More

    ಸಾರಿಗೆ ಸಿಬ್ಬಂದಿ ದಿಢೀರ್ ಪ್ರತಿಭಟನೆ

    ಚಿಕ್ಕಮಗಳೂರು: ನಮ್ಮನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದರ ಜತೆಗೆ 6ನೇ ವೇತನ ಜಾರಿಮಾಡಬೇಕು ಎಂದು ಆಗ್ರಹಿಸಿ ಕೆಎಸ್​ಆರ್​ಟಿಸಿ ಸಿಬ್ಬಂದಿ ಶುಕ್ರವಾರ ದಿಢೀರ್ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡಿದರು.

    ಬೆಳಗ್ಗೆ 7 ಗಂಟೆವರೆಗೆ ಬಸ್​ಗಳು ಸಂಚರಿಸುತ್ತಿದ್ದವು. ರಾಜ್ಯ ಸಂಘದ ಸೂಚನೆ ಮೇರೆಗೆ ಚಾಲಕ ಮತ್ತು ನಿರ್ವಾಹಕರು ಏಕಾಏಕಿ ಬಸ್​ಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಮುಂದಾಗಿದ್ದು ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಯಿತು. ಹಲವರು ಈ ಬಗ್ಗೆ ಪ್ರಶ್ನಿಸಿದಾಗ ತಮ್ಮ ಸಮಸ್ಯೆ ಹೆಳಿಕೊಂಡ ನೌಕರರು, ಪ್ರಯಾಣಿಕರಿಗೆ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ. ಆದರೆ ನಮ್ಮ ಕುಂಟುಂಬ ನಿರ್ವಹಣೆಯೂ ಮುಖ್ಯವಾದ ಹಿನ್ನೆಲೆ ಮುಷ್ಕರ ಅನಿವಾರ್ಯವಾಗಿದೆ ಎಂದರು. ಚಾಲಕರು, ನಿರ್ವಾಹಕರು, ಮೆಕ್ಯಾನಿಕ್​ಗಳು, ಡಿಪೋ ಸಿಬ್ಬಂದಿ ಸೇರಿ 7.30ರ ವೇಳೆಗೆ ನೂರಾರು ನೌಕಕರು ಬಸ್ ನಿಲ್ದಾಣಕ್ಕೆ ಆಗಮಿಸಿ ಧರಣಿ ಕುಳಿತರು.

    ಈ ವೇಳೆ ಪ್ರವಾಸ ಬಂದಿದ್ದ ಪ್ರಯಾಣಿಕರು ನಿಲ್ದಾಣದಲ್ಲೇ ಕುಳಿತು ಬಸ್ ಹೊರಡುವುದನ್ನೇ ಕಾಯುತ್ತಿದ್ದರು. ಹೊರ ಜಿಲ್ಲೆಯಿಂದ ಆಗಮಿಸಿದ್ದ ಬಹಳಷ್ಟು ಮಂದಿ ಲಗೇಜ್​ನೊಂದಿಗೆ ಕಾದು ಸುಸ್ತಾಗಿ ನಿದ್ದೆಗೆ ಜಾರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ನಿಲ್ದಾಣಕ್ಕೆ ಆಗಮಿಸಿ ಕಾಲೇಜುಗಳಿಗೆ ತೆರಳಲು ಬಸ್ ಇಲ್ಲದೆ ಕೆಲವರು ನಡೆದು ಸಾಗಿದರೆ ಮತ್ತೆ ಕೆಲವರು ಆಟೋದಲ್ಲಿ ತೆರಳಿದರು. ಬೆಂಗಳೂರು, ಮೈಸೂರು, ಮಂಡ್ಯ, ಉತ್ತರ ಕರ್ನಾಟಕದ ಕಡೆಗೆ ತೆರಳಬೇಕಿದ್ದವರು ಪರದಾಡಿದರು. ತುರ್ತಾಗಿ ಊರು ತಲುಪಬೇಕಾದವರು ದುಪ್ಪಟ್ಟು ಹಣ ನೀಡಿ ಖಾಸಗಿ ವಾಹನದಲ್ಲಿ ತೆರಳಿದರು.

    ವೇತನ ಪರಿಷ್ಕರಣೆ ನವೀಕರಣಗೊಂಡಿಲ್ಲ: ಹೊರ ಜಿಲ್ಲೆಗೆ ತೆರಳಬೇಕಿದ್ದ ನೂರಾರು ಚಾಲಕ, ನಿರ್ವಾಹಕರು ಬೆಳಗಿನ ಉಪಾಹಾರವನ್ನು ಹೋಟೆಲ್​ನಿಂದ ತಂದು ಸೇವಿಸಿದರು. ಮಧ್ಯಾಹ್ನದ ಊಟವನ್ನು ನಿಲ್ದಾಣದಲ್ಲೇ ಮಾಡಿ ಪ್ರತಿಭಟನೆ ಮುಂದುವರಿಸಿದರು. ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನವೀಕರಣಗೊಳಿಸುವ ಒಪ್ಪಂದವಾಗಿರುತ್ತದೆ. ಜನವರಿಯಲ್ಲಿ ನವೀಕರಣ ಆಗಬೇಕಿತ್ತು. ಆದರೆ ಕರೊನಾ ನೆಪದಲ್ಲಿ ವರ್ಷಾಂತ್ಯವಾದರೂ ಮಾಡಿಲ್ಲ. ಪ್ರಸ್ತುತ ಸಂಬಳ ನೀಡುತ್ತಿದ್ದಾರೆ. ಆದರೆ ಅರಿಯರ್ಸ್ ಇನ್ನಿತರೆ ಸೌಲಭ್ಯ ನೀಡಿಲ್ಲ. 6ನೇ ವೇತನ ಜಾರಿಮಾಡಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಕುಟುಂಬದ ಹಿತ ಕಾಪಾಡಿ ಎಂದು ಆಗ್ರಹಿಸಿದರು. ಮೇಲಧಿಕಾರಿಗಳು ಒಳ್ಳೆಯವರಾಗಲು ನೌಕರರ ನಡುವೆ ಪೈಪೋಟಿ ಹುಟ್ಟುಹಾಕುತ್ತಾರೆ. ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ. ಜತೆಗೆ ಕಿರುಕುಳವೂ ಮುಂದುವರಿದಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts