More

    ಕುದ್ರುಗಳು ಪ್ರವಾಸಿ ತಾಣ, ಹಳೇ ಪ್ರಸ್ತಾವನೆಗೆ ಮರುಜೀವ

    ಹರೀಶ ಮೋಟುಕಾನ ಮಂಗಳೂರು
    ಕುದ್ರುಗಳನ್ನು ಪ್ರವಾಸೋದ್ಯಮ ತಾಣಗಳನ್ನಾಗಿಸುವ ಹಳೇ ಪ್ರಸ್ತಾವನೆಗೆ ಮರುಜೀವ ಬಂದಿದ್ದು, ಈ ಸಂಬಂಧ ಸಮೀಕ್ಷೆ ನಡೆಸಿ ಯೋಜನೆ ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹಾಗೂ ಅಧಿಕಾರಿಗಳನ್ನು ಒಳಗೊಂಡ ತಂಡ ಕುದ್ರುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೂರಕ ಕಾರ್ಯಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

    ನೇತ್ರಾವತಿ, ಫಲ್ಗುಣಿ ನದಿಗಳ ನಡುವೆ ಸುಂದರ ಕುದ್ರುಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಜಪ್ಪಿನಮೊಗರು ಕಡೆಕಾರು ಬಳಿ ನೇತ್ರಾವತಿ ನದಿ ಮಧ್ಯದಲ್ಲಿ, ಹಳೇ ಬಂದರು ಬಳಿಯ ಫಲ್ಗುಣಿ ನದಿ ಮಧ್ಯದಲ್ಲಿ, ತಣ್ಣೀರು ಬೀಚ್ ಬಳಿ ಕುಡ್ಲಕುದ್ರು ಸಹಿತ ಮಂಗಳೂರು ಸುತ್ತಮುತ್ತ ಆರು ಕುದ್ರುಗಳಿವೆ.

    ಮೆರಿಟೈಮ್ ಬೋರ್ಡ್‌ನಲ್ಲಿ ಸಾಗರ ತೀರಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಬೋರ್ಡ್‌ನಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸದಸ್ಯರಾಗಿದ್ದಾರೆ. ಈ ಅವಕಾಶಗಳನ್ನು ಬಳಸಿಕೊಂಡು ಮಂಗಳೂರು ಸಮುದ್ರ ತೀರ ಪ್ರದೇಶ ಕುದ್ರುಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸಲಾಗುತ್ತಿದೆ.

    ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸ್ಮಾರ್ಟ್ ಸಿಟಿ ಯೋಜನೆಯ ಸಹಕಾರ ಪಡೆದು ರಿಂಗ್ ರೋಡ್ ನಿರ್ಮಾಣ ಮಾಡುವ ಯೋಜನೆಗೆ ಪ್ರಸ್ತಾವನೆ ಮುಂದಿಟ್ಟಿದೆ. ಇದರ ಜತೆಗೆ ಕುದ್ರುಗಳ ಅಭಿವೃದ್ಧಿ ಸಾಕಾರಗೊಂಡರೆ ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಲಭಿಸಲಿದೆ. ಹಿನ್ನೀರು ಪ್ರವಾಸೋದ್ಯಮದಲ್ಲಿ ಯಶಸ್ಸು ಕಂಡಿರುವ ಕೇರಳದಲ್ಲಿ ವೈಪಿನ್ ದ್ವೀಪ, ಗುಂಡು ದ್ವೀಪ, ವಿಲಿಂಗ್ಟನ್ ದ್ವೀಪ, ಬೊಲ್ಗಟ್ ದ್ವೀಪ, ಧರ್ಮಾದಂ ಐಲ್ಯಾಂಡ್, ಕವ್ವಯಿ ದ್ವೀಪ, ಪೂವರ್ ದ್ವೀಪ, ಮೊನ್ನುಂತುರುತು ದ್ವೀಪ, ಮುನ್ನೋ ದ್ವೀಪ ಸಹಿತ ಸುಮಾರು 8 ಸಣ್ಣ ದ್ವೀಪಗಳು ಈಗಾಗಲೇ ಪ್ರವಾಸೋದ್ಯಮ ಕೇಂದ್ರಗಳಾಗಿವೆ.

    ಹಳೇ ಪ್ರಸ್ತಾವನೆ: ಕೇಂದ್ರ, ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಮಂಗಳೂರು ಸುತ್ತಮುತ್ತಲಿನ ಕುದ್ರುಗಳನ್ನು ಅಭಿವೃದ್ಧಿ ಪಡಿಸುವ ಚಿಂತನೆ ಕೆಲ ವರ್ಷಗಳ ಹಿಂದೆಯೇ ಇತ್ತು. ಜಪ್ಪಿನಮೊಗರು ನೇತ್ರಾವತಿ ನದಿ, ಮಂಗಳೂರಿನ ಹಳೇ ಬಂದರು ಪ್ರದೇಶಗಳಲ್ಲಿ ಮೂರು ದ್ವೀಪಗಳಿವೆ. ಜಪ್ಪಿನಮೊಗರು ಕಡೇಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿ ಸುಂದರ ಕುದ್ರು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ನಡೆಸಿತ್ತು. ಇದಕ್ಕೆ ಪೂರಕವಾಗಿ ದ್ವೀಪಕ್ಕೆ ದೋಣಿ ಸಂಚರಿಸುವುದಕ್ಕೂ ಹಿಂದೆ ಚಾಲನೆ ನೀಡಲಾಗಿತ್ತು. ಮಂಗಳೂರು ಹಳೇ ಬಂದರು ಪ್ರದೇಶದಲ್ಲಿ ನೇತ್ರಾವತಿ, ಫಲ್ಗುಣಿ ನದಿಯಲ್ಲಿನ ಮೂರು ದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸುವ ಬಗ್ಗೆಯೂ ಚಿಂತನೆಗಳು ನಡೆದಿದ್ದವು. ಕುಡ್ಲ ಕುದ್ರುವಿನಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದರೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ಸು ಪಡೆದಿಲ್ಲ.

    ಮಂಗಳೂರು ಸುತ್ತಮುತ್ತಲಿರುವ ಕುದ್ರುಗಳನ್ನು ಪ್ರವಾಸೋದ್ಯಮ ತಾಣಗಳನ್ನಾಗಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಅಧಿಕಾರಿಗಳ ಜತೆ ಕುದ್ರುಗಳ ಪರಿಶೀಲನೆ ನಡೆಸಲಾಗಿದೆ. ಕುದ್ರುಗಳ ಅಭಿವೃದ್ಧಿಗೆ ಸಂಬಂಧಿಸಿ ವಿಸ್ತೃತ ಕಾರ್ಯಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
    – ಡಿ.ವೇದವ್ಯಾಸ ಕಾಮತ್, ಶಾಸಕ, ಮಂಗಳೂರು ದಕ್ಷಿಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts