More

    ಸರ್ವೆ ನಂಬರ್ ಬದಲು ಪಿಐಡಿ!

    ಹುಬ್ಬಳ್ಳಿ: ನಿವೇಶನ, ಮನೆ ಹಾಗೂ ಇತರ ಬಿನ್ ಶೇತ್ಕಿ ಆಸ್ತಿಗಳ ಖರೀದಿಯ ನೋಂದಣಿ ಮಾಡುವುದಕ್ಕೆ ಸರ್ವೆ ನಂಬರ್ ಪ್ರಮುಖ ಸಂಗತಿ. ಆದರೀಗ, ನೋಂದಣಿ ಪ್ರಕ್ರಿಯೆಯಲ್ಲಿ ಸರ್ವೆ ನಂಬರ್ ನಾಪತ್ತೆಯಾಗಿದೆ. ಇದರ ಬದಲು ಪಿಐಡಿ ನಂಬರ್ ದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಸಾಕಷ್ಟು ಸಾರ್ವಜನಿಕರು ನೋಂದಣಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದಾರೆ.

    ಬಿನ್ ಶೇತ್ಕಿ ನಿವೇಶನಗಳನ್ನು ಆರ್ ಟಿಸಿ (ರೆಕಾರ್ಡ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆ) ಗಳಲ್ಲಿ ಮುಂದುವರಿಸಿಕೊಂಡು ಹೋಗದಂತೆ ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಕಚೇರಿಯಿಂದ 2010ರ ಡಿ. 6ರಂದೇ ಸೂಚನೆ ಹೊರಡಿಸಲಾಗಿದೆ.

    ಬಿನ್ ಶೇತ್ಕಿ (ಕೃಷಿಯೇತರ) ಆಸ್ತಿಗಳ ಖರೀದಿಯ ನೋಂದಣಿ ಸಮಯದಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಜೆ ನಮೂನೆ (ಗೇಣಿ ಮತ್ತು ಪಹಣಿ ಪತ್ರಿಕೆ) ಪರಿಗಣಿಸದಂತೆ ಧಾರವಾಡ ಜಿಲ್ಲಾಧಿಕಾರಿ ಅವರು ಮಂಗಳವಾರದಂದು ಸೂಚನೆ ನೀಡಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಯಿತು.

    ಹೀಗಾಗಿ, ಮಂಗಳವಾರದಂದು ಧಾರವಾಡ ಜಿಲ್ಲೆಯ ಉಪ ನೋಂದಣಿ ಕಚೇರಿಗಳಲ್ಲಿ ಬಹುತೇಕರು ತಮ್ಮ ಆಸ್ತಿಗಳನ್ನು ನೋಂದಣಿ ಮಾಡಿಸದೇ ತೆರಳಿದರು. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಸಾಕಷ್ಟು ನಷ್ಟ ಉಂಟಾಯಿತು.

    ಆದರೂ, ಉಪ ನೋಂದಣಿ ಕಚೇರಿಗಳಿಂದ ಭೂಮಿ ತಂತ್ರಾಂಶಕ್ಕೆ ಜೆ ನಮೂನೆಗಳನ್ನು ಕಳಿಸುವ ಪ್ರಕ್ರಿಯೆ ಮುಂದುವರಿಯಿತು. ಜೆ ನಮೂನೆ ಕಳುಹಿಸಿದರೆ ಮಾತ್ರ ಆಸ್ತಿಯ ಇತಿಹಾಸ ಕಂಡು ಹಿಡಿಯಲು ಸಾಧ್ಯ. 50-60 ವರ್ಷಗಳಲ್ಲಿ ಸಂಬಂಧಿಸಿದ ಆಸ್ತಿ ಯಾರು ಖರೀದಿ, ಯಾರಿಗೆ ಮಾರಾಟ ಮಾಡಿದರು? ಎಂಬುದನ್ನು ಇದರಿಂದ ಪತ್ತೆ ಮಾಡಬಹುದು. ಜೆ ನಮೂನೆಯಲ್ಲಿ ಇರುವ ಸರ್ವೆ ನಂಬರ್ ನಿಂದ ಈ ಎಲ್ಲ ಮಾಹಿತಿ ಸುಲಭವಾಗಿ ಸಿಗುತ್ತದೆ.

    ಇದೀಗ ಜೆ ನಮೂನೆ ಬದಲು ಸ್ಥಳೀಯ ಸಂಸ್ಥೆ ನೀಡುವ ಅಸೆಸ್ಮೆಂಟ್ ಉತಾರ (ಆಸ್ತಿ ತೆರಿಗೆ ರೆಜಿಸ್ಟ್ರಾರ್) ನಲ್ಲಿ ಇರುವ ಪಿಐಡಿ ನಂಬರ್ ಮಾತ್ರ ಪರಿಗಣಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

    ಪಿಐಡಿ ಸಂಖ್ಯೆ ಅನ್ನು ನೋಂದಣಿ ಸಮಯದಲ್ಲಿ ಪರಿಗಣಿಸಲು ಯಾವುದೇ ಅಡಚಣೆ ಇಲ್ಲ. ಆದರೆ, ಭವಿಷ್ಯದಲ್ಲಿ ವ್ಯಕ್ತಿ ತಾನು ಖರೀದಿಸಿದ ಆಸ್ತಿ ಮಾರಾಟ ಮಾಡಬೇಕಾದರೆ ಆತನ ಆಸ್ತಿ ಇತಿಹಾಸ ತಿಳಿದುಕೊಳ್ಳಲು ಆಗುವುದಿಲ್ಲ. ಸರ್ವೆ ನಂಬರ್​ನಿಂದ ಮಾತ್ರ ಆಸ್ತಿ ಇತಿಹಾಸ ತಿಳಿದುಕೊಳ್ಳಬಹುದು.

    ಇದರೊಂದಿಗೆ ಮಹಾನಗರ ಪಾಲಿಕೆ ಇ ಸ್ವತ್ತು ಎಂಬ ಹೊಸ ತಂತ್ರಜ್ಞಾನ ಪರಿಚಯಿಸುತ್ತಿದೆ. ಇ ಸ್ವತ್ತಿನಲ್ಲಿ ಆಸ್ತಿಯ ಸಂಖ್ಯೆ ಮತ್ತೆ ಬದಲಾಗಲಿದೆ.

    ಹೀಗಾಗಿ, ಜೆ ನಮೂನೆ ಇಲ್ಲದೆ ಆಸ್ತಿ ಖರೀದಿಯಿಂದ ತೊಂದರೆ ಆಗಬಹುದು ಎಂಬ ಭೀತಿಯಿಂದ ಬಹುತೇಕರು ಆಸ್ತಿ ನೋಂದಣಿ ಮಾಡಿಸದೇ ವಾಪಸ್ಸಾದರು.

    ಅಧಿಕಾರಿಗಳ ಚರ್ಚೆ: ಉಪ ನೋಂದಣಿ ಕಚೇರಿಯಲ್ಲಿ ಆಗಿರುವ ತೊಂದರೆ ಹಾಗೂ ಪಾಲಿಕೆಯಿಂದ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಅವರು ಹುಬ್ಬಳ್ಳಿ ಉತ್ತರ ಉಪ ನೋಂದಣಿ ಕಚೇರಿಯ ಅಧಿಕಾರಿಗಳಾದ ಮಲ್ಲಿಕಾರ್ಜುನ ಪಾಟೀಲ, ನಾಗರಾಜು ಹಾಗೂ ಇತರ ಅಧಿಕಾರಿಗಳೊಂದಿಗೆ ರ್ಚಚಿಸಿದರು. ಆಸ್ತಿ ನೋಂದಣಿಗೆ ಸಾರ್ವಜನಿಕರಿಗೆ ಸರಳ ವಿಧಾನ ಲಭಿಸಬೇಕು. ಈ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ರ್ಚಚಿಸುವುದಾಗಿ ಗೋಪಾಲಕೃಷ್ಣ ಅಧಿಕಾರಿಗಳಿಗೆ ತಿಳಿಸಿದರು.

    ಹಳೆಯದ್ದೇ ಇರಲಿ: ಹಳೆಯ ಆಸ್ತಿಗಳ ನೋಂದಣಿ ಪ್ರಕ್ರಿಯೆ ಮೊದಲಿನ ಪದ್ಧತಿಯಂತೆ ನಡೆಯಲಿ. ಹೊಸ ಬಡಾವಣೆಗಳ ಆಸ್ತಿ ಗಳ ನೋಂದಣಿಗೆ ಮಾತ್ರ ಜೆ ನಮೂನೆ ಕಳುಹಿಸದಿರುವ ಪದ್ಧತಿ ಪರಿಗಣಿಸಲಿ ಎಂಬ ಸಲಹೆ ಸಾರ್ವಜನಿಕರಿಂದ ವ್ಯಕ್ತವಾಯಿತು.

    ಬಿನ್ ಶೇತ್ಕಿ ಆಸ್ತಿ ಖರೀದಿಗೆ ಜೆ ನಮೂನೆ ಬಳಸದಂತೆ ಸೂಚನೆ ಇದೆ. ಪ್ರತಿ ನಿವೇಶನಕ್ಕೆ ಜೆ ನಮೂನೆ ನೀಡುವುದು ಸರಿ ಅಲ್ಲ. ಅವಳಿ ನಗರ ವ್ಯಾಪ್ತಿಯ ನಿವೇಶನಗಳ ದಾಖಲೆಗಳನ್ನು ಮಹಾನಗರ ಪಾಲಿಕೆ ನಿರ್ವಹಿಸಬೇಕು.

    | ನಿತೇಶ ಪಾಟೀಲ, ಜಿಲ್ಲಾಧಿಕಾರಿ, ಧಾರವಾಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts