More

    ಸಂಪರ್ಕ ಸೇತುವೆ ಮರೀಚಿಕೆ

    ಮಂಗಳೂರು: ಪಾವೂರು-ಉಳಿಯ ಕುದ್ರು ನಿವಾಸಿಗಳು ಪ್ರತಿ ವರ್ಷದಂತೆ ನೇತ್ರಾವತಿ ನದಿಗೆ ತಾತ್ಕಾಲಿಕ ಸೇತುವೆ ನಿರ್ಮಿಸಿ, ತಮಗೆ ಬೇಕಾದ ಸಂಪರ್ಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮುಂದಿನ ಮೇ ತಿಂಗಳವರೆಗೆ ಅಂಜಿಕೆಯಿಲ್ಲದೆ ನದಿ ದಾಟಿ ತಮ್ಮ ಕೆಲಸ ಮುಗಿಸಿ ಬರಬಹುದು.

    ಜಿಲ್ಲಾ ಕೇಂದ್ರ ಮಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿದ್ದರೂ, ಕುದ್ರುವಿಗೆ ಶಾಶ್ವತ ಸೇತುವೆ ನಿರ್ಮಿಸಿಕೊಡುವಂತೆ ಕಳೆದ ಹಲವು ವರ್ಷಗಳ ಸ್ಥಳೀಯರ ಬೇಡಿಕೆ ಇನ್ನೂ ಈಡೇರದಿರುವುದು ಆಳುವವರ ಕಾರ್ಯವೈಖರಿಗೆ ಒಂದು ನಿದರ್ಶನ. ಪ್ರತಿ ಬಾರಿ ಚುನಾವಣೆ ಬಂದಾಗ ಮಾತ್ರ ಕುದ್ರು ನಿವಾಸಿಗಳ ನೆನಪಾಗುತ್ತದೆ. ಸೇತುವೆ ನಿರ್ಮಾಣ ಕುರಿತಂತೆ ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಸರ್ಕಾರದ ಮಟ್ಟದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ನದಿ ದಾಟಬೇಕಾದ ಪರಿಸ್ಥಿತಿ ಇದೆ. ಲಕ್ಷಾಂತರ ರೂ. ವೆಚ್ಚ ಮಾಡಿ ನಾವೇ ತಾತ್ಕಾಲಿಕ ಸೇತುವೆ ನಿರ್ಮಿಸಲು ಸಾಧ್ಯವಾಗುವುದಾದರೆ ಸರ್ಕಾರಕ್ಕೆ ಯಾಕೆ ಒಂದು ಶಾಶ್ವತ ಸೇತುವೆ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ? ಎನ್ನುವುದು ಸ್ಥಳೀಯರ ಪ್ರಶ್ನೆ.

    70 ಸಾವಿರ ರೂ. ವೆಚ್ಚ: ಎರಡು ವರ್ಷಗಳ ಹಿಂದೆ ದಾನಿಗಳ ಸಹಕಾರದಿಂದ 18 ಲಕ್ಷ ರೂ. ವೆಚ್ಚದಲ್ಲಿ ಸೇತುವೆಗೆ ಬೇಕಾದ ಕಬ್ಬಿಣದ ಕಂಬ, ಮರದ ಹಲಗೆ ಸಿದ್ಧಪಡಿಸಲಾಗಿತ್ತು. ಕಂಬಗಳನ್ನು ನದಿ ನೀರಿನ ಆಳದಲ್ಲಿ ಹೂತು, ಸುಮಾರು 250 ಮೀ. ಉದ್ದದ ಸೇತುವೆ ನಿರ್ಮಿಸಲಾಗಿದೆ. ಈ ಬಾರಿಯ ಕೆಲಸಕ್ಕೆ ಸುಮಾರು 70 ಸಾವಿರ ರೂ. ವೆಚ್ಚವಾಗಿದೆ. ಈ ಬಾರಿ ಸೇತುವೆಯಲ್ಲಿ ಸಂಚರಿಸುವವರು ದಿನಕ್ಕೆ 15 ರೂ. ಪಾವತಿಸಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದ್ದು, ಈ ಮೊತ್ತವನ್ನು ಮುಂದಿನ ವರ್ಷ ಸೇತುವೆ ನಿರ್ಮಾಣಕ್ಕೆ ಬಳಸುವುದು ಸ್ಥಳೀಯರ ಉದ್ದೇಶ.

    ಎಲ್ಲಿದೆ ಈ ಕುದ್ರು?
    ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್ ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿದೆ ಪಾವೂರು-ಉಳಿಯ ಕುದ್ರು. ಸಹ್ಯಾದ್ರಿ ಕಾಲೇಜಿನ ನೇರ ಹಿಂಭಾಗದಲ್ಲಿ ಬರುವ ಈ ಕುದ್ರು ಮೂಲ ಸೌಕರ್ಯ ವಂಚಿತ ಪ್ರದೇಶ. ಇನ್ನೊಂದು ಕಡೆಯಲ್ಲಿ ಪಾವೂರು ಪ್ರದೇಶವಿದೆ. ಮಂಗಳೂರಿಗೆ ಬರಲು ಅಡ್ಯಾರ್ ಹತ್ತಿರವಾಗಿರುವುದರಿಂದ ಅಡ್ಯಾರ್ ಭಾಗದಲ್ಲಿ ಸೇತುವೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಇಲ್ಲಿ ಸುಮಾರು 50ರಷ್ಟು ಮನೆಗಳಿದ್ದು, 200ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ. ಜನರು ದೋಣಿ ಮೂಲಕವೇ ನದಿ ದಾಟಿ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಬೇಕಾಗಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವಾಗ ದೋಣಿಯ ಮೂಲಕ ದಾಟುವುದು ದೊಡ್ಡ ಸಾಹಸವೇ ಸರಿ.

    ಪ್ರಧಾನಿಗೆ ಪತ್ರಕ್ಕೂ ಬೆಲೆಯಿಲ್ಲ: ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ವರ್ಷಗಳ ಹಿಂದೆಯೇ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಪ್ರಧಾನಿ ಕಚೇರಿ ರಾಜ್ಯ ಸರ್ಕಾರಕ್ಕೆ ಸೇತುವೆ ನಿರ್ಮಿಸುವಂತೆ ಸೂಚನೆ ನೀಡಿದೆ. ಜಿಲ್ಲಾ ಪಿಡ್ಲುೃಡಿ ಇಲಾಖೆ 5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ. ಆದರೆ ಬಳಿಕ ಯಾವುದೇ ಬೆಳವಣಿಗೆಯಾಗಿಲ್ಲ ಎನ್ನುತ್ತಾರೆ ಸ್ಥಳೀಯ ಚರ್ಚ್ ಧರ್ಮಗುರು ಜೆರಾಲ್ಡ್ ಲೋಬೋ.

    ಎರಡು ವರ್ಷದ ಹಿಂದೆ ದಾನಿಗಳ ಸಹಕಾರದಿಂದ 18 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಬೇಕಾದ ಕಬ್ಬಿಣದ ಕಂಬ, ಹಲಗೆ ಸೇರಿದಂತೆ ವಿವಿಧ ವಸ್ತುಗಳನ್ನು ಸಿದ್ಧಪಡಿಸಲಾಗಿತ್ತು. ಈ ಬಾರಿ ಸೇತುವೆ ಅಳವಡಿಕೆಗೆ ಸುಮಾರು 70 ಸಾವಿರ ರೂ. ಖರ್ಚಾಗಿದೆ. ಕುದ್ರುವಿಗೆ ಸಂಪರ್ಕ ಸೇತುವೆ ನಿರ್ಮಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ, ನಮ್ಮ ಕೂಗು ಸರ್ಕಾರಕ್ಕೆ ಕೇಳಿಲ್ಲ.
    ಫಾ.ಜೆರಾಲ್ಡ್ ಲೋಬೊ, ಇನ್ಫೆಂಟ್ ಜೀಸಸ್ ಚರ್ಚ್ ಧರ್ಮಗುರು

    ಪಾವೂರು-ಉಳಿಯ ಕುದ್ರುವಿಗೆ ಸೇತುವೆ ಇಲ್ಲದಿರುವ ಕುರಿತಂತೆ ಜಿಲ್ಲಾ ಪಂಚಾಯಿತಿಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಕುದ್ರು ನಿವಾಸಿಗಳ ಸಮಸ್ಯೆ ಕುರಿತಂತೆ ಪಾವೂರು ಪಿಡಿಒ ಅವರಿಂದ ಮಾಹಿತಿ ಪಡೆಯುತ್ತೇನೆ. ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆಯೇ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು.
    ಡಾ.ಸೆಲ್ವಮಣಿ ಆರ್., ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts