More

    ತ್ಯಾಜ್ಯದಿಂದ ಫಲ್ಗುಣಿ ನೀರು ಕಲುಷಿತ, ಪಾದಚಾರಿ ದಾರಿಯಲ್ಲಿ ಕಸದ ರಾಶಿ

    ಧನಂಜಯ ಗುರುಪುರ

    ಫಲ್ಗುಣಿ ನದಿ ಸೇತುವೆಯಲ್ಲಿ ವಾಹನದಲ್ಲಿ ಪ್ರಯಾಣಿಸುವವರು ಕಸಗಳನ್ನು ಎಸೆಯುವುದರಿಂದ ಇಲ್ಲಿನ ಎರಡೂ ಪಾರ್ಶ್ವಗಳ ಪಾದಚಾರಿ ದಾರಿಯಲ್ಲಿ ನಿತ್ಯವೂ ಭಾರಿ ತ್ಯಾಜ್ಯ ತುಂಬಿಕೊಂಡು ಸೇತುವೆ ಅಂದ ಕೆಡಲಾರಂಭಿಸಿದೆ. ಜತೆಗೆ ನೀರು ಕಲುಷಿತಗೊಳ್ಳಲಾರಂಭಿಸಿದೆ.

    ಬೆಳಗ್ಗಿನ ಹೊತ್ತು ವಾಹನಗಳಲ್ಲಿ ಸಾಗುವ, ಅದರಲ್ಲೂ ಮುಖ್ಯವಾಗಿ ಬಸ್‌ಗಳ ಚಾಲಕರು, ನಿರ್ವಾಹಕರು ಮತ್ತು ಕೆಲವು ಪ್ರಯಾಣಿಕರು ನದಿಗೆ ಪೂಜೆಯ ತ್ಯಾಜ್ಯ ಎಸೆಯುತ್ತಿದ್ದಾರೆ. ಫಲ್ಗುಣಿ ನದಿಯಿಂದ ಗುರುಪುರ ಸಹಿತ ಇತರ ಕೆಲವು ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ನಿತ್ಯ ಎಸೆಯುವ ತ್ಯಾಜ್ಯದಿಂದ ನೀರು ಕಲುಷಿತಗೊಳ್ಳಲಾರಂಭಿಸಿದೆ. ಹಿಂದೆ ಹಳೇ ಸೇತುವೆಯಲ್ಲಿ ಸಾಗುತ್ತಿದ್ದ ವಾಹನ ಪ್ರಯಾಣಿಕರು ಎಸೆದ ತ್ಯಾಜ್ಯದ ಪ್ಲಾಸ್ಟಿಕ್ ತೊಟ್ಟೆಗಳು ನೇರವಾಗಿ ನದಿಗೆ ಬೀಳುತ್ತಿದ್ದರೆ, ಈಗ ಹೆಚ್ಚಿನ ತ್ಯಾಜ್ಯ ಕಾಲುದಾರಿಯಲ್ಲಿ ತುಂಬಿರುತ್ತದೆ. ಮತ್ತೆ ಕೆಲವು ನದಿಗೆ ಬೀಳುತ್ತವೆ.

    ಪ್ಲಾಸ್ಟಿಕ್ ಚೀಲದಲ್ಲಿ ತ್ಯಾಜ್ಯ: ಸೇತುವೆ ಮತ್ತೊಂದು ಪಾರ್ಶ್ವದಲ್ಲಿ(ಕೊಳಕೆಬೈಲು) ಕಂಬಗಳ ಕೆಳಗಡೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಡಲಾದ ತ್ಯಾಜ್ಯ ರಾಶಿ ಗುಡ್ಡೆಯಂತಿದೆ. ಇದು ರಾತ್ರಿ ವೇಳೆ ನಡೆಯುವ ಅಕ್ರಮ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ. ನದಿಗೆ ಕೊಳೆತ ಸೊತ್ತು ಎಸೆಯಲಾಗುತ್ತದೆ. ದುರ್ನಾತವೂ ಬೀರುತ್ತಿರುತ್ತದೆ. ಇಲ್ಲಿ ಸಾರ್ವಜನಿಕರನ್ನು ನಿರ್ಬಂಧಿಸುವ ಯಾವುದೇ ಎಚ್ಚರಿಕೆ ಫಲಕ ಅಥವಾ ಸಿಸಿಟಿವಿ ಕ್ಯಾಮರಾ ಇಲ್ಲದಿರುವುದು ಕಸ ಬಿಸಾಡುವವರಿಗೆ ವರದಾನವಾಗಿದೆ.

    ಸಾಲುದೀಪ ಅಳವಡಿಕೆಗೆ ಆಗ್ರಹ: ಸೇತುವೆಯಲ್ಲಿ ಈವರೆಗೂ ಸಾಲುದೀಪ ಅಳವಡಿಸಿಲ್ಲ. ಈ ಬಗ್ಗೆ ಸಾರ್ವಜನಿಕರು ಮನವಿ ಮಾಡಿದರೂ ಜನಪ್ರತಿನಿಧಿಗಳು ಸ್ಪಂಧಿಸಿಲ್ಲ. ಸೇತುವೆ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡ ಸಂಸ್ಥೆಯವರು ಸಾಲುದೀಪ ಅಳವಡಿಸಿದರೆ ರಾತ್ರಿ ವೇಳೆ ಕಾಲುದಾರಿಯಲ್ಲಿ ನಡೆದಾಡುವ ಮಂದಿಗೆ ಉಪಕಾರವಾಗುತ್ತದೆ. ಅಲ್ಲದೆ ಅಪಘಾತಕ್ಕೂ ತಡೆಯೊಡ್ಡಬಹುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಕಳೆದ ವಾರ ಸೇತುವೆ ಮೇಲೆ ಯುವತಿಯೊಬ್ಬಳ ಸ್ಕೂಟಿ ಸ್ಕಿಡ್ ಆಗಿ ಬಿದ್ದಿದ್ದು, ಆ ಸಂದರ್ಭ ಸೇತುವೆಯಲ್ಲಿ ಸಾಗುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಯುವತಿಯನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿದ್ದರು.

    ಸೇತುವೆ ಮೇಲೆ ಇದೇ ರೀತಿ ತ್ಯಾಜ್ಯ ಬಿದ್ದರೆ ಸೇತುವೆಯ ಅಂದ ಕೆಡುತ್ತದೆ. ಸೇತುವೆ ನಿರ್ವಹಣೆಗೆ ಸಂಬಂಧಿಸಿದ ಹೆದ್ದಾರಿ ಇಲಾಖೆ ಅಥವಾ ಸಂಸ್ಥೆಯವರು ಸೇತುವೆಗೆ ಸಾಲುದೀಪ ಅಳವಡಿಸಬೇಕು. ನದಿ ನೀರು ಬಳಸುವ ಗ್ರಾಮ ಪಂಚಾಯಿತಿ ಆಡಳಿತ ಇಲ್ಲಿ ಸೂಕ್ತ ಎಚ್ಚರಿಕಾ ಫಲಕ ಅಳವಡಿಸಿದರೆ ಉತ್ತಮ.
    ಯು.ಪಿ.ಇಬ್ರಾಹಿಂ, ಜಿಪಂ ಸದಸ್ಯ 

    ಉಳ್ಳಾಲ ಸೇತುವೆಯ ಪಾರ್ಶ್ವದಲ್ಲಿ ಅಳವಡಿಸಿದಂತಹ ವ್ಯವಸ್ಥೆ ಇಲ್ಲಿದ್ದರೆ ನದಿಗೆ ಬೀಳುವ ತ್ಯಾಜ್ಯ ಕಡಿಮೆಯಾಗಬಹುದು. ಸಂಬಂಧಿತರು ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಿಸಿಟಿವಿ ಕ್ಯಾಮರಾ, ಸಾಲುದೀಪದ ಅಗತ್ಯವಿದೆ.
    ಪುರುಷೋತ್ತಮ ಮಲ್ಲಿ, ನದಿ ತಟದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts