸಂತೆ, ಮಾರುಕಟ್ಟೆ ಪ್ರದೇಶ, ಬಸ್ ನಿಲ್ದಾಣ, ಹೋಟೆಲ್ ಸುತ್ತಮುತ್ತ ಹಂದಿಗಳ ಹಿಂಡೇ ಕಾಣುತ್ತವೆ. ಇದರಿಂದ ಕಿರಿಕಿರಿ ಅನುಭವಿಸುತ್ತಿರುವ ಸಾರ್ವಜನಿಕರು ಹಂದಿಗಳ ಕಾಟದಿಂದ ಮುಕ್ತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

    ಸಮರ್ಪಕವಾಗಿಲ್ಲ ತ್ಯಾಜ್ಯ ಸಂಗ್ರಹಣೆ

    ನಗರಸಭೆ ತ್ಯಾಜ್ಯ ನಿರ್ವಹಣೆಯತ್ತ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ನಗರದ 31 ವಾರ್ಡ್​ಗಳ ಪೈಕಿ ಕೆಲ ವಾರ್ಡ್​ಗಳಲ್ಲಷ್ಟೇ ಸ್ವಲ್ಪಮಟ್ಟಿಗೆ ಕಸ, ತ್ಯಾಜ್ಯ ಸಂಗ್ರಹಣೆ ನಡೆಯುತ್ತಿದೆ. ನಿತ್ಯವೂ ಘನ ಮತ್ತು ಹಸಿ ತ್ಯಾಜ್ಯ ಸಂಗ್ರಹಿಸಬೇಕು ಎಂಬ ನಿಯಮವಿದ್ದರೂ ಕೆಲ ವಾರ್ಡ್​ಗಳಲ್ಲಿ ವಾರದಲ್ಲಿ ಒಂದು, ಎರಡು ಬಾರಿ ಮಾತ್ರ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಅನಿವಾರ್ಯವಾಗಿ ಜನರು ಅಕ್ಕಪಕ್ಕದ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಅದಕ್ಕಾಗಿ ತ್ಯಾಜ್ಯ ಸಂಗ್ರಹಣೆಗೆ ಇನ್ನೂ ಹೆಚ್ಚಿನ ವಾಹನ ಒದಗಿಸುವ ಅಗತ್ಯವಿದೆ. ಚರಂಡಿ ಸ್ವಚ್ಛಗೊಳಿಸಿದ ನಂತರ ತ್ಯಾಜ್ಯವನ್ನು ಒಂದೆರೆಡು ದಿನ ಬಿಟ್ಟು ಸಂಗ್ರಹಿಸಲಾಗುತ್ತಿದೆ. ಅಷ್ಟರೊಳಗೆ ಹಂದಿಗಳಿಂದ ತ್ಯಾಜ್ಯವೆಲ್ಲ ಮರಳಿ ಚರಂಡಿ ಸೇರುತ್ತಿದೆ. ಇದರಿಂದ ಪೌರ ಕಾರ್ವಿುಕರ ಶ್ರಮವೂ ವ್ಯರ್ಥವಾಗುತ್ತಿದೆ.

    ಹಂದಿ ನಿಮೂಲನೆಗೆ ಪಣ

    ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು, ನಗರದಲ್ಲಿ ಹಂದಿಗಳ ಹಾವಳಿ ನಿಯಂತ್ರಿಸಲು ಅವುಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ನೋಟಿಸ್ ಹೊರಡಿಸಿದ್ದಾರೆ. 15 ದಿನಗಳೊಳಗಾಗಿ ಹಂದಿ ಸ್ಥಳಾಂತರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಂದಿಗಳ ಮಾಲೀಕರ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಗಡುವು ಮುಗಿದಿದ್ದರೂ ಹಂದಿಗಳ ಮಾಲೀಕರು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಖಾಲಿ ನಿವೇಶನದಾರರಿಗೂ ನೋಟಿಸ್ ನೀಡಿದ್ದು, ಬೇಗ ಸ್ವಚ್ಛಗೊಳಿಸದಿದ್ದರೆ ಆ ಜಾಗವನ್ನು ನಗರಸಭೆಯಿಂದ ಸ್ವಚ್ಛಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಜಾಗದ ಉತಾರ ಮೇಲೆ ಭೋಜಾ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಸಂಬಂಧಪಟ್ಟವರು ಗಮನ ನೀಡುತ್ತಿಲ್ಲ.

    ಹಂದಿ ಮಾಲೀಕರಿಗೆ ನೀಡಿದ್ದ ಗಡುವು ಮುಗಿದಿದೆ. ಮತ್ತೊಂದು ಬಾರಿ ಅವರೊಂದಿಗೆ ರ್ಚಚಿಸಿ ಮನವರಿಕೆ ಮಾಡುತ್ತೇವೆ. ಶೀಘ್ರದಲ್ಲಿ ಸಾಮಾನ್ಯ ಸಭೆ ಕರೆದು ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು. ಖಾಲಿ ನಿವೇಶನ ಸ್ವಚ್ಛತೆಗೂ ಕ್ರಮ ಕೈಗೊಳ್ಳಲಾಗುವುದು. ಸಮ್ಮೇಳನ ನಡೆಯುತ್ತಿರುವುದರಿಂದ ನಗರ ಸೌಂದಯೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ.

    | ಸಂಜೀವಕುಮಾರ ನೀರಲಗಿ ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts