More

    ಅಡ್ಯತಕಂಡ ಅಣೆಕಟ್ಟು ದುರಸ್ತಿ ಆಗದೆ ಎಡವಟ್ಟು

    ಶ್ರವಣ್ ಕುಮಾರ್ ನಾಳ ಪುತ್ತೂರು
    ಪೆರುವಾಜೆ ಅಡ್ಯತಕಂಡ ಕಿಂಡಿ ಅಣೆಕಟ್ಟು 10 ವರ್ಷಗಳ ಹಿಂದೆ ಕಳಪೆ ಕಾಮಗಾರಿಯಿಂದ ಪ್ರವಾಹಕ್ಕೆ ಕುಸಿದಿದ್ದು, ಈ ತನಕವೂ ದುರಸ್ತಿ ಆಗಿಲ್ಲ.
    12 ವರ್ಷಗಳಲ್ಲಿ ಪೆರುವಾಜೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಗದ ಕಾರಣ ಇದು ದುರಸ್ತಿ ಕಾಣಲಿದೆ ಎಂಬ ನಿರೀಕ್ಷೆಯನ್ನೇ ಕೈಬಿಟ್ಟಿದ್ದಾರೆ. ಬಿರು ಬೇಸಿಗೆಯಲ್ಲಿ ಇಲ್ಲಿನ ಜನ ನೀರಿನ ಬರ ಎದುರಿಸಬೇಕಾದ ಸ್ಥಿತಿ.
    ಪೆರುವಾಜೆಯಲ್ಲಿ ಹಾದುಹೋಗುವ ಗೌರಿ ಹೊಳೆಗೆ ಅಡ್ಯತಕಂಡ ಬಳಿ ಜಿಲ್ಲಾ ಪಂಚಾಯಿತಿ ಮೂಲಕ 1999ರಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಅಣೆಕಟ್ಟು ಮಂಜೂರಾಗಿತ್ತು. ಗುತ್ತಿಗೆ ವಿಷಯದಲ್ಲಿ ಹೊಯ್ದಟ ನಡೆದು ಅಣೆಕಟ್ಟು ನಿರ್ಮಾಣವಾಗಿತ್ತು. ಕಾಮಗಾರಿ ಪೂರ್ಣಗೊಂಡ ಮೊದಲ ವರ್ಷವೇ ಕಳಪೆ ಹಲಗೆ, ಅಡಿಪಾಯದಿಂದ ನೀರು ಸೋರಿಕೆ ಬೆಳಕಿಗೆ ಬಂದಿತ್ತು. ಸೋರಿಕೆ ಮಧ್ಯೆಯೂ ಇಲ್ಲಿ ಸಂಗ್ರಹವಾಗುತ್ತಿದ್ದ ನೀರಿನಿಂದ ಮಾರ್ಚ್ ತನಕ 150ಕ್ಕೂ ಅಧಿಕ ಕುಟುಂಬದ ಕೃಷಿ ತೋಟಕ್ಕೆ ಆಧಾರವಾಗಿತ್ತು.
    10 ವರ್ಷದ ಹಿಂದೆ ಬೇಸಿಗೆಯಲ್ಲಿ ಕಟ್ಟಕ್ಕೆ ಹಲಗೆ ಜೋಡಿಸಲಾಗಿತ್ತು. ನೀರಿನ ಮಟ್ಟ ಇಳಿಕೆಯಾಗಿ ಹಲಗೆ ತೆಗೆಯಲು ಒಂದೆರಡು ದಿನ ಬಾಕಿ ಇತ್ತು. ಆಗ ಹೊಳೆಯಲ್ಲಿ ಹರಿದು ಬಂದ ಮಳೆ ನೀರಿನ ಪ್ರವಾಹಕ್ಕೆ ಅಣೆಕಟ್ಟಿನ ಮೂರು ಪಿಲ್ಲರ್, ಒಂದು ಬದಿಯ ತಡೆಗೋಡೆ ಕೊಚ್ಚಿ ಹೋಗಿತ್ತು. ಅದಾದ ಬಳಿಕ ದುವರೆಗೂ ಕಿಂಡಿ ಅಣೆಕಟ್ಟಿಗೆ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಜನರು ಹತ್ತಾರು ಬಾರಿ ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ನೀಡಿದ ಮನವಿಗಳು ಸಂದರೂ ಅದರಿಂದ ಪ್ರಯೋಜನ ಸಿಕ್ಕಿಲ್ಲ.

    ಅಡಕೆ ತೋಟ, ಗದ್ದೆ ಜಲಸಮಾಧಿ: ಕಿಂಡಿ ಅಣೆಕಟ್ಟಿಗೆ ಅಳವಡಿಸುವ ಹಲಗೆ ಗೆದ್ದಲು ಹಿಡಿಯುತ್ತಿದೆ. ಶೇ.90ಕ್ಕೂ ಅಧಿಕ ಮರದ ಹಲಗೆಗಳು ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ. ಇದನ್ನು ರಕ್ಷಿಸಲು ಇಲಾಖೆಗೂ ಸಾಧ್ಯವಾಗಿಲ್ಲ. ಒಂದು ಬದಿಯ ತಡೆಗೋಡೆ ಕುಸಿದ ಪರಿಣಾಮ, ಆ ಭಾಗದಲ್ಲಿ ಅಡಕೆ ತೋಟ ಹಾಗೂ ಗದ್ದೆ ಜಲಸಮಾಧಿಯಾಗಿವೆ. ಪ್ರತಿವರ್ಷವೂ ಮಳೆಯಿಂದಾಗಿ ಮಣ್ಣಿನ ಸವೆತ ಹೆಚ್ಚುತ್ತಿದೆ. ತಡೆಗೋಡೆ ನಿರ್ಮಿಸುವ ಕಾರ್ಯವೂ ಆಗಿಲ್ಲ.

    ಕುಡಿಯುವ ನೀರಿಗೆ ಸಹಕಾರಿ:ಅಡ್ಯತಕಂಡ ಕಿಂಡಿ ಅಣೆಕಟ್ಟು ಮರು ನಿರ್ಮಾಣವಾದಲ್ಲಿ ಕುಡಿಯುವ ನೀರಿಗೆ, ಕೃಷಿಗೆ ಸಹಕಾರಿಯಾಗಲಿದೆ. ಅಂತರ್ಜಲದ ರಕ್ಷಣೆ ಸಾಧ್ಯವಾಗಲಿದೆ. ಹೊಸ ತಂತ್ರಜ್ಞಾನ ಬಳಸಿ ಅಣೆಕಟ್ಟು ನಿರ್ಮಾಣ ಮಾಡಿದರೆ ಕಡಿಮೆ ಮಾನವ ಶ್ರಮದಲ್ಲಿ ನಿರ್ವಹಣೆ ಸಾಧ್ಯ. ಆದರೆ ಜನಪ್ರತಿನಿಧಿಗಳು ಯೋಜನೆ ರೂಪಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಶರ್ೀ ಕುಂಡಡ್ಕ ಆರೋಪಿಸಿದ್ದಾರೆ. ಕಿಂಡಿ ಅಣೆಕಟ್ಟು ದುರಸ್ತಿ ಬಗ್ಗೆ ಪ್ರಸ್ತಾವನೆ ಇದೆ. ಜಿಪಂ ಮೂಲಕ ಕಿಂಡಿ ಅಣೆಕಟ್ಟು ನಿರ್ಮಾಣ, ದುರಸ್ತಿಗೆ ಈಗ ಅನುದಾನ ಲಭ್ಯವಿಲ್ಲ. ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಅಡ್ಯತಕಂಡ ಅಣೆಕಟ್ಟಿನ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಪಂ ಇಂಜಿನಿಯರ್ ಹನುಮಂತರಾಯಪ್ಪ ತಿಳಿಸಿದ್ದಾರೆ.

    ಪೆರುವಾಜೆ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಅಡ್ಯತಕಂಡ ಕಿಂಡಿ ಅಣೆಕಟ್ಟು ದುರಸ್ತಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗುವುದು.
    -ಎಸ್ ಅಂಗಾರ ಮೀನುಗಾರಿಕಾ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts