More

    ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    ಜು. 7ರಂದು ಕರೊನಾ ಸೋಂಕಿನಿಂದ ಮೃತಪಟ್ಟಿದ್ದ 55 ವರ್ಷದ ವ್ಯಕ್ತಿಯ ಪತ್ನಿ ಕೂಡ ಕರೊನಾ ಸೋಂಕಿನ ಶಂಕೆಯಿಂದ ಶನಿವಾರ ಮೃತಪಟ್ಟಿದ್ದು, ಆಕೆಯ ಶವ ಸಂಸ್ಕಾರಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಗರದ ಹೊರವಲಯದ ಕೂನಬೇವು ಪ್ಲಾಟ್​ನಲ್ಲಿ ಭಾನುವಾರ ನಡೆದಿದೆ.

    ಇಲ್ಲಿಯ ಮಾರುತಿ ನಗರದ ನಿವಾಸಿ 48 ವರ್ಷದ ಮಹಿಳೆ ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆಕೆಯ ಶವ ಸಂಸ್ಕಾರವನ್ನು ತಾಲೂಕು ಆಡಳಿತ ಕೂನಬೇವು ಪ್ಲಾಟ್​ನ ರುದ್ರಭೂಮಿಯಲ್ಲಿ ನೆರವೇರಿಸಲು ಮುಂದಾಗಿತ್ತು. ಶವವನ್ನು ಪ್ಲಾಟ್​ನ ಬಳಿ ತರುತ್ತಿದ್ದಂತೆ ಅಲ್ಲಿಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿ ರುದ್ರಭೂಮಿಗೆ ಗೇಟ್​ಗೆ ಬೀಗ ಜಡಿದು ಹಾಗೂ ಅಧಿಕಾರಿಗಳ ವಾಹನಗಳಿಗೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

    ಮುಖಂಡ ಮೈಲಪ್ಪ ದಾಸಪ್ಪನವರ ಮಾತನಾಡಿ, ಇಲ್ಲಿಯ ರುದ್ರಭೂಮಿ ಪಕ್ಕದಲ್ಲಿಯೇ ಜನರು ವಾಸವಾಗಿದ್ದಾರೆ. ಬಹುತೇಕರು ಕಡು ಬಡವರು. ಇಲ್ಲಿ ಶವ ಸಂಸ್ಕಾರ ಮಾಡುವುದರಿಂದ ಜನತೆ ಭಯ ಭೀತರಾಗಿ ಮನೆ ಬಿಡುವ ಪರಿಸ್ಥಿತಿ ಎದುರಾಗಲಿದೆ. ಅಲ್ಲದೇ ಮುಂದಿನ ದಿನದಲ್ಲಿ ಯಾರಿಗಾದರೂ ಸೋಂಕು ಹರಡಿದರೆ, ಬಡವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

    ಅಲ್ಲದೇ ಕರೊನಾ ಸೋಂಕಿನಿಂದ ಮೃತಪಟ್ಟವರನ್ನು ಜನವಸತಿ ಪ್ರದೇಶದಿಂದ ದೂರದಲ್ಲಿ ಶವಸಂಸ್ಕಾರ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ರಾಣೆಬೆನ್ನೂರಿನ ಹಲಗೇರಿ, ಹುಲ್ಲತ್ತಿ ರಸ್ತೆಯ ರುದ್ರಭೂಮಿಗಳು ಜನವಸತಿ ಪ್ರದೇಶದಿಂದ ದೂರ ಇವೆ. ಜತೆಗೆ ಗಂಗಾಪುರ ಹಾಗೂ ಮೇಡ್ಲೇರಿ ರಸ್ತೆಯಲ್ಲಿ ಬಹಳಷ್ಟು ಪ್ರದೇಶವಿದೆ. ಆದ್ದರಿಂದ ಮಹಿಳೆಯ ಶವ ಸಂಸ್ಕಾರವನ್ನು ಬೇರೆಡೆ ಮಾಡಬೇಕು ಎಂದು ಪಟ್ಟುಹಿಡಿದರು.

    ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಸಿಪಿಐ ಸುರೇಶ ಸಗರಿ ಹಾಗೂ ತಹಸೀಲ್ದಾರ್ ಬಸನಗೌಡ ಕೋಟೂರು ಮಾತನಾಡಿ, ಇದೊಂದು ಬಾರಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಿ. ನಂತರದ ದಿನದಲ್ಲಿ ಕರೊನಾದಿಂದ ಮೃತಪಟ್ಟವರಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗುವುದು ಎಂದು ಮನವಿ ಮಾಡಿದರು.

    ಇದಕ್ಕೆ ಸ್ಪಂದಿಸಿದ ಸ್ಥಳೀಯರು, ಶವ ಸಂಸ್ಕಾರದ ಬಳಿಕ ಸಂಪೂರ್ಣ ಜಾಗಕ್ಕೆ ಸ್ಯಾನಿಟೈಸರ್ ಮಾಡಿಸಬೇಕು. ಎಲ್ಲ ಬಗೆಯ ಸುರಕ್ಷತಾ ಕ್ರಮ ಜರುಗಿಸಬೇಕು. ಮುಂದಿನ ದಿನದಲ್ಲಿ ಈ ಭಾಗದಲ್ಲಿ ಯಾರಿಗಾದರೂ ತೊಂದರೆಯಾದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿ, ಶವ ಸಂಸ್ಕಾರಕ್ಕೆ ಅವಕಾಶ ನೀಡಿದರು.

    ವಾರ್ಡ್​ನ ಸದಸ್ಯ ಪ್ರಕಾಶ ಚಿನ್ನಿಕಟ್ಟಿ, ಪ್ರಕಾಶ ಪೂಜಾರ, ಮೈಲಪ್ಪ ಗೋಣಿಬಸಮ್ಮನವರ, ಬಸವರಾಜ ಸಾವಕ್ಕಳವರ, ಶ್ರೀಕಾಂತ ಸಣ್ಣಮನಿ, ಹನುಮಂತಪ್ಪ ಸಾವಕ್ಕಳವರ ಮತ್ತಿತರರು ಪಾಲ್ಗೊಂಡಿದ್ದರು.

    ಪತಿ ಮೃತಪಟ್ಟ ಐದೇ ದಿನಕ್ಕೆ ಪತ್ನಿ ಸಾವು: ಮೃತ ಮಹಿಳೆಯ ಪತಿ ಜು. 7ರಂದು ಕರೊನಾ ಸೋಂಕಿನಿಂದ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಆತನ ಶವ ಸಂಸ್ಕಾರ ದಾವಣಗೆರೆಯಲ್ಲೇ ನಡೆದಿತ್ತು. ಈವರ ಮಗನ ಮದುವೆ ಜೂ. 29ರಂದು ನಡೆದಿತ್ತು. ಪತಿ ಮೃತಪಟ್ಟ ದಿನವೇ ಪತ್ನಿ, ಪುತ್ರ, ಸೊಸೆ ಹಾಗೂ ಮದುವೆ ಸಮಾರಂಭಕ್ಕೆ ಬಂದವರು ಸೇರಿ ಪ್ರಥಮ ಸಂಪರ್ಕದಲ್ಲಿದ್ದ 55ಕ್ಕೂ ಅಧಿಕ ಜನರ ಗಂಟಲು ದ್ರವ ಮಾದರಿಯನ್ನು ಪಡೆದು ಎಲ್ಲರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಪತ್ನಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಹಾವೇರಿ ಜಿಲ್ಲಾಸ್ಪತ್ರೆಯ ಕೋವಿಡ್-19 ವಿಭಾಗದ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಆಕೆಯ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬರುವುದು ಬಾಕಿಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts