More

    ಚಿರತೆ ಓಡಾಟಕ್ಕೆ ಬೆಚ್ಚಿಬಿದ್ದ ಜನ

    ಬ್ಯಾಡಗಿ: ತಾಲೂಕಿನ ಕದಮನಹಳ್ಳಿ, ಕೆಂಗೊಂಡ, ಅರಬಗೊಂಡ, ಗುಂಡೇನಹಳ್ಳಿ, ಮೋಟೆಬೆನ್ನೂರು ಸುತ್ತಲಿನ ಪ್ರದೇಶದಲ್ಲಿ ಚಿರತೆ ಓಡಾಟ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

    ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳೆನ್ನದೆ ಶೋಧ ನಡೆಸಿದ್ದಾರೆ. ಆದರೆ, ಚಿರತೆ ಮಾತ್ರ ಯಾರ ಕಣ್ಣಿಗೂ ಪ್ರತ್ಯಕ್ಷವಾಗದೆ, ತಪ್ಪಿಸಿಕೊಂಡು ಓಡಾಡುತ್ತ ಜನರಲ್ಲಿ ಭಯ ಹುಟ್ಟಿಸಿದೆ.

    ತಾಲೂಕಿನ ವಿವಿಧ ಗ್ರಾಮದಲ್ಲಿ ಎರಡು ವರ್ಷಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ. ಎರಡು ವರ್ಷದ ಹಿಂದೆ ತಾಲೂಕಿನ ಕಾಟೇನಹಳ್ಳಿ ಬಳಿ ಬೇಟೆಗಾರರು ಚಿರತೆ ಕೊಂದು ಸಾಗಿಸುವ ವೇಳೆ ಸಿಕ್ಕಿಬಿದ್ದು ಜೈಲು ಕಂಬಿ ಎಣಿಸಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ಚಿರತೆ ಸಂಕುಲ ನೆಲೆಯೂರಿದೆ ಎಂಬುದು ಸುಳ್ಳಲ್ಲ. ರೈತರೊಬ್ಬರು ಹೇಳುವಂತೆ, ಎರಡ್ಮೂರು ವರ್ಷಗಳಿಂದ ನಾಯಿಗಳು, ಕಾಡುಹಂದಿಗಳ ಸಂಖ್ಯೆ ಕ್ಷೀಣಿಸಿದೆ. ಇವು ಚಿರತೆಗೆ ಆಹಾರವಾಗಿರಬಹುದು ಎಂದು ತಿಳಿಸಿದ್ದಾರೆ.

    ಚಿರತೆ ಬಂಧನಕ್ಕೆ ಬೋನಿನಲ್ಲಿ ನಾಯಿ ಹಾಕಲಾಗಿದ್ದು, ನಾಯಿಯ ಚೀರಾಟ ರೈತರಿಗೆ ಭೀತಿ ಉಂಟು ಮಾಡಿದೆ. ಚಿರತೆಗೆ ಪ್ರಿಯ ಆಹಾರವಾಗಿರುವ ನಾಯಿ ತಿನ್ನಲು ಯಾವ ಕ್ಷಣದಲ್ಲಿ ಬರಲಿದೆ, ಯಾವ ಕಡೆಯಿಂದ ಬರಲಿದೆ ಎಂಬುದು ಸ್ಥಳೀಯರಲ್ಲಿ ದುಗುಡು ಮನೆ ಮಾಡಿದೆ. ನಾಯಿಗಳು ಕೂಗುತ್ತಿದ್ದಂತೆ ಜನರಲ್ಲಿ ಢವಢವ ಶುರುವಾಗುತ್ತಿದೆ.

    ಅರಣ್ಯ ಇಲಾಖೆ ಸಿಬ್ಬಂದಿ ವಿ.ಎ. ಪಾಟೀಲ, ಚಂದ್ರಪ್ಪ ಆಲದಗೇರಿ, ಹನುಮಂತ ತೆವರಿ, ಗಣೇಶ ಬೊಮ್ಮನಹಳ್ಳಿ, ಚಮನಲಿ ಬಿಲ್ಲಹಳ್ಳಿ, ಜಗದೀಶ ದಿವಟರ ರೈತರೊಂದಿಗೆ ನೇರ ಸಂಪರ್ಕದಲ್ಲಿದ್ದು, ಬೋನು ಇಟ್ಟ ಸ್ಥಳದ ಸುತ್ತ ಸರ್ಪಗಾವಲು ಹಾಕಿದ್ದಾರೆ.

    ಕುರಿ ಹೊತ್ತೊಯ್ದು ಭಕ್ಷಣೆ

    2 ತಿಂಗಳ ಹಿಂದೆ ತಾಲೂಕಿನ ಬೆಳಕೇರಿ ಗ್ರಾಮದ ಕುರಿಗಾಯಿಯ ಟೆಂಟ್​ಗೆ ನುಗ್ಗಿದ ಚಿರತೆ, ಕುರಿ ಹೊತ್ತೊಯ್ದು ತಿಂದು ಹಾಕಿತ್ತು. ಇದರಿಂದ ಸ್ಥಳೀಯರು ಅಲ್ಲಿನ ಹಳ್ಳ ಹಾಗೂ ಗುಡ್ಡಗಾಡು ಪ್ರದೇಶಕ್ಕೆ ತೆರಳಲು ಹೆದರಿದ್ದರು. ಅಲ್ಲದೆ, ಹೊಲಗಳಿಗೆ ರಾತ್ರಿ ಹೊತ್ತಲ್ಲಿ ಹೋಗದಂತಾಗಿತ್ತು. ಬಳಿಕ ಕೊಲ್ಲಾಪುರ, ಬಿದರಕಟ್ಟೆ, ಶಿಡೇನೂರು, ಕೆರೂಡಿ ಗ್ರಾಮಕ್ಕೆ ಸೇರಿದ ಗುಡ್ಡದಲ್ಲಿ ಸೇರಿಕೊಂಡಿದೆ ಎಂಬ ಸುದ್ದಿ ತೀವ್ರವಾಗುತ್ತಿದ್ದಂತೆ, ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿ ಸೆರೆಗೆ ಯತ್ನಿಸಿದರೂ, ಚಿರತೆ ಮಾತ್ರ ಬೋನಿನತ್ತ ಸುಳಿಯಲೇ ಇಲ್ಲ.

    ತಾಲೂಕಿನ ಬೆಳಕೇರಿ, ಕೊಲ್ಲಾಪುರ, ಬಿದರಕಟ್ಟಿ ಪ್ರದೇಶ ಹಾಗೂ ಮೋಟೆಬೆನ್ನೂರಿಗೆ ಹೊಂದಿಕೊಂಡ ಕದಮನಹಳ್ಳಿ, ಗುಂಡೇನಹಳ್ಳಿ, ಅರಬಗೊಂಡ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಗುಮಾನಿಯಿದೆ. ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದ ಇಲಾಖೆ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದು, ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ. ಸ್ಥಳೀಯರು ಚಿರತೆ ಕಾಣಿಸಿಕೊಂಡಾಗ ಮುಂಜಾಗ್ರತೆ ಕ್ರಮ ಅನುಸರಿಸಲು ಹೇಳಲಾಗಿದೆ. ಮಾಹಿತಿ ನೀಡಲು ಮೊಬೈಲ್ ಸಂಖ್ಯೆ ನೀಡಿದ್ದೇವೆ. ಆದರೆ, ಚಿರತೆ ಹುಷಾರಾಗಿ ಓಡಾಡುತ್ತಿದ್ದು, ಬೋನಿನ ಸಮೀಪ ಸುಳಿಯುತ್ತಿಲ್ಲ.
    | ಮಹೇಶ ಮರೆಣ್ಣನವರ, ವಲಯ ಅರಣ್ಯಾಧಿಕಾರಿ

    ಎರಡು ವರ್ಷಗಳಿಂದ ಸಮರ್ಪಕ ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಬೇಸಿಗೆಯಾಲ್ಲಾದರೂ ಬೆಳೆ ಬೆಳೆದುಕೊಳ್ಳಲು ಹೊಲಕ್ಕೆ ತೆರಳಬೇಕೆಂದರೆ ಚಿರತೆ ಭಯ ಕಾಡುತ್ತಿದೆ. ಮುಂಗಾರು ಬಿತ್ತನೆ ಶುರುವಾಗುತ್ತಿದ್ದಂತೆ ಜಿಂಕೆ ಹಾಗೂ ಕಾಡುಹಂದಿಗಳ ಕಾಟ, ಬೇಸಿಗೆಯಲ್ಲಿ ಚಿರತೆ ಕಾಟದಿಂದ ರೈತರು ನಲುಗಿದ್ದಾರೆ. ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ಮೂಲಕ ಚಿರತೆ ಸೆರೆ ಹಿಡಿಯಬೇಕು.
    | ಚಂದ್ರಶೇಖರ ಉಪ್ಪಿನ
    ರೈತ ಸಂಘ ಹಾಗೂ ರೈತ ಕಾರ್ವಿುಕ ಸಂಘಟನೆ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts