More

    ಹೈಸ್ಕೂಲ್‌ನಲ್ಲೇ ವಿಜ್ಞಾನ ಆಸಕ್ತಿಗೆ ಬುನಾದಿ, ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸುಸಜ್ಜಿತ ಲ್ಯಾಬ್

    ಅನ್ಸಾರ್ ಇನೋಳಿ ಉಳ್ಳಾಲ

    ಇಂದಿಗೂ ಅದೆಷ್ಟೋ ಸರ್ಕಾರಿ ಕಾಲೇಜುಗಳಲ್ಲೇ ವಿಜ್ಞಾನ ಪ್ರಯೋಗಾಲಯ ಕೊರತೆಯಿದೆ. ಆದರೆ ಪಾವೂರು ಸರ್ಕಾರಿ ಪ್ರೌಢಶಾಲೆ ಅವೆಲ್ಲವನ್ನೂ ಮೀರಿ ನಿಂತು ಉತ್ಸಾಹಿ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಶಿಕ್ಷಣಕ್ಕೆ ಅಡಿಪಾಯ ಹಾಕುವ ಪ್ರಯತ್ನ ನಡೆಸಿದೆ.

    ಹಿಂದೆಲ್ಲ ಕೆಲವೊಂದು ಪ್ರೌಢಶಾಲೆಗಳಲ್ಲಿ ವಿಜ್ಞಾನ ಪಾಠ ಮಾಡುವ ಸಂದರ್ಭ ಒಂದೆರೆಡು ಕಪ್ಪೆ, ಜಿರಳೆಗಳನ್ನೂ ಕೊಯ್ದು ತೋರಿಸುವುದು, ಸೂಕ್ಷ್ಮದರ್ಶಕದಲ್ಲಿ ಅಮೀಬಾ ಸಹಿತ ಸೂಕ್ಷ್ಮಾಣುಜೀವಿಗಳನ್ನು ತೋರಿಸಲಾಗುತ್ತಿತ್ತು. ಇದನ್ನೇ ನೋಡಿ ವಿದ್ಯಾರ್ಥಿಗಳು ತಾವು ಆಕಾಶಕ್ಕೆ ಏಣಿ ಹಾಕಿ ಬಂದೆವು ಎಂದು ಭಾವಿಸಿ ಖುಷಿಪಡುತ್ತಿದ್ದರು. ಆದರೆ ಇಂತಹ ಅವಕಾಶಗಳು ಖಾಸಗಿ ಅಥವಾ ಅನುದಾನಿತ ಶಾಲೆಗಳಿಗೆ ಸೀಮಿತವಾಗುತ್ತಿತ್ತು. ಸರ್ಕಾರಿ ಶಾಲೆಗಳಲ್ಲಾದರೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕನಿಷ್ಠ ಮಟ್ಟದ ಅವಕಾಶಗಳನ್ನು ಕಲ್ಪಿಸಲಾಗುತ್ತಿತ್ತು. ಇದರಿಂದಾಗಿ ಹಿಂದೆಲ್ಲ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಎನ್ನುವುದು ಮರೀಚಿಕೆಯಾಗಿತ್ತು. ಒಂದು ವೇಳೆ ಪ್ರವೇಶ ಬಯಸಿದರೂ ಪ್ರೌಢ ಮತ್ತು ಕಾಲೇಜು ಮಟ್ಟದಲ್ಲಿ ಪ್ರಯೋಗಕ್ಕೆ ಅವಕಾಶ ಸಿಗದ ಕಾರಣ ಕಲಿಕೆಯೂ ಕಷ್ಟವಾಗಿ, ದೊಡ್ಡ ಶುಲ್ಕ ಪಾವತಿಸಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಸಿರಿವಂತರ ಮಕ್ಕಳು ಮಾತ್ರ ವೈದ್ಯಕೀಯ ಕ್ಷೇತ್ರ ಪ್ರವೇಶಿಸುತ್ತಿದ್ದರು.

    ವಿಶ್ರಾಂತಿ ಕೊಠಡಿ, ಸ್ಮಾರ್ಟ್‌ಕ್ಲಾಸ್: ಪಾವೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಣ, ಇತರ ವ್ಯವಸ್ಥೆಯಲ್ಲೂ ಗುಣಮಟ್ಟ ಕಾಪಾಡಿಕೊಂಡಿದೆ. ಇಲ್ಲಿನ ಶಿಕ್ಷಕ ವೃಂದದ ಅತ್ಯುತ್ಸಾಹದ ಫಲವಾಗಿ ಪ್ರೌಢಶಿಕ್ಷಣದ ಬಳಿಕವೂ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅದರ ಫಲ ಎನ್ನುವಂತೆ ಹೆಣ್ಮಕ್ಕಳ ವಿಶ್ರಾಂತಿ ಕೊಠಡಿ, ಸ್ಮಾರ್ಟ್‌ಕ್ಲಾಸ್ ಇದ್ದು, ಇದೀಗ ಅತ್ಯುತ್ತಮ ವಿಜ್ಞಾನ ಲ್ಯಾಬೊರೇಟರಿ ಎದ್ದು ನಿಂತಿದೆ.

    ಆರ್‌ಎಂಎಸ್‌ಎ ಅನುದಾನದ ಒಂದು ಲಕ್ಷ, ಇಲ್ಲಿನ ಪ್ರಭಾರ ಮುಖ್ಯಶಿಕ್ಷಕ ಕರುಣ ಅವರ ವೈಯಕ್ತಿಕ 35 ಸಾವಿರ ರೂ. ಹಣದಿಂದ ಎರಡು ಕೋಣೆಗಳಲ್ಲಿ ಪ್ರಯೋಗಾಲಯ ನಿರ್ಮಾಣವಾಗಿದ್ದು, ಶಾಲಾ ಅನುದಾನದಲ್ಲಿ ಅಗತ್ಯವಿರುವ ರಾಸಾಯನಿಕ ವಸ್ತುಗಳು ಹಾಗೂ ಇತರ ಪರಿಕರಗಳನ್ನು ಖರೀದಿಸಲಾಗಿದೆ.

    8ರಿಂದ 10ರವರೆಗಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠದ ಸಂದರ್ಭ ಪ್ರಾಯೋಗಿಕ ತರಗತಿ ನಡೆಸಲಾಗುತ್ತಿದೆ. ಮನುಷ್ಯರ ಚಿತ್ರಗಳನ್ನು ಬಳಸಲಾಗಿದ್ದರೆ, ವಿಭಿನ ಜಾತಿಯ ಮೀನುಗಳನ್ನು ರಾಸಾಯನಿಕ ದ್ರವದಲ್ಲಿ ಸಂರಕ್ಷಣೆ ಮಾಡಲಾಗಿದೆ. ಕಡಲು ಕುದುರೆ ಪಳೆಯುಳಿಕೆಯೂ ಇರುವುದು ಇನ್ನೊಂದು ವಿಶೇಷ.

    ಮಕ್ಕಳ ವಿಜ್ಞಾನ ಶಿಕ್ಷಣಕ್ಕೆ ಬೇಕಾದ ಸಾಕಷ್ಟು ವ್ಯವಸ್ಥೆಯನ್ನು ಪ್ರಯೋಗಾಲಯದಲ್ಲಿ ಅಳವಡಿಸಲಾಗಿದೆ, ಮಕ್ಕಳೂ ಉತ್ಸಾಹದಿಂದಲೇ ತರಗತಿಯಲ್ಲಿ ಭಾಗವಹಿಸುತ್ತಾರೆ. ಆದರೂ ಒಂದು ಪ್ರೊಜೆಕ್ಟರ್, ಸ್ಮಾರ್ಟ್ ಟಿವಿ ವ್ಯವಸ್ಥೆ ಆದರೆ ಕಲಿಕೆಯಲ್ಲಿ ಉತ್ಸಾಹ ಹೊಂದಿರುವ ಮಕ್ಕಳಿಗೆ ಇನ್ನಷ್ಟು ಅನುಕೂಲ ಆಗಲಿದೆ.

    ಕರುಣ ಎಸ್. ಪ್ರಭಾರ ಮುಖ್ಯಶಿಕ್ಷಕ

    ಉಳ್ಳಾಲ ಭಾಗದಲ್ಲಿರುವ 11 ಪ್ರೌಢಶಾಲೆಗಳ ಪೈಕಿ ಹೆಚ್ಚಿನ ಸೌಲಭ್ಯ ಇರುವ ಶಾಲೆ ಎನ್ನುವ ಕೀರ್ತಿ ಪಾವೂರು ಸರ್ಕಾರಿ ಶಾಲೆಗಿದೆ. ಉತ್ತಮ ಶಿಕ್ಷಕ ವರ್ಗವಿದೆ. ಇದೀಗ ಮಂಗಳೂರು ವಿಶ್ವವಿದ್ಯಾಲಯ ಶಾಲೆಯನ್ನು ದತ್ತು ಪಡೆದಿದ್ದು, ಅಗತ್ಯ ಸೌಕರ್ಯಗಳ ಬಗ್ಗೆ ಮನವಿ ಮಾಡಿದ್ದೇವೆ. ಅವೆಲ್ಲವೂ ಒದಗಬಹುದೆನ್ನುವ ನಿರೀಕ್ಷೆಯಲ್ಲಿದ್ದೇವೆ.

    ಮಹಮ್ಮದ್ ಮೋನು, ಎಸ್‌ಡಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts