More

    ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಘೊಷಣೆಗೆ ಆಗ್ರಹ

    ಚಿಕ್ಕಮಗಳೂರು: ನದಿಗಳ ಉಗಮಸ್ಥಾನವಾದ ಮುಳ್ಳಯ್ಯನಗಿರಿ ಶೃಂಗವನ್ನು ಸಂರಕ್ಷಣಾ ಮೀಸಲೆಂದು ಘೊಷಿಸಿ ಹಳ್ಳ, ತೊರೆಗಳನ್ನು ರಕ್ಷಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನೂರಾರು ಕಾರ್ಯಕರ್ತರು ಗುರುವಾರ ನಗರದ ಪಿಡಬ್ಲ್ಯುಡಿ ಕಚೇರಿಯಿಂದ ಮೆರವಣಿಗೆ ಸಾಗಿ ಆಜಾದ್ ವೃತ್ತದಲ್ಲಿ ಧರಣಿ ನಡೆಸಿದರು.

    ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಉಗಮವಾಗುವ ವೇದಾವತಿ ನದಿ ಪುನಶ್ಚೇತನಗೊಳಿಸಬೇಕೆಂದು ಚಿತ್ರದುರ್ಗದ ರೈತರು ವರ್ಷದ ಹಿಂದೆಯೇ ಮನವಿ ಸಲ್ಲಿಸಿದ್ದರೂ ಇದುವರೆಗೂ ಜಿಲ್ಲಾಡಳಿತ ಮಾಹಿತಿ ನೀಡಿಲ್ಲ. ಗಿರಿಪ್ರದೇಶದ ಸಾವಿರಾರು ಎಕರೆ ಪ್ರದೇಶವನ್ನು ಬಳಸಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ. ಅಗತ್ಯಕ್ಕೆ ತಕ್ಕಷ್ಟು ಭೂಮಿ ಬಳಸಿಕೊಳ್ಳುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚು ಭೂಮಿ ಬಳಸಬಾರದು ಎಂದು ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.

    ಚಿತ್ರದುರ್ಗ ಜಿಲ್ಲಾಧ್ಯಕ್ಷ ಜಿ.ಕೆ.ನಾಗರಾಜ್ ಮಾತನಾಡಿ, ಮುಳ್ಳಯ್ಯನಗಿರಿ ಪ್ರದೇಶದ ರಕ್ಷಣೆಯಲ್ಲಿ ನಮ್ಮ ಜಿಲ್ಲೆಯ ಹಿತಾಸಕ್ತಿಯೂ ಅಡಗಿದೆ. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಪರಿಸರಕ್ಕೆ ಮಾರಕವಾಗುವ ಯಾವುದೆ ಚಟುವಟಿಕೆ ಕೈಗೊಳ್ಳಬಾರದು. ಪ್ಲಾಸ್ಟಿಕ್ ನಿಷೇಧಿಸಬೇಕು. ರೆಸಾರ್ಟ್​ಗಳು ನಿರ್ವಣವಾಗದಂತೆ ಎಚ್ಚರ ವಹಿಸಬೇಕು. ನದಿ ಮೂಲಗಳನ್ನು ಬೇರೆಡೆಗೆ ತಿರುಗಿಸಬಾರದು, ಶೋಲಾಕಾಡು, ಹುಲ್ಲುಗಾವಲನ್ನು ಯಥಾಸ್ಥಿತಿ ರಕ್ಷಿಸಬೇಕು ಎಂದು ಒತ್ತಾಯಿಸಿದರು.

    ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಈಗಾಗಲೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಗುರುತಿಸಿರುವ ಸರ್ಕಾರಿ ಜಾಗವನ್ನು ಯಾವುದೆ ರೀತಿ ರಾಜಿ ಮಾಡಿಕೊಳ್ಳದೆ ಸಂರಕ್ಷಣಾ ಪ್ರದೇಶವೆಂದು ಘೊಷಿಸಬೇಕು ಎಂದು ಆಗ್ರಹಿಸಿದರು.

    ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ದುಗ್ಗಪ್ಪ ಗೌಡ, ತಾಲೂಕು ಅಧ್ಯಕ್ಷ ನಿರಂಜನಮೂರ್ತಿ, ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ, ಬೈಲಪ್ಪ, ರಾಜಪ್ಪ, ಎಂ.ಎಸ್.ಕರಿ ಸಿದ್ದಯ್ಯ, ಚೆನ್ನಕೇಶವ, ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts