More

    ಪೇಜಾವರ ಶ್ರೀಗಳ ಮಹಾರಾಧನೆಗೆ ಅನ್ನದಾನ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಮಹಾರಾಧನೆ ಅಂಗವಾಗಿ ಗುರುವಾರ ಕರಂಬಳ್ಳಿಯಲ್ಲಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಶ್ರೀಗಳ ಸಂಸ್ಮರಣೆ ಸಹಿತ ಸಾಮೂಹಿಕ ಅನ್ನದಾನ ನೆರವೇರಿತು.

    ಸಮಾಜದ ಅಸ್ಪಶ್ಯತೆ ನಿವಾರಣೆಗೆ ಪೇಜಾವರ ಶ್ರೀಗಳು ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದು, ಇದನ್ನು ಸ್ಮರಿಸುವ ಸಲುವಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಸೂಚನೆಯಂತೆ ಅನ್ನದಾನ ನಡೆಯಿತು. ವಾಸುದೇವ ಭಟ್ ಪೆರಂಪಳ್ಳಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪಕ ರಾಜಶೇಖರ ಭಟ್, ಉದ್ಯಮಿ ಭುವನೇಂದ್ರ ಕಿದಿಯೂರು, ನಗರಸಭಾ ಸದಸ್ಯ ಗಿರಿಧರ ಆಚಾರ್ಯ, ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಕುಮಾರ್, ಪ್ರಶಾಂತ್ ಶೆಟ್ಟಿ ಅಂಜಾರು, ಕಿಶೋರ್ ಸಾಲ್ಯಾನ್ ಮೊದಲಾದವರು ಸಹಕರಿಸಿದರು. ಸುಮಾರು 200 ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು.

    ವಿವಿಧೆಡೆ ಆರಾಧನೆ: ಪೇಜಾವರ ಶ್ರೀಗಳ ಮಹಾರಾಧನೆ ಪ್ರಯುಕ್ತ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಉಡುಪಿ ಶ್ರೀಕೃಷ್ಣ ಮಠ, ಪೇಜಾವರ ಮಠ ಸೇರಿದಂತೆ ದೇಶಾದ್ಯಂತ ಇರುವ ಪೇಜಾವರ ಮಠದ ಶಾಖೆಗಳು, ಶಾಲೆ ಕಾಲೇಜು, ಅನಾಥಾಶ್ರಮ, ಸೇವಾಧಾಮ ವಿದ್ಯಾರ್ಥಿನಿ ನಿಲಯಗಳೂ ಸೇರಿದಂತೆ 85ಕ್ಕೂ ಅಧಿಕ ಕಡೆ ವಿವಿಧ ಧಾರ್ಮಿಕ ವಿಧಿವಿಧಾನ, ಸಾಮೂಹಿಕ ಅನ್ನಾರಾಧನೆ, ವಿದ್ವತ್ ಗೋಷ್ಠಿ ನೆರವೇರಿತು.

    ಉಡುಪಿ ಪೇಜಾವರ ಮಠದಲ್ಲೂ ಬೆಳಗ್ಗೆ ಪವಮಾನ ಹೋಮ, ಭಜನೆ, ಪಾರಾಯಣ, ಪಾದುಕಾ ಪೂಜೆ, ಮಹಾಪೂಜೆ ಹಾಗೂ ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ನೆರವೇರಿತು. ಶ್ರೀಗಳು ಕುಳಿತುಕೊಳ್ಳುತ್ತಿದ್ದ ಆಸನದಲ್ಲಿ ಭಾವಚಿತ್ರ, ಪಾದುಕೆಗಳನ್ನಿಟ್ಟು ರಜತ ಮಂಟಪ ಸಹಿತ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪದ್ಮನಾಭ ಭಟ್ ಕಿದಿಯೂರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ವ್ಯವಸ್ಥಾಪಕ ವಾಸುದೇವ ಅಡಿಗ, ಇಂದು ಶೇಖರ, ಸಂತೋಷ್ ಆಚಾರ್ಯ ಸಹಕರಿಸಿದರು.

    ದೀನ ದಲಿತರ ಕಾಳಜಿ ಮಾದರಿ
    ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿದ್ದರು. ದೀನದಲಿತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಗಳ ಕಾಳಜಿ ಮಾದರಿಯಾಗಿದೆ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಪರ್ಯಾಯ ಪಲಿಮಾರು ಮಠದ ವತಿಯಿಂದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾರಾಧನೆ ಪ್ರಯುಕ್ತ ಅನ್ನಸಂತರ್ಪಣೆಗೆ ಚಾಲನೆ ನೀಡಿ ಪೇಜಾವರ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
    ತುರ್ತು ಪರಿಸ್ಥಿತಿ ಕಾಲದಲ್ಲಿ ಜನರ ಸಂಕಷ್ಟದ ಪರಿಸ್ಥಿತಿ ಬಗ್ಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಪತ್ರ ಬರೆದ ಧೀಮಂತರವರು. ಪೂಜೆ, ಪಾಠ, ಪ್ರವಚನದ ಜತೆಗೆ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರ ಮಾತನ್ನೂ ಆಲಿಸಿ ಸಾಂತ್ವನ ನೀಡಿದ್ದಾರೆ. ಕನ್ಯಾಕುಮಾರಿಯಿಂದ ಬದರಿವರೆಗೂ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ಶಾಖೆಗಳನ್ನು ತೆರೆದು ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

    ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ರಘುಪತಿ ಭಟ್ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅನ್ನಸಂತರ್ಪಣೆಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದರು. ಮಠದ ಪಿ.ಆರ್.ಒ ಶ್ರೀಶ ಭಟ್ ಕಡೆಕಾರ್, ಭುವನೇಂದ್ರ ಕಿದಿಯೂರ್ ಮತ್ತಿತರರಿದ್ದರು.
    ಸುಮಾರು 2000 ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts