

ಲಖನೌ : ಉತ್ತರಪ್ರದೇಶದ ಪ್ರಯಾಗ್ರಾಜ್ ನಗರದಲ್ಲಿ ಎಷ್ಟೋ ಕರೊನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಒದ್ದಾಡುವ ಬದಲು ಮನೆಯಲ್ಲೇ ಶುಶ್ರೂಷೆ ಪಡೆಯಲು ಹೇಳಲಾಗಿದೆ. ಆದರೆ ಹೀಗೆ ಮನೆಯಲ್ಲೇ ಇರುವ ರೋಗಿಗಳ ಆಕ್ಸಿಜನ್ ಅಗತ್ಯವನ್ನು ಪೂರೈಸಲು ಸರ್ಕಾರಿ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿಲ್ಲ ಎನ್ನಲಾಗಿದೆ.
ರೋಗಿಗಳ ಸಂಬಂಧಿಕರು ಒಂದು ಆಕ್ಸಿಜನ್ ಪ್ಲ್ಯಾಂಟ್ನಿಂದ ಇನ್ನೊಂದಕ್ಕೆ ಆಕ್ಸಿಜನ್ ಸಿಲಿಂಡರ್ ಪಡೆಯಲು ಓಡಾಡುತ್ತಿದ್ದಾರೆ. ಪ್ರಯಾಗ್ರಾಜ್ ಬಿಜೆಪಿ ಶಾಸಕ ಹರ್ಷವರ್ಧನ್ ವಾಜಪೇಯಿ ಅವರ ಆಕ್ಸಿಜನ್ ಉತ್ಪಾದನಾ ಘಟಕದ ಮುಂದೆ ಇಂದು ಹಲವು ಕರೊನಾ ರೋಗಿಗಳ ಸಂಬಂಧಿಕರು ಆಕ್ಸಿಜನ್ ಪಡೆಯಲು ಜಮಾಯಿಸಿದ್ದರು. ಆದರೆ ಈ ಪ್ಲ್ಯಾಂಟ್ ಈಗ ಸರ್ಕಾರದ ನಿಯಂತ್ರಣದಲ್ಲಿದ್ದು, ಅಲ್ಲಿರುವ ಅಧಿಕಾರಿಗಳು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಹೀಗೆ ಆಕ್ಸಿಜನ್ ಕ್ಯಾನ್, ಸಿಲಿಂಡರ್ ಅಥವಾ ಕಾನ್ಸಂಟ್ರೇಟರ್ಗಳು ಲಭ್ಯವಾಗದೆ ಹಲವು ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಇವರ ಸಂಬಂಧಿಕರು ಆಕ್ಸಿಜನ್ ಒದಗಿಸಲು ಅಧಿಕಾರಿಗಳನ್ನು ಸಂಪರ್ಕಿಸಲು ಹೋದರೆ, ಪೊಲೀಸರು ರೋಗಿಗಳನ್ನು 'ಅಶ್ವತ್ಥ ಮರದ ಕೆಳಗೆ ಕೂರಿಸಿಕೊಳ್ಳಿ. ಆಕ್ಸಿಜನ್ ಸ್ಯಾಚುರೇಷನ್ ಲೆವೆಲ್ ಹೆಚ್ಚಾಗುತ್ತದೆ' ಎಂದು ಸಲಹೆ ನೀಡಿ ಕಳುಹಿಸುತ್ತಿದ್ದಾರೆ ಎಂದು ಲಲ್ಲನ್ಟಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ!
ಮತ್ತೊಂದೆಡೆ ರಾಜ್ಯ ಸರ್ಕಾರವು ಕಳೆದ ವಾರವಷ್ಟೇ 47 ಜಿಲ್ಲೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲ್ಯಾಂಟ್ಗಳನ್ನು ಪಿಎಂ ಕೇರ್ಸ್ ಫಂಡ್ನಡಿ ಸ್ಥಾಪಿಸಲಾಗುವುದು ಎಂದು ಹೇಳಿಕೆ ನೀಡಿದೆ. ಪ್ರಯಾಗ್ರಾಜ್ ಸೇರಿದಂತೆ ಕರೊನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ನಗರಗಳಲ್ಲಿ ಈ ಪ್ಲ್ಯಾಂಟ್ಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)