More

    ಪರ್ವೆಜ್ ಮುಷರಫ್ ಎಂಬ ಬಹು ಆಯಾಮದ ಪ್ರಶ್ನೆ

    ಪರ್ವೆಜ್ ಮುಷರಫ್ ಎಂಬ ಬಹು ಆಯಾಮದ ಪ್ರಶ್ನೆಕಾಶ್ಮೀರದಲ್ಲಿ ತನ್ನ ಭಯೋತ್ಪಾದನಾ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುವ ಹುನ್ನಾರದಿಂದ ಪಾಕಿಸ್ತಾನ ಪ್ರತಿವರ್ಷವೂ ಫೆಬ್ರವರಿ 5ನ್ನು ‘ಕಾಶ್ಮೀರ್ ಸಾಲಿಡಾರಿಟಿ ಡೇ’ ಎಂದು ಆಚರಿಸುತ್ತದೆ. ಈ ವರ್ಷದ ಆ ದಿನ ವಿಪರ್ಯಾಸ ಹಾಗೂ ಹೋಲಿಕೆಗಳಿಗೆ ಉದಾಹರಣೆಯಾದದ್ದೊಂದು ವಿಶೇಷ. ಕಾಶ್ಮೀರ ಸಮಸ್ಯೆಯನ್ನು ಉಲ್ಬಣಗೊಳಿಸಿದ, ಅದಕ್ಕಾಗಿ ಸರಿಸುಮಾರು ಮೂರೂವರೆ ದಶಕಗಳ ನಂತರ ಪಾಕಿಸ್ತಾನವನ್ನು ಸಂಘರ್ಷಕ್ಕೆ ದೂಡಿದ ಜನರಲ್ ಪರ್ವೆಜ್ ಮುಷರಫ್ ಈ ವರ್ಷದ ತಥಾಕಥಿತ ‘ಕಾಶ್ಮೀರ್ ಸಾಲಿಡಾರಿಟಿ ಡೇ’ನಂದೇ ನಿಧನರಾದದ್ದೊಂದು ವಿಪರ್ಯಾಸ. ಇನ್ನು ಹೋಲಿಕೆಯತ್ತ ಹೊರಳುವುದಾದರೆ, ಆರ್ಥಿಕ ದುಸ್ಥಿತಿಯಿಂದಾಗಿ ಈ ವರ್ಷದ ಆಚರಣೆ ಅಷ್ಟೇನೂ ಸದ್ದು ಮಾಡಲಿಲ್ಲ ಮತ್ತು ಪಾಕಿಸ್ತಾನದ ರಾಜಕಾರಣದಿಂದ ಹದಿನೈದು ವರ್ಷಗಳ ಹಿಂದೆಯೇ ಅವಮಾನಕರವಾಗಿ ಹೊರದೂಡಲ್ಪಟ್ಟ, ಏಳು ವರ್ಷಗಳ ಹಿಂದೆ ಪಾಕ್ ನೆಲದಿಂದಲೇ ಹೊರಹೋದ ಆ ಮಾಜಿ ಸೇನಾ ಸರ್ವಾಧಿಕಾರಿಯ ಮರಣವೂ ಹೆಚ್ಚು ಸದ್ದು ಮಾಡುತ್ತಿಲ್ಲ.

    ಆಗಸ್ಟ್ 11, 1943ರಲ್ಲಿ ದೆಹಲಿಯ ದರಿಯಾ ಗಂಜ್​ನ ನೆಹರ್​ವಾಲೀ ಗಲ್ಲಿಯಲ್ಲಿ ಜನಿಸಿದ ಮುಷರಫ್ ಫೆಬ್ರವರಿ 5, 2023ರಂದು ದುಬೈನ ಅಮೆರಿಕನ್ ಹಾಸ್ಪಿಟಲ್​ನಲ್ಲಿ ಕೊನೆಯುಸಿರೆಳೆಯುವುದರೊಳಗಿನ ಎಪ್ಪತ್ತೊಂಬತ್ತೂವರೆ ವರ್ಷಗಳ ನಡುವಿನ ಅವರ ಸಾರ್ವಜನಿಕ ಬದುಕನ್ನು ಅವಲೋಕಿಸಿದರೆ ಇನ್ನಷ್ಟು ವಿಪರ್ಯಾಸಗಳು ಮತ್ತು ಹೋಲಿಕೆಗಳು ಕಾಣಸಿಗುತ್ತವೆ. ಅವುಗಳ ಜತೆಗೆ ದ್ವಂದ್ವಗಳೂ ಸಾಕಷ್ಟಿವೆ.

    ನಾಲ್ಕನೆಯ ವಯಸ್ಸಿನಲ್ಲಿ ನಿರಾಶ್ರಿತರಾಗಿ ಪಾಕಿಸ್ತಾನಕ್ಕೆ ಹೋಗಿ, ಹದಿನೆಂಟನೆಯ ವಯಸ್ಸಿನಲ್ಲಿ ಪಾಕ್ ಸೇನೆಗೆ ಭರ್ತಿಯಾಗಿ, ಇಪ್ಪತ್ತೆರಡರಲ್ಲಿ ಕಮಾಂಡೋ ಆಗಿ 1965 ಮತ್ತು 1971ರ ಯುದ್ಧಗಳಲ್ಲಿ ಭಾಗಿಯಾದ ಪರ್ವೆಜ್ ಮುಷರಫ್ ಪ್ರಾಮುಖ್ಯತೆಗೆ ಬಂದದ್ದು ತಮ್ಮಂತೆಯೇ ದೆಹಲಿಯಲ್ಲಿ ಹುಟ್ಟಿ, ಪಾಕಿಸ್ತಾನಕ್ಕೆ ವಲಸೆ ಬಂದಿದ್ದ ಜನರಲ್ ಜಿಯಾ-ಉಲ್-ಹಕ್​ರ ಸೇನಾಡಳಿತದ ದಿನಗಳಲ್ಲಿ. ಅಂದು ಅವರ ಸಾಧನೆಯೇನೂ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದೇನಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಮುಖ್ಯವಾಗಿ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಭುಗಿಲೆದ್ದಿದ್ದ ಪಾಕ್-ವಿರೋಧಿ ದಂಗೆಗಳನ್ನು ಅತೀವ ಹಿಂಸಾತ್ಮಕವಾಗಿ ದಮನಗೈದದ್ದಷ್ಟೇ ಅವರು ಮಾಡಿದ್ದು. ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳನ್ನು ದಮನಿಸುತ್ತಿದೆ, ಕಾಶ್ಮೀರಿಗಳ ರಕ್ತ ಹರಿಸುತ್ತಿದೆ ಎಂದು ಸುಳ್ಳುಸುಳ್ಳೆ ಕಣ್ಣೀರು ಹಾಕುತ್ತಿದ್ದ ಪಾಕಿಸ್ತಾನ ತನ್ನ ಹತೋಟಿಯ ಕಾಶ್ಮೀರದಲ್ಲಿ ತಾನೇ ಆ ಕೃತ್ಯಗಳನ್ನು ಎಸಗುವುದು ಅಗತ್ಯ ಎಂದು ತಿಳಿಯಿತು. ಕುಪ್ರಚಾರದ ಮೊದಲ ಪಾಠವೆಂದರೆ ತಮ್ಮದೇ ಕುಕೃತ್ಯಗಳನ್ನು ಇದಿರಿನವರ ಮೇಲೆ ಆರೋಪಿಸುವುದು ಎಂದು ನಾಜಿ ಪ್ರಚಾರ ಮಂತ್ರಿ ಜೋಸೆಫ್ ಗೊಬೆಲ್ಸ್ ಹೇಳಿಯೇ ಇದ್ದಾನಲ್ಲ. ಅಂದು ಪಾಕ್ ವ್ಯವಸ್ಥೆಯಲ್ಲಿ ನಾರ್ದರ್ನ್ ಟೆರಿಟರಿಸ್ ಎಂದು ಕರೆಸಿಕೊಳ್ಳುತ್ತಿದ್ದ ಗಿಲ್ಗಿಟ್-ಬಾಲ್ಟಿಸ್ತಾನ್​ದಲ್ಲಿನ ತಮ್ಮ ಕಾರ್ಯಾಚರಣೆಗಳು ಮುಷರಫ್​ಗೆ ಮನವರಿಕೆ ಮಾಡಿಸಿದ್ದು ಭಾರತೀಯ ಕಾಶ್ಮೀರದ ಮೇಲೆ ಕಣ್ಣು ಹಾಕುವ ಮೊದಲು ತಮ್ಮದೇ ಕಾಶ್ಮೀರವನ್ನು ತಮ್ಮದಾಗಿಸಿಕೊಳ್ಳುವುದು ಅಗತ್ಯ ಎಂದು. ಅದನ್ನವರು ಮಾಡಿದ ಬಗೆ 1947ರಿಂದಲೂ ಅಲ್ಲಿ ನಡೆಯುತ್ತಿದ್ದ ಪಾಕ್-ವಿರೋಧಿ ಆಂದೋಲನದ ಬೆನ್ನೆಲುಬನ್ನೇ ಮುರಿದುಹಾಕಿತು. ಅಂತಹ ಮುಷರಫ್​ರನ್ನು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ಶ್ರಮಿಸಿದವರೆಂದು ಇಂದು ಬಿಬಿಸಿ ಮತ್ತು ನ್ಯೂಯಾರ್ಕ್ ಟೈಮ್್ಸ ಹೇಳುತ್ತಿವೆ. ಅವುಗಳ ಕಾಶ್ಮೀರದ ಭೌಗೋಳಿಕ ಮತ್ತು ಜನಸಂಖ್ಯೀಯ ವ್ಯಾಪ್ತಿ ಹಾಗೂ ಶಾಂತಿಯ ವ್ಯಾಖ್ಯಾನ ನಮ್ಮದ್ದಕ್ಕಿಂತ ಬೇರೆಯಾಗಿದೆ.

    ಜಿಯಾರ ಗರಡಿಯಲ್ಲಿ ಬೆಳೆದ ಮುಷರಫ್ ಅದೇ ಜಿಯಾ ತಯಾರಿಸಿದ್ದ ಯೋಜನೆಯೊಂದನ್ನು ಜಾರಿಗೆ ತಂದದ್ದು ಕಾರ್ಗಿಲ್ ಕದನವಾಗಿ ದಾಖಲಾಗಿದೆ. ಈ ಪ್ರಕರಣಕ್ಕೆ ಇಡಿಯಾಗಿ ಮುಷರಫ್​ರನ್ನೇ ದೂಷಿಸುವ ಪರಿಪಾಠವಿದೆ. ಆದೆ ನಿಷ್ಪಕ್ಷಪಾತವಾಗಿ ಶೋಧಿಸಿದರೆ ಮುಷರಫ್​ರಷ್ಟೇ, ಒಂದು ಹಂತದಲ್ಲಿ ಅದಕ್ಕಿಂತಲು ದೊಡ್ಡದಾದ ಪಾತ್ರ ನವಾಜ್ ಶರೀಫರದಾಗಿತ್ತು ಎಂಬ ಸತ್ಯ ಹೊರಬರುತ್ತದೆ.

    ನ್ಯೂಟ್ರಲ್ ಟೆರಿಟರಿಯಂತಿದ್ದ ಸಿಯಾಚಿನ್ ಅನ್ನು ಶಿಮ್ಲಾ ಒಪ್ಪಂದದ ಆಶಯಗಳಿಗೆ ವಿರುದ್ಧವಾಗಿ ಕಬಳಿಸಲು ಪಾಕಿಸ್ತಾನ ಹೂಡಿದ ಹುನ್ನಾರವನ್ನು 1984ರ ಬೇಸಿಗೆಯಲ್ಲಿ ಭಾರತೀಯ ಸೇನೆ ವಿಫಲಗೊಳಿಸಿ, ಇಡೀ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿತಷ್ಟೆ. ನಂತರ ಏಕಕಾಲದಲ್ಲಿ ಸಿಯಾಚಿನ್ ಮತ್ತು ಲೆಹ್​ಗಳೆರಡನ್ನೂ ಭಾರತದಿಂದ ಕತ್ತರಿಸಲು ಅವೆರಡರ ಜತೆಗಿನ ಏಕೈಕ ಸಂಪರ್ಕ ಕೊಂಡಿಯಾದ ಕಾರ್ಗಿಲ್ ಪಟ್ಟಣವನ್ನು ಆಕ್ರಮಿಸಿಕೊಳ್ಳಲು ಅಥವಾ ಕಾರ್ಗಿಲ್ – ಲೆಹ್/ಸಿಯಾಚಿನ್ ರಸ್ತೆಯನ್ನು ಹಾಳುಗೆಡವಲು ಜಿಯಾ ಯೋಜನೆ ರೂಪಿಸಿದರು. ಆದರೆ, 1986-87ರ ಹೊತ್ತಿಗೆ ರಾಜೀವ್ ಗಾಂಧಿಯವರೊಂದಿಗಿನ ತಮ್ಮ ತೆರೆಮರೆಯ ರಾಜಕಾರಣ ಫಲ ನೀಡಿ, ಕಾಶ್ಮೀರ ಸಮಸ್ಯೆ ಎರಡೂ ಪಕ್ಷಗಳಿಗೆ ಸಮ್ಮತವೆನಿಸುವ ಪರಿಹಾರ ಕಾಣತೊಡಗಿದಾಗ ಜಿಯಾ ಕಾರ್ಗಿಲ್ ಆಕ್ರಮಣ ಯೋಜನೆಯನ್ನು ಪಕ್ಕಕ್ಕಿಟ್ಟರು. ಆಗಸ್ಟ್ 17, 1987ರಂದು ಅವರ ಹತ್ಯೆಯಾಗುವುದರೊಂದಿಗೆ ಕಾಶ್ಮೀರ ಸಮಸ್ಯೆಗೆ ಅವರು ಮತ್ತು ರಾಜೀವ್ ಗಾಂಧಿ ಹುಡುಕಿದ್ದ ಯೋಜನೆ ರಹಸ್ಯವಾಗಿಯೇ ಉಳಿದುಹೋಯಿತು. ಅದರೊಂದಿಗೆ ಅವರ ಕಾರ್ಗಿಲ್ ಆಕ್ರಮಣ ಯೋಜನೆಯೂ ಕಪಾಟಿನಲ್ಲಿ ಕೂತಿತು. ದಶಕದ ನಂತರ ಅದು ಕಣ್ಣಿಗೆ ಬಿದ್ದದ್ದು ಆಗ ಸೇನಾ ದಂಡನಾಯಕರಾದ ಮುಷರಫ್ ಕಣ್ಣಿಗೆ.

    ಕಾರ್ಗಿಲ್ ಪಟ್ಟಣ/ರಸ್ತೆಯ ಮೇಲೆ ಆಕ್ರಮಣವೆಸಗುವ ಪೂರ್ವಭಾವಿ ತಯಾರಿಗಾಗಿ ಉತ್ತರದಲ್ಲಿ ಅನತಿ ದೂರದಲ್ಲಿದ್ದ ಟೈಗರ್ ಹಿಲ್, ತೊಲೋಲಿಂಗ್, ದ್ರಾಸ್ ಮುಂತಾದ ಕಾರ್ಗಿಲ್ ಉನ್ನತ ಪ್ರದೇಶಗಳ ಮೇಲಿನ ಹತೋಟಿ ಅಗತ್ಯವಾಗಿತ್ತು. ಪಾಕ್ ಸೇನೆಯ ಸೆವೆಂಟೀನ್ತ್ ನಾರ್ದರ್ನ್ ಲೈಟ್ ಇನ್​ಫೆಂಟ್ರಿಯನ್ನು ನಿಯೋಜಿಸಿ ಮುಷರಫ್ ಅದನ್ನು ಸಾಧಿಸಿದ್ದು 1998-99ರ ಚಳಿಗಾಲದಲ್ಲಿ. ಇದೆಲ್ಲವನ್ನೂ ಮುಷರಫ್ ಮಾಡಿದ್ದು ಪ್ರಧಾನಿ ನವಾಜ್ ಶರೀಫರ ಗಮನಕ್ಕೆ ತಾರದೇ ಎಂಬ ಮಾತು ಪಾಕ್ ಸರ್ಕಾರಿ ವಲಯದಿಂದಲ್ಲದೆ, ಕೆಲವು ಭಾರತೀಯ ಮಾಧ್ಯಮಗಳಿಂದಲೂ ಹೊರಡತೊಡಗಿತು. ಆದರೆ, ವಾಸ್ತವ ಬೇರೆಯೇ ಇದೆ. ಮುಷರಫ್ ತಮ್ಮ ಯೋಜನೆಯನ್ನು ಪ್ರಧಾನಿಯ ಗಮನಕ್ಕೆ ತಂದಿದ್ದರು; ಮತ್ತದಕ್ಕೆ ಶರೀಫ್ ಸಮ್ಮತಿಸಿ, ‘ಜನರಲ್ ಸಾಬ್, ಬಿಸ್ಮಿಲ್ಲಾಹ್ ಕರೇಂ’ ಎಂದು ಆಶೀರ್ವದಿಸಿದ್ದರು. ಅಂದರೆ, ಸೇನೆಯ ದುರಾಕ್ರಮಣ ಯೋಜನೆ ಜಾರಿಯಲ್ಲಿದ್ದುದನ್ನು ಅರಿತಿದ್ದೂ, ಫೆಬ್ರವರಿ 8ರಂದು ಮುಷರಫ್ ಖುದ್ದಾಗಿ ಕಾರ್ಗಿಲ್ ಉನ್ನತ ವಲಯಕ್ಕೆ ಭೇಟಿ ನೀಡಿದ್ದನ್ನು ತಿಳಿದಿದ್ದೂ ಶರೀಫ್ ಫೆಬ್ರವರಿ 20ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಲಾಹೋರ್​ಗೆ ಆಹ್ವಾನಿಸಿ, ಆದರಿಸಿ, ಶಾಂತಿಯ ನಾಟಕವಾಡಿದ್ದರು! ಶರೀಫರ ಪಾಖಂಡಿತನ ಇಷ್ಟಕ್ಕೇ ನಿಲ್ಲುವುದಿಲ್ಲ. ಭಾರತವು ಆಕ್ರಮಿತ ಪ್ರದೇಶಗಳಿಂದ ಪಾಕಿಸ್ತಾನಿಯರನ್ನು ಹೊರಗಟ್ಟತೊಡಗಿದಾಗ ಶರೀಫ್ ನೆನಪಿಸಿಕೊಂಡದ್ದು ಅಣ್ವಸ್ತ್ರಗಳನ್ನು. ಜುಲೈ 4 ಅಮೆರಿಕಾದ ಸ್ವಾತಂತ್ರ್ಯ ದಿನ, ರಾಷ್ಟ್ರೀಯ ರಜಾದಿನವಾದ ಅಂದು ಅಧ್ಯಕ್ಷ ಬಿಲ್ ಕ್ಲಿಂಟನ್ ಕಚೇರಿಯಲ್ಲಿರುವುದಿಲ್ಲ ಎಂದು ತಿಳಿದಿದ್ದರೂ ಶರೀಫ್ ವಾಷಿಂಗ್​ಟನ್​ಗೆ ಓಡಿಹೋಗಿ ಕ್ಲಿಂಟನ್ ಭೇಟಿಗಾಗಿ ಒತ್ತಾಯಿಸಿ, ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸುವುದಾಗಿ ಹೇಳಿದರು. ಆರು ವರ್ಷಗಳ ಹಿಂದೆ ಶ್ವೇತಭವನ ಪ್ರವೇಶಿಸಿದಾಗ ಕ್ಲಿಂಟನ್, ವಿಶ್ವಸಂಸ್ಥೆಯೂ ಸೇರಿದಂತೆ ಕಾಶ್ಮೀರದ ವಿಷಯದಲ್ಲಿ ಭಾರತಕ್ಕೆ ವಿರುದ್ಧವಾಗಿ ಮತ್ತೆಮತ್ತೆ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಅಣ್ವಸ್ತ್ರ ದುಸ್ಸಾಹಸಕ್ಕೂ ಅವರು ಹಸಿರು ನಿಶಾನೆ ತೋರುತ್ತಾರೆಂದು ಶರೀಫ್ ನಂಬಿದಂತಿತ್ತು. ಆದರೆ, ಕ್ಲಿಂಟನ್ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದರು. ಅಮೆರಿಕಾದ ಸಮ್ಮತಿ ಇಲ್ಲದ ಕೃತ್ಯಗಳಿಗೆ ಕೈ ಹಾಕುವ ಸಾಮರ್ಥ್ಯವಿಲ್ಲದ ಶರೀಫ್ ಆಲೋಚನೆಯನ್ನು ಬದಲಿಸಬೇಕಾಯಿತು.

    ‘ಕಾರ್ಗಿಲ್ ಯುದ್ಧಕ್ಕೆ ನಾನು ಪೂರ್ಣವಾಗಿ ಜವಾಬ್ದಾರ’ ಎಂದು ವರ್ಷಗಳ ನಂತರ ಮುಷರಫ್ ಸಾರ್ವಜನಿಕವಾಗಿ ಹೇಳಿದ್ದುಂಟು. ಆದರೆ, ಅಂತಹ ಮಾತು ಶರೀಫರಿಂದ ಇದುವರೆಗೆ ಬಂದಂತೆ ಕಾಣುವುದಿಲ್ಲ. ಶರೀಫರ ವ್ಯಕ್ತಿತ್ವದ ನಕಾರಾತ್ಮಕತೆ ಇಷ್ಟಕ್ಕೇ ನಿಲ್ಲುವುದಿಲ್ಲ. ಅಕ್ಟೋಬರ್ 12, 1999ರಂದು ಮುಷರಫ್ ಸೇನಾಕ್ರಾಂತಿ ನಡೆಸಿದ್ದಕ್ಕೂ ಶರೀಫರ ನಡೆಗಳೇ ಕಾರಣ. ಶ್ರೀಲಂಕಾ ಸೇನೆಯ ಸ್ವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಷರಫ್ ಕೊಲಂಬೊಗೆ ತೆರಳಿದ ಸಮಯದಲ್ಲಿ ಅವರನ್ನು ಸೇನಾ ದಂಡನಾಯಕನ ಸ್ಥಾನದಿಂದ ಕಿತ್ತೊಗೆಯಲು ಶರೀಫ್ ಪ್ರಯತ್ನಿಸಿದರು. ವಿಷಯ ತಿಳಿದ ಮುಷರಫ್ ನಾಗರಿಕ ವಿಮಾನವೊಂದನ್ನು ಹಿಡಿದು ಕರಾಚಿಗೆ ಧಾವಿಸಿದಾಗ ಆ ವಿಮಾನಕ್ಕೆ ಇಳಿಯಲು ಅನುಮತಿ ನೀಡಕೂಡದೆಂದು ಶರೀಫ್ ತಾಕೀತು ಮಾಡಿದರು. ಅಂದರೆ ಇಂಧನ ತೀರಿದ ವಿಮಾನ ನೆಲಕಚ್ಚಿದರೆ ಮುಷರಫ್ ಜತೆ ನೂರಾರು ಅಮಾಯಕ ನಾಗರಿಕರೂ ಸಾವಿಗೀಡಾಗುವುದು ಶರೀಫರಿಗೆ ಸಮ್ಮತವೇ ಆಗಿತ್ತು!

    ಅದೃಷ್ಟವಶಾತ್ ವಿಮಾನ ಕೊನೇ ಗಳಿಗೆಯಲ್ಲಿ ಅನುಮತಿ ಗಿಟ್ಟಿಸಿಕೊಂಡು ನೆಲಕ್ಕಿಳಿದಾಗ ಮೃತ್ಯುವಿನಿಂದ ಬಚಾವಾದ ಮುಷರಫ್ ವಿಮಾನ ನಿಲ್ದಾಣದಿದಲೇ ರಾವಲ್ಪಿಂಡಿಯಲ್ಲಿದ್ದ ಸೇನಾಧಿಕಾರಿಗಳನ್ನು ಸಂರ್ಪಸಿ ಶರೀಫರ ಬಂಧನಕ್ಕೆ ವ್ಯವಸ್ಥೆ ಮಾಡಿದರು. ಸೇನಾಕ್ರಾಂತಿ ನಡೆದದ್ದು ಹೀಗೆ. ಆ ನಿರ್ಣಾಯಕ ರಾತ್ರಿಯಂದು ಇಬ್ಬರಲ್ಲೊಬ್ಬರು ಕೆಳಗಿಳಿಯಲೇಬೇಕಾಗಿತ್ತು. ಆ ಜಟಾಪಟಿಯಲ್ಲಿ ಮುಷರಫ್ ಜಯಶಾಲಿಯಾದರು.

    ಸತ್ತೆಯನ್ನು ಕೈಗೆ ತೆಗೆದುಕೊಂಡ ತರುವಾಯ ಭಾರತ ಮತ್ತು ಕಾಶ್ಮೀರ ಸಮಸ್ಯೆಯ ಕುರಿತಾಗಿ ಅವರ ನಿಲುವುಗಳೂ ಹಂತಹಂತವಾಗಿ ಬದಲಾಗುತ್ತಾ, ಅವರನ್ನು ವಾಸ್ತವದತ್ತ ತಿರುಗಿಸತೊಡಗಿದ್ದನ್ನು ಕಾಣುತ್ತೇವೆ. ಐಸಿ 814 ವಿಮಾನಾಪಹರಣಕ್ಕೆ ಸಹಕಾರ ನೀಡಿ, ನಂತರ ಮಾಸೂದ್ ಅಜರ್ ಜೈಶ್-ಎ-ಮೊಹಮದ್ ಅನ್ನು ಸ್ಥಾಪಿಸಲು, ಆ ಮೂಲಕ ಭಾರತದ ವಿರುದ್ಧ ಭಯೋತ್ಪಾದನಾ ಕೃತ್ಯಗಳು ಮಿತಿಮೀರಲು ಮುಷರಫ್ ಕಾರಣರಾದರು. ಪ್ರಧಾನಿ ವಾಜಪೇಯಿ ಆಹ್ವಾನವನ್ನು ಸ್ವೀಕರಿಸಿ ಅವರು ಜುಲೈ 2001ರಲ್ಲಿ ಆಗ್ರಾಗೆ ಬಂದದ್ದೂ ಅದೇ ಮನಸ್ಥಿತಿಯೊಂದಿಗೆ. ‘ಶಾಂತಿ ಮಾತುಕತೆ’ಯಲ್ಲೂ ಅವರು ತೋರಿಸಿದ್ದು ಉಢಾಫೆಯ ನಡವಳಿಕೆಯನ್ನೇ. ಅದು ವಾಜಪೇಯಿಯವರ ಗಮನಕ್ಕೆ ಬಾರದೇ ಹೋಗಲಿಲ್ಲ. ಹೀಗಾಗಿಯೇ, ಝುುಲ್ಪಿಕರ್ ಆಲಿ ಭುಟ್ಟೋ ಜತೆ ಶಿಮ್ಲಾದಲ್ಲಿ ಒಪ್ಪಂದ ಮಾಡಿಕೊಂಡು ಇಂದಿರಾ ಗಾಂಧಿ ಮಾಡಿದ ತಪ್ಪನ್ನು ವಾಜಪೇಯಿ ಮಾಡಹೋಗಲಿಲ್ಲ.

    ಆದರೆ, ಮಾತುಕತೆಗಳ ವೈಫಲ್ಯಕ್ಕೆ ಮುಷರಫ್ ಅವರು ಆಡ್ವಾಣಿಯವರನ್ನು ದೂಷಿಸುವ ಪ್ರಯತ್ನ ಮಾಡಿದರು. ಆದರೆ, ಅದೇ ಆಡ್ವಾಣಿ ನಂತರದ ದಿನಗಳಲ್ಲಿ ಪಾಕ್ ಮತ್ತು ಅದರ ಸ್ಥಾಪಕ ಜಿನ್ನಾರ ಬಗ್ಗೆ ತೋರಿದ ಗೌರವಾದರಗಳ ಹಿನ್ನೆಲೆಯಲ್ಲಿ ಮುಷರಫ್​ರ ಈ ವಾದವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಷ್ಟೇ ಅಲ್ಲ, ಮುಷರಫ್ ನಂತರ ಮನಮೋಹನ್ ಸಿಂಗ್ ಜತೆ ಮೂರು ಬಾರಿ ಮಾತುಕತೆ ನಡೆಸಿದ್ದನ್ನಿಲ್ಲಿ ನೆನಪಿಸಿಕೊಳ್ಳೋಣ. ಭಾರತದಲ್ಲಿ ಹುಟ್ಟಿ ಪಾಕಿಸ್ತಾನದ ಅಧ್ಯಕ್ಷರಾದ ಮುಷರಫ್ ಮತ್ತು ಪಾಕಿಸ್ತಾನದಲ್ಲಿ ಹುಟ್ಟಿ ಭಾರತದ ಪ್ರಧಾನಿಯಾದ ಮನಮೋಹನ್ ಸಿಂಗ್ ನಡುವೆ ಅಷ್ಟೂ ಮಾತುಕತೆಗಳು ವಿಫಲವಾದದ್ದು ಹೇಗೆ, ಏಕೆ?

    ಆ ಮಾತುಕತೆಗಳ ವೈಫಲ್ಯದ ಮೂಲ ಪಾಕಿಸ್ತಾನದಲ್ಲೇ ಇತ್ತು ಮತ್ತು ಅದು ಮುಷರ›ಫರ ಸಾಮರ್ಥ್ಯಕ್ಕೂ ಮೀರಿದ್ದಾಗಿತ್ತೆಂಬುದಕ್ಕೆ ಸಾಂರ್ದಭಿಕ ಆಧಾರಗಳಿವೆ. 2006ರಿಂದ ಮುಷರ›ಫ್ ಭಾರತದೊಂದಿಗೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವ, ಪ್ರಾಮಾಣಿಕವೆಂಬಂತೆ ಕಾಣುವ, ಪ್ರಯತ್ನಗಳನ್ನು ನಡೆಸುತ್ತಲೇ ದೇಶದೊಳಗೆ ತಮ್ಮ ಸರ್ವಾಧಿಕಾರಿ ಕೈಯನ್ನೂ ಸಡಿಲಿಸತೊಡಗಿದರು. ಬಹುಶಃ ಅದೇ ಅವರಿಗೆ ಮುಳುವಾಯಿತು. ವಿರೋಧಪಕ್ಷಗಳು, ಲಾಲ್ ಮಸ್ಜಿದ್​ನ ಇಬ್ಬರು ಸಹೋದರ ಮೌಲ್ವಿಗಳು, ಪಾಕ್ ತಾಲಿಬಾನಿಗಳು ಎಲ್ಲರೂ ಏಕಕಾಲದಲ್ಲಿ ಮುಷರಫ್ ವಿರುದ್ಧ ಕಾರ್ಯಾಚರಣೆಗಿಳಿದರು. ಮೂಲಭೂತವಾದಿಗಳನ್ನೇನೋ ಮುಷರಫ್ ಉಗ್ರ ಕ್ರಮಗಳ ಮೂಲಕ ಅಡಗಿಸಿದರು. ಆದರೆ, ವಿರೋಧಪಕ್ಷಗಳ ವಿರುದ್ಧ ಅಂತಹದೇ ಕ್ರಮಗಳಿಗೆ ಅವರು ಮುಂದಾಗಲಿಲ್ಲ. ಅಥವಾ ಇಪ್ಪತ್ತು ವರ್ಷಗಳ ಹಿಂದೆ ಜಿಯಾ-ಉಲ್-ಹಕ್ ಮಾಡಿದ್ದಂತೆ ನಾಮ್ ಕೇ ವಾಸ್ತೇ ಚುನಾವಣೆಗಳನ್ನು ನಡೆಸಿ, ವಿರೋಧಪಕ್ಷಗಳ ಒಗ್ಗಟ್ಟನ್ನು ಒಡೆದು ಕೈಗಳನ್ನು ಬಲಪಡಿಸಿಕೊಂಡ ತಂತ್ರಗಳನ್ನು ಮುಷರಫ್ ಮಾಡಲಿಲ್ಲ. ಪರಿಣಾಮವಾಗಿ ಚುನಾವಣೆಗಳು ಜರುಗಿ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸರ್ಕಾರ ರಚಿಸಿತು. ಪಾಕ್ ಇತಿಹಾಸದಲ್ಲಿ ಯಾವುದೇ ಸೇನಾ ಸರ್ವಾಧಿಕಾರಿ ತನ್ನ ಅಧ್ಯಕ್ಷಾವಧಿಯಲ್ಲೇ ಪೂರ್ಣ ಸ್ವತಂತ್ರವಾದ ನಾಗರಿಕ ಸರ್ಕಾರದ ಅಸ್ತಿತ್ವಕ್ಕೆ ಅವಕಾಶ ನೀಡಿದ ಉದಾಹರಣೆ ಇಲ್ಲ. ಅದನ್ನು ಮಾಡಹೋಗಿ ಮುಷರಫ್ ತಮ್ಮ ಕೈಗಳನ್ನು ತಾವೇ ಕಟ್ಟಿಹಾಕಿಕೊಂಡರು. ತನ್ನ ನಾಯಕಿಯ ಹತ್ಯೆಗೆ ಮುಷರಫ್​ರನ್ನು ದೂಷಿಸಿದ ಪಿಪಿಪಿ, ಆರೋಪಗಳನ್ನು ಹೊರಿಸುತ್ತಾ ಹೋಗಿ ಅವರನ್ನು ಮಹಾಭಿಯೋಗದ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಯೋಜನೆ ಹೂಡಿತು. ಆಗ ಮುಷರಫ್ ಬಯಸಿದ್ದರೆ ಸರ್ಕಾರವನ್ನು ಬರಖಾಸ್ತು ಮಾಡಿ ಪೂರ್ಣ ಅಧಿಕಾರವನ್ನು ಮತ್ತೆ ಕೈಗೆ ತೆಗೆದುಕೊಳ್ಳಬಹುದಾಗಿತ್ತು. ಆದರೆ, ಹಾಗೆ ಮಾಡದೇ ಅವರು ರಾಜೀನಾಮೆ ನೀಡಿ ಮನೆಗೆ ನಡೆದರು. ಅಲ್ಲಿಗೆ ಭಾರತದೊಂದಿಗೆ ಶಾಂತಿಗಾಗಿ ಅವರು ನಡೆಸುತ್ತಿದ್ದ ಪ್ರಯತ್ನವೂ ಮೂಲೆ ಸೇರಿತು.

    ಮುಷರಫ್​ರ ಆಡಳಿತಾತ್ಮಕ, ರಾಜತಾಂತ್ರಿಕ ಹಾಗೂ ಸೈನಿಕ ಮುಖಗಳು ಅವರ ಭಾರತದ ಕುರಿತಾಗಿನ ನೀತಿನಿಲುವುಗಳಾಚೆಗೂ ವ್ಯಾಪಕವಾಗಿವೆ. ಮುಂದೆ ಸಾಧ್ಯವಾದಾಗ ನೋಡೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts