More

    72 ಗಂಟೆಯಲ್ಲೇ ಪಿಂಚಣಿ: ಹಲೋ ಕಂದಾಯ ಸಚಿವರೇ ಯೋಜನೆಗೆ ಚಾಲನೆ

    ಬೆಂಗಳೂರು: ರೈತರ ಮನೆ ಬಾಗಿಲಿಗೇ ಕೃಷಿ ಭೂಮಿ ದಾಖಲೆ ತಲುಪಿಸಿದ್ದ ಕಂದಾಯ ಇಲಾಖೆ ಇದೀಗ ದೂರವಾಣಿ ಮೂಲಕ ಪಿಂಚಣಿ ಮನವಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಮಂಜೂರಾತಿ ನೀಡುವ ‘ಹಲೋ ಕಂದಾಯ ಸಚಿವರೇ’ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಸಾಂಕೇತಿಕವಾಗಿ ಹುನಗುಂದದ ಫಲಾನುಭವಿಯ ಕರೆ ಸ್ವೀಕರಿಸಿ ಮಾತನಾಡಿದ ಸಿಎಂ ವಿಧವಾ ವೇತನ ತಲುಪಿಸಲು 72 ಗಂಟೆಯೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆಸಿಡ್ ದಾಳಿಗೊಳಗಾದ ಫಲಾನುಭವಿಗಳಿಗೆ 3 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಿಸಿದ ಮಾಸಿಕ ಪಿಂಚಣಿ ವಿತರಿಸಿದರು. ಹಾಗೆಯೇ ವೇದಿಕೆಯಲ್ಲಿ ಫಲಾನುಭವಿಗಳ ಸಂಕಷ್ಟ ಆಲಿಸಿ ಅಲ್ಲಿಗೇ ಅಧಿಕಾರಿಗಳನ್ನು ಕರೆಸಿ ಹೆಚ್ಚಿನ ನೆರವು ನೀಡುವ ತೀರ್ಮಾನ ಪ್ರಕಟಿಸಿದರು.

    ಆಸಿಡ್ ಸಂತ್ರಸ್ತರಿಗೆ ನೆರವು: ಆಸಿಡ್ ದಾಳಿಗೊಳಗಾದ ಎಲ್ಲ ಹೆಣ್ಣು ಮಕ್ಕಳಿಗೆ ನಿವೇಶನ ಹಾಗೂ ಮನೆ ನೀಡಲು ತಕ್ಷಣವೇ ಆದೇಶ ಹೊರಡಿಸಲಾಗುವುದು. ಅವರಿಗೆ ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ನೆರವು ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದರು. ಆಸಿಡ್ ದಾಳಿಗೆ ಒಳಗಾದವರು ಬಹಳಷ್ಟು ನೋವನ್ನು ಉಂಡಿರುತ್ತಾರೆ. ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಅವರ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅವರ ಮಾಸಾಶನವನ್ನು 3000ದಿಂದ 10 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಎಂದು ತಿಳಿಸಿದರು.

    50 ಲಕ್ಷ ಕುಟುಂಬಕ್ಕೆ ಪ್ರಯೋಜನ: ಆಳುವುದು ಅಂದರೆ ಜನರ ಸಮಸ್ಯೆಗಳನ್ನು ಅರಿತು ಹೃದಯದಿಂದ ಅದಕ್ಕೆ ಪರಿಹಾರ ಕೊಡುವುದು. ಅನುಷ್ಠಾನ ಮಾಡುವುದು ಆಡಳಿತ. ಈ ಚಿಂತನೆಯಿಂದ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಜನರ ಅಲೆದಾಟ ತಪ್ಪುತ್ತದೆ. 50 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಇದರಿಂದ ಉಪಯೋಗವಾಗಲಿದೆ. ವ್ಯವಸ್ಥೆ ಸರಿ ಇಲ್ಲದ್ದರಿಂದ ಇದನ್ನು ಮಾಡಬೇಕಾಗಿದೆ ಎಂದರು.

    ಸಾಮಾಜಿಕ ಭದ್ರತಾ ಯೋಜನೆಗಳಡಿಯ ಪಿಂಚಣಿಗಳು ನೇರವಾಗಿ ಮನೆ ಬಾಗಿಲಿಗೆ ಮುಟ್ಟಬೇಕು. ಸಮಾಜದಲ್ಲಿ ಆಶ್ರಯವಿಲ್ಲದವರಿಗೆ, ಸಹಾಯವಿಲ್ಲದವರಿಗೆ ಪಿಂಚಣಿ ನೀಡಲಾಗುತ್ತದೆ. ವ್ಯವಸ್ಥೆ ಸರಿಪಡಿಸಲು ಕಂದಾಯ ಇಲಾಖೆ ಚುರುಕುಗೊಳಿಸಲಾಗಿದೆ. ವ್ಯವಸ್ಥೆ ಸರಿಪಡಿಸಿ ಈ ಕೆಲಸ ಮಾಡಲಾಗುತ್ತಿದೆ. ಇದು ಜನಪರವಾದ ಆಡಳಿತ. ಮನೆ ಬಾಗಿಲಿಗೆ ಸರ್ಕಾರ ಬರುವುದು ಅಧಿಕಾರದ ವಿಕೇಂದ್ರೀಕರಣ. ವಿಧಾನಸಭೆಯಲ್ಲಿ ಅಧಿಕಾರ ಹೆಪ್ಪುಗಟ್ಟಬಾರದು. ಅಧಿಕಾರ ನೇರವಾಗಿ ಜೇನುತುಪ್ಪದಂತೆ ಹರಿಯುವಂತಿರಬೇಕು. ಇಂದಿನ ಕಾರ್ಯಕ್ರಮ ನೇರವಾಗಿ ಜನರಿಗೆ ತಲುಪುವಂಥದ್ದು ಎಂದು ತಿಳಿಸಿದರು.

    ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಗ್ರಾಮ ವಾಸ್ತವ್ಯ ಮಾಡಿದಾಗ, ಇತರ ಪ್ರವಾಸದ ಸಂದರ್ಭದಲ್ಲಿ ಪಿಂಚಣಿಗಾಗಿ ಜನರು ಅರ್ಜಿ ಹಿಡಿದು ಸಾಲುಗಟ್ಟಿ ನಿಂತಿದ್ದು ಗಮನಿಸಿದ್ದೆ, ಜನರ ದಾಖಲೆಗಳೆಲ್ಲ ಸರ್ಕಾರದ ಬಳಿಯೇ ಇರುವಾಗ ಏಕೆ ಅಲೆದಾಡಿಸಬೇಕು ಎಂದು ಕೋರಿಕೆ ಸಲ್ಲಿಸಿದ 72 ಗಂಟೆಯಲ್ಲೇ ಪಿಂಚಣಿ ಕೊಡಿಸುವ ಯೋಜನೆ ರೂಪಿಸಲಾಗಿದೆ ಎಂದರು.

    ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಎಂ.ಕೃಷ್ಣಪ್ಪ, ಎಂ.ಪಿ.ಕುಮಾರಸ್ವಾಮಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್​ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ನಿರ್ದೇಶಕರಾದ ಸತೀಶ್​ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳ ಬದುಕು ಬಹಳ ಕಷ್ಟ. ಕ್ರೌರ್ಯ ಅನುಭವಿಸಿಯೂ ಆತ್ಮಸ್ಥೈ ರ್ಯದಿಂದ ಕೆಲಸ ಮಾಡುತ್ತಿರುವುದು ಹಾಗೂ ಬದುಕಿನ ಮೇಲೆ ಅವರಿಗೆ ಭರವಸೆ ಇರುವುದು ಶ್ಲಾಘನೀಯ. ಸ್ವಾವಲಂಬಿಗಳಾಗಿ ಬದುಕಬೇಕೆಂದು ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ 3000 ದಿಂದ 10 ಸಾವಿರಕ್ಕೆ ವೇತನವನ್ನು ಏರಿಸಲಾಗಿದೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಸರ್ಕಾರ 72 ಲಕ್ಷಕ್ಕೂ ಹೆಚ್ಚು ಜನರಿಗೆ ವಾರ್ಷಿಕ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. 4 ಲಕ್ಷ ಬೋಗಸ್ ಪಿಂಚಣಿ ಪ್ರಮಾಣಪತ್ರ ಇದ್ದವು. ದಲ್ಲಾಳಿಗಳ ಬಳಿ ಇದ್ದ ಇವೆಲ್ಲವನ್ನೂ ರದ್ದುಪಡಿಸಿ, ಆಧಾರ್ ವಿಲೀನ ಮಾಡಲಾಗಿದೆ. ಈವರೆಗೆ ಸತ್ತವರಿಗೂ ತಲುಪುತ್ತಿತ್ತು, ಮೃತರಾದವರ ಹೆಸರಲ್ಲಿ 12 ವರ್ಷ ಪಿಂಚಣಿ ಜಮಾ ಆಗಿದ್ದೂ ಇದೆ. ಬೋಗಸ್ ತಡೆದಿದ್ದರಿಂದ 400 ಕೋಟಿ ರೂ. ಉಳಿತಾಯ ಆಗಿದೆ.

    | ಆರ್.ಅಶೋಕ್ ಕಂದಾಯ ಸಚಿವ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts