More

  ಪುಣ್ಯ ಗಳಿಸಲು ಕಾಶಿ, ದುಡ್ಡು ಉಳಿಸಲು ಚೌ-ಕಾಶಿ!

  ನನ್ನ ಕೆಲವು ಗೆಳೆಯರು ಮತ್ತು ಬಂಧುಗಳು ಕನ್ನಡದ ಪದಗಳ ಅರ್ಥದ ಬಗ್ಗೆ ಸಂದೇಹ ಬಂದಾಗ ನನಗೆ ಫೋನ್ ಮಾಡುತ್ತಾರೆ. ನಾನೊಬ್ಬ ಕನ್ನಡ ಸಾಹಿತಿಯಾದ್ದರಿಂದ ಪದಕೋಶ ಮತ್ತು ವ್ಯಾಕರಣವನ್ನು ಅರೆದು ಕುಡಿದಿರುತ್ತೇನೆ ಎಂಬುದು ಅವರ ಭಾವನೆ. ನಿಜ ಹೇಳಬೇಕೆಂದರೆ ನಾನು ಕನ್ನಡವನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿದ್ದು ಪಿಯುಸಿವರೆಗೆ ಮಾತ್ರ. ಕವಿಗೆ ಪ್ರಮಾಣ ಕರ್ಣವೇ ಹೊರತು ವ್ಯಾಕರ್ಣವಲ್ಲ ಎಂದು ರಾಷ್ಟ್ರಕವಿ ಕುವೆಂಪು ಅವರೇ ಹೇಳಿರುವುದರಿಂದ ನಾನು ಕವನ ಬರೆಯುವಾಗ ವ್ಯಾಕರ್ಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೂ ಯಾರಾದರೂ ಕೇಳಿದರೆ ಉತ್ತರಿಸಲು ಬೇಕಾಗುತ್ತದೆ ಎಂದು ನಿಘಂಟು ಮತ್ತು ವ್ಯಾಕರಣದ ಪುಸ್ತಕಗಳನ್ನು ಇಟ್ಟುಕೊಂಡಿದ್ದೇನೆ. ಮೊನ್ನೆ ಒಬ್ಬರು ಚೌಕಾಸಿ ಮತ್ತು ಚೌಕಾಶಿ ಇವುಗಳಲ್ಲಿ ಯಾವುದು ಸರಿ ಎಂದು ಕೇಳಿದರು. ನಿಘಂಟು ತೆರೆದು ನೋಡಿದೆ. ಅಲ್ಲಿ ಎರಡೂ ಪದಗಳಿಗೆ ವ್ಯಾಪಾರದಲ್ಲಿ ಕೊಸರು ಕೇಳುವುದು ಅಂದರೆ ಬಾರ್​ಗೈನ್ ಮಾಡುವುದು ಎಂಬ ಅರ್ಥ ಕೊಟ್ಟಿದ್ದಾರೆ. ಹೀಗಾಗಿ ಚೌಕಾಸಿ ಮತ್ತು ಚೌಕಾಶಿ ಎರಡೂ ಸರಿ ಎಂದು ಗೆಳೆಯರಿಗೆ ತಿಳಿಸಿದೆ. ಅವರು ಯಾಕೆ? ಏನು? ಎಂದು ಚೌಕಾಸಿ ಮಾಡದೆ ಒಪ್ಪಿಕೊಂಡರು.

  ಗೆಳೆಯರ ಪ್ರಶ್ನೆಯೇ ನೆಪವಾಗಿ ಚೌಕಾಸಿಯ ಬಗ್ಗೆ ಯೋಚಿಸತೊಡಗಿದೆ. ಚೌಕಾಸಿ ಅನ್ನುವುದಕ್ಕಿಂತ ಚೌಕಾಶಿ ಅನ್ನುವುದೇ ಹೆಚ್ಚು ಸರಿ ಅನ್ನಿಸಿತು. ಏಕೆಂದರೆ ಚೌಕಾಶಿಯಲ್ಲಿ ‘ಶಿ’ ಇದೆ. ಖಜಛಿ ಅಂದರೆ ಅವಳು! ಗಂಡಸರಿಗಿಂತ ಹೆಂಗಸರೇ ಹೆಚ್ಚು ಬಾರ್​ಗೈನ್ ಮಾಡುವುದರಿಂದ ಅದು ಚೌಕಾಶಿ. ವ್ಯಾಪಾರದಲ್ಲಿ ಚೌಕಾಶಿ ಮಾಡುವುದಕ್ಕೆ ಚರ್ಚೆ ಅಂತಲೂ ಹೇಳುತ್ತಾರೆ. ಚರ್ಚೆ ಅಥವಾ ಚೌಕಾಶಿ ಮಾಡುವುದೂ ಒಂದು ಕಲೆ. ಅದನ್ನು ನನಗೆ ಕಲಿಸಿದವಳು ನನ್ನ ಹೆಂಡತಿ. ಕಲಿಸಿದವಳು ಅನ್ನುವುದಕ್ಕಿಂತ ಕಲಿಸುತ್ತಿರುವವಳು ಅನ್ನುವುದೇ ಸೂಕ್ತ. ಏಕೆಂದರೆ ಚೌಕಾಸಿ ಮಾಡುವ ಕಲೆ ನನಗೆ ಇನ್ನೂ ಸಂಪೂರ್ಣವಾಗಿ ಸಿದ್ಧಿಸಿಲ್ಲ. ಉದಾಹರಣೆಗೆ ತರಕಾರಿ ಅಂಗಡಿಯವ ಒಂದು ಲಿಂಬೆ ಹಣ್ಣಿಗೆ ಐದು ರೂಪಾಯಿ ಅಂದಾಗ ಚೌಕಾಶಿ ಮಾಡಬೇಕು ಎಂದು ಹೆಂಡತಿ ಹೇಳಿದ್ದು ನೆನಪಾಗಿ ಹತ್ತು ರೂಪಾಯಿಗೆ ಮೂರು ಕೊಡ್ತೀರಾ? ಎಂದು ಕೇಳುತ್ತೇನೆ. ಆತ ‘‘ಇಲ್ಲ ಸಾರ್. ಮೂರು ಕೊಟ್ರೆ ನನಗೆ ಅಸಲು ಸಿಗಲ್ಲ’’ ಎಂದರೆ ಸರಿ ಎಂದು ಎರಡೇ ತರುತ್ತೇನೆ. ನನ್ನ ಹೆಂಡತಿಯಾದರೆ ತರಕಾರಿಯವನ ಹತ್ತಿರ ಹತ್ತು ನಿಮಿಷ ಚರ್ಚೆ ಮಾಡಿ ಮೂರು ಲಿಂಬೆ ಹಣ್ಣು ತಂದೇ ತರುತ್ತಾಳೆ.

  ಕೆಲವು ದಶಕಗಳ ಹಿಂದೆ ತರಕಾರಿ, ಹಣ್ಣು, ಮೀನು ಮಾರುವವರು ಮತ್ತು ಫುಟ್​ಪಾತ್ ವ್ಯಾಪಾರಿಗಳ ಹತ್ತಿರ ಮಾತ್ರ ಚೌಕಾಶಿಗೆ ಅವಕಾಶ ಇತ್ತು. ಅಂಗಡಿಗಳಲ್ಲಿ ‘ಫಿಕ್ಸೆಡ್ ಪ್ರೈಸ್, ನೋ ಬಾರ್​ಗೈನ್’ ಎಂಬ ಫಲಕ ತೂಗು ಹಾಕಿರುತ್ತಿದ್ದರು. ನಂತರ ಹಬ್ಬಗಳ ಸಂದರ್ಭದಲ್ಲಿ ಬಟ್ಟೆಗಳು ಹಾಗೂ ಗೃಹೋಪಯೋಗಿ ವಸ್ತುಗಳ ಮೇಲೆ ಡಿಸ್ಕೌಂಟ್ ನೀಡುವ ಸಂಪ್ರದಾಯ ಶುರುವಾಯಿತು. ಈ ಡಿಸ್ಕೌಂಟ್ ಅಥವಾ ದರ ಕಡಿತ ಅನ್ನುವುದು ಚೌಕಾಶಿ ವ್ಯಾಪಾರದ ಇನ್ನೊಂದು ರೂಪ. ಏಕೆಂದರೆ ಅಲ್ಲಿ ಗ್ರಾಹಕರು ನೂರು ರೂಪಾಯಿ ಮೂಲ ಬೆಲೆಯ ವಸ್ತುವನ್ನು ಎಂಬತ್ತು ರೂಪಾಯಿಗೆ ಕೊಡ್ತೀರಾ ಎಂದು ಕೇಳುವ ಮೊದಲೇ ಅಂಗಡಿಯವರು ಮೂಲ ಬೆಲೆ ರೂ.100, ರಿಯಾಯಿತಿ ಬೆಲೆ ರೂ. 80 ಎಂದು ಚೀಟಿ ಅಂಟಿಸಿರುತ್ತಾರೆ. ಅಲ್ಲಿಯೂ ಕೆಲವರು 80 ರೂಪಾಯಿ ಎಂದರೆ 20% ಡಿಸ್ಕೌಂಟ್ ಆಯ್ತು. ಪಕ್ಕದ ಅಂಗಡೀಲಿ 25% ಡಿಸ್ಕೌಂಟ್ ಇದೆ ಎಂದು ಚೌಕಾಶಿ ಮಾಡುವುದನ್ನು ನಾನು ನೋಡಿದ್ದೇನೆ.

  ದರಕಡಿತದ ಬಗ್ಗೆ ನಾನು ಬರೆದ ಒಂದು ಹನಿಗವನ:

  ಹಬ್ಬದ ಸಲುವಾಗಿ 

  ಎಲ್ಲಾ ಅಂಗಡಿಗಳಲ್ಲಿ

  ಭಾರೀ ದರಕಡಿತ

  ಬಾರುಗಳಲ್ಲಿ ಯಥಾಪ್ರಕಾರ

  ಭಾರೀ ದರ – ಕುಡಿತ!

  ಆಗ ಬಾರ್​ಗಳಲ್ಲಿ ಬಾರ್​ಗೈನ್ ಮಾಡುವ ಅವಕಾಶ ಇರಲಿಲ್ಲ. ಈಗ ಅಲ್ಲೂ ಎರಡು ಲಾರ್ಜ್ ತೆಗೆದುಕೊಂಡರೆ ಒಂದು ಲಾರ್ಜ್ ಉಚಿತ ಎಂಬಂಥ ಚೌಕಾಶಿ ವ್ಯಾಪಾರ ಶುರುವಾಗಿದೆ.

  ವ್ಯಾಪಾರ ಮಾಡುವಾಗ ಚೌಕಾಶಿ ಮಾಡುವುದಕ್ಕೆ ಬಡತನ ಕಾರಣ ಅನ್ನುವಂತಿಲ್ಲ. ಬೆಂಝå್ ಕಾರಿನಲ್ಲಿ ತರಕಾರಿ ಮಾರ್ಕೆಟ್ಟಿಗೆ ಬರುವ ಮಹಿಳೆಯರೂ ಚರ್ಚೆ ಮಾಡುವುದನ್ನು ನಾನು ಗಮನಿಸಿದ್ದೇನೆ. ಇನ್ನು ಕೆಲವರು ಚೌಕಾಶಿ ಮಾಡುವುದಕ್ಕೆ ಕಾರಣ ಜಿಪುಣತನ. ಅಂಥವರು ಇಪ್ಪತ್ತು ರೂಪಾಯಿಯ ತೆಂಗಿನಕಾಯಿ ಹದಿನೆಂಟಕ್ಕೆ ಸಿಗುತ್ತದೆ ಎಂದು ಗೊತ್ತಾದರೆ ಎರಡು ರೂಪಾಯಿ ಉಳಿಸಲು ನಾಲ್ಕು ಕಿಲೋಮೀಟರ್ ನಡೆಯುವುದಕ್ಕೂ ಸಿದ್ಧರಿರುತ್ತಾರೆ. ತಮಗೆ ಬೇಕಾದ ವಸ್ತುಗಳು ಎಲ್ಲಿ ಅತೀ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಹುಡುಕುತ್ತಾ ಬೀದಿ ಬೀದಿ ಅಲೆಯುವುದಕ್ಕೆ ಅವರಿಗೆ ಬೇಸರ ಅನ್ನಿಸುವುದಿಲ್ಲ. ಆಸ್ತಿಕರು ಪುಣ್ಯ ಬರುತ್ತದೆ ಎಂದು ಕಾಶೀ ಯಾತ್ರೆ ಮಾಡಿದರೆ, ಜುಗ್ಗರು ದುಡ್ಡು ಉಳಿಸಲು ಎಷ್ಟು ದೂರ ಬೇಕಾದರೂ ಚೌ-ಕಾಶಿ ಯಾತ್ರೆ ಮಾಡುತ್ತಾರೆ. ಅವರ ದೃಷ್ಟಿಯಲ್ಲಿ ಅದು ಜಿಪುಣತನವಲ್ಲ; ಉಳಿತಾಯ ಮನೋಭಾವ. ಕೆಲವರು ತಾವು ಚೌಕಾಶಿ ಮಾಡಿ ಕಡಿಮೆ ಬೆಲೆಗೆ ಖರೀದಿಸಿದ ವಸ್ತುಗಳನ್ನು ಮನೆಗೆ ಬಂದವರಿಗೆಲ್ಲ ಹೆಮ್ಮೆಯಿಂದ ತೋರಿಸುತ್ತಾ ನೀವು ಇದಕ್ಕೆ ಎಷ್ಟು ಕೊಟ್ಟಿರಿ? ಎಂದು ಕೇಳುತ್ತಾರೆ. ನಾವು ಜಾಸ್ತಿ ಕೊಟ್ಟಿದ್ದರೆ ಛೇ ಎಂದು ನಮ್ಮನ್ನು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾರೆ. ಅಂಥವರು ಚೌಕಾಶಿ ಮಾಡುವ ಉದ್ದೇಶ ತಮ್ಮ ಜಾಣತನದ ಪ್ರದರ್ಶನ.

  ಇನ್ನು ಕೆಲವರಿಗೆ ಚೌಕಾಶಿ ಮಾಡುವುದು ಒಂದು ಬಿಡಲಾಗದ ಚಟ. ವ್ಯಾಪಾರಿಗಳು ಬೆಲೆ ಎಷ್ಟು ಕಡಿಮೆ ಮಾಡಿದರೂ ಅವರಿಗೆ ತೃಪ್ತಿಯಾಗುವುದಿಲ್ಲ. ಇನ್ನೂ ಹತ್ತು ರೂಪಾಯಿ ಬಿಡಿ ಅನ್ನುತ್ತಾರೆ. ಮಹಿಳೆಯೊಬ್ಬಳು ಹದಿನೈದು ನಿಮಿಷ ಚರ್ಚೆ ಮಾಡಿ 50% ದರ ಕಡಿತ ಮಾಡಿದರೂ ಇನ್ನೂ ಸ್ವಲ್ಪ ಕಡಿಮೆ ಮಾಡಿ ಅಂದಾಗ ಅಂಗಡಿಯವ ತಾಳ್ಮೆ ಕಳೆದು ಕೊಂಡ. ಸಿಟ್ಟಲ್ಲಿ ‘‘ಚರ್ಚೆ ಮಾಡಿದ್ದು ಸಾಕು. ನೀವು ದುಡ್ಡೇ ಕೊಡುವುದು ಬೇಡ. ಪುಕ್ಕಟೆ ತೆಗೆದುಕೊಂಡು ಹೋಗಿ’’ ಅಂದ. ಆಗ ಮಹಿಳೆ ಹಾಗಾದರೆ ಎರಡು ಕೊಡುತ್ತೀರಾ? ಅಂತ ಕೇಳಿದಳಂತೆ!

  ಚೌಕಾಶಿ ಮಾಡುವುದು ಅಪರಾಧವಲ್ಲ. ಗಾಡಿಗಳಲ್ಲಿ ಹೂವು, ತರಕಾರಿ, ಹಣ್ಣು ಮಾರುವವರ ಹತ್ತಿರ ಚರ್ಚೆ ಮಾಡಲೇ ಬೇಕು. ಏಕೆಂದರೆ ಅವರು ತಮ್ಮ ಬಳಿ ಬರುವ ಗ್ರಾಹಕರು ಚೌಕಾಶಿ ಮಾಡುತ್ತಾರೆ ಎಂದು ಭಾವಿಸಿ ಹೆಚ್ಚು ಬೆಲೆಯನ್ನು ಹೇಳಿರುತ್ತಾರೆ. ಚರ್ಚೆ ಮಾಡದೆ ಇದ್ದರೆ ನಮಗೆ ನಷ್ಟವಾಗುತ್ತದೆ. ಮೊನ್ನೆ ಸಂಕ್ರಾಂತಿ ಹಬ್ಬದ ದಿನ ಹೂವು ಮಾರುತ್ತಿದ್ದ ಮಹಿಳೆಯ ಹತ್ತಿರ ಚೌಕಾಶಿ ಮಾಡದೆ ಅವಳು ಹೇಳಿದಷ್ಟು ಹಣ ಕೊಟ್ಟು ಹೂ ಖರೀದಿಸಿದೆ. ಆಕೆ ನನ್ನತ್ತ ಕನಿಕರದ ನೋಟ ಬೀರಿ ಒಂದು ಮೊಳ ಕಾಕಡಾ ಮತ್ತು ಒಂದಿಷ್ಟು ಬಿಡಿ ಹೂ ಹೆಚ್ಚುವರಿಯಾಗಿ ಕೊಟ್ಟಳು. ಜನಸಾಮಾನ್ಯರು ಚರ್ಚೆ ಮಾಡಿದರೆ ಅದು ಚೌಕಾಶಿ. ದೊಡ್ಡ ದೊಡ್ಡ ಸಂಸ್ಥೆಗಳ ಹಿರಿಯ ಅಧಿಕಾರಿಗಳು, ಸರ್ಕಾರಿ ಇಲಾಖೆಗಳಲ್ಲಿ ಐಎಎಸ್, ಕೆಎಎಸ್ ಆಫೀಸರುಗಳು ಚರ್ಚೆ ಮಾಡಿದರೆ ಅದು ನಿಗೋಶಿಯೇಷನ್! ನಾವು ವ್ಯಾಪಾರಿಗಳ ಹತ್ತಿರ ಬೆಲೆ ಕಡಿಮೆ ಮಾಡಿ ಅಂತ ಚೌಕಾಶಿ ಮಾಡುತ್ತೇವೆ. ಭ್ರಷ್ಟ ಅಧಿಕಾರಿಗಳು ವ್ಯಾಪಾರಿಗಳ ಹತ್ತಿರ ಕೊಟೇಶನ್​ನಲ್ಲಿ ಬೆಲೆ ಜಾಸ್ತಿ ಮಾಡಿ ಅಂತ ಚೌಕಾಶಿ ಮಾಡುತ್ತಾರೆ. ಬೆಲೆ ಹೆಚ್ಚಾದಷ್ಟೂ ಅವರಿಗೆ ಸಿಗುವ ಕಮಿಷನ್ ಜಾಸ್ತಿಯಾಗುತ್ತದೆ.

  ಚೌಕಾಶಿ ಮನೋಭಾವ ವಸ್ತುಗಳ ಖರೀದಿಗೆ ಮಾತ್ರ ಸೀಮಿತವಲ್ಲ. ಮದುವೆಯ ವಯಸ್ಸಿಗೆ ಬಂದ ಹುಡುಗ ಹುಡುಗಿಯರು ತಮ್ಮ ಜೀವನ ಸಂಗಾತಿಯನ್ನು ಆಯ್ದು ಕೊಳ್ಳುವಾಗ ತುಂಬಾ ಚೌಕಾಶಿ ಮಾಡುತ್ತಾರೆ. ಅತ್ಯಂತ ಸುಂದರಿ ಯಾದ ಹೆಣ್ಣೇ ಬೇಕೆಂದು ಹಠ ಹಿಡಿಯುವ ಹುಡುಗರಿಗೆ ಚೌಕಾಶಿ ಮಾಡುವುದರಲ್ಲೆ ಮದುವೆಯ ವಯಸ್ಸು ಕಳೆದು ಹೋಗಿ ಕೊನೆಗೆ ಅವಿವಾಹಿತರಾಗಿ ಉಳಿಯುವ ದುರ್ಗತಿ ಬರುವುದುಂಟು. ಇನ್ನು ಕೆಲವರಿಗೆ ಏನಾಗುತ್ತದೆ ಗೊತ್ತಾ?

  ಚೆಲುವೆಯೇ ಬೇಕೆಂದು

  ಮದುವೆ ಮಾಡಿಕೊಂಡ

  ಚಂದದ ಚಿತ್ರಾಳನ್ನ

  ಪರಿಣಾಮವಾಗಿ ಅವನ

  ವೈವಾಹಿಕ ಜೀವನ

  ಚಿಂದಿ ಚಿತ್ರಾನ್ನ!

  ಒಂದು ಕಾಲದಲ್ಲಿ ಮದುವೆಯ ಮಾತುಕತೆಯ ವೇಳೆ ಗಂಡಿನ ಕಡೆಯವರು ವರದಕ್ಷಿಣೆ, ವರೋಪಚಾರದ ಬಗ್ಗೆ ತುಂಬಾ ಚೌಕಾಶಿ ಮಾಡುತ್ತಿದ್ದರು. ಈಗ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಹುಡುಗಿಯರಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ವಿವಾಹದ ವಿಷಯದಲ್ಲಿ ಹುಡುಗಿಯರು ಚೌಕಾಶಿ ಮಾಡುವುದು ಜಾಸ್ತಿ. ಇದರ ಪರಿಣಾಮವಾಗಿ ಅನೇಕ ಹೆಣ್ಣುಮಕ್ಕಳು ಮುವ್ವತ್ತಾದರೂ ಮದುವೆಯಾಗದೆ ಉಳಿದುಕೊಳ್ಳುತ್ತಾರೆ. ಕೊನೆಗೆ ಚೌಕಾಶಿ ಮಾಡದೆ ಯಾರಾದರೂ ಸರಿ ಅಂದರೂ ಗಂಡು ಸಿಗುವುದಿಲ್ಲ. ಕೆಲವರು ಊಟ ತಿಂಡಿ ಉಡುಗೆ ತೊಡುಗೆಯ ವಿಚಾರದಲ್ಲಿ ತುಂಬಾ ಚೌಕಾಶಿ ಮಾಡುತ್ತಾರೆ. ಕವಿ ಮಿತ್ರ ಬಿಆರೆಲ್​ಗೆ ಕಾಫಿ ತುಂಬಾ ಸ್ಟ್ರಾಂಗ್ ಮತ್ತು ಬಿಸಿಯಾಗಿರಬೇಕು. ಇಲ್ಲದಿದ್ದರೆ ಆತ ಮುಲಾಜಿಲ್ಲದೆ ಅದನ್ನು ವಾಪಾಸು ಕಳಿಸುತ್ತಾನೆ. ನನಗೆ ಚಹಾ ಎಂದು ಕಾಫಿ ಕೊಟ್ಟರೂ ಗೊತ್ತಾಗುವುದಿಲ್ಲ. ಈಚೆಗೆ ಮುಂಬೈಗೆ ಹೋಗಿದ್ದಾಗ ನಾನು ಮತ್ತು ವಿಮರ್ಶಕ ನರಹಳ್ಳಿಯವರು ಒಂದೇ ರೂಮಿನಲ್ಲಿದ್ದೆವು. ವಸತಿ ಗೃಹದ ನೌಕರರ ಹತ್ತಿರ ಚೌಕಾಶಿ ಮಾಡಲು ನಾವಿಬ್ಬರೂ ದಾಕ್ಷಿಣ್ಯ ಮಾಡಿಕೊಂಡದ್ದರಿಂದ ತಣ್ಣೀರಿನಲ್ಲೆ ಸ್ನಾನ ಮಾಡಬೇಕಾಯಿತು. ಹಿರಿಯ ಕವಿ ನಿಸಾರ್ ಅಹಮದ್ ಅವರ ಕವನದ ಸಾಲುಗಳನ್ನು ಕಾವ್ಯ ಪ್ರಿಯರೆಲ್ಲರೂ ಕೋಟ್ ಮಾಡುತ್ತಾರೆ. ಅವರು ಕೋಟ್ ಧರಿಸದೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ನಿಸಾರ್ ಅವರನ್ನು ಕನ್ನಡದ ನೋಟೆಡ್ ಮತ್ತು ಕೋಟೆಡ್ ಪೋಯೆಟ್ ಅನ್ನಬಹುದು. ಸಮಾರಂಭಕ್ಕೆ ಕರೆಯಲು ಬಂದವರ ಹತ್ತಿರ ನಿಸಾರ್ ಅವರು ಅಲ್ಲಿ ನನ್ನ ಕೋಟಿಗೆ ಇಸ್ತ್ರಿ ಹಾಕುವ ವ್ಯವಸ್ಥೆ ಇದೆಯೇ ಎಂದು ವಿಚಾರಿಸುತ್ತಾರೆ. ಸಾಹಿತಿಗಳ ಮತ್ತು ಕಲಾವಿದರ ಖ್ಯಾತಿ ಹೆಚ್ಚಾದಂತೆಲ್ಲ ಅವರಿಗೆ ಕೊಡಬೇಕಾದ ಸಂಭಾವನೆ ಮತ್ತು ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಚೌಕಾಶಿ ಮಾಡುವುದು ಜಾಸ್ತಿಯಾಗುತ್ತದೆ. ಉದಯೋನ್ಮುಖರು ಅವಕಾಶ ಸಿಕ್ಕಿದರೆ ಸಾಕೆಂದು ಚೌಕಾಶಿ ಮಾಡದೆ ಕರೆದ ತಕ್ಷಣ ಒಪ್ಪಿಕೊಳ್ಳುತ್ತಾರೆ.

  ರಾಜಕೀಯದಲ್ಲೂ ಈಗ ಚೌಕಾಶಿ ವ್ಯಾಪಾರ ಸಾಮಾನ್ಯ.

  ನಾವು ಚುನಾಯಿಸುವ

  ಕೆಲವು ಶಾಸ-ಕರು

  ಕರು ಅಲ್ಲ ಕುದುರೆ

  ಕೋಟಿಗಟ್ಟಲೆ ದುಡ್ಡಿಗೆ

  ಮಾರಾಟವಾಗುತ್ತಾರೆ

  ವ್ಯಾಪಾರ ಕುದುರಿದರೆ!

  ಹಣ ಮತ್ತು ಅಧಿಕಾರದ ಆಮಿಷವನ್ನು ಒಡ್ಡಿ ಬೇರೊಂದು ಪಕ್ಷದ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆದು ಕೊಳ್ಳುವುದು ಕುದುರೆ ವ್ಯಾಪಾರ. ಈ ವ್ಯಾಪಾರದಲ್ಲೂ ನೀ ಕೊಡೆ ನಾ ಬಿಡೆ ಎಂದು ದೊಡ್ಡ ಪ್ರಮಾಣದಲ್ಲಿ ಚೌಕಾಶಿ ನಡೆಯುತ್ತದೆೆ.

  ಒಟ್ಟಿನಲ್ಲಿ ಚೌಕಾಶಿ ಅನ್ನುವುದು ಈಗ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿದೆ. ಎಲ್ಲರೂ ಚೌಕಾಶಿ ಮಾಡುವ ಕಲೆಯನ್ನು ಕಲಿಯುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಕಾಲನ ಕರೆ ಬಂದಾಗ ಹೊರಡಲೇಬೇಕು. ಅಲ್ಲಿ ಚೌಕಾಶಿಗೆ ಆಸ್ಪದವಿಲ್ಲ.

  ಮುಗಿಸುವ ಮುನ್ನ:

  ಉಡುಪಿಗೆ ಬಂದು

  ನೆಲೆಸಿದ ಕೃಷ್ಣ

  ಮಧುರೆಯನ್ನು ಬಿಟ್ಟು

  ಅವನಿಗೂ ಇಷ್ಟ

  ಉಡುಪಿಯ ಅಡುಗೆ

  ಚಕ್ಕುಲಿ, ತಂಬಿಟ್ಟು!

  (ಲೇಖಕರು ಕವಿ ಹಾಗೂ ನಾಟಕಕಾರರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts