More

    ಕಾಗದರಹಿತ ತಾಲೂಕು ಕಚೇರಿ, ಕಂದಾಯ ಇಲಾಖೆ ಡಿಜಿಟಲೀಕರಣ, ಸಮಯ ಉಳಿತಾಯ, ಮಧ್ಯವರ್ತಿಗಳಿಗೆ ಬ್ರೇಕ್

    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ತಾಲೂಕು ಕಚೇರಿ ಸಂಪೂರ್ಣ ಡಿಜಿಟಲೀಕರಣಕ್ಕೆ ತೆರೆದುಕೊಳ್ಳಲಿದೆ. ಕಚೇರಿಯ ಪ್ರತಿ ಸೇವೆಯೂ ಕಾಗದ ರಹಿತವಾಗಲಿದೆ. ಸಾರ್ವಜನಿಕರ ಸಮಯ ಉಳಿತಾಯ, ಅಲೆದಾಟ ತಪ್ಪಿಸಲು ಕ್ರಮಕ್ಕೆ ಮುಂದಾಗಿರುವ ತಹಸೀಲ್ದಾರ್ ಟಿ.ಎಸ್. ಶಿವರಾಜು, ಕಚೇರಿಯಡಿ ಬರುವ ಎಲ್ಲ ಸೇವೆಗಳನ್ನು ತ್ವರಿತವಾಗಿ ತಲುಪಿಸಲು ಇ-ಆಫೀಸ್ ಜಾರಿಗೊಳಿಸಲು ಮುಂದಾಗಿದ್ದಾರೆ.

    ರಾಜ್ಯದ ಸರ್ಕಾರಿ ಕಚೇರಿಗಳು 2020 ಜ.1ರಿಂದ ಕಾಗದರಹಿತ ಆಡಳಿತಕ್ಕೆ ನವೀಕರಣಗೊಳ್ಳಬೇಕಾಗಿದೆ, ಈಗಾಗಲೇ ಕೆಲವು ಕಚೇರಿಗಳು ಇ-ಆಫೀಸ್‌ಗೆ ಬದಲಾಗುವ ಹಂತದಲ್ಲಿವೆ. ಈ ಮಧ್ಯೆ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಕಾಗದ ರಹಿತ ವ್ಯವಹಾರಕ್ಕೆ ಮುಂದಾಗಿದ್ದು ಸಂಪೂರ್ಣ ಇ-ಆಫೀಸ್ ಮೂಲಕ ಡಿಜಿಟಲೀಕರಣಗೊಳ್ಳುತ್ತಿದೆ.

    ಇ-ಆಫೀಸ್ ಏಕೆ ?: ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಾಗದರಹಿತ ವ್ಯವಹಾರ ನಡೆಸಲು ರಾಜ್ಯ ಸರ್ಕಾರ ಇ- ಆಫೀಸ್ ಎಂಬ ವೆಬ್ ಅಪ್ಲಿಕೇಷನ್ ಪರಿಚಯಿಸಿದೆ. ಇದರಿಂದ ಕಾಗದರಹಿತ ವ್ಯವಹಾರದ ಜತೆ ಪಾರದರ್ಶಕ, ಜನಸ್ನೇಹಿಯಾಗಲು ಸಹಕಾರಿಯಾಗಿದೆ, ಇ-ಆಫೀಸ್‌ನಲ್ಲಿ ಸಲ್ಲಿಸಿದ ಅರ್ಜಿ ಮಾಹಿತಿ ಶಿರಸ್ತೇದಾರ್, ತಹಸೀಲ್ದಾರ್‌ಗೆ ನೇರವಾಗಿ ತಿಳಿಯಲಿದೆ.

    ಅರ್ಜಿ ವಿಲೇಗೆ ಕಾಯುವಂತಿಲ್ಲ: ಇ- ಆಫೀಸ್ ಜಾರಿಗೂ ಮುನ್ನ ಟಪಾಲಿಗೆ ಬಂದ ಅರ್ಜಿ ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕ, ಕೇಸ್ ಸಿಬ್ಬಂದಿ, ಶಿರಸ್ತೇದಾರ್ ಮೂಲಕ ತಹಸೀಲ್ದಾರ್ ಸಹಿಗೆ ನೀಡಬೇಕಾಗಿತ್ತು, ಇದರ ಮಧ್ಯೆ ಮಧ್ಯವರ್ತಿಗಳ ಕಾಟದಿಂದ ಅರ್ಜಿ ಸಲ್ಲಿಸಿ ತಿಂಗಳಾದರೂ ಅರ್ಜಿ ವಿಲೇವಾರಿಯಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ನೇರ ತಹಸೀಲ್ದಾರ್‌ಗೆ ಮಾಹಿತಿ ರವಾನೆಯಾಗುವುದರಿಂದ ಅರ್ಜಿ ವಿಲೇ ವೇಗ ಪಡೆದುಕೊಳ್ಳುತ್ತದೆ.

    ಕಡತಗಳಿಗೆ ತಂತ್ರಾಂಶ: ತಾಲೂಕು ಕಚೇರಿಯಲ್ಲಿನ ಕಡತಗಳನ್ನು ಸ್ಕ್ಯಾನ್ ಮಾಡಿ ಇ-ಆಫೀಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಕಾಗದ ಕಡತಗಳನ್ನು ಹುಡುಕುವ ಬದಲು ನೇರವಾಗಿ ತಂತ್ರಾಂಶದ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಕೆಲವೇ ದಿನಗಳಲ್ಲಿ ಐದಾರು ವರ್ಷದ ಕಾಗದದ ಕಡತಗಳನ್ನು ಸ್ಕ್ಯಾನ್ ಮಾಡುವ ಮೂಲಕ ಇ-ಆಫೀಸ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ.

    ಮಧ್ಯವರ್ತಿಗಳಿಗೆ ಬ್ರೇಕ್ !: ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಬ್ರೇಕ್ ಬೀಳಲಿದೆ. ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಮಧ್ಯವರ್ತಿಗಳು ಹಣ ಲೂಟಿ ಮಾಡಿತ್ತಿದ್ದರು. ಇ-ಆಫೀಸ್‌ನಿಂದ ಈ ಸಮಸ್ಯೆ ದೂರವಾಗಲಿದೆ ಎನ್ನಲಾಗಿದೆ.

    ತಾಲೂಕು ಕಚೇರಿಯು ಇ-ಆಫೀಸ್ ವ್ಯಾಪ್ತಿಗೆ ಬಂದಿದ್ದು, ಟಪಾಲಿಗೆ ಬಂದ ಅರ್ಜಿ ತಕ್ಷಣ ತಿಳಿಯುತ್ತದೆ, ಕಡತ, ಅರ್ಜಿ ವಿಲೇವಾರಿ ವಿಳಂಬ ತಪ್ಪಿಸಲು ಈ ಸೌಲಭ್ಯ ಉತ್ತಮವಾಗಿದೆ, ಇ-ಆಫೀಸ್ ಜಾರಿಯಾಗಿ ಸಂಪೂರ್ಣ ಡಿಜಿಟಲೀಕರಣಗೊಂಡು ಪಾರದರ್ಶಕವಾಗಿ ಕೆಲಸ ಮಾಡಲು ಸಹಾಯವಾಗಲಿದೆ.

    ಟಿ.ಎಸ್ ಶಿವರಾಜು, ತಹಸೀಲ್ದಾರ್, ದೊಡ್ಡಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts