More

    ತುಮಕೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ! ; ಪಾಲಿಕೆಯಲ್ಲಿ ವಿವಾದಾತ್ಮಕ ನಿರ್ಣಯ ; ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ

    ತುಮಕೂರು : ಮರಾಠ ಮಹಾರಾಜ ‘ಛತ್ರಪತಿ ಶಿವಾಜಿ’ ಪತ್ರಿಮೆ ಸ್ಥಾಪಿಸುವ ವಿವಾದಾತ್ಮಕ ತೀರ್ಮಾನವನ್ನು ತುಮಕೂರು ಮಹಾನಗರ ಪಾಲಿಕೆ ಕೈಗೊಂಡಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಹಸಿರುಕ್ರಾಂತಿ ಹರಿಕಾರ ಬಾಬು ಜಗಜೀವನರಾಂ, ಕ್ರಾಂತಿಕಾರಿ ಬಸವಣ್ಣ ಅವರ ಪುತ್ಥಳಿ ಸ್ಥಾಪಿಸಲು ದಶಕದ ಹಿಂದೆಯೇ ಶಿಲಾನ್ಯಾಸ ನೆರವೇರಿಸಿದ್ದರೂ ನನೆಗುದಿಗೆ ಬಿದ್ದಿದೆ.

    ತುಮಕೂರಿನಲ್ಲಿ ‘ಪ್ರತಿಮೆ ಸಂಸ್ಕೃತಿ’ ಮೊದಲಿನಿಂದಲೂ ಬೆಳೆದು ಬಂದಿಲ್ಲ. ಗಾಂಧೀಜಿ ಸೇರಿ ಯಾವುದೇ ಮಹಾಪುರುಷರ ಪ್ರತಿಮೆ, ಪುತ್ಥಳಿಗಳನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿಲ್ಲ. ಈಗ ನಗರದ ರೈಲ್ವೆ ಸ್ಟೇಷನ್ ರಸ್ತೆಯ ಹಳೆಯ ನಂಜುಂಡೇಶ್ವರ ಹೋಟೆಲ್ ಮುಂಭಾಗದ ಪಾರ್ಕ್ ಜಾಗದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸುವಂತಹ ಸಾಹಸಕ್ಕೆ ಪಾಲಿಕೆಯು ಇಳಿದಿದೆ. ಈ ಸಂಬಂಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಸರ್ವಾನುಮತದ ಒಪ್ಪಿಗೆ ಸಹ ಪಡೆಯಲಾಗಿದೆ.

    ವಿವಾದದ ಜೇನುಗೂಡು: ಗಡಿ, ಭಾಷೆ ವಿಷಯದಲ್ಲಿ ಸದಾ ಕ್ಯಾತೆ ತೆಗೆಯುವುದರಲ್ಲಿ ಮರಾಠಿಗರು ನಿಸ್ಸೀಮರು. ಈಗ ಛತ್ರಪತಿ ಶಿವಾಜಿ ಹಿಂದು ಮಹಾರಾಜ ಎಂಬ ಕಾರಣಕ್ಕೆ ಪ್ರತಿಮೆ ಸ್ಥಾಪನೆಗೆ ಬಿಜೆಪಿ ಆಡಳಿತ ಮುಂದಾಗಿರುವುದು ಸಹಜವಾಗಿ ಕನ್ನಡಿಗರ ಕಣ್ಣು ಕೆಂಪಾಗಿಸಿದೆ.
    ಶಿರಾಗೇಟ್ ಬಳಿ ಕನಕದಾಸ ವೃತ್ತದಲ್ಲಿರುವ ಕನಕದಾಸ ಪ್ರತಿಮೆ ಹೊರತುಪಡಿಸಿ ನಗರದಲ್ಲಿ ಎಲ್ಲಿಯೂ ಪ್ರತಿಮೆ, ಪುತ್ಥಳಿಗಳಿಲ್ಲ. 2016ರಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಪಿಡಬು ್ಲೃಡಿ ಕಚೇರಿ ಮುಂಭಾಗ ಸರ್ ಎಂ.ವಿಶ್ವೇಶ್ವರಯ್ಯ ಕಂಚಿನ ಪ್ರತಿಮೆ ಸ್ಥಾಪನೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿತ್ತು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಮೆ ಸ್ಥಾಪಿಸುವಂತೆ ಪಟ್ಟು ಹಿಡಿದಿದ್ದವು. ಆಗ ಜಿಲ್ಲಾಡಳಿತ ಸುಪ್ರೀಂಕೋರ್ಟ್ ಆದೇಶ ನೆಪವಾಗಿಟ್ಟುಕೊಂಡು ವಿಶ್ವೇಶ್ವರಯ್ಯ ಪ್ರತಿಮೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಅಂದು ಸರ್‌ಎಂವಿ ಪ್ರತಿಮೆ ಸ್ಥಾಪನೆಗೆ ದಲಿತ ಸಂಘಟನೆಗಳು ಒತ್ತಾಯಿಸಿದ್ದವು. ವಿವಾದಕ್ಕೆ ಆಸ್ಪದ ಕೊಡದಂತೆ ಕಂಚಿನ ಪ್ರತಿಮೆ ಕಚೇರಿ ಒಳಭಾಗದಲ್ಲಿ ಸ್ಥಾಪಿಸಲಾಗಿದೆ.
    ಅಂಬೇಡ್ಕರ್, ಬುದ್ಧ, ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಮುಂದಾಗದ ಮಹಾನಗರ ಪಾಲಿಕೆ ಈಗ ಶಿವಾಜಿ ಪ್ರತಿಮೆ ಸ್ಥಾಪನೆ ನಿರ್ಣಯ ಕೈಗೊಳ್ಳುವ ಮೂಲಕ ಆಡಳಿತರೂಢ ಬಿಜೆಪಿ ವಿವಾದದ ಜೇನುಗೂಡಿಗೆ ಕೈಯಿಟ್ಟಿದೆ.

    ದಶಕದ ಹಿಂದೆ ಶಿಲಾನ್ಯಾಸ : ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾನು ಜಗಜೀವನರಾಂ ಹಾಗೂ ಜ್ಞಾನಜ್ಯೋತಿ ಬಸವಣ್ಣ ಅವರ ಪುತ್ಥಳಿ ಸ್ಥಾಪಿಸಲು 2010ರಲ್ಲಿ ನಗರಸಭೆ ತೀರ್ಮಾನಿಸಿ ಶಂಕುಸ್ಥಾಪನೆ ನೆರವೇರಿಸಿತ್ತು. ಅಂದಿನ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದ ನಾಮಫಲಕಗಳು ಇನ್ನೂ ಪಾಲಿಕೆ ಆವರಣದಲ್ಲಿವೆ. ದಶಕ ಕಳೆದರೂ ಪುತ್ಥಳಿಗಳನ್ನು ಮಾತ್ರ ನಿರ್ಮಿಸಿಲ್ಲ.

    ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ರಾಣಿಚನ್ನಮ್ಮ ಅಲ್ಲದೆ, ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಪ್ರತಿಮೆಗಳನ್ನು ಪಾಲಿಕೆ ಸ್ಥಾಪಿಸಲಿ. ವಿವಾದಾತ್ಮಕ ನಿರ್ಣಯವನ್ನು ತಕ್ಷಣವೇ ಹಿಂಪಡೆಯಬೇಕು.
    ಎಚ್.ಎನ್.ದೀಪಕ್, ಅಧ್ಯಕ್ಷ, ಕರುನಾಡು ವಿಜಯಸೇನೆ

    ನನ್ನ ಅವಧಿಯಲ್ಲಿ (2010) ಪಾಲಿಕೆ ಆವರಣದಲ್ಲಿ ಅಂಬೇಡ್ಕರ್, ಬಾಬು ಜಗಜೀವನರಾಂ ಹಾಗೂ ಬಸವಣ್ಣ ಅವರ ಪುತ್ಥಳಿ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ದಶಕಗಳೇ ಕಳೆದರೂ ಇನ್ನೂ ಪ್ರತಿಮೆ ಸ್ಥಾಪನೆ ಆಗಿಲ್ಲ. ಹೊಸ ನಿರ್ಣಯ ಕೈಗೊಳ್ಳುವ ಮುನ್ನ ಇದನ್ನು ಪರಿಶೀಲಿಸಬೇಕಿತ್ತು.
    ಎಂ.ಪಿ.ಮಹೇಶ್, ಮಾಜಿ ಅಧ್ಯಕ್ಷ, ನಗರಸಭೆ

    ನಗರದ ಉದ್ಯಾನದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ತುಮಕೂರು ಶಾಖೆ ಮನವಿ ಮೇರೆಗೆ ಪ್ರತಿಮೆ ಸ್ಥಾಪನೆ, ನಿರ್ವಹಣೆ ಜವಾಬ್ದಾರಿ ವಹಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
    ಬಿ.ಜಿ.ಕೃಷ್ಣಪ್ಪ, ಮೇಯರ್, ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts