More

    ನಿಜಗುಣ ಶಿವಯೋಗಿಗಳ ಪರಮಾರ್ಥ ಸಂದೇಶ

    ನಿಜಗುಣ ಶಿವಯೋಗಿಗಳ ಪರಮಾರ್ಥ ಸಂದೇಶಭಾರತ ಜನನಿಯ ಸಂಜಾತೆಯಾದ ಕರ್ನಾಟಕ ಮಾತೆಯ ಭುವನೇಶ್ವರಿಯ ನಾಡಿನಲ್ಲಿ ಬಹುಜನ ಮೇಧಾವಿಗಳು, ಸಂತರು, ಹರಿದಾಸರು, ಸತ್ಪುರುಷರು, ಶಿವಶರಣರು, ಜ್ಞಾನಿಗಳು, ಧಾರ್ವಿುಕ ಪುರುಷರು ಜೀವನ್ಮುಕ್ತರೂ ಆಗಿ ಹೋಗಿರುವರು. ಅನುಭಾವಿಗಳೂ, ಕಾಯಕಯೋಗಿಗಳು, ಭಕ್ತಿಯೋಗಿಗಳು ಆಗಿರುವರು. ಅಂತಹ ಪುಣ್ಯಪುರುಷರಲ್ಲಿ ಶ್ರೀಮನ್ನಿಜಗಣ ಶಿವಯೋಗಿಗಳ ಸ್ಥಾನ ಅತಿ ಉಚ್ಚತಮವಾದುದು. ಅವರು ದೊರೆಗಳಾಗಿ ಆಳುತ್ತಿದ್ದರೆಂದು. ವೈರಾಗ್ಯ ಹುಟ್ಟಿ ರಾಜ್ಯವನ್ನು ತೊರೆದು ಶಿವಯೋಗಿಗಳಾಗಿ ಹಲವು ಯೋಗ ಮೂಲ, ವೈರಾಗ್ಯಮೂಲ ವೀರಶೈವ ತತ್ತ್ವದರ್ಶನದ ಕನ್ನಡ ಗ್ರಂಥಗಳನ್ನು ಬರೆದರೆಂದೂ ಪ್ರತೀತಿ. ಅವರು ರಚಿಸಿದ ಗ್ರಂಥಗಳಲ್ಲಿ ಈಗ ಉಪಲಬ್ಧವಿರುವ ಗ್ರಂಥಗಳು-ಕೈವಲ್ಯಪದ್ಧತಿ, ಪರಮಾನುಭವ ಬೋಧೆ, ಪರಮಾರ್ಥಗೀತ, ಪರಮಾರ್ಥಪ್ರಕಾಶಿಕೆ. ಅನುಭವಸಾರ, ವಿವೇಕಚಿಂತಾಮಣಿ, ಇವರಿಂದಲೇ ರಚಿತವಾಗಿರುವವೆಂದು ಪ್ರತೀತಿಯಿರುವ ದರ್ಶನಸಾರ, ಆತ್ಮತರ್ಕ ಚಿಂತಾಮಣಿ ಎಂಬ ಎರಡು ಗ್ರಂಥಗಳು ಉಪಲಬ್ಧವಿಲ್ಲ. ಇವರ ಕೃತಿಗಳಲ್ಲಿ ಅಧ್ಯಾತ್ಮ ವಿದ್ಯೆಯು ನೇರವಾಗಿ ಅಷ್ಟಾಂಗಯೋಗ, ಹಠ-ಲಯ-ನಾದ ಯೋಗ ಕುರಿತು ಗದ್ಯ-ಪದ್ಯವಾಗಿ ನಿರೂಪಿತವಾಗಿದೆ. ಕನ್ನಡ ವೇದಾಂತ ಸಾಹಿತ್ಯದಲ್ಲಿ ಇವರ ಕೃತಿಗಳು ವಿಶೇಷ ಮಾನ್ಯತೆಯನ್ನು ಪಡೆದಿವೆಯೆಂದರೆ ಅತಿಶಯೋಕ್ತಿಯಾಗದು. ಈ ಗ್ರಂಥಗಳಿಂದ ಇವರ ಬಗೆಗಿನ ಐತಿಹಾಸಿಕ ವಿಷಯ ಏನೂ ಗೊತ್ತಾಗುವುದಿಲ್ಲ. ಇವರ ಇಷ್ಟದೇವತೆ ‘ಶಂಭುಲಿಂಗ‘ ಎಂದು ತಿಳಿದುಬರುತ್ತದೆ.

    ಪರಮಾರ್ಥ ಪ್ರಕಾಶಿಕೆ: ಇದು ಯೋಗ ಶಾಸ್ತ್ರವನ್ನು ಪ್ರತಿನಿದಿಸುವ ಗ್ರಂಥ. ಇದು ನಿಜಗುಣರಿಗೆ ‘ಶಿವಯೋಗಿ’ ಗಳೆಂದು ಅಭಿಧಾನವನ್ನು ತಂದುಕೊಡುವ ಸಾಧನವಾಗಿದೆ. ಇದರಲ್ಲಿ ಐದು ಪರಿಚ್ಛೇದಗಳಿವೆ. ಇದು ಗದ್ಯರೂಪದಲ್ಲಿದೆ. ಯೋಗದ ಅಂಗಗಳಾದ ಅಷ್ಟಾಂಗಗಳನ್ನು ಪ್ರಭೇದಗಳಾದ ಮಂತ್ರ, ಲಯ, ಹಠಯೋಗವನ್ನು ವಿವರಿಸಿ ಇವೆಲ್ಲಕ್ಕೂ ಶ್ರೇಷ್ಠವಾದ ಶಿವಯೋಗವನ್ನು ಪ್ರತಿಪಾದಿಸಿರುವನು. ಇದು ಶ್ರೀ ಚೆನ್ನ ಸದಾಶಿವ ಯೋಗೀಂದ್ರರು ಸಂಸ್ಕೃತದಲ್ಲಿ ಬರೆದ ‘ಶಿವಯೋಗ ಪ್ರದೀಪಿಕೆ’ ಯ ಅನುವಾದ. ನಿಜಗುಣ ಶಿವಯೋಗಿಗಳ ಕಾಲವನ್ನು ಆರ್. ನರಸಿಂಹಾಚಾರ್ಯರು ಕ್ರಿ.ಶ.1500 ಎಂದು ಊಹಿಸಿದ್ದಾರೆ. ‘ಶಿವಯೋಗಿ ಪ್ರದೀಪಿಕೆ’ಯ ಕೊನೆಯಲ್ಲಿ ಶಿವಾಗಮಗಳ ಮತ್ತು ‘ಸಿದ್ಧಸಿದ್ಧಾಂತ ಪದ್ಧತಿ’ಯು ಗೋರಖನಾಥನಿಂದ ರಚಿತವಾದ ಸಂಸ್ಕೃತ ಗ್ರಂಥಗಳಲ್ಲಿ ಪರಿಗಣಿತವಾಗಿದೆ. ಗೋರಖನಾಥನು ಪ್ರಸಿದ್ಧ ಸಿದ್ಧಯೋಗಿ. ಅವನು ಸಂಸ್ಕೃತ ಮತ್ತು ಹಿಂದಿಯಲ್ಲಿ ಯೋಗಪರವಾದ ಮತ್ತು ಉಪದೇಶ ಪೂರ್ಣವಾದ ಅನೇಕ ಗದ್ಯ-ಪದ್ಯ ಗ್ರಂಥಗಳನ್ನು ರಚಿಸಿದ್ದಾನೆ. ‘ಸಿದ್ಧಸಿದ್ಧಾಂತ ಪದ್ಧತಿ’. ಅಮರೌಘ ಪ್ರಬೋಧ’ ‘ಯೋಗ ಮಾರ್ತಾಂಡ’ ಇವು ಮೂರು ಗೋರಖನಾಥನಿಂದ ರಚಿತವಾದ ಸಂಸ್ಕೃತ ಗ್ರಂಥಗಳು. ಇವುಗಳಲ್ಲಿ ಕೆಲವು ಕಾಶ್ಮೀರ ಶೈವ ಗ್ರಂಥಮಾಲೆಯಲ್ಲಿ ಪ್ರಕಟವಾಗಿದೆ. ಡಾ.ಮಲ್ಲಿಕಾ ಅವರು ಈ ಮೂರು ಕೃತಿಗಳನ್ನು ಒಂದೇ ಸಂಪುಟದಲ್ಲಿ ಆಂಗ್ಲ ಭಾಷೆಯಲ್ಲಿ ಸಂಪಾದಿಸಿದ್ದಾರೆ.

    ಗೋರಕ್ಷನಾಥನೆಂಬ ಹೆಸರಿನ ಶರಣನು ಪಟ್ಟದಕಲ್ಲಿನಲ್ಲಿದ್ದನೆಂದು 220 ‘ಅಮರ ಗಣಂ’ಗಳ ಚರಿತೆಯಲ್ಲಿ ಬರುತ್ತದೆ. ಆದರೆ ‘ಸಿದ್ಧ ಸಿದ್ಧಾಂತ ಪದ್ಧತಿ’ಯನ್ನು ಬರೆದ ಗೋರಖನಾಥನು ಉತ್ತರದವನು, ಅವನು ಕ್ರಿ.ಶ.1075 ರಲ್ಲಿದ್ದನೆಂದು ಡಾ.ಮಲ್ಲಿಕಾ ಅಭಿಪ್ರಾಯಪಡುತ್ತಾರೆ. ಜ್ಞಾನೇಶ್ವರನೂ ಗೋರಕ್ಷನಾಥನ ಶಿಷ್ಯಪರಂಪರೆಯವನು. ಕಾಮರೂಪ ದೇಶದಲ್ಲಿ ಮಾಯೆಗೊಳಗಾಗಿದ್ದ ತನ್ನ ಗುರುವಾದ ಮತ್ಸೇಂದ್ರನಾಥರನ್ನು ಹುಡುಕುತ್ತ ಹೊರಟಾಗ ಗೋರಖನು ಕರ್ನಾಟಕಕ್ಕೂ ಬಂದಿರಬೇಕು, ಆಗ ರೇವಣಸಿದ್ಧ ಮತ್ತು ಪ್ರಭುದೇವರನ್ನು ಸಂಧಿಸಿ ಅವರಿಂದ ಶಿವಯೋಗದ ಪ್ರಭಾವವನ್ನು ಕಂಡುಕೊಂಡ ವಿಷಯ ರೇವಣಸಿದ್ಧರ ಸಾಂಗತ್ಯ ಮತ್ತು ರಗಳೆ, ‘ಪ್ರಭುಲಿಂಗ ಲೀಲೆ’ಯಿಂದಲೂ ತಿಳಿದುಬರುತ್ತದೆ. ‘ಹಠಯೋಗ ಪ್ರದೀಪಿಕ’ದಲ್ಲಿರುವ ಆದಿನಾಥ ಮೊದಲಾದ ಯೋಗಿಗಳ ಗಣನೆಯಲ್ಲಿ ಗೋರಕ್ಷನಾದ ಪ್ರಭುದೇವರೂ ಬರುತ್ತಾರೆ. ಗೋರಕ್ಷನಾಥನು ಹಿಂದಿಗೆ ಮೂಲವಾದ ಅಪಭ್ರಂಶ ಪ್ರಾಕೃತದಲ್ಲಿ ‘ಗೋರಖಬಾನೀ’ ಎಂಬ ಗ್ರಂಥವನ್ನು ಬರೆದಿದ್ದಾನೆ. ಅದರಲ್ಲಿರುವ ಪದ್ಯಗಳಲ್ಲಿ ಹಠಯೋಗವನ್ನು ಆಂತರಿಕ ಯೋಗಕ್ಕೆ ಸಮನ್ವಯಿಸಿ ಹೇಳುವಾಗ ಪ್ರಭುಕಹೈ ಎಂಬ ಮುದ್ರಿಕೆ ಬರುತ್ತದೆ. ಪ್ರಭುದೇವರು ಗೋರಕ್ಷನ ಹಠಯೋಗದ ಗರ್ವವನ್ನು ಕಳೆದ ಅಭ್ಯಂತರವಾದ ಶಿವಯೋಗ ಮಹತಿಯನ್ನು ಅರುಹಿದ ವಿಷಯ ಚಾರಿತ್ರಿಕವಾಗಿದೆ. ಅಂತೆಯೇ ಗೋರಕ್ಷನು ವೀರಶೈವ ಸಿದ್ಧಾಂತದ ಕೆಲ ತತ್ವಗಳನ್ನು ತಿಳಿದುಕೊಂಡಿರಬೇಕು. ‘ಸಿದ್ಧಸಿದ್ಧಾಂತ ಪದ್ಧತಿ’ಯಲ್ಲಿ ಎಲ್ಲ ದರ್ಶನಗಳ ಸ್ವರೂಪವನ್ನು ಹೇಳುತ್ತಾನೆ. ಅಂತೆಯೇ ಚೆನ್ನ ಸದಾಶಿವ ಯೋಗಿಯು ‘ಸಿದ್ಧ ಸಿದ್ಧಾಂತ ಪದ್ಧತಿ’ಯ ಬಗೆಗೆ ಬಹಳ ಆದರವನ್ನು ತೋರಿದಂತಿದೆ. ಅವರ ‘ಶಿವಯೋಗ ಪ್ರದೀಪಿಕೆ’ಯಲ್ಲಿ ಶಿವಾರ್ಚನಾದಿ ಶಿವಯೋಗವನ್ನು ಹೇಳಲು ಶಿವಾಗಮಗಳನ್ನು ಹಠಯೋಗವನ್ನು ವಿವರಿಸಲು ಗೋರಖನಾಥ ‘ಸಿದ್ಧಸಿದ್ಧಾಂತ ಪದ್ಧತಿ’ಯನ್ನು ಆಧಾರ ಗ್ರಂಥವನ್ನಾಗಿ ಇಟ್ಟುಕೊಂಡಿದ್ದಾನೆ. ಅಲ್ಲದೆ ಅದರಲ್ಲಿರುವ ಸಹಜಯೋಗವು ಶಿವಯೋಗವನ್ನು ಹೋಲುತ್ತದೆ. ಅಲ್ಲಿನ ಅವಧೂತನ ಲಕ್ಷಣವು ಶಿವಯೋಗಿ ಅಥವಾ ಜಂಗಮದ ಸ್ವರೂಪಕ್ಕೆ ಸರಿದೂಗುತ್ತದೆ. ಇದು ನಿಜಗುಣ ಶಿವಯೋಗಿ ಕೃತ ‘ಪಾರಮಾರ್ಥ ಪ್ರಕಾಶಿಕೆ’ ಎಂಬ ಕನ್ನಡ ಗದ್ಯಕ್ಕೆ ಆಧಾರವಾಗಿದೆ.

    ಉದ್ಘಾಟನೆಯಾದ 11 ದಿನದಲ್ಲಿ ಬಾಲರಾಮನ ದರ್ಶನ ಪಡೆದ 25 ಲಕ್ಷಕ್ಕೂ ಅಧಿಕ ಭಕ್ತರು; ಸಂಗ್ರಹವಾದ ಕಾಣಿಕೆ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts