More

    ಜನರಿಗೆ ‘ತೀರದ’ ಪ್ರವಾಹ ಭೀತಿ

    ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಕೆಳ ಹಂತದ 6 ಸೇತುವೆಗಳು ಮುಳುಗಡೆಯಾಗಿವೆ. ದೂಧಗಂಗಾ ಹಾಗೂ ಕೃಷ್ಣಾ ನದಿಯಲ್ಲಿ ಎರಡು ಅಡಿಯಷ್ಟು ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಹೆಚ್ಚಿಸಿದೆ.

    ದೂಧಗಂಗಾ ನದಿಗೆ ನಿರ್ಮಿಸಿರುವ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಮಲಿಕವಾಡ-ದತ್ತವಾಡ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುನ್ನೂರ-ಬಾರವಾಡ ಸೇತುವೆ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು-ಕಲ್ಲೋಳ ಸೇತುವೆ ಮುಳುಗಡೆಯಾಗಿವೆ.

    ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 46,750 ಕ್ಯೂಸೆಕ್, ದೂಧಗಂಗಾ ಮತ್ತು ವೇದಗಂಗಾ ನದಿ ಮೂಲಕ 15,488 ಕ್ಯೂಸೆಕ್ ನೀರು ಬರುತ್ತಿದ್ದು, ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಹತ್ತಿರ ಒಟ್ಟು 62,238 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಥಣಿ ತಾಲೂಕಿನ ಕೃಷ್ಣಾ ನದಿ ಮೂಲಕ ಹಿಪ್ಪರಗಿ ಅಣೆಕಟ್ಟೆಗೆ 49 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2.62 ಟಿಎಂಸಿ ನೀರು ಅಣೆಕಟ್ಟೆಯಲ್ಲಿ ಸಂಗ್ರವಿದ್ದು, 48 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತಗ್ಗಿದ ವರುಣನ ಆರ್ಭಟ: ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಗುರುವಾರ ವರುಣನ ಆರ್ಭಟ ತುಸು ತಗ್ಗಿದೆ. ಲೋಂಡಾ, ಕಣಕುಂಬಿ, ಹೆಮ್ಮಡಗಾ ಅರಣ್ಯದಲ್ಲಿ ಬೆಳಗ್ಗೆ ಉತ್ತಮ ಮಳೆಯಾಗಿದೆ. ಅರಣ್ಯಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಳೆ ಸುರಿದ ಪರಿಣಾಮ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿ ಜನರಿಗೆ ಸಮಸ್ಯೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts