More

    ಪರಂಪರೆಯ ಕೊಂಡಿ ಎಂದೂ ಕಳಚದಿರಲಿ

    ಯಲ್ಲಾಪುರ: ಪರಂಪರೆಯ ಕೊಂಡಿ ಒಮ್ಮೆ ಕಳಚಿಕೊಂಡರೆ ಮತ್ತೆ ಅದಕ್ಕೆ ಮರಳುವುದು ಕಷ್ಟ. ಹಾಗಾಗಿ ಬ್ರಾಹ್ಮಣರು ವಂಶವಾಹಿನಿಯನ್ನು ಶುದ್ಧವಾಗಿಟ್ಟುಕೊಳ್ಳುವುದು ಇಂದಿನ ಅಗತ್ಯ ಎಂದು ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

    ಭಾನುವಾರ ಪಟ್ಟಣದ ರವೀಂದ್ರನಗರ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಅಖಿಲ ಹವ್ಯಕ ಮಹಾಸಭಾ ಹಾಗೂ ತಾಲೂಕು ಹವ್ಯಕ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಾಯತ್ರಿ ಮಹೋತ್ಸವದ ಸಂದರ್ಭದಲ್ಲಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಕುಟುಂಬಗಳೇ ಧರ್ಮ ವ್ಯವಸ್ಥೆ ಕೇಂದ್ರ. ಆದರೆ ಇತ್ತೀಚಿನ ದಿವಸಗಳಲ್ಲಿ ಮನೆಗಳಲ್ಲಿ ಅಧರ್ಮ ಪ್ರವೇಶಿಸುತ್ತಿದೆ. ಎಲ್ಲೆಡೆ ಅಧರ್ಮ ವ್ಯಾಪಿಸುತ್ತಿರುವುದರಿಂದಲೇ ಬೇರೆ ಬೇರೆ ರೀತಿಯ ರೋಗಗಳು ಬಂದು ಸಮಸ್ಯೆ ಎದುರಾಗುತ್ತಿವೆ ಎಂದು ಹೇಳಿದರು.

    ಬ್ರಾಹ್ಮಣರನ್ನು ಎಲ್ಲರೂ ಅನುಸರಿಸುವಂತಿರಬೇಕು, ಆದರೆ, ಬ್ರಾಹ್ಮಣರೇ ಬೇರೆಯವರನ್ನು ಅನುಸರಿಸುತ್ತ ಸಾಗುವ ಸ್ಥಿತಿ ಬಂದಿದೆ. ಅದನ್ನು ತಡೆಯಲು ಸರ್ವಹಿತಕ್ಕಾಗಿ ಬ್ರಾಹ್ಮಣ್ಯ ಉಳಿಸೋಣ ಬನ್ನಿ ಎಂಬ ಕಾರ್ಯಕ್ರಮ ಆರಂಭಿಸಲಾಗಿದೆ ಎಂದ ಶ್ರೀಗಳು, ಹವ್ಯಕರು ಸೂಕ್ತ ವಯಸ್ಸಿನಲ್ಲಿ ವಿವಾಹ, ಸಂತಾನಾಭಿವೃದ್ಧಿ, ವೇದಾಧ್ಯಯನ, ನಿರಂತರ ಧರ್ವಚರಣೆಯ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ. ವಿವಾಹದ ವಿಷಯದಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರೂ ಸೂಕ್ತ ಪರಿಹಾರದ ದಾರಿಗಳನ್ನು ಹುಡುಕಬೇಕೇ ಹೊರತು ಅಧರ್ಮದ ವಿವಾಹ ಸಲ್ಲದು ಎಂದರು.

    ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ, ಮಹಾಸಭಾದ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ, ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಪ್ರಶಾಂತ ಹೆಗಡೆ, ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ನಗರ ಸೀಮಾ ಪರಿಷತ್ ಅಧ್ಯಕ್ಷ ಎಸ್.ವಿ. ಹೆಗಡೆ, ಶಕ್ತಿ ಗಣಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ ಗಾಂವ್ಕಾರ ಇತರರಿದ್ದರು. ಆದಿತ್ಯ ಹೆಗಡೆ, ಜಿ. ಎನ್. ಭಟ್ಟ ತಟ್ಟಿಗದ್ದೆ ನಿರ್ವಹಿಸಿದರು. ಇದಕ್ಕೂ ಮುನ್ನ 50 ಕ್ಕೂ ಹೆಚ್ಚು ವೈದಿಕರು 1,08,000 ಗಾಯತ್ರಿ ಜಪಾನುಷ್ಠಾನ ನಡೆಸಿದರು. ನಂತರ ಗಾಯತ್ರಿ ಹವನ ನಡೆಯಿತು.

    ಅಶಕ್ತರಿಗೆ ಸಹಾಯ ಮಾಡಿದರೆ ದುಡಿಮೆ ಸಾರ್ಥಕ

    ತಾನು ಬ್ರಾಹ್ಮಣ ಎಂದು ಹೇಳಿಕೊಳ್ಳಲು ಯಾವ ಕೀಳರಿಮೆ ಬೇಡ. ಸರ್ವರ ಹಿತ ಬಯಸುವ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ವಿಶೇಷತೆ ಬ್ರಾಹ್ಮಣ ಸಮುದಾಯದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಗಾಯತ್ರಿ ಮಹೋತ್ಸವದಲ್ಲಿ ಹವ್ಯಕ ಮಾಂಗಲ್ಯ ಆಪ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದುಡಿಮೆಯ ಕೆಲ ಭಾಗವನ್ನಾದರೂ ಸಮಾಜದ ಬಡವರು, ಅಶಕ್ತರಿಗೆ ಸಹಾಯ ಮಾಡಿದರೆ ದುಡಿಮೆ ಸಾರ್ಥಕವಾಗುತ್ತದೆ ಎಂದರು.

    ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಗಾಯತ್ರಿ ಮಂತ್ರದ ಮೂಲಕ ಕರೊನಾ ಚಿಕಿತ್ಸೆ ನೀಡುವ ಪ್ರಯೋಗ ವೈಜ್ಞಾನಿಕ ಪ್ರಯೋಗಾಲಯಗಳ ಮೂಲಕ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಹವ್ಯಕರ ಹುಟ್ಟು, ಬದುಕು ಲೋಕಕಲ್ಯಾಣಾರ್ಥವಾಗಿ. ಇದನ್ನು ನೆನಪಿಟ್ಟುಕೊಂಡು ಜವಾಬ್ದಾರಿಯುತವಾಗಿ ಮುನ್ನಡೆಯುವ ಅಗತ್ಯವಿದೆ ಎಂದರು.

    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹವ್ಯಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಮಹಾಸಭಾದ ವೇಣುವಿಘ್ನೕಶ್ವರ ಸಂಪ, ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ನಗರ ಮಾತೃಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ ಇತರರಿದ್ದರು. ಸಂಸದ ಅನಂತಕುಮಾರ ಹೆಗಡೆ ಅವರ ಸಂದೇಶವನ್ನು ಜಿ.ಎನ್.ಭಟ್ಟ ವಾಚಿಸಿದರು. ವಿನೇಶ ಮಾಳಕೊಪ್ಪ, ಸುಬ್ರಾಯ ಭಟ್ಟ ಆನೆಜಡ್ಡಿ, ಮುಕ್ತಾ ಶಂಕರ ನಿರ್ವಹಿಸಿದರು.

    ಇದಕ್ಕೂ ಮುನ್ನ ನಡೆದ ಗೋಷ್ಠಿಗಳಲ್ಲಿ ಹವ್ಯಕ ವಿವಾಹದ ಕುರಿತು ವೇ.ಅನಂತ ಭಟ್ಟ ಸಿದ್ರಪಾಲ, ಮೋಹನ ಹೆಗಡೆ ಹೆರವಟ್ಟಾ, ಗಾಯತ್ರಿ ಮಹಿಮೆ ಕುರಿತು ವಿದ್ವಾನ್ ಎಲ್. ವಾಸುದೇವ ಭಟ್ಟ ವಿಚಾರ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts