More

    ಡಯಾಲಿಸಿಸ್ ರೋಗಿಗಳ ಪರದಾಟ, ಆಸ್ಪತ್ರೆಯಿಂದ ಹೊರಹಾಕಿದ ಸಿಬ್ಬಂದಿ, ವ್ಯವಸ್ಥೆ ಕಲ್ಪಿಸಿದ ಡಿಎಚ್‌ಒ

    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ಕರೊನಾ ವಿರುದ್ಧ ದೇಶವೇ ಹೋರಾಡುತ್ತಿದ್ದರೆ, ಇತ್ತ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ. ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದ ಸಿಬ್ಬಂದಿ ಶುಕ್ರವಾರ ಏಕಾಏಕಿ ಘಟಕಕ್ಕೆ ಬೀಗ ಜಡಿದು ರೋಗಿಗಳನ್ನು ಹೊರಹಾಕಿದ್ದಾರೆ.

    ರೋಗಿಗಳು ಪ್ರಶ್ನಿಸಿದರೆ, ಇಲ್ಲಿ ಯಾರೂ ನನ್ನ ಜತೆ ಕೆಲಸ ಮಾಡುತ್ತಿಲ್ಲ. ನಾನೊಬ್ಬನೇ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ನಿಮ್ಮ ಬಟ್ಟೆ-ಬರೆ ತೆಗೆದುಕೊಂಡು ಚಿಕ್ಕಬಳ್ಳಾಪುರಕ್ಕೆ ಹೋಗಿ, ಅಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಿ ಎಂದು ಬಿಆರ್‌ಎಸ್ ಸಿಬ್ಬಂದಿ ಉತ್ತರಿಸಿದ್ದಾರೆ ಎಂದು ಮಹಿಳಾ ರೋಗಿಯೊಬ್ಬರು ಅಳಲು ತೋಡಿಕೊಂಡರು.

    ಟೆಕ್ನಿಷಿಯನ್ ವಿರುದ್ಧ ಕ್ರಮ: ರೋಗಿಗಳ ಸಮಸ್ಯೆ ಬಗ್ಗೆ ವಿಜಯವಾಣಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರಮೇಶ್ ಅವರನ್ನು ವಿಚಾರಿಸುತ್ತಿದ್ದಂತೆ ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿದ ಡಿಎಚ್‌ಒ ಡಯಾಲಿಸಿಸ್ ಘಟಕಕ್ಕೆ ಬೀಗ ಜಡಿದಿದ್ದ ಟೆಕ್ನಿಷಿಯನ್ ವಿರುದ್ಧ ಕ್ರಮ ತೆಗೆದುಕೊಂಡರು. ದೇವನಹಳ್ಳಿಯಿಂದ ಸಿಬ್ಬಂದಿ ಕರೆಸಿ ವ್ಯವಸ್ಥೆ ಕಲ್ಪಿಸಿದರು. ಔಷಧಗಳ ಬಗ್ಗೆಯೂ ಗಮನಹರಿಸುವಂತೆ ಮುಖ್ಯ ವೈದ್ಯಾಧಿಕಾರಿ ರಮೇಶ್‌ಗೆ ಸೂಚನೆ ನೀಡಿದರು.

    ಬಿಆರ್‌ಎಸ್ ಸಿಬ್ಬಂದಿ ಎಡವಟ್ಟಿನಿಂದ ರೋಗಿಗಳು ಪರದಾಡುವಂತಾಗಿದೆ. ದೇವನಹಳ್ಳಿಯಿಂದ ಸಿಬ್ಬಂದಿ ಕರೆಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉದ್ಧಟತನ ಮೆರೆದ ಟೆಕ್ನಿಷಿಯನ್‌ನನ್ನು ಕೆಲಸದಿಂದ ತೆಗೆಯಲು ಕ್ರಮ ತೆಗೆದುಕೊಳ್ಳುತ್ತೇನೆ.
    ಡಾ.ಮಂಜುಳಾ ದೇವಿ, ಜಿಲ್ಲಾ ವೈದ್ಯಾಧಿಕಾರಿ

    ವಾರಕ್ಕೆ 3 ಬಾರಿ ಡಯಾಲಿಸಿಸ್ ಮಾಡಿಸುತ್ತಿದ್ದೆವು, ಕರೊನಾ ಬಂದ ಮೇಲೆ ವಾರಕ್ಕೆ 2 ಬಾರಿ ಮಾಡ್ತಿದ್ದಾರೆ. ಈಗ ಏಕಾಏಕಿ ಡಯಾಲಿಸಿಸ್ ಮಾಡದೆಯೇ ಬೇರೆಡೆ ಹೋಗಿ ಎಂದಿದ್ದಾರೆ. ಶೀಘ್ರವೇ ಡಯಾಲಿಸಿಸ್ ಮಾಡದಿದ್ದರೆ ಉಸಿರಾಟ ಸಮಸ್ಯೆಯಿಂದ ಇಲ್ಲೇ ಸಾವನ್ನಪ್ಪಿದರೂ ನಮ್ಮನ್ನ ಕೇಳುವವರು ಇರಲಿಲ್ಲ.
    ಹೆಸರು ಹೆಳಲು ಇಚ್ಚಿಸದ ರೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts