More

    ಅಪಘಾತಕ್ಕೆ ಪಾದಚಾರಿಗಳೇ ಬಲಿ

    ಹರೀಶ್ ಮೋಟುಕಾನ, ಮಂಗಳೂರು

    ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಪಘಾತ ಪ್ರಕರಣಗಳು ಏರುತ್ತಲೇ ಇವೆ. ವಾಹನ ಚಾಲಕರು, ಸವಾರರು, ಸಹ ಸವಾರರು, ಪ್ರಯಾಣಿಕರು ಅಲ್ಲದೆ ಗರಿಷ್ಠ ಪ್ರಮಾಣದಲ್ಲಿ ಅಮಾಯಕ ಪಾದಚಾರಿಗಳು ಮೃತರಾಗುತ್ತಿರುವುದು ಆತಂಕ ಉಂಟು ಮಾಡಿದೆ.

    ವಾರದ ಹಿಂದೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಮಂಗಳೂರಿನ ಉದ್ಯಮಿಯೊಬ್ಬರು ಗಂಭೀರ ಗಾಯಗೊಂಡು ಬಳಿಕ ಮೃತಪಟ್ಟಿದ್ದರು. ಕೆಲವು ಸಮಯದ ಹಿಂದೆ ಕದ್ರಿ ಠಾಣೆ ಎದುರು ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ತಿಂಗಳಲ್ಲಿ ದಾಖಲಾಗುವ ಅಪಘಾತ ಪ್ರಕರಣಗಳಲ್ಲಿ 10ಕ್ಕಿಂತಲೂ ಅಧಿಕ ಪಾದಚಾರಿಗಳಿಗೆ ಸಂಬಂಧಿಸಿದ್ದಾಗಿದೆ.

    2017ರಿಂದ 2021ರ ತನಕ ಒಟ್ಟು 1460 ಅಪಘಾತಗಳಲ್ಲಿ 180 ಮಂದಿ ಮೃತಪಟ್ಟು, 1123 ಮಂದಿ ಗಾಯಗೊಂಡಿದ್ದಾರೆ. 2019ರಲ್ಲಿ ಒಟ್ಟು 857 ಅಪಘಾತಗಳಲ್ಲಿ 124 ಮಂದಿ ಬಲಿಯಾಗಿದ್ದು, 736 ಮಂದಿ ಗಾಯಗೊಂಡಿದ್ದಾರೆ. 2020 ಮತ್ತು 2021ರಲ್ಲಿ ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳು ಕಡಿಮೆಯಾಗಿತ್ತು. ಆ ಬಳಿಕ ಅಪಘಾತಗಳು ಮತ್ತೆ ಏರಿಕೆಯಾಗುತ್ತಿದೆ.

    2019ರಲ್ಲಿ ನಗರ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ 124 ಮಂದಿ ಮೃತಪಟ್ಟವರಲ್ಲಿ 50 ಮಂದಿ ಪಾದಚಾರಿಗಳೇ ಸೇರಿದ್ದಾರೆ. 2018ರಲ್ಲಿ ನಡೆದ ಅಪಘಾತದಲ್ಲಿ ಒಟ್ಟು 144 ಮಂದಿ ಮೃತಪಟ್ಟವರಲ್ಲಿ 57 ಮಂದಿ ಪಾದಚಾರಿಗಳಿದ್ದಾರೆ. 2020ರಲ್ಲಿ 38 ಹಾಗೂ 2021ರಲ್ಲಿ 19 ಮಂದಿ ಪಾದಚಾರಿಗಳು ಮೃತಪಟ್ಟಿದ್ದಾರೆ. ಕೂಳೂರಿನಿಂದ ಸುರತ್ಕಲ್ ನಡುವೆ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಹೆಚ್ಚಿನ ಪಾದಚಾರಿಗಳು ಬಲಿಯಾಗುತ್ತಿದ್ದಾರೆ.

    ಮಂಗಳೂರು ನಗರದಲ್ಲಿ ಬಹಳಷ್ಟು ರಸ್ತೆಗಳಲ್ಲಿ ಸರಿಯಾದ ಫುಟ್‌ಪಾತ್‌ಗಳು ಇಲ್ಲದೇ ಇರುವುದರಿಂದ ರಸ್ತೆ ಬದಿ ನಡೆದುಕೊಂಡು ಹೋಗುವುದು ಅನಿವಾರ್ಯ. ಹಿಂದಿನಿಂದ ವೇಗವಾಗಿ ಬಂದು ವಾಹನಗಳು ಡಿಕ್ಕಿ ಹೊಡೆಯುವ ಪ್ರಕರಣಗಳು ಅತ್ಯಧಿಕ ದಾಖಲಾಗಿವೆ.

    ಕಾರಣ ಏನು?: ಅತಿ ವೇಗ ಮತ್ತು ನಿರ್ಲಕ್ಷೃದ ವಾಹನ ಚಾಲನೆ, ಪಾದಚಾರಿಗಳಿಗೆ ಸಮರ್ಪಕ ಪುಟ್‌ಪಾತ್ ಇಲ್ಲದಿರುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಪಾದಚಾರಿಗಳ ಬಗ್ಗೆ ನಿರ್ಲಕ್ಷೃ, ಪಾದಚಾರಿಗಳ ಸುರಕ್ಷಿತ ಸಂಚಾರದ ಬಗ್ಗೆ ಆಡಳಿತ ಗಮನ ವಹಿಸದೆ ಇರುವುದು, ಮದ್ಯ, ಡ್ರಗ್ಸ್ ಮುಂತಾದ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುವುದು, ಕೆಲವೊಮ್ಮೆ ಪಾದಚಾರಿಗಳ ನಿರ್ಲಕ್ಷೃ ಮತ್ತು ರಸ್ತೆ ದಾಟುವ ತಪ್ಪು ನಿರ್ಧಾರಗಳು, ಪಾದಚಾರಿಗಳಿಗೆ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು, ಅಗಲಗೊಂಡಿರುವ ರಸ್ತೆಯ ಬದಿಯಲ್ಲಿ ಪುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸುವುದು ಮೊದಲಾದ ಕಾರಣಗಳಿಂದ ಪಾದಚಾರಿಗಳು ಅಪಾಯ ಎದುರಿಸುತ್ತಿದ್ದಾರೆ.

    ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮಾದರಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಬದಿ ಪಾದಚಾರಿಗಳಿಗೆ ಸುರಕ್ಷಿತ ಪುಟ್‌ಪಾತ್, ನೀರು ಹರಿದು ಹೋಗಲು ಚರಂಡಿ ಕಲ್ಪಿಸಲಾಗಿದೆ. ನಗರ ರಸ್ತೆಗಳಲ್ಲಿ ಮೊದಲ ಆದ್ಯತೆ ಪಾದಚಾರಿಗಳಿಗೆ ನೀಡಲಾಗುತ್ತದೆ. ಮುಂದೆ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳ ಸಾವಿನ ಪ್ರಮಾಣ ಕಡಿಮೆ ಆಗಲಿದೆ.

    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts