More

    ಕಾಡಿನ ಮಕ್ಕಳಿಗೆ ‘ಅರಮನೆ ಶಾಲೆ’!

    ಆಟ-ಊಟ-ಪಾಠದ ಸವಿ ಉಣ್ಣುತ್ತಿರುವ ಮಾವುತರು-ಕಾವಾಡಿ ಕುಟುಂಬಗಳ ಚಿಣ್ಣರು

    ಅವಿನಾಶ್ ಜೈನಹಳ್ಳಿ ಮೈಸೂರು
    ‘ಜಕ್ಕಣಕ ಜಕ್ಕಣಕ ಜಕ್ಕಣಕ ಜಯ್…’, ‘ಬಾರೋ ಬಾರೋ ಗಣಪ…’, ‘ಅಮ್ಮ ಅಮ್ಮ ಅಮ್ಮ…, ನನ್ನ ತೋಳಿಗೆ ರೆಕ್ಕೆ ಹಚ್ಚು…’, ‘ಅ ಆ ಇ ಈ…’
    ಹಾಡಿಯಲ್ಲಿ ಆಟವಾಡಿಕೊಂಡು ಬೆಳೆದ ಕಾವಾಡಿ ಮತ್ತು ಮಾವುತರ ಮಕ್ಕಳು ‘ಅರಮನೆ ಅಂಗಳದ ಶಾಲೆಯಲ್ಲಿ’ ಪಟ್ಟಣದ ಮಕ್ಕಳೇ ನಾಚುವ ರೀತಿ ಪಾಠ ಕಲಿಯುತ್ತಿರುವ ಪರಿ ಇದು.


    ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸುವ 9 ಆನೆಗಳ ತಂಡದ ಮಾವುತರು ಮತ್ತು ಕಾವಾಡಿಗರ ಕುಟುಂಬಗಳು ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ. ಈ ಕುಟುಂಬಗಳ ಮಕ್ಕಳಿಗಾಗಿ ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲೆ ಪ್ರಾರಂಭಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ತೆರೆದಿರುವ ಶಾಲೆಯಲ್ಲಿ ಆಟ-ಪಾಠ ಮತ್ತು ಊಟದ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳು ನಿತ್ಯ ಪಾಠದ ಜತೆಗೆ ಊಟ ಮಾಡಿ, ಆಟದಲ್ಲಿ ಮೈಮರೆತು ತಮ್ಮದೇ ಲೋಕದಲ್ಲಿ ತೇಲುತ್ತಿದ್ದಾರೆ.


    ಆ. 26ರಿಂದ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಸದ್ಯ 13 ಮಕ್ಕಳು ಕಲಿಯುತ್ತಿದ್ದಾರೆ. ಭಾನುವಾರ ಬೆಳಗ್ಗೆ 9.30ರ ವೇಳೆಗಾಗಲೇ ಮಕ್ಕಳು ಶಾಲೆಗೆ ಬಂದು ಶಿಸ್ತಿನ ಸಿಪಾಯಿಗಳಂತೆ ಕುಳಿತಿದ್ದರು. ನಂತರ ಆಗಮಿಸಿದ ಶಿಕ್ಷಕರಿಗೆ ಎಲ್ಲ ಮಕ್ಕಳು ಎದ್ದು ನಿಂತು ನಮಸ್ಕರಿಸಿದರು. ಶಿಕ್ಷಕರು ಹೇಳಿಕೊಡುತ್ತಿದ್ದ ಪಾಠವನ್ನು ಕುತೂಹಲದಿಂದ ಕೇಳಿ ಕಲಿತರು. ಮಧ್ಯಾಹ್ನ 1.30ಕ್ಕೆ ಊಟ ಸವಿದು, ಪಾಠದಿಂದ ಆಟದೆಡೆ ಜಾರಿದರು. ಶಿಕ್ಷಕರು ಹೇಳಿಕೊಟ್ಟ ಅ ಆ ಇ ಈ… ಎ ಬಿ ಸಿ ಡಿ… ಕ ಕಾ ಕಿ ಕೀ… ನೀತಿ ಕಥೆಗಳು… ಕನ್ನಡ ಮತ್ತು ಇಂಗ್ಲಿಷ್ ಪದ್ಯಗಳನ್ನು ಕಲಿತು ಖುಷಿಪಟ್ಟರು.


    ಶಾಲೆಯ 7ನೇ ತರಗತಿ ವಿದ್ಯಾರ್ಥಿ ಜಗ್ಗ ಎರಡು ದಿನಗಳಲ್ಲಿ ಗಣಿತದ ಏರಿಕೆ ಕ್ರಮ ಮತ್ತು ಇಳಿಕೆ ಕ್ರಮಗಳನ್ನು ಕಲಿತು ‘ಮಿಸ್’ ಅವರಿಂದ ‘ಗುಡ್’ ಎನಿಸಿಕೊಂಡಿದ್ದಾನೆ. ಈತ ಧನಂಜಯ ಆನೆಯ ಕಾವಾಡಿ ಮಣಿಯ ತಂಗಿ ಮಗ. 2ನೇ ತರಗತಿಯ ಸಹನಾ ಮತ್ತು ಫರಾನ್ ಅ ಆ ಇ ಈ ಹಾಗೂ ಎಬಿಸಿಡಿಯನ್ನು ಎರಡೇ ದಿನಗಳಲ್ಲಿ ಕಲಿಯುವುದರ ಜತೆಗೆ ಗರಗರ, ಸರಸರ ಎಂಬ ಪದಗಳನ್ನು 20 ಬಾರಿ ಬರೆದು ಮಿಸ್‌ಗೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ. 3ನೇ ತರಗತಿಯ ಅಭಿ, ಕೃಷ್ಣ, ಗಾಯತ್ರಿ, 5ನೇ ತರಗತಿಯ ಪಲ್ಲವಿ, 6ನೇ ತರಗತಿಯ ಕಾರುಣ್ಯ, ಸಹನಾ, 7ನೇ ತರಗತಿಯ ಸುಬ್ರಮಣಿ ತಮ್ಮ ಪಠ್ಯದ ವಿಷಗಳನ್ನು ನಗರದ ಮಕ್ಕಳೇ ನಾಚುವ ರೀತಿ ಕಲಿಯುತ್ತಿದ್ದಾರೆ ಎಂದು ಶಿಕ್ಷಕಿ ನೂರ್ ಫಾತಿಮಾ ಹೇಳುತ್ತಾರೆ.

    ಆರು ಶಿಕ್ಷಕರಿಂದ ಪಾಠ!
    ಮಕ್ಕಳಿಗೆ ಆರು ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ. ಮಂಜುಳಾ ಅವರು ಶಾಲೆಯ ನೋಡಲ್ ಅಧಿಕಾರಿಯಾಗಿದ್ದಾರೆ. 10 ವರ್ಷಗಳಿಂದ ದಸರಾ ವೇಳೆ ಪಾಠ ಮಾಡುತ್ತಿರುವ ಶಿಕ್ಷಕಿ ನೂರ್ ಫಾತಿಮಾ ಈ ಬಾರಿಯೂ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ಇವರು ಇಂಗ್ಲಿಷ್ ಮತ್ತು ಗಣಿತದ ಜತೆಗೆ, ಬೇರೆ ಬೇರೆ ವಿಷಯಗಳನ್ನೂ ಹೇಳಿಕೊಡುತ್ತಿದ್ದಾರೆ. ಲಕ್ಷ್ಮೀ ವಿಜ್ಞಾನ ಹೇಳಿಕೊಡುತ್ತಿದ್ದಾರೆ, ಮೋಸಿನ್ ತಾಜ್ ಕನ್ನಡ, ಸಮಾಜವಿಜ್ಞಾನ ಪಾಠ ಮಾಡುತ್ತಿದ್ದಾರೆ. ಮಹದೇವು, ಸುಬ್ಬಲಕ್ಷ್ಮೀ ಕಲಾ ಶಿಕ್ಷಕರಾಗಿದ್ದಾರೆ.

    ಇನ್ನೂ 25 ಮಕ್ಕಳು ಬರಲಿದ್ದಾರೆೆ!
    ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರ ಗಜಪಡೆಯ 2ನೇ ತಂಡ ಮೈಸೂರಿಗೆ ಆಗಮಿಸುತ್ತಿದ್ದು, ಆ ವೇಳೆ 25ರಿಂದ 30 ಮಕ್ಕಳು ಬರುವ ನಿರೀಕ್ಷೆ ಇದೆ. ಆಗ ಶಾಲೆಯ ಮಕ್ಕಳ ಸಂಖ್ಯೆ 40ರ ಗಡಿ ದಾಟಲಿದೆ. ಎಲ್ಲ ಮಕ್ಕಳಿಗೂ ಪಾಠ ಹೇಳಿಕೊಡಲು ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ನೋಡಲ್ ಅಧಿಕಾರಿ ಮಂಜುಳಾ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ನೃತ್ಯ ಕಲಿಕೆಯ ಸಂಭ್ರಮ!
    ಮಕ್ಕಳು ಭಾನುವಾರ ಪಾಠದ ಜತೆಗೆ ನೃತ್ಯ ಕಲಿತು ಸಂಭ್ರಮಿಸಿದರು. ‘ಜಕ್ಕಣಕ ಜಕ್ಕಣಕ ಜಕ್ಕಣಕ ಜಯ್ ಜಕ್ಕಣಕ ಜಕ್ಕಣಕ’ ಹಾಡಿಗೆ ಶಿಕ್ಷಕರಾದ ಮಹದೇವು ಮತ್ತು ಸುಬ್ಬಲಕ್ಷ್ಮೀ ಅವರು ಹೇಳಿಕೊಟ್ಟಂತೆ ಹೆಜ್ಜೆ ಹಾಕಿದರು. ಜತೆಗೆ, ಗಣೇಶನ ಹಾಡಿಗೂ ನೃತ್ಯ ಕಲಿತರು.
    ಆ. 26ರಿಂದಲೇ ಶಾಲೆ ಕಾರ್ಯನಿರ್ವಹಿಸುತ್ತಿದ್ದರೂ ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈಗ ಕಲಿತಿರುವ ನೃತ್ಯವನ್ನು ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಕ್ಕಳು ಪ್ರಸ್ತುತಪಡಿಸಲಿದ್ದಾರೆ. ಭಾನುವಾರ ನೃತ್ಯ ಕಲಿತ ನಂತರ ಊಟ ಮಾಡಿದ ಮಕ್ಕಳು, ನಂತರ ಶಾಲೆಯ ಮುಂದೆ ಆಡವಾಡಿದರು. ನಾಲ್ಕು ಮಕ್ಕಳು ಸೇರಿ ಹಿಡಿಯುವ ಆಟವಾಡಿದರೆ, ಅಭಿ ಮತ್ತು ಸಹನಾ ಕುಂಟೆಬಿಲ್ಲೆ ಆಡಿದರು. ಇನ್ನು ನಾಲ್ಕು ಜನ ಕಬಡ್ಡಿ ಆಡಿದರು. ಆದರೆ 7ನೇ ತರಗತಿಯ ಜಗ್ಗ ಮತ್ತು 3ನೇ ತರಗತಿಯ ಕೃಷ್ಣ ಆನೆಗಳ ಬಳಿ ಬಂದು ಮೇವು ತಿನಿಸುತ್ತಿದ್ದರು.

    ಈ ಬಾರಿ ಬಂದಿರುವ ಬಹುತೇಕ ಮಕ್ಕಳು ಹೊಸಬರಾಗಿದ್ದು, ತುಂಬ ಆಸಕ್ತಿ ತೋರುತ್ತಿದ್ದಾರೆ. ಸಾಮಾನ್ಯವಾಗಿ ಕಾಡಿನಲ್ಲೇ ಬೆಳೆದಿರುವ ಕಾರಣ ಶಾಲೆಯಲ್ಲಿ ಕೂರಲು ಇಷ್ಟಪಡುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರ ಮನಸ್ಥಿತಿಗೆ ಒಗ್ಗಿಕೊಂಡು, ನೀತಿ ಕಥೆಗಳು ಸೇರಿದಂತೆ ಕಷ್ಟವಲ್ಲದ ಪಾಠಗಳನ್ನು ಮಾಡುತ್ತ ಅವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲರೂ ಹೇಳಿಕೊಟ್ಟ ಪಾಠವನ್ನು ಕಲಿಯುತ್ತಿದ್ದಾರೆ.
    ನೂರ್ ಫಾತಿಮಾ, ಶಿಕ್ಷಕಿ

    ಸದ್ಯ 13 ಮಕ್ಕಳು ಕಲಿಯುತ್ತಿದ್ದಾರೆ. ಮುಂದಿನ ವಾರ ಎರಡನೇ ತಂಡದ ಗಜಪಡೆಯ ಜತೆ ಇನ್ನೂ 25ಕ್ಕೂ ಹೆಚ್ಚು ಮಕ್ಕಳು ಬರುವ ನಿರೀಕ್ಷೆ ಇದೆ. ಎಲ್ಲ ಮಕ್ಕಳಿಗೂ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಪಾಠದ ಜತೆಗೆ ನೃತ್ಯ ಮಾಡಿಸುತ್ತಿದ್ದೇವೆ, ಆಟವಾಡಿಸುತ್ತಿದ್ದೇವೆ.
    ಮಂಜುಳಾ, ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts