More

    ಪಾಕ್ ಮಿಲಿಟರಿ 100 ಬಿಲಿಯನ್ ಡಾಲರ್ ಕಂಪನಿ: ಬರೀ ಸೇನೆಯಲ್ಲ, ವ್ಯಾಪಾರಿ ಸಂಸ್ಥೆಗಳ ಸಾಮ್ರಾಜ್ಯ

    ಮಿಲಿಟರಿಯ ಕೆಲಸವೆಂದರೆ ದೇಶದ ರಕ್ಷಣೆ ಮಾಡುವುದು. ಆದರೆ, ಪಾಕಿಸ್ತಾನದ ಮಿಲಿಟರಿಯು ವ್ಯಾಪಾರ ವಹಿವಾಟನ್ನು ಕೂಡ ಮಾಡುತ್ತದೆ. ತನ್ನ ವ್ಯಾಪಾರಿ ಸಂಸ್ಥೆಗಳ ಮೂಲಕ ಎಲ್ಲ ರೀತಿಯ ಉತ್ಪನ್ನಗಳನ್ನು ತಯಾರಿಸಿ ಮಾರುತ್ತದೆ. ಸೇವೆಗಳನ್ನು ಕೂಡ ಒದಗಿಸುತ್ತದೆ. ಮಿಲಿಟರಿ ವ್ಯಾಪಾರ ಸಾಮ್ರಾಜ್ಯದ ಬಹುಪಾಲು ಲಾಭವು ಅಕ್ರಮವಾಗಿ ಸೇನಾಧಿಕಾರಿಗಳ ಜೇಬು ಸೇರುತ್ತದೆ.

    ಕೆಲ ದಿನಗಳ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನವನ್ನು ಪ್ರತಿಭಟಿಸಿದ ಗುಂಪೊಂದು ಲಾಹೋರ್ ಕಾರ್ಪ್ಸ್ ಕಮಾಂಡರ್ ಅವರ ಮನೆಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಒಳನುಸುಳಿದ ಪ್ರತಿಭಟನಾಕಾರರು ತಮ್ಮ ತೋಳುಗಳಲ್ಲಿ ನವಿಲು ಹಿಡಿದು ಹೊರಬಂದರು. ಸಾರ್ವಜನಿಕರ ಹಣದಲ್ಲಿ ಲೆಫ್ಟಿನೆಂಟ್ ಜನರಲ್ ಸಲ್ಮಾನ್ ಫಯಾಜ್ ಘನ್ನಿ ನವಿಲನ್ನು ಖರೀದಿಸಿದ್ದಾರೆ ಎಂದು ಅವರು ಲೂಟಿಕೋರನೊಬ್ಬ ಹೇಳಿದ. ಮತ್ತೊಬ್ಬ ಪ್ರತಿಭಟನಾಕಾರ ಕ್ಯಾಮೆರಾಗಾಗಿ ಸ್ಟ್ರಾಬೆರಿಯನ್ನು ಹಿಡಿದು ಪೋಸ್ ನೀಡಿದ. ಗೋಧಿ ಹಿಟ್ಟಿನ ಬಗ್ಗೆ ಗಲಭೆ ಮಾಡುತ್ತಿರುವ ಪಾಕಿಸ್ತಾನದ ಬಡವರಿಗೆ ಇದೇನು ಕಡಿಮೆಯಲ್ಲ; ಜನರಲ್ ರೆಫ್ರಿಜರೇಟರ್​ನಿಂದ ಹೊರಬಂದಿದೆ ಎಂದಾತ ಹೇಳಿದ.

    ಸೈನ್ಯದ ಜನರಲ್​ನ ಮನೆಯಲ್ಲಿ ನವಿಲು ಇರುವುದು ಯಾರನ್ನಾದರೂ ಅಚ್ಚರಿಗೊಳಿಸುತ್ತದೆ. ಏಕೆಂದರೆ ಅಂತಹ ಸ್ಥಳದಲ್ಲಿ ಸಾಮಾನ್ಯವಾಗಿ ಕ್ರೂರ ನಾಯಿಯನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಇದು ಪಾಕಿಸ್ತಾನದ ಜನರಲ್​ಗಳು, ಅಡ್ಮಿರಲ್​ಗಳು ಮತ್ತು ಏರ್ ಮಾರ್ಷಲ್​ಗಳ ಅಕ್ರಮಗಳ ಕಥೆಯನ್ನು ಸಾರುತ್ತದೆ. ಪಾಕ್ ಮಿಲಿಟರಿ ಆಡಳಿತಗಾರರು 100 ಬಿಲಿಯನ್ ಡಾಲರ್ (ಭಾರತೀಯ ರೂಪಾಯಿಗಳಲ್ಲಿ 8,22,955 ಕೋಟಿ ರೂಪಾಯಿ) ಮೊತ್ತದ ವ್ಯಾಪಾರ ಸಾಮ್ರಾಜ್ಯವನ್ನು ನಡೆಸುವ ಮೂಲಕ ಕುಬೇರರಾಗಿ ಹೊರಹೊಮ್ಮಿದ್ದಾರೆ.

    ಮಿಲಿಟರಿ ಕಂಪನಿಯು ಪಾಕಿಸ್ತಾನದಲ್ಲಿಯೇ ಅತಿದೊಡ್ಡ ವ್ಯಾಪಾರ ಸಮೂಹ ಸಂಸ್ಥೆಯಾಗಿ ರೂಪುಗೊಂಡಿದೆ. ಪಾಕಿಸ್ತಾನದ ಮಿಲಿಟರಿಯು ಅಂದಾಜು ನೂರು ವಿಭಿನ್ನ ವ್ಯವಹಾರಗಳನ್ನು ನಡೆಸುತ್ತದೆ. ಮಿಲಿಟರಿ ಕಂಪನಿಯಿಂದ ತಯಾರಿಸಿದ ಕೆಲವು ವಸ್ತುಗಳನ್ನಾದರೂ ಖರೀದಿಸದೆ ನೀವು ಕಿರಾಣಿ ಅಂಗಡಿ ಅಥವಾ ಶಾಪಿಂಗ್ ಮಾಲ್​ನಿಂದ ಹೊರಬರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದು ವಿಸ್ತರಿಸಿದೆ. ಕಾರ್ನ್​ಫ್ಲೇಕ್, ಬ್ರೆಡ್, ಬಿಸ್ಕತ್, ಸಿಮೆಂಟ್ ರಸಗೊಬ್ಬರ… ಹೀಗೆ ಬಹುತೇಕ ಎಲ್ಲವನ್ನೂ ಮಿಲಿಟರಿ ಕಂಪನಿ ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ. ಏರ್​ಲೈನ್ಸ್​ನಿಂದ ಲಾಜಿಸ್ಟಿಕ್ಸ್ ಕಂಪನಿಗಳು ಮತ್ತು ಬ್ಯಾಂಕ್​ಗಳಿಂದ ವಿಮೆಯವರೆಗೆ ಮಿಲಿಟರಿ ಎಲ್ಲ ರೀತಿಯ ಸೇವಾ ವಲಯದ ವ್ಯಾಪಾರಗಳನ್ನು ಕೂಡ ನಡೆಸುತ್ತದೆ.

    ಪಾಕಿಸ್ತಾನದ ಮಿಲಿಟರಿಯು ಹಲವಾರು ಅಂಗಸಂಸ್ಥೆಗಳಿರುವ ಒಂದು ಬೃಹತ್ ಕಂಪನಿಯ ರೀತಿಯಲ್ಲಿದೆ. ಮಿಲಿಟರಿಯು ಫೌಜಿ ಫೌಂಡೇಶನ್ ಮತ್ತು ಆರ್ವಿು ವೆಲ್ಪೇರ್ ಟ್ರಸ್ಟ್​ನಂತಹ ಆರು ಫೌಂಡೇಶನ್​ಗಳನ್ನು ನಡೆಸುತ್ತದೆ. ಸೇನಾ ಸಿಬ್ಬಂದಿಯ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವಂತೆ ಇವು ಕಂಡುಬರುತ್ತವೆ. ಈ ಪ್ರತಿಷ್ಠಾನಗಳು ಸೇವೆಯಲ್ಲಿರುವ ಸೇನಾ ಸಿಬ್ಬಂದಿ ಮತ್ತು ನಿವೃತ್ತ ಮಿಲಿಟರಿ ಸಿಬ್ಬಂದಿಯಿಂದ ನಡೆಸಲ್ಪಡುವ ವ್ಯವಹಾರಗಳು ಮತ್ತು ಸಂಸ್ಥೆಗಳನ್ನು ಹೊಂದಿವೆ. ಈ ವ್ಯವಹಾರಗಳ ಲಾಭವನ್ನು ಮಿಲಿಟರಿ ಕಲ್ಯಾಣ ಚಟುವಟಿಕೆಗಳಲ್ಲಿ ಮತ್ತೆ ತೊಡಗಿಸಲಾಗುತ್ತದೆ ಎನ್ನಲಾಗುತ್ತಾದರೂ ವಾಸ್ತವದಲ್ಲಿ ಲಾಭದ ಗಣನೀಯ ಪ್ರಮಾಣವು ಉನ್ನತ ಮಿಲಿಟರಿ ಅಧಿಕಾರಗಳ ಕಿಸೆಯನ್ನು ಅಕ್ರಮವಾಗಿ ಸೇರುತ್ತದೆ.

    ಈ ಮಿಲಿಟರಿ ಕಂಪನಿಗಳಲ್ಲಿ ಪಾರದರ್ಶಕತೆ ತೀರ ಕಡಿಮೆ ಇರುತ್ತದೆ. ಸರ್ಕಾರಕ್ಕೆ ತೆರಿಗೆಯನ್ನಂತೂ ಸರಿ ಪಾವತಿಸುವುದಿಲ್ಲ. ಇದನ್ನು ಪರಿಶೀಲಿಸಬೇಕಾದ ಸರ್ಕಾರಿ ಸಂಸ್ಥೆಗಳು ಕಂಡರೂ ಕಾಣದಂತೆ ಇರುತ್ತವೆ. ಮಿಲಿಟರಿ ಕಂಪನಿಯ ಬ್ಯಾಲೆನ್ಸ್ ಶೀಟ್ ಅನ್ನು ಪರಿಶೀಲಿಸಲು ಒತ್ತಾಯಿಸಿದರೆ ಬಂದೂಕಿನ ನಳಿಕೆಯ ಮೂಲಕ ಸಾಗಬೇಕಾದಂತಹ ಪರಿಸ್ಥಿತಿ ನೆಲೆಸಿದೆ. ಈ ಮಿಲಿಟರಿ ಉದ್ಯಮವು ಪಾಕಿಸ್ತಾನದ ಆರ್ಥಿಕತೆಯ ಮೇಲೆ ಎಷ್ಟು ಪ್ರಾಬಲ್ಯ ಹೊಂದಿದೆಯೆಂದರೆ ಆ ದೇಶದ ಒಟ್ಟು ಉತ್ಪಾದನೆಯ ಮೂರನೇ ಒಂದು ಭಾಗವು ಮಿಲಿಟರಿ ಕಂಪನಿಯಿಂದಲೇ ಆಗುತ್ತದೆ.

    ಪಾಕಿಸ್ತಾನದ ರಾಜಕೀಯದ ಮೇಲಿನ ಮಿಲಿಟರಿಯ ಬಿಗಿಹಿಡಿತವು ಎಂದಿಗೂ ಸಡಿಲಗೊಳ್ಳದಿರಲು ಮೂಲ ಕಾರಣ ದೇಶದ ಆರ್ಥಿಕತೆ ಮತ್ತು ವ್ಯವಹಾರದಲ್ಲಿ ಅದರ ಆಳವಾದ ಬೇರು ಹೊಂದಿರುವುದೇ ಆಗಿದೆ. ತನ್ನ ವ್ಯಾಪಾರ ಸಾಮ್ರಾಜ್ಯವನ್ನು ಕಾಪಾಡಲು ಮಿಲಿಟರಿಯು ಸರ್ಕಾರದ ನೀತಿ ಮತ್ತು ನಿಯಂತ್ರಣಗಳನ್ನು ತನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುತ್ತದೆ. ಹೀಗಾಗಿ, ಸೇನೆಯು ಪಾಕಿಸ್ತಾನವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಳಲು ಬಯಸುತ್ತದೆ.

    ಮಿಲ್ಬಸ್

    2007ರಲ್ಲಿ ರಕ್ಷಣಾ ವಿಶ್ಲೇಷಕಿ ಮತ್ತು ನೌಕಾಪಡೆಯ ಮಾಜಿ ಅಧಿಕಾರಿ ಆಯೇಶಾ ಸಿದ್ದಿಕಾ ಅವರು ಮಿಲಿಟರಿಯ ವ್ಯವಹಾರ ಕುರಿತಂತೆ ಶ್ರಮ ವಹಿಸಿ ಅಗೆದು ತೆಗೆದ ಒಂದಿಷ್ಟು ಮಾಹಿತಿಯನ್ನು ಒಟ್ಟುಗೂಡಿಸಿ, ‘ಮಿಲಿಟರಿ ಇಂಕ್: ಇನ್​ಸೈಡ್ ಪಾಕಿಸ್ತಾನ್ಸ್ ಮಿಲಿಟರಿ ಎಕಾನಮಿ’ ಎಂಬ ಅದ್ಭುತವಾದ ಶೈಕ್ಷಣಿಕ ಪ್ರಬಂಧವನ್ನು ರಚಿಸುವ ಸಾಹಸ ಮಾಡಿದರು. ಆಗ ಅವರು ಮಿಲಿಟರಿ ವ್ಯಾಪಾರ ಸಾಮ್ರಾಜ್ಯದ ಮೌಲ್ಯವನ್ನು 20.7 ಬಿಲಿಯನ್ ಡಾಲರ್ ಎಂದು ಲೆಕ್ಕಹಾಕಿದ್ದರು. 15 ವರ್ಷಗಳ ನಂತರ, ಇದು 100 ಬಿಲಿಯನ್ ಡಾಲರ್​ಗೆ ಬೆಳೆದಿದೆ. ಸಿದ್ದಿಕಾ ಇದನ್ನು ಮಿಲ್ಬಸ್ (ಮಿಲಿಟರಿ-ಬಿಸಿನೆಸ್) ಎಂದು ಕರೆದಿದ್ದಾರೆ. ಮಿಲಿಟರಿ ಅಧಿಕಾರಿಗಳು ಕುಬೇರರಾಗುವ ಇನ್ನೊಂದು ಮಾರ್ಗವೂ ಇದೆ. ದುಬಾರಿ ಬೆಲೆಯ ಭೂಮಿಯನ್ನು ಅಧಿಕಾರಿಗಳಿಗೆ ನೀಡುವುದೇ ಈ ಸುಲಭದ ದಾರಿ. ಪಾಕಿಸ್ತಾನದಲ್ಲಿರುವ ಎಲ್ಲಾ ಖಾಸಗಿ ಜಮೀನಿನಲ್ಲಿ ಏಳು ಪ್ರತಿಶತದಷ್ಟನ್ನು ಮಿಲಿಟರಿ ಅಧಿಕಾರಿಗಳು ಹೊಂದಿದ್ದಾರೆಂದು ಸಿದ್ದಿಕಾ ಅಂದಾಜಿಸಿದ್ದಾರೆ. ಈಗ ಇದು ದ್ವಿಗುಣಗೊಂಡಿರಬಹುದಾಗಿದೆ.

    ಬಾಜ್ವಾ ಆಸ್ತಿ 452 ಕೋಟಿ ರೂಪಾಯಿ

    ಒಬ್ಬ ಉನ್ನತ ಸೇನಾಧಿಕಾರಿಯು ಎಷ್ಟು ಶ್ರೀಮಂತನಾಗಬಹುದು ಮತ್ತು ಎಷ್ಟು ಬೇಗನೇ ಆಗಬಹುದು ಎಂಬುದನ್ನು ತಿಳಿಯಲು, ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರ ಪ್ರಕರಣವು ಒಂದು ಉತ್ತಮ ಉದಾಹರಣೆಯಾಗಿದೆ. 2015ರಲ್ಲಿ ಬಾಜ್ವಾ ಅವರ ಪತ್ನಿ ಘೊಷಿಸಿದ ಆಸ್ತಿಯು ಶೂನ್ಯ ಇತ್ತು. ಕಳೆದ ವರ್ಷ ಪತ್ರಕರ್ತರ ತನಿಖೆಗಳು ಬಹಿರಂಗಪಡಿಸಿದ ಪ್ರಕಾರ, ಅವರು 9.7 ಮಿಲಿಯನ್ ಡಾಲರ್ (79.837 ಕೋಟಿ ರೂಪಾಯಿ) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಬಾಜ್ವಾ ಅವರ ಸೊಸೆ ಕೂಡ ಸಾಕಷ್ಟು ಅದೃಷ್ಟಶಾಲಿ. ಬಾಜ್ವಾ ಕುಟುಂಬದಲ್ಲಿ ಮದುವೆಯಾಗುವ ಕೇವಲ ಒಂದು ವಾರ ಮೊದಲು ಹತ್ತಾರು ಕೋಟಿ ರೂಪಾಯಿಗಳ ಒಡತಿಯಾದರು. ಇದಕ್ಕೂ ಮೊದಲು ಅವರ ಘೋಷಿತ ಆಸ್ತಿಯು ಶೂನ್ಯವಾಗಿತ್ತು. ಆರು ವರ್ಷಗಳಲ್ಲಿ, ಬಾಜ್ವಾ ಕುಟುಂಬವು 55 ಮಿಲಿಯನ್ ಡಾಲರ್ (452.686 ಕೋಟಿ ರೂಪಾಯಿ) ಮೌಲ್ಯದ ಆಸ್ತಿಯನ್ನು ಸಂಗ್ರಹಿಸಿತು. ಈ ಮೊತ್ತವು ಮಿಲಿಟರಿ ಕಂಪನಿಯ ಬ್ಯಾಲೆನ್ಸ್ ಶೀಟ್​ನಲ್ಲಿ ಪೂರ್ಣಾಂಕದ ದೋಷವಾಗಿ (ರೌಂಡ್ ಫಿಗರ್ ಎರರ್) ಕಾಣಿಸಿಕೊಂಡಿದೆ.

    ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು

    ಜೆಡಿಎಸ್ ಬಿಜೆಪಿ ಜೊತೆ ವಿಲೀನ ಆದ್ರೆ ಒಳಿತು, ಆಗ ರಾಜ್ಯದಲ್ಲಿ ಎರಡೇ ಪಕ್ಷ: ಸೋಲಿನ ಪರಾಮರ್ಶೆಯಲ್ಲಿ ಡಾ.ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts