ಶಿವಮೊಗ್ಗ: ದರೋಡೆ ಪ್ರಕರಣಕ್ಕೆ ಮತ್ತೊಂದು ಹೊಸ ವಿಧಾನ ಸೇರ್ಪಡೆಯಾಗಿದೆ. ನಗರದ ರೈಲು ನಿಲ್ದಾಣ ಸಮೀಪ ಬೈಕ್ ಅಡ್ಡಗಟ್ಟಿ ಹಣ ಮತ್ತು ಚಿನ್ನದ ಸರ ಕಿತ್ತುಕೊಂಡ ದುಷ್ಕರ್ಮಿಗಳು ಇಷ್ಟಕ್ಕೆ ಸಾಕಾಗಲಿಲ್ಲ ಎಂದು ಬೆದರಿಕೆ ಹಾಕಿ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಪರಾರಿಯಾಗಿದ್ದಾರೆ.
ತಾಲೂಕಿನ ಹೊಯ್ಸನಹಳ್ಳಿಯ ವಿಜಯಕುಮಾರ್ (24) ದರೋಡೆಗೆ ಒಳಗಾದವರು. ವಿಜಯಕುಮಾರ್ ಸವಳಂಗ ರಸ್ತೆಯ ಪರ್ಫೆಕ್ಟ್ ಅಲಾಯ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ರಾತ್ರಿ ಪಾಳಿ ಇದ್ದಿದ್ದರಿಂದ ರೈಲ್ವೆ ನಿಲ್ದಾಣ ಮಾರ್ಗವಾಗಿ ಫ್ಯಾಕ್ಟರಿಗೆ ತೆರಳುತ್ತಿದ್ದರು.
ಅಮೀರ್ ಅಹಮದ್ ಕಾಲನಿ ಬಳಿ ಬೈಕ್ ಅಡ್ಡಗಟ್ಟಿದ ನಾಲ್ವರು ವಿಜಯಕುಮಾರ್ ಪರ್ಸ್‌ನಲ್ಲಿದ್ದ ಹಣ ಮತ್ತು ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಫೋನ್ ಪೇ ಮೂಲಕ ಹಣ ಹಾಕುವಂತೆ ಬೆದರಿಕೆವೊಡ್ಡಿದ್ದು, ಕ್ಯೂ ಆರ್ ಕೋಡ್ ಸ್ಕ್ಯಾನ್ ಮೂಲಕ ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ.