More

    ಪಾರವಾಡ ಗ್ರಾಮಕ್ಕೆ ಬಸ್ ಸೇವೆ ಒದಗಿಸಲು ಆಗ್ರಹ

    ಖಾನಾಪುರ: ಸ್ಥಳೀಯ ಬಸ್ ನಿಲ್ದಾಣದಿಂದ ನಿತ್ಯ ರಾತ್ರಿ 7.30ಕ್ಕೆ ಹೊರಟು ಜಾಂಬೋಟಿ, ಕಣಕುಂಬಿ ಮಾರ್ಗವಾಗಿ ಪಾರವಾಡ ತಲುಪಿ ಪಾರವಾಡ ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದ ಖಾನಾಪುರ-ಪಾರವಾಡ ಬಸ್ ಸಂಚಾರವನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕೆಲ ತಿಂಗಳುಗಳಿಂದ ನಿಲ್ಲಿಸಿದೆ. ಇದರಿಂದಾಗಿ ಕಣಕುಂಬಿ ಭಾಗದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಈ ಬಸ್ ಸಂಚಾರ ಮರು ಆರಂಭಿಸುವಂತೆ ತಾಲೂಕಿನ ಬಿಜೆಪಿ ಮುಖಂಡರ ನಿಯೋಗ ವಾಯವ್ಯ ಸಾರಿಗೆ ಸಂಸ್ಥೆಯನ್ನು ಆಗ್ರಹಿಸಿದೆ.

    ಪಟ್ಟಣದ ಬಸ್ ಡಿಪೋಗೆ ತೆರಳಿ ಡಿಪೋ ವ್ಯವಸ್ಥಾಪಕರನ್ನು ವಿಷಯವಾಗಿ ಆಗ್ರಹಿಸಿದ ಪಕ್ಷದ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ ಮಾತನಾಡಿ, ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಪಾರವಾಡ ಬಸ್ ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ನಿತ್ಯ ಸಂಜೆ 6ರ ನಂತರ ಪಟ್ಟಣದಿಂದ ಜಾಂಬೋಟಿ, ಕಣಕುಂಬಿ ಕಡೆ ತೆರಳಲು ಇದೊಂದೇ ಬಸ್ ಇದ್ದ ಕಾರಣ ಮತ್ತು ಬಹುತೇಕ ಕೂಲಿ ಕಾರ್ಮಿಕರು, ಉದ್ಯೋಗಸ್ಥರು ಮತ್ತು ವಿದ್ಯಾರ್ಥಿಗಳು ಈ ಬಸ್‌ನ್ನೇ ಅವಲಂಬಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಕಾರಣವಿಲ್ಲದೆ ಬಸ್ ಸಂಚಾರ ನಿಲ್ಲಿಸಿದ್ದರಿಂದ ಕಣಕುಂಬಿ, ಪಾರವಾಡ, ಸುತ್ತಲಿನ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ತಾಪಂ ಮಾಜಿ ಸದಸ್ಯೆ ಧನಶ್ರೀ ದೇಸಾಯಿ ಮಾತನಾಡಿ, ಸಕಾರಣವಿಲ್ಲದೆ ಬಸ್ ಸೌಲಭ್ಯ ನಿಲ್ಲಿಸಿದ್ದರಿಂದ ವಿವಿಧ ಕೆಲಸಗಳಿಗಾಗಿ ತಾಲೂಕು ಕೇಂದ್ರಕ್ಕೆ ಆಗಮಿಸಿದ್ದ ಪ್ರಯಾಣಿಕರು ತಮ್ಮ ಮನೆಗಳಿಗೆ ಮರಳಲು ಸಮಸ್ಯೆ ಆಗುತ್ತಿದೆ. ಈಗಾಗಲೇ ಹಲವು ಬಾರಿ ಖಾನಾಪುರ ಘಟಕಕ್ಕೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಜಾಂಬೋಟಿ ರಸ್ತೆಯ ಶಂಕರಪೇಟ ಬಳಿ ಸೇತುವೆ ದುರಸ್ತಿಯ ಸಬೂಬು ಹೇಳಿ ಬಸ್ ನಿಲ್ಲಿಸಿದ್ದಾಗಿ ಹೇಳುತ್ತಿದ್ದಾರೆ. ವಾಸ್ತವವಾಗಿ ಸೇತುವೆ ದುರಸ್ತಿ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆಯವರು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು, ಈ ಮಾರ್ಗದಲ್ಲಿ ನಿತ್ಯ ಬೇರೆ ಬಸ್‌ಗಳು ಓಡಾಡುತ್ತಿವೆ. ಆದ್ದರಿಂದ ಸಾರಿಗೆ ಅಧಿಕಾರಿಗಳು ಇನ್ನು ಮುಂದಾದರೂ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಪಾರವಾಡ, ಬೇಟಣೆ, ಕಣಕುಂಬಿ ಗ್ರಾಮಸ್ಥರು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟಿಸಲಿದ್ದಾರೆ ಎಂದು ಎಚ್ಚರಿಸಿದರು.ರಾಜು ರಾಯ್ಕ, ಬಸವರಾಜ ಹಪ್ಪಳಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts