More

    ಮಣ್ಣಿನ ಕಂಪಿನಲ್ಲಿ ಅರಳಿದ ಸಾಹಿತ್ಯ ಶ್ರೇಷ್ಠ: ‘ಪೆರ್ಗದ ಸಿರಿ’ ಬಿಡುಗಡೆಗೊಳಿಸಿ ಡಾ.ಸಂಕಮಾರ್ ಅಭಿಮತ

    ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರಲ್ಲಿ ಸಾಹಸ ಹಾಗೂ ಸಾಹಿತ್ಯದ ಗುಣ ಅಡಕವಾಗಿರುತ್ತದೆ. ಅದು ಬರವಣಿಗೆಗೆ ಪೂರಕ. ಬೆವರು ಅದ್ದಿದ ಮಣ್ಣಿನಲ್ಲಿ ಹುಟ್ಟಿದ ಸಾಹಿತ್ಯ ಕೃಷಿ ಎಲ್ಲಕ್ಕಿಂತಲೂ ಶ್ರೇಷ್ಠ ಎಂದು ತುಳು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.

    ನಗರದ ಕೆನರಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ತುಳು ಲಿಪಿ ಶಿಕ್ಷಕಿ, ಲೇಖಕಿ ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ ತುಳು ಕವನ ಸಂಕಲನವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

    ಇಂದಿನ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತುಂಬುವಲ್ಲಿ ವಿಫಲವಾಗುತ್ತಿದೆ. ಲಕ್ಷ ಜನರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಲೇಖಕರಾಗುತ್ತಿದ್ದಾರೆ. ಹಿರಿಯ ತಲೆಮಾರಿನ ಕವಿ, ಸಾಹಿತಿಗಳು ತೆರೆಮರೆಗೆ ಸರಿಯುತ್ತಿರುವ ಹೊತ್ತಿನಲ್ಲಿ ತುಳುವಿನಲ್ಲಿ ಹೊಸ ಬರಹಗಾರರು ಸೃಷ್ಟಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ತಾಯಿ, ಗುರು, ಹುಟ್ಟಿದ ಮಣ್ಣಿನಲ್ಲಿ ಸಾಹಿತ್ಯದ ಸತ್ವವಿದೆ. ಮನಸ್ಸು ಎಂಬ ಅಂಗ ದೇಹದಲ್ಲಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅದು ಸ್ವಸ್ಥವಿದ್ದರೆ ಮಾತ್ರ ಬದುಕು. ಅಂತಹ ಮನಸ್ಸಿಗೆ ಔಷಧ ನೀಡುವ ಕಾರ್ಯವನ್ನು ಸಾಹಿತ್ಯ ಮಾಡುತ್ತದೆ ಎಂದರು.

    ಎಂಆರ್‌ಪಿಎಲ್‌ನ ಪ್ರಶಿಕ್ಷಣ ವಿಭಾಗದ ಮಹಾ ಪ್ರಬಂಧಕಿ ವೀಣಾ ಟಿ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಸಾಹಿತ್ಯ ಕೃಷಿ ಬದುಕಿಗೆ ಸಾರ್ಥಕ್ಯ ತುಂಬುತ್ತದೆ. ಬದುಕು ಹಾಗೂ ಸಮಾಜವನ್ನು ಬದಲಾಯಿಸುವ ಶಕ್ತಿ ಸಾಹಿತ್ಯಕ್ಕಿದೆ. ನಮ್ಮನ್ನು ಸದಾ ಜೀವಂತವಾಗಿಡುವ ಜತೆಗೆ ಬದುಕಿಗೆ ಸಂಭ್ರಮ, ಬಣ್ಣ ತುಂಬುವ ಜತೆಗೆ ಸುತ್ತಮುತ್ತಲ ವಾತಾವರಣವನ್ನು ಅರ್ಥಪೂರ್ಣವಾಗಿಸುತ್ತದೆ. ಮಹಿಳೆಯರು ಈ ನಿಟ್ಟಿನಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಸಾಧಕರಿಗೆ ಸನ್ಮಾನ: ಸಾಹಿತಿಗಳಾದ ಚೇತನ್ ವರ್ಕಾಡಿ, ಉಮೇಶ್ ಶಿರಿಯಾ, ತುಳು ಆಲ್ಬಮ್ ಸಾಹಿತ್ಯ ಕ್ಷೇತ್ರದ ಲತೀಶ್ ಮಿಜಾರ್, ಅಮರ್‌ನಾಥ್ ಪೂಪಾಡಿಕಲ್ಲು, ತುಳು ಲಿಪಿ ಪ್ರಚಾರಕರಾದ ಜಗದೀಶ್ ಗೌಡ ಕಲ್ಕಳ, ವಿನಯ್ ರೈ, ಸಮಾಜ ಸೇವಕರಾದ ಕೆ.ಆನಂದ ಶೆಟ್ಟಿ, ಅಕ್ಷಿತ್ ಶೆಟ್ಟಿ ಕೆಂಜಾರ್, ಕವಿ, ಸಂಘಟಕ ಕಾ.ವೀ ಕೃಷ್ಣದಾಸ್ ಅವರನ್ನು ಸನ್ಮಾನಿಸಲಾಯಿತು.

    ಸಾಹಿತಿ ಡಾ.ವಸಂತಕುಮಾರ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಾಧವ ಎಂ.ಕೆ. ‘ತುಲುವೆರೆ ಕಲ’ ಸಂಘಟನೆ ಉದ್ಘಾಟಿಸಿದರು. ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಮಾತನಾಡಿದರು. ಕವಯಿತ್ರಿ ವಿಜಯಲಕ್ಷ್ಮೀ ಕಟೀಲು ಅಧ್ಯಕ್ಷತೆಯಲ್ಲಿ ‘ಪೆರ್ಗದ ಸಿರಿ’ ತುಳು ಕವಿಗೋಷ್ಠಿ ನಡೆಯಿತು. ಕೃತಿಕರ್ತೆ ಗೀತಾ ಲಕ್ಷ್ಮೀಶ್ ಸ್ವಾಗತಿಸಿದರು. ವಿನಯ್ ಕುಮಾರ್ ಅದ್ಯಪಾಡಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts