More

    ಶಾಲೆಗೆ ಬೀಗ ಹಾಕಿ ಪಾಲಕರ ಪ್ರತಿಭಟನೆ


    ಚಾಮರಾಜನಗರ : ಶಾಲಾ ಕೊಠಡಿ ರಿಪೇರಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಮಕ್ಕಳಿಗೆ ಇತರ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಗುರುವಾರ ಹನೂರು ತಾಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ಪಾಲಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.


    ಈ ಸಂದರ್ಭದಲ್ಲಿ ಪಾಲಕರು ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಶಾಲಾ ಕೊಠಡಿ ಶಿಥಿಲವಾಗಿದೆ. ಮಳೆ ಬಂದ ವೇಳೆ ನೀರು ಜಿನುಗುತ್ತದೆ. ಇದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತ ಕಾಂಪೌಂಡ್ ಇಲ್ಲದಿರುವುದರಿಂದ ಕುರಿ, ಕೋಳಿ ಹಾಗೂ ಹಸುಗಳು ಲಗ್ಗೆ ಇಡುತ್ತಿದ್ದು, ಮಕ್ಕಳು ಭಯದಿಂದ ಶಿಕ್ಷಣ ಪಡೆಯುವಂತಾಗಿದೆ ಎಂದು ಕಿಡಿಕಾರಿದರು.


    ಕೊಠಡಿ ರಿಪೇರಿ ಹಾಗೂ ಕಾಂಪೌಂಡ್ ನಿರ್ಮಿಸುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಪರಿಣಾಮ ಬುಧವಾರ ಮಧ್ಯಾಹ್ನ 1ನೇ ತರಗತಿಯ ನಾಗವೇಣಿ ಎಂಬ ವಿದ್ಯಾರ್ಥಿನಿಗೆ ಕೋಳಿಯೊಂದು ಕಚ್ಚಿ ಗಾಯಗೊಳಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರು ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ. ಮಕ್ಕಳಿಗೆ ಶಾಲೆಯಲ್ಲಿ ಅಗತ್ಯ ಮೂಲ ಸೌಕರ್ಯದ ಕೊರತೆಯ ಜತೆಗೆ ಸುರಕ್ಷತೆ ಇಲ್ಲವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮಕ್ಕಳನ್ನು ಮನೆಗೆ ಕಳುಹಿಸಿದರು.


    ಸುದ್ದಿ ತಿಳಿದ ಶಿಕ್ಷಣ ಸಂಯೋಜಕ ಕಂದವೇಲು ಅವರು ಸ್ಥಳಕ್ಕಾಗಮಿಸಿ ಪಾಲಕರಿಂದ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಸಮಸ್ಯೆಯನ್ನು ಬಗೆಹರಿಸಲಾಗುವುದು. ಆದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈ ಸಂದರ್ಭದಲ್ಲಿ ಸಿಆರ್‌ಪಿ ಷಣ್ಮುಗಂ, ಮುಖ್ಯ ಶಿಕ್ಷಕ ಮುತ್ತುರಾಜು, ಶಿಕ್ಷಕರಾದ ಗಣೇಶ್‌ರಾಜ್, ಶಿವರಾಜು, ಮುರುಗೇಶ್ ಮಾಲಾಶ್ರೂ, ದಿವ್ಯಾಶ್ರೀ ಇದ್ದರು.


    ಪೆದ್ದನಪಾಳ್ಯ ಶಾಲಾ ಕೊಠಡಿ ರಿಪೇರಿ, ಶಾಲಾ ಕಾಂಪೌಂಡ್ ನಿರ್ಮಾಣ ಸಂಬಂಧ ಈಗಾಗಲೇ ತಾಲೂಕು ಪಂಚಾಯಿತಿ ಇಒ ಹಾಗೂ ಪಿಡಿಒ ಅವರೊಂದಿಗೆ ಚರ್ಚಿಸಲಾಗಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು. ಜತೆಗೆ ಶುಕ್ರವಾರ ಗ್ರಾಮಕ್ಕೆ ತೆರಳಿ ಪಾಲಕರೊಂದಿಗೆ ಚರ್ಚಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಲಾಗುವುದು.
    ಶಿವರಾಜು, ಬಿಇಒ ಹನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts