More

    ನಶ್ವರ ಬದುಕಿನ ಪರಮಾರ್ಥ ಮತ್ತು ಕ್ರಿಕೆಟ್ ನಾಯಕತ್ವ

    ಮುಂದಾಳತ್ವ ಎನ್ನುವುದು ಸಂದರ್ಭಕ್ಕೆ, ಸವಾಲಿಗೆ ತತ್​ಕ್ಷಣದ ಪ್ರತಿಸ್ಪಂದನೆಯಿಂದ ರೂಪುಗೊಳ್ಳುವಂಥದ್ದೇ ಹೊರತು, ವಯಸ್ಸಿನ ಹಿರಿತನದಿಂದ, ಅನುಭವದಿಂದ ಬರುವಂಥದ್ದಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಅಗತ್ಯಗಳು, ಅವಶ್ಯಕತೆಗಳು, ಅಪೇಕ್ಷೆಗಳು, ಅನಿವಾರ್ಯಗಳು ಬದಲಾದಂತೆ ಬದಲಾವಣೆಗಳು ಜರುಗುತ್ತಿರುತ್ತವೆ. ಅಲ್ಲಿ ಯಾರು ಸರಿ, ಯಾರು ತಪು್ಪ ಎಂದು ವಿಮಶಿಸುವುದು ಕಷ್ಟ. ಸೂಕ್ತವೂ ಅಲ್ಲ.

    Savyasachiಮರೆವು ಮನುಷ್ಯನಿಗೆ ವರವೂ ಹೌದು, ಶಾಪವೂ ಹೌದು.
    ಒಳಿತು, ಕೆಡುಕು ಎರಡೂ ಆ ಕ್ಷಣಕ್ಕೆ ಬ್ರಹ್ಮಾಂಡ ಮಹತ್ವ ಹೊಂದಿದ್ದರೂ, ಕಾಲಕ್ರಮೇಣ ಸ್ಮೃತಿಯಿಂದ ಸರಿದುಹೋಗುತ್ತದೆ. ಹಾಗೆ ನೋಡಿದರೆ, ಯಾವುದು ಶಾಶ್ವತ? ಹೊಸ ನೀರಿನ ಪ್ರವಾಹದಲ್ಲಿ ಹಳೆಯ ನೀರು ಕೊಚ್ಚಿಹೋಗುವುದು ಸರ್ವೆಸಾಮಾನ್ಯ. ಜನ್ಮವೆನ್ನುವುದು ಹುಟ್ಟು-ಬದುಕು-ಸಾವೆಂಬ ಮೂರು ದಿನದ ಪಯಣವೆಂದ ಮೇಲೆ, ಈ ಮೂರು ಅವಸ್ಥೆಯಲ್ಲಿ ಹೀಗೆ ಬಂದು, ಹಾಗೆ ಹೋಗುವ ಅನುಭವದ ಕ್ಷಣಗಳು ಕ್ಷಣಿಕವಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ‘ನಶ್ವರಂ ಮಾನುಷ ಜನ್ಮಂ…’ ಎಂಬ ಮಾತಿನರ್ಥ ಅದೇ. ಹುಟ್ಟಿನ ಖುಷಿ, ಸಾವಿನ ಶೋಕ, ಸಾಧನೆಯ ಸಂಭ್ರಮ, ಸಂಪಾದನೆಯ ಗರ್ವ ಎಲ್ಲವೂ ಆ ಹೊತ್ತಿನ ಭಾವಗಳಷ್ಟೇ. ಇಲ್ಲಿ ಯಾರೂ ಚಿರಂಜೀವಿಯಲ್ಲ. ಅನಾದಿ, ಅನಂತ ಎನ್ನುವುದು ಪ್ರಕೃತಿಯ ಸ್ವರೂಪ-ಸ್ವಭಾವವೇ ಹೊರತು ಮನುಷ್ಯ ಸೃಷ್ಟಿಸಿದ್ದಲ್ಲ. ಮನುಷ್ಯ ಜೀವನವೆನ್ನುವುದು ವಿಧಿಯ ಚೌಕಟ್ಟಿನೊಳಗೆ ಬಂಧಿ. ಹಾಗಾಗಿ ಬೀಗುವುದು, ಬಾಗುವುದು, ಏಗುವುದು ಕೊನೆಗೊಮ್ಮೆ ಹೋಗುವುದು ಜೀವನಚಕ್ರದಲ್ಲಿ ತಪ್ಪಿಸಿಕೊಳ್ಳಲಾಗದ ಹಂತಗಳು.

    ಕ್ರಿಕೆಟ್ ಪಂದ್ಯದಲ್ಲಿ ಒಬ್ಬ ಬ್ಯಾಟರ್ ಭರ್ಜರಿಯಾಗಿ ಸಿಕ್ಸರ್ ಸಿಡಿಸುತ್ತಾನೆ. ಉನ್ಮಾದದಿಂದ ಆತ ಬೊಬ್ಬಿರಿಯುತ್ತಾನೆ. ಇಡೀ ಕ್ರೀಡಾಂಗಣ ಆತನ ಜತೆ ಕುಣಿದುಕುಪ್ಪಳಿಸುತ್ತದೆ. ಆದರೆ, ಆ ಉನ್ಮಾದ, ಆ ಸಂತೋಷ ಶಾಶ್ವತವೇ? ಕ್ಷಣ ಮೈಮರೆತರೆ, ಮಾರನೇ ಎಸೆತದಲ್ಲೇ ಆತ ಔಟಾಗಿರುತ್ತಾನೆ. ಜೀವನವೆಂದರೂ ಅಷ್ಟೇ. ಏನೋ ಗಳಿಸಿದಾಗ, ಏನೋ ಗೆದ್ದಾಗ ಆ ಕ್ಷಣಕ್ಕೆ ಇಷ್ಟೇ ಪ್ರಪಂಚ, ಇದೇ ಶಾಶ್ವತ ಎಂದು ಉಳಿದೆಲ್ಲವನ್ನೂ ಮರೆತುಬಿಡುತ್ತೇವೆ. ಆದರೆ, ಗಳಿಸಿದ ಖುಷಿ ಆ ಕ್ಷಣಕ್ಕಷ್ಟೇ. ಗಳಿಸಿದ್ದನ್ನು ಉಳಿಸಿಕೊಳ್ಳುವ ಸವಾಲು ಮುಂದಿದ್ದೇ ಇರುತ್ತದೆ. ಜೀವನವೆಂದರೆ ಗಳಿಸುವುದಕ್ಕೆ; ಗಳಿಸಿದ್ದನ್ನು ಉಳಿಸಿಕೊಳ್ಳುವುದಕ್ಕೆ ನಿರಂತರ ಹೋರಾಟ. ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಎನಿಸಿಕೊಂಡು 625 ಅಂಕ ಗಳಿಸಿದೊಡನೆ ಬದುಕು ಅಲ್ಲಿಗೇ ಲಾಕ್ ಆಗಿಬಿಡುವುದೇ? ಮಾರನೇ ಕ್ಷಣದಿಂದ ಮತ್ತೆ ಪಿಯುಸಿ ಓದಲೇ ಬೇಕು. ಮತ್ತೆ ಪರೀಕ್ಷೆ ಬರೆಯಲೇ ಬೇಕು. ಬದುಕು ಒಡ್ಡುವ ಪ್ರತೀ ಪರೀಕ್ಷೆಯನ್ನೂ ಹೊಸದಾಗಿಯೇ ಎದುರಿಸಬೇಕು. ಸಾಧನೆಗಳು ಆತ್ಮವಿಶ್ವಾಸ ಹೆಚ್ಚಿಸಬಹುದೇ ವಿನಾ, ಒಂದು ಪರೀಕ್ಷೆಯ ಅಂಕ ಇನ್ನೊಂದು ಪರೀಕ್ಷೆಯಲ್ಲಿ ನೆರವಿಗೆ ಬರುವುದಿಲ್ಲ.

    ‘ಜಗತ್ತಿನಲ್ಲಿ ಯಾವುದು ಸಾರ್ವಕಾಲಿಕ ವಿಸ್ಮಯ?’ ಎಂದು ಯಕ್ಷ ಕೇಳುವ ಪ್ರಶ್ನೆಗೆ ಯುಧಿಷ್ಠಿರ ಹೇಳುವುದೂ ಅದನ್ನೇ. ‘ಪ್ರತಿನಿತ್ಯ ಎಷ್ಟೊಂದು ಜೀವಿಗಳು ಕಣ್ಣೆದುರೇ ಸಾಯುವುದನ್ನು ಕಾಣುತ್ತಿದ್ದರೂ, ಮನುಷ್ಯ ಅಮರತ್ವದ ಕನಸು ಕಾಣುತ್ತಾನೆ. ಇದಕ್ಕಿಂತ ದೊಡ್ಡ ವಿಸ್ಮಯ ಬೇರಾವುದಿಲ್ಲ’ ಎಂಬ ಧರ್ಮರಾಯನ ಉತ್ತರ ಜಗತ್ತಿನ ಸತ್ಯ. ಅನ್ಯರ ಮರಣದ ಸಂದರ್ಭದಲ್ಲಿ ವೇದಾಂತಿಯಾಗುವ ಮನುಷ್ಯ ತನ್ನ ಮರಣಕ್ಕೆ ಯಾವತ್ತೂ ಸಿದ್ಧನಾಗಿರುವುದಿಲ್ಲ. ಅಸ್ತಿತ್ವಕ್ಕಾಗಿ, ಆತ್ಮತೃಪ್ತಿಗಾಗಿ, ಪರಿವಾರದ ಸಂತೃಪ್ತಿಗಾಗಿ, ಗಳಿಸಿದ್ದು ಯಾವತ್ತೂ ಕರಗಬಾರದು ಎಂಬ ಪೈಪೋಟಿಗೆ ಬಿದ್ದು ಹೋರಾಡುತ್ತಾನೆ. ಕೊನೆಗೆ ಎಲ್ಲವನ್ನೂ ಬಿಟ್ಟು ಬಂದ ಸ್ಥಿತಿಯಲ್ಲೇ ಏಕಾಂಗಿಯಾಗಿ ಹೊರಡುತ್ತಾನೆ.

    ಇದೆಲ್ಲವೂ ಬದುಕಿನ ವಾಸ್ತವ ಎಂಬ ಅರಿವಿದ್ದೂ, ಪಾರಮಾರ್ಥಿಕ ಸತ್ಯಗಳೆಲ್ಲ ತನಗಲ್ಲ ಪರರಿಗೆ ಎಂಬ ವಿಸ್ಮರಣೆಯಿಂದ ಸಮಾಜ ಬದುಕುತ್ತದೆ. ಆಸೆ-ಅಸೂಯೆ-ಸ್ವಾರ್ಥ-ಪೈಪೋಟಿಯ ಸಮಾಜ ಸದಾಕಾಲ ಜೀವಂತವಾಗಿರುವುದು ಹೀಗೆ. ಸಂತೃಪ್ತಿ ಎನ್ನುವುದು ಪ್ರಪಂಚದ ಆಶಯ. ಆದರೆ, ಅತೃಪ್ತಿ ಜಗತ್ತಿನ ಸ್ರೋತವನ್ನು ನಿರಂತರವಾಗಿ ಹಿಡಿದಿಟ್ಟಿರುವ ಶಕ್ತಿ. ಜನ ಆಕಾಂಕ್ಷೆಯಲ್ಲಿ ಬದುಕುತ್ತಾರೆ. ಇಷ್ಟೇ ಸಾಕು… ಇನ್ನೇನೂ ಬೇಡ ಎನ್ನುವ ತೃಪ್ತಿ ಸಿಹಿಭಕ್ಷ್ಯ ತಿಂದಾಗ ಮೂಡುವ ಆ ಕ್ಷಣದ ವೈರಾಗ್ಯವೇ ಹೊರತು ಶಾಶ್ವತವಲ್ಲ. ಅಧಿಕಾರ, ಪದವಿ, ಗೌರವ, ಸಂಪತ್ತು, ಸೌಲಭ್ಯ ಎಲ್ಲವೂ ಇನ್ನೂ ಬೇಕುಬೇಕೆಂಬ ಹಸಿವಿನಲ್ಲಿ ಮನುಷ್ಯ ಸಮಾಜ ಬದುಕುತ್ತದೆ. ಇಂಥ ಹೋರಾಟದಲ್ಲಿ ಗಟ್ಟಿಗರು ಉಳಿಯುತ್ತಾರೆ, ಉಳಿದವರು ಅಳಿಯುತ್ತಾರೆ. ಚಕ್ರ ನಿರಂತರವಾಗಿ ತಿರುಗುತ್ತಿರುತ್ತದೆ.

    ಪ್ರತಿಯೊಬ್ಬ ವ್ಯಕ್ತಿಯಲ್ಲೂ ಓರ್ವ ನಾಯಕನಿದ್ದೇ ಇರುತ್ತಾನೆ. ನಾಯಕತ್ವ ಗುಣ ಯಾವತ್ತೂ ಕೆಲವರಿಗೆ ಸೀಮಿತವಲ್ಲ. ಆದರೆ, ಅನೇಕರು ಹಿಂಬಾಲಿಸುವುದೇ ಜೀವನ ಅಂದುಕೊಂಡಿರುತ್ತಾರೆ. ಶಾಲಾ ತರಗತಿಯೊಳಗಿನ ಸಣ್ಣ ಚಟುವಟಿಕೆಯಿಂದ, ರಸ್ತೆಯಲ್ಲಿ ಕಾಣುವ ಅಪಘಾತದಿಂದ, ಕುಟುಂಬದಲ್ಲಿ ಜರುಗುವ ಘಟನೆಯಿಂದ, ಸಾರ್ವಜನಿಕ ಸ್ಥಳಗಳ ವಿದ್ಯಮಾನಗಳಿಂದ, ವೃತ್ತಿರಂಗದ ಸವಾಲುಗಳಿಂದ, ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಯೊಬ್ಬನಿಗೂ ತನ್ನೊಳಗಿನ ವಿಶ್ವಾಸವನ್ನು, ಮುಂದಾಳತ್ವದ ಛಾತಿಯನ್ನು, ಸವಾಲು ನಿಭಾಯಿಸುವ ಸ್ವಭಾವವನ್ನು ಪ್ರದರ್ಶಿಸುವ ಅವಕಾಶ ಇದ್ದೇ ಇರುತ್ತದೆ. ಆದರೆ, ಆತ್ಮವಿಶ್ವಾಸ ಉಳ್ಳವನು ಮುಂದಿರುತ್ತಾನೆ. ಉಳಿದವರು ನಮಗ್ಯಾಕೆ ಎಂದು ಕೈಚೆಲ್ಲುತ್ತಾರೆ.

    ಮುಂದಾಳತ್ವ ಎನ್ನುವುದು ಸಂದರ್ಭಕ್ಕೆ, ಸವಾಲಿಗೆ ತತ್​ಕ್ಷಣದ ಪ್ರತಿಸ್ಪಂದನೆಯಿಂದ ರೂಪುಗೊಳ್ಳುವಂಥದ್ದೇ ಹೊರತು, ವಯಸ್ಸಿನ ಹಿರಿತನದಿಂದ, ಅನುಭವದಿಂದ ಬರುವಂಥದ್ದಲ್ಲ. ಸಾಮಾಜಿಕ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಅಗತ್ಯಗಳು, ಅವಶ್ಯಕತೆಗಳು, ಅಪೇಕ್ಷೆಗಳು, ಅನಿವಾರ್ಯಗಳು ಬದಲಾದಂತೆ ಬದಲಾವಣೆಗಳು ಜರುಗುತ್ತಿರುತ್ತವೆ. ಅಲ್ಲಿ ಯಾರು ಸರಿ, ಯಾರು ತಪು್ಪ ಎಂದು ವಿಮಶಿಸುವುದು ಕಷ್ಟ. ಸೂಕ್ತವೂ ಅಲ್ಲ.

    ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾಗಿದೆ. ತಂಡಕ್ಕೆ ಐದು ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್ ಶರ್ಮ ಅಧಿಕಾರ ಕಳೆದುಕೊಂಡು ಸಾಮಾನ್ಯ ಆಟಗಾರನಂತೆ ಆಡುತ್ತಿದ್ದಾರೆ. ರೋಹಿತ್ ಮಾರ್ಗದರ್ಶನದಲ್ಲೇ ಪ್ರವರ್ಧಮಾನಕ್ಕೆ ಬಂದ ಹಾರ್ದಿಕ್ ಪಾಂಡ್ಯ ಹೊಸ ನಾಯಕನಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ನಾಯಕನಾಗಿರುವ ರೋಹಿತ್ ಐಪಿಎಲ್​ನಲ್ಲೀಗ ನಾಯಕನಲ್ಲ.

    ಬದುಕೆನ್ನುವುದು ಇಂಥ ವಿಚಿತ್ರ ಸನ್ನಿವೇಶಗಳನ್ನು ಹುಟ್ಟುಹಾಕುತ್ತದೆ. ಕೆಲವೊಮ್ಮೆ ಸಾಂರ್ದಭಿಕ ಒತ್ತಡಗಳು ಸಮರ್ಥರನ್ನೂ ಬದಿಗೆ ಸರಿಸಿಬಿಡುತ್ತವೆ. ರೋಹಿತ್ ಭಾರತ ತಂಡದ ಯಶಸ್ವಿ ನಾಯಕ. ಐಪಿಎಲ್​ನಲ್ಲಿ ಸರ್ವಶ್ರೇಷ್ಠ ನಾಯಕ. ಅವರ ನಾಯಕತ್ವ ಗುಣ, ಕೌಶಲದ ಬಗ್ಗೆ ಎಲ್ಲೂ ಅಪಸ್ವರವಿಲ್ಲ. ತಂಡ ಮುನ್ನಡೆಸುವಲ್ಲಿ, ಸವಾಲಿಗೆ ಎದೆಗೊಡುವಲ್ಲಿ, ತಂಡದ ಸದಸ್ಯರನ್ನು ವಿಶ್ವಾಸದಿಂದ ಜತೆಗೊಯ್ಯುವ ವಿಚಾರದಲ್ಲಿ ಅವರು ಸಿದ್ಧಹಸ್ತರು. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅದೃಷ್ಟ ಬದಲಾಗಿದ್ದೇ ರೋಹಿತ್ ನಾಯಕರಾದ ಮೇಲೆ. ಆದರೂ, ಕಾಪೋರೇಟ್ ಸಂಸ್ಕೃತಿಯಲ್ಲಿ ಹತ್ತು ಯಶಸ್ಸಿಗಿಂತ ಒಂದು ವೈಫಲ್ಯವೇ ದೊಡ್ಡದಾಗಿ ಬಿಡುತ್ತದೆ. ಐದು ಬಾರಿ ಪ್ರಶಸ್ತಿ ಗೆಲ್ಲಿಸಿದ್ದರೂ, 2023ರ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ತಳ ಸೇರಿದ್ದು ಬದಲಾವಣೆಗೆ ಪ್ರೇರೇಪಣೆ ನೀಡಿತು. ಗುಜರಾತ್ ತಂಡದಿಂದ ಹಾರ್ದಿಕ್ ಪಾಂಡ್ಯರನ್ನು ಮರಳಿ ಸೆಳೆದಾಗ ಅವರು ನಾಯಕತ್ವದ ಪ್ರತಿಫಲ ಬಯಸಿದ್ದರು. ಟೈಟನ್ಸ್ ತಂಡಕ್ಕೆ ಒಮ್ಮೆ ಪ್ರಶಸ್ತಿ, ಮರುವರ್ಷ 2ನೇ ಸ್ಥಾನ ಕೊಡಿಸಿದ್ದ ಹಾರ್ದಿಕ್ ನಾಯಕತ್ವ ಬಯಸಿದ್ದರಲ್ಲಿ ತಪ್ಪಿರಲಿಲ್ಲ. ಮುಂಬೈ ಮ್ಯಾನೇಜ್​ವೆುಂಟ್ ಕೂಡ ಹೊಸ ನಾಯಕತ್ವ ತರುವ ಕಠಿಣ ನಿರ್ಧಾರ ತೆಗೆದುಕೊಂಡಾಗಿತ್ತು.

    ನಾಯಕರಾಗಿ ಹಾರ್ದಿಕ್​ಗಿಂತ ರೋಹಿತ್ ನೂರುಪಾಲು ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂಎಸ್ ಧೋನಿಯಂತೆ ರೋಹಿತ್ ಕೂಡ ಚಾಣಾಕ್ಷ. ಅವರ ಆಟದ ಗ್ರಹಿಕೆ ಅತ್ಯಂತ ಸೂಕ್ಷ್ಮ ಹಾಗೂ ನಿಖರ. ತಂಡದ ಸದಸ್ಯರ ಅತ್ಯುತ್ತಮ ಸಾಮರ್ಥ್ಯವನ್ನು ಎಲ್ಲಿ, ಯಾವಾಗ, ಹೇಗೆ ಬಳಕೆ ಮಾಡಬೇಕೆಂಬುದು ಅವರಿಗೆ ಕರಗತ. ಪಂದ್ಯ ಸನ್ನಿವೇಶಕ್ಕೆ ತಕ್ಕಂತೆ ತಂತ್ರಗಳನ್ನು, ವ್ಯೂಹಗಳನ್ನು ಬದಲಿಸಿ ಸೋಲುವಂಥ ಪಂದ್ಯಗಳನ್ನು ನಾಯಕತ್ವದಿಂದಲೇ ರೋಹಿತ್ ಗೆಲ್ಲಿಸಿರುವ ಉದಾಹರಣೆ ಸಾಕಷ್ಟು. ಅಂಥ ಚಾಕಚಕ್ಯತೆಯಲ್ಲಿ ಪಾಂಡ್ಯ ಇನ್ನೂ ಪಳಗಬೇಕಿದೆ. ಸದ್ಯ ಪಾಂಡ್ಯ ಎಂದರೆ ಬೆಂಕಿಚೆಂಡು. ಮೇಲ್ನೋಟದ ಅಬ್ಬರ, ಉಡಾಫೆ, ಧಾಷ್ಟರ್್ಯ, ಧೈರ್ಯ ಅವರ ಯುಎಸ್​ಪಿಗಳು. ಆದರೆ, ನಿರ್ಣಾಯಕ ಸನ್ನಿವೇಶದಲ್ಲಿ ಭಂಡಧೈರ್ಯ ಯಾವಾಗಲೂ ನೆರವಿಗೆ ಬರುವುದಿಲ್ಲ. ಚದುರಂಗದ ಚಾಣಾಕ್ಷನಡೆ ಅಲ್ಲಿ ಅಗತ್ಯವಿರುತ್ತದೆ. ಗುಜರಾತ್ ಟೈಟನ್ಸ್ ವಿರುದ್ಧ ಮೊದಲ ಲೀಗ್ ಪಂದ್ಯ ಮುಂಬೈ ಗೆಲ್ಲಲೇಬಹುದಾಗಿದ್ದ ಪಂದ್ಯವಾಗಿತ್ತದು. ಆದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದುಕೊಂಡು ಪಾಂಡ್ಯ ಸೋತರು. ಬಹುಶಃ ಗಾಯದಿಂದ ಮರಳಿರುವ ಅವರಿಗೆ ತಮ್ಮ ಬ್ಯಾಟಿಂಗ್ ಮೇಲೆಯೇ ವಿಶ್ವಾಸ ಮರಳಿದಂತಿಲ್ಲ. ಸನ್​ರೈಸರ್ಸ್ ವಿರುದ್ಧದ ಪಂದ್ಯದಲ್ಲೂ ಅಷ್ಟೇ. ತಿಲಕ್ ವರ್ಮ ಕ್ರೀಸಿನಲ್ಲಿರುವವರೆಗೂ ಮುಂಬೈ 278 ರನ್ ಗುರಿಯ ರೇಸಿನಲ್ಲಿತ್ತು. ಆದರೆ, ಅವರು ಔಟಾದ ಬಳಿಕ ಎರಡು-ಮೂರು ಓವರ್​ಗಳು ಪಂದ್ಯದ ದಿಕ್ಕು ಬದಲಿಸಿದವು. ಪಾಂಡ್ಯ ಟಿ20 ಕ್ರೀಸಿನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದರು. ಅವರ ನೆರವು ಸಿಗದೆ ಟಿಮ್ ಡೇವಿಡ್ ಒಬ್ಬರಿಂದ ಅಸಂಭವ ಗೆಲುವು ಕಸಿದುಕೊಳ್ಳುವುದು ಸಾಧ್ಯವಾಗಲಿಲ್ಲ. ಇನ್ನು ಸನ್​ರೈಸರ್ಸ್ ಬ್ಯಾಟಿಂಗ್ ಮಾಡುವಾಗ ಪಾಂಡ್ಯ ಬದಲು ರೋಹಿತ್ ನಾಯಕರಾಗಿದ್ದಿದ್ದರೆ ಸ್ಕೋರ್​ಬೋರ್ಡ್​ನಲ್ಲಿ 277 ರನ್ ದಾಖಲಾಗುತ್ತಿತ್ತೇ ಎನ್ನುವುದೂ ಚರ್ಚಾರ್ಹ. ಏಕೆಂದರೆ, ಟ್ರಾವಿಡ್ ಹೆಡ್, ಅಭಿಷೇಕ್ ಶರ್ಮ, ಹೆನ್ರಿಚ್ ಕ್ಲಾಸೆನ್ ರನ್​ಗಳ ರುದ್ರತಾಂಡವ ನಡೆಸಿದ್ದಾಗ ಪಾಂಡ್ಯ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳಿರಲಿಲ್ಲ.

    ನಾಯಕತ್ವದ ವಿಚಾರ ಬಂದರೆ, ದೇಶವಿರಲಿ, ಕ್ರಿಕೆಟ್ ತಂಡವಿರಲಿ… ಯೋಗ್ಯನಾದವನು ನಾಯಕನಾದಾಗಲೇ ಶ್ರೇಯಸ್ಸು. ತಂಡದ ಮ್ಯಾನೇಜ್​ವೆುಂಟ್ ಇರಲಿ, ಮತದಾರರಿರಲಿ ಆಕರ್ಷಣೆ, ಪ್ರಲೋಭನೆಗಳಿಗೆ ಸಿಲುಕದೆ ಯೋಗ್ಯರನ್ನು ಆರಿಸಬೇಕು. ರೋಹಿತ್​ರಂಥ ಸಮರ್ಥ ನಾಯಕನ ಬದಲಿಗೆ ಪ್ರತಿಷ್ಠಾಪನೆಗೊಂಡಿರುವ ಪಾಂಡ್ಯ, ರೋಹಿತ್​ರನ್ನು ಮೀರಿಸುವ ನಾಯಕತ್ವ ಗುಣ ಪ್ರದರ್ಶಿಸಿದರೆ ಟೀಕೆಗಳು ತಣ್ಣಗಾಗುತ್ತವೆ. ಇದು ಆಟದ ಒಂದು ಭಾಗವಾದರೆ, ಪಾಂಡ್ಯ ನಾಯಕತ್ವದಡಿಯಲ್ಲಿ ರೋಹಿತ್ ಆಡುವುದು ಅವಮಾನವೇನೂ ಅಲ್ಲ. ‘ಮುನ್ನಡೆಸುವುದು ಒಂದು ಜವಾಬ್ದಾರಿ, ಗೆಲುವಿಗಾಗಿ ಆಡುವುದು ಕರ್ತವ್ಯ’ ಎಂದು ಭಾವಿಸಿದಾಗ ತಂಡಕ್ಕೆ ನಾಯಕ ಹೌದೋ, ಅಲ್ಲವೋ ಎನ್ನುವ ವಿಚಾರ ಕಸಿವಿಸಿಯನ್ನೇನೂ ಉಂಟು ಮಾಡುವುದಿಲ್ಲ. ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ ಫೈನಲ್​ನಲ್ಲಿ ಮುಗ್ಗರಿಸಿತ್ತು. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಗೆಲುವಿನತ್ತ ಮುನ್ನಡೆಯಬೇಕಾದರೆ, ರೋಹಿತ್ ಐಪಿಎಲ್ ನಾಯಕತ್ವದ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದೇ ಒಳ್ಳೆಯದು. ಹಾಗೆ ನೋಡಿದರೆ, ಒಮ್ಮೆ ನಾಯಕರಾದವರು ತಮಗಿಂತ ಕಿರಿಯರ ನಾಯಕತ್ವದಲ್ಲಿ ಆಡುವುದು ಹೊಸವಿಚಾರವೂ ಅಲ್ಲ. ಸಚಿನ್ ತೆಂಡುಲ್ಕರ್ ಹಲವು ಬಾರಿ ನಾಯಕತ್ವದ ಅವಕಾಶ ತಿರಸ್ಕರಿಸಿ ಕಿರಿಯರ ನೇತೃತ್ವದಲ್ಲೇ ದೀರ್ಘಕಾಲ ಆಡಿದರು. ಗಂಗೂಲಿ, ದ್ರಾವಿಡ್, ಕುಂಬ್ಳೆ, ಧೋನಿ ಈಗ ವಿರಾಟ್ ಎಲ್ಲರೂ ತಾನೂ ನಾಯಕನಾಗಿದ್ದೆ ಎಂಬ ಹಮ್ಮಿಲ್ಲದೆ ತಮಗಿಂತ ಕಿರಿಯರ ನಾಯಕತ್ವದಲ್ಲೂ ಆಡಿದವರು. ಒಂದೊಮ್ಮೆ ಕಪಿಲ್ ದೇವ್, ಸುನಿಲ್ ಗಾವಸ್ಕರ್, ದಿಲೀಪ್ ವೆಂಗ್ಸರ್ಕಾರ್, ರವಿಶಾಸ್ತ್ರಿ, ಕೆ. ಶ್ರೀಕಾಂತ್ ಇವರೆಲ್ಲರೂ ಸ್ವತಃ ನಾಯಕತ್ವ ಬಿಟ್ಟುಕೊಟ್ಟ ಬಳಿಕವೂ ಒಬ್ಬರು ಇನ್ನೊಬ್ಬರ ನಾಯಕತ್ವದಲ್ಲಿ ಯಾವುದೇ ಮುಜುಗರವಿಲ್ಲದೆ ದೀರ್ಘಕಾಲ ಆಡಿದ್ದರು. ಹಾಗಾಗಿ ನೈಜ ಕ್ರಿಕೆಟಿಗನಿಗೆ ನಾಯಕತ್ವ ಎನ್ನುವುದು ಸಿಕ್ಕಿದಾಗ ಗೌರವವೇ ಹೊರತು ಕೈತಪ್ಪಿದಾಗ ಹತಾಶೆಯೇನೂ ಆಗಬಾರದು. ಕ್ಷಣಮಾತ್ರದಲ್ಲಿ ಉಕ್ಕಿನ ಸೇತುವೆಗಳೇ ಸಮುದ್ರದ ಪಾಲಾಗಿ ಹೇಳಹೆಸರಿಲ್ಲದಂತಾಗುವ ಕಾಲ ಇದು. ಮಾನವ ದೇಹವೇ ಮೂಳೆ ಮಾಂಸದ ತಡಿಕೆಯಾಗಿರುವಾಗ ಯಾವ ಅಧಿಕಾರ, ಯಾವ ಪದವಿ ಶಾಶ್ವತವಾಗುಳಿಯಲು ಸಾಧ್ಯ. ಈ ಸತ್ಯ ಅರಿತವರು ನಿರ್ಲಿಪ್ತರಾಗಿ ಬದುಕು ಬಂದಂತೆ ಸ್ವೀಕರಿಸಲು ಸಾಧ್ಯ. ಇದನ್ನು ಅಭಿಮಾನಿಗಳು ಕೂಡ ಅರ್ಥ ಮಾಡಿಕೊಳ್ಳಬೇಕು. ಪಾಂಡ್ಯ ವರ್ತನೆ ಮೇಲ್ನೋಟಕ್ಕೆ ದುರಹಂಕಾರದಂತೆ ತೋರಬಹುದು. ಆದರೆ, ಅವರು ಬೆಳೆದುಬಂದಿರುವುದೇ ಹಾಗೆ. ರೋಹಿತ್ ನಾಯಕತ್ವಕ್ಕೂ, ಪಾಂಡ್ಯ ನಾಯಕತ್ವಕ್ಕೂ ಹೋಲಿಕೆ ಬೇಡ. ಕೊನೆಗೆ ಇಬ್ಬರೂ ಭಾರತ ತಂಡದ ಪರವೇ ಆಡುವವರು. ಹಾಗಾಗಿ ಯಾರೊಬ್ಬರ ದೂಷಣೆ, ಅವಮಾನವೂ ಸರಿಯಲ್ಲ. ಮೊದಲೇ ಹೇಳಿದಂತೆ ಕ್ರೀಡೆಯ ವಿಚಾರದಲ್ಲಿ ಮರೆವು ಕೆಲವೊಮ್ಮೆ ವರವೂ ಹೌದು. ವರ್ಷಪೂರ್ತಿ ಕ್ರಿಕೆಟ್ ನಡೆಯುವ, ದಿನಕ್ಕೊಂದು ದಾಖಲೆ ನಿರ್ವಣವಾಗುವ ಈ ಕಾಲದಲ್ಲಿ ಯಾವ ಘಟನೆಗಳೂ ಶಾಶ್ವತವಾಗಿ ನೆನಪಿನಲ್ಲುಳಿಯುವುದಿಲ್ಲ. ಹೊಸದೇನೋ ಸಂಭವಿಸಿದಾಗ ಹಳತು ಮರೆತು ಹೋಗುತ್ತದೆ. ಅಷ್ಟಕ್ಕೂ ನಾಳೆ ಏನಿದೆ ಎಂದು ಕಂಡವರಿಲ್ಲ. ಹಾಗಾಗಿ ಇಂದಿನ ಸಮಾಧಾನವನ್ನು ಹಾಳು ಮಾಡಿಕೊಳ್ಳದೆ ಐಪಿಎಲ್ ಆಟ ಆಸ್ವಾದಿಸುವುದರಲ್ಲೇ ಅರ್ಥವಿದೆ.

    (ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts