More

    ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ; ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ಸಂತಾಪ…

    ಬೆಂಗಳೂರು: ನಟ ವಿಜಯರಾಘವೇಂದ್ರ ಪತ್ನಿ ಬ್ಯಾಂಕಾಕ್‍ನಲ್ಲಿ ಇಂದು ನಿಧನರಾಗಿದ್ದು ಸಾವಿಗೆ ಹೃದಯಾಘಾತ ಹಾಗೂ ಲೋ ಬಿಪಿ ಎನ್ನಲಾಗುತ್ತಿದೆ.

    ಸುದ್ದಿಗಾರರು ಡಾ. ಜಿ ಪರಮೇಶ್ವರ್‍ ಬಳಿ, ಮೃತದೇಹವನ್ನು ಸ್ವದೇಶಕ್ಕೆ ತರುವುದರ ಕುರಿತಾಗಿ ಸರ್ಕಾರದ ಸಹಾಯ ಕೇಳಿದ್ದಾರಾ ಎಂದು ಪ್ರಶ್ನಿಸಿದ್ದಕ್ಕೆ ಗೃಹ ಸಚಿವರು, “ಈ ಬಗ್ಗೆ ಮಾಹಿತಿ ಇಲ್ಲ. ಈಗ ಸಿಎಂ ಜೊತೆಗೆ ಸಭೆ ಇದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಭೆಯಲ್ಲಿ ಸಿಎಂ ಜತೆ ಚರ್ಚೆ ಮಾಡುತ್ತೇನೆ” ಎಂದಿದ್ದಾರೆ.

    ಸ್ಪಂದನಾ ಸಾವಿಗೆ ಸಿಎಂ, ಡಿಸಿಎಂ ಸೇರಿದಂತೆ ಅನೇಕ ಗಣ್ಯರು ಸಂತಾಪ ಕೋರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಿಎಂ ಖಾತೆಯಿಂದ ಸಂತಾಪ ಸೂಚಿಸಿದ್ದು, “ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಬರೆದಿದ್ದಾರೆ.

    ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಕನ್ನಡದ ಖ್ಯಾತ ನಟ ಶ್ರೀ ವಿಜಯರಾಘವೇಂದ್ರ ಅವರ ಧರ್ಮಪತ್ನಿ ಶ್ರೀಮತಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್‍ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು” ಎಂದು ಟ್ವೀಟ್‍ ಮಾಡಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.

    ಇನ್ನು ದಿನೇಶ್ ಗುಂಡೂರಾವ್ ಕೂಡ ಸಂತಾಪ ಸೂಚಿಸಿದ್ದು, ‘ಎಕ್ಸ್’ನಲ್ಲಿ ಅವರು “ನಟ ವಿಜಯ ರಾಘವೇಂದ್ರರವರ ಧರ್ಮಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅತಿ ಸಣ್ಣ ವಯಸ್ಸಿಗೆ ಆಗುವ ಹೃದಯಾಘಾತದ ದುರ್ಘಟನೆಗಳು ನನ್ನ ಮನಸ್ಸನ್ನು ವಿಚಲಿತಗೊಳಿಸಿವೆ. ಸ್ಪಂದನಾರವರ ಸಾವು ಅನಿರೀಕ್ಷಿತ. ವಿಜಯ್ ರಾಘವೇಂದ್ರ ಕುಟುಂಬದ ಶೋಕದಲ್ಲಿ ನಾನೂ ಭಾಗಿ” ಎಂದು ಬರೆದುಕೊಂಡಿದ್ದಾರೆ.

    ಹಲವಾರು ಅಭಿಮಾನಿಗಳೂ ಈ ಕುರಿತಾಗಿ ಟ್ವೀಟ್‍ ಮಾಡಿದ್ದು, ತಮ್ಮ ದುಃಖವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪವನ್ ಎನ್ನುವ ಅಭಿಮಾನಿಯೊಬ್ಬರು, ‘ಎಕ್ಸ್’ (ಹಿಂದೆ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದು, “ಮೊದಲು ಮುರಳಿ ಸರ್ ಅಪಘಾತಕ್ಕೆ ಒಳಗಾದರು, ಅಪ್ಪು ಸರ್ ಸಾವನ್ನು ಮರೆಯುವ ಮುನ್ನವೇ ಈಗ ಸ್ಪಂದನಾ ಮೇಡಂ ಇಹಲೋಕ ತ್ಯಜಿಸಿದ್ದಾರೆ. ದೊಡ್ಮನೆ ಕುಟುಂಬ ಕಷ್ಟಕರ ಪರಿಸ್ಥಿತಿಯಲ್ಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts