More

    ರಾಹೆ 169 ಹೊಂಡ ಗುಂಡಿಗೆ ಮುಕ್ತಿ

    ಮಂಗಳೂರು: ಮಂಗಳೂರು-ಮೂಡುಬಿದಿರೆ ರಸ್ತೆಯಲ್ಲಿ ವಾಹನ ಸವಾರರ ಬವಣೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಮೊದಲ ಹಂತದಲ್ಲಿ ಪ್ಯಾಚ್ ವರ್ಕ್ ಮುಗಿದ ಬಳಿಕ ಇದೀಗ ಪೂರ್ಣ ಪ್ರಮಾಣದ ಡಾಂಬರೀಕರಣ ಕೆಲಸ ಆರಂಭವಾಗಿದೆ.
    ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರಿನ ಕುಲಶೇಖರದಿಂದ ಮೂಡುಬಿದಿರೆ-ಬೆಳುವಾಯಿವರೆಗಿನ ಸುಮಾರು 25 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಈ ಸಂಬಂಧ ಕೆಲಸಗಳು ಈಗಾಗಲೇ ಆರಂಭವಾಗಿದ್ದು, ಮುಂದಿನ ಸುಮಾರು 40 ದಿನದೊಳಗೆ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ.

    8 ಕೋಟಿ ರೂ. ವೆಚ್ಚ: ನಿಯತಕಾಲಿಕ ನವೀಕರಣ(ಪೀರಿಯಾಡಿಕಲ್ ರಿನೀವಲ್)ದಡಿ ಸುಮಾರು 8 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮೂಡುಬಿದಿರೆ ಪೇಟೆ ಮತ್ತು ಗುರುಪುರ ಪೇಟೆಯಲ್ಲಿ ಈ ಮೊದಲ ಪೀರಿಯಾಡಿಕಲ್ ರಿನೀವಲ್‌ನಲ್ಲಿ ಡಾಂಬರು ಹಾಕಲಾಗಿದೆ. ಈಗ ಮುಂದುವರಿದ ಭಾಗವಾಗಿ ಉಳಿದ ಕಡೆಗಳಲ್ಲಿ ಡಾಂಬರು ಹಾಕಲಾಗುತ್ತಿದೆ. ಇದು ರಸ್ತೆ ಅಗಲೀಕರಣ ಕಾಮಗಾರಿ ಅಲ್ಲ, ಪ್ರಸ್ತುತ ಇರುವ ರಸ್ತೆಗೆ ಮಾತ್ರ ಡಾಂಬರು ಹಾಕಲಾಗುತ್ತಿದೆ ಎಂದು ಪಿಡಬ್ಲುೃಡಿ ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ಎರಡು ಮಾದರಿ ಡಾಂಬರು ಮಿಶ್ರಣ: ಬಿಟುಮಿಸನ್ ಕಾಂಕ್ರೀಟ್(ಬಿಸಿ) ಮತ್ತು ಡೆನ್ಸ್ ಬಿಟುಮಿನಸ್ ಮೆಕಾಡ್ಯಾಮ್(ಡಿಬಿಎಂ) ಎಂಬ ಎರಡು ಮಾದರಿಯ ಡಾಂಬರು ಮಿಶ್ರಣವನ್ನು ಕಾಮಗಾರಿಯಲ್ಲಿ ಬಳಸಲಾಗುತ್ತಿದೆ. ಪೂರ್ಣ 25 ಕಿ.ಮೀ. ಬಿಟುಮಿಸನ್ ಕಾಂಕ್ರೀಟ್ ಡಾಂಬರು ಮಿಶ್ರಣವನ್ನು ಬಳಕೆ ಮಾಡುತ್ತಿದ್ದು, ಆಯ್ದ ಭಾಗಗಳಲ್ಲಿ ಡೆನ್ಸ್ ಬಿಟುಮಿನಸ್ ಮೆಕಾಡ್ಯಾಮ್ ಬಳಸಲಾಗುತ್ತಿದೆ. ಸಂಚಾರಕ್ಕೆ ಅಡ್ಡಿಯಾಗದಂತೆ ಹಗಲು ವೇಳೆಯಲ್ಲಿ, ಸಂದರ್ಭ ಅನುಸಾರ ರಾತ್ರಿ ವೇಳೆ ಕಾಮಗಾರಿ ನಡೆಯಲಿದೆ.

    ಬೆಳುವಾಯಿಯಿಂದ ಕುಲಶೇಖರದ ಹೆದ್ದಾರಿಗೆ ಸಂಪೂರ್ಣ ಡಾಂಬರು ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ 40 ದಿನದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ.
    ಜಿ.ಎನ್ ಹೆಗ್ಡೆ, ಕಾರ್ಯನಿರ್ವಾಹಕ ಇಂಜಿನಿಯರ್, ಪಿಡಬ್ಲುೃಡಿ ರಾಷ್ಟ್ರೀಯ ಹೆದ್ದಾರಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts