More

    ವರುಣನ ಅಬ್ಬರಕ್ಕೆ ನಲುಗಿದ ಜಿಲ್ಲೆಯ ಜನ

    ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಭಾರಿ ಮಳೆ ಸುರಿದಿದೆ. ನಾಲ್ಕೈದು ತಾಸು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ನಷ್ಟವಾಗಿದೆ.

    ಜಿಲ್ಲೆಯ ಸವಣೂರ ತಾಲೂಕಿನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಯಲವಿಗಿ ಸೇರಿ ಅನೇಕ ಗ್ರಾಮಗಳ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಜಮೀನುಗಳ ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಇನ್ನು ಅನೇಕ ಕಡೆಗಳಲ್ಲಿ ಹಳ್ಳ, ಕೆರೆಗಳು ತುಂಬಿ ಹರಿದು ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು.

    ಸೋಮವಾರ ಬೆಳಗ್ಗೆ ಬಿಸಿಲು ಬಿದ್ದಿತ್ತು. ಮಧ್ಯಾಹ್ನ ಆಗುತ್ತಿದ್ದಂತೆ ಮತ್ತೆ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಸುರಿಯುತ್ತಿದೆ. ಗಣೇಶ ಹಬ್ಬದ ಹಿನ್ನೆಲೆ ವಿವಿಧ ವಸ್ತುಗಳ ಖರೀದಿಗೆ ನಗರದ ಮಾರುಕಟ್ಟೆಗೆ ಆಗಮಿಸುತ್ತಿರವ ಜನತೆಗೆ ಜಿಟಿಜಿಟಿ ಮಳೆ ತೊಂದರೆ ಉಂಟು ಮಾಡುತ್ತಿದ್ದು, ಈ ನಡುವೆಯೂ ಗಣೇಶ ಹಬ್ಬದ ತಯಾರಿಯಲ್ಲಿ ಜನತೆ ತೊಡಗಿರುವುದು ಕಂಡು ಬಂದಿತು.

    ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದ್ದರಿಂದ ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿ ಬೆಳೆಗಳನ್ನು ಕಟಾವು ಮಾಡಿದ್ದ ರೈತರು ಸಂಕಷ್ಟಕ್ಕೆ ತುತ್ತಾಗುವಂತಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಳ್ಳುಳ್ಳಿ, ಉಳ್ಳಾಗಡ್ಡಿ ಕೊಳೆಯುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಇವರೆಗೆ 60.122ಹೆಕ್ಟೇರ್ ಕೃಷಿ ಬೆಳೆ, 1,271.15ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 61,393 ಹೆಕ್ಟೇರ್ ಬೆಳೆಹಾನಿಯಾಗಿದೆ.

    670 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿದ್ದು, ಹಾವೇರಿ ತಾಲೂಕಿನಲ್ಲಿ 250, ರಾಣೆಬೆನ್ನೂರ 45, ಬ್ಯಾಡಗಿ 54, ಹಿರೇಕೆರೂರು 54, ರಟ್ಟಿಹಳ್ಳಿ 8, ಸವಣೂರ 227, ಹಾನಗಲ್ಲ 35 ಮನೆಗಳು ಸೇರಿ ಒಟ್ಟು 670 ಮನೆಗಳಿಗೆ ಹಾನಿಯಾಗಿದೆ.

    ಸವಣೂರ ತಾಲೂಕಿನಲ್ಲಿ ಅತಿಹೆಚ್ಚು: ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆಯ 24 ತಾಸಿನ ಅವಧಿಯಲ್ಲಿ ಜಿಲ್ಲೆಯ ಸವಣೂರ ತಾಲೂಕಿನಲ್ಲಿ ಭಾನುವಾರ ರಾತ್ರಿ ಅತಿಹೆಚ್ಚು ಪ್ರಮಾಣದಲ್ಲಿ 95ಮಿಮೀ. ಮಳೆಯಾಗಿದೆ. ಹಾವೇರಿ 54.6, ರಾಣೆಬೆನ್ನೂರ 10.8, ಬ್ಯಾಡಗಿ 15.4, ಹಿರೇಕೆರೂರ 8.6, ರಟ್ಟಿಹಳ್ಳಿ 14, ಶಿಗ್ಗಾಂವಿ 41.2, ಹಾನಗಲ್ಲ ತಾಲೂಕಿನಲ್ಲಿ 20.2ಮಿಮೀ ಮಳೆಯಾದ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts