More

    ಬಿಸಿಲ ಝುಳಕ್ಕೆ ಜನ ಹೈರಾಣ

    ಅಣ್ಣಿಗೇರಿ: ತಾಲೂಕಿನಲ್ಲಿ ಅಕ್ಟೋಬರ್ ಆರಂಭದಲ್ಲೇ ಬಿಸಿಲ ಬೇಗೆ ಹೆಚ್ಚಿದೆ. ಮಳೆಯ ಕೊರತೆಯಿಂದ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಬಿಸಿಲ ಝುಳಕ್ಕೆ ಜನರು ಹೈರಾಣಾಗಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ (30) ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಬಿಸಿಲ ಬೇಗೆಯಿಂದ ಜನರು ಹೊರಗೆ ಓಡಾಡದಂತಾಗಿದೆ. ಬಿಸಿಲು ಹೆಚ್ಚಾಗಿರುವುದರಿಂದ ರೈತರು, ಕಾರ್ವಿುಕರು, ತರಕಾರಿ, ಹಣ್ಣು ಮಾರಾಟಗಾರರು ಹಾಗೂ ಉದ್ಯೋಗಿಗಳು ಪರದಾಡುವಂತಾಗಿದೆ.

    ಮಳೆಗಾಲದಲ್ಲೇ ಈ ರೀತಿಯಾದರೆ ಮುಂದೆ ಹೇಗೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಮಳೆ ಇಲ್ಲದೆ ಜಮೀನಿನಲ್ಲಿ ಎಲ್ಲ ಬೆಳೆಗಳು ಒಣಗುತ್ತಿವೆ. ಬಿಸಿಲು ಝುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೂ ಮಳೆ ಸುರಿಯುತ್ತಿಲ್ಲ. ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಹರಡಲಾರಂಭಿಸಿವೆ. ಕಳೆದ ವರ್ಷ ಅಕ್ಟೋಬರ್ 8 ರಂದು 24 ರಿಂದ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇತ್ತು. ಈ ವರ್ಷದ ಅದೇ ದಿನ 30ರಿಂದ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎರಡ್ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ತುಸು ಹೆಚ್ಚೇ ಏರಿದೆ.

    2016ರ ಏಪ್ರಿಲ್ 27ರಂದು 40.5 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಇದು ಜಿಲ್ಲೆಯ ಮಟ್ಟಿಗೆ ದಾಖಲಾದ ಈವರೆಗಿನ ಅತಿ ಹೆಚ್ಚಿನ ಉಷ್ಣಾಂಶ. ಇದನ್ನು ಹೊರತುಪಡಿಸಿ ಪ್ರತಿ ವರ್ಷ 30 ಡಿಗ್ರಿಯ ಗಡಿ ದಾಟಿರಲಿಲ್ಲ. ಈ ವರ್ಷ ಅಕ್ಟೋಬರ್​ನಲ್ಲೇ 30ರಿಂದ 32 ಡಿಗ್ರಿ ಸೆಲ್ಸಿಯಸ್ ಇರುವುದು ಬೇಸಿಗೆಯ ದಿನಗಳ ಲೆಕ್ಕಾಚಾರಕ್ಕೆ ಪುಷ್ಟಿ ನೀಡಿದೆ.

    ಬಿಸಿಲು ಹೆಚ್ಚಾಗಿರುವುದರಿಂದ ತರಕಾರಿ ಸಂಗ್ರಹಿಸುವುದು ಸವಾಲಾಗಿದೆ. ಜನರು ಪ್ರತಿದಿನ ತಾಜಾ ತರಕಾರಿ ಕೇಳುತ್ತಾರೆ. ಬಿಸಿಲು ಮುಂದುವರಿದರೆ ವ್ಯಾಪಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ.

    | ರಾಘು ಕಂಪ್ಲಿ ಸ್ಥಳೀಯ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts