More

    ಏ.23, 24ರಂದು ಪಡುಮಲೆ ಬ್ರಹ್ಮಕಲಶೋತ್ಸವ

    ಮಂಗಳೂರು: ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನದಲ್ಲಿ ಮೊದಲ ಹಂತದ ಬ್ರಹ್ಮಕಲಶೋತ್ಸವ ಏ.23 ಮತ್ತು 24ರಂದು ನಡೆಯಲಿದೆ.
    ಸಮಿತಿ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ, ಅಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕಾರ್ಯಾಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆಯ್ಕೆಯಾದರು.

    ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ಪಡುಮಲೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಹರೀಶ್ ಕುಮಾರ್, ಕೋಟಿ-ಚೆನ್ನಯ ಜನ್ಮಸ್ಥಾನವಾದ ಪಡುಮಲೆ ಕ್ಷೇತ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯುವುದು ನಮ್ಮ ಸುಯೋಗ ಎಂದರು.

    ಕೋಟಿ-ಚೆನ್ನಯರು ಒಂದು ಜಾತಿ, ಧರ್ಮಕ್ಕೆ ಸೀಮಿತರಾಗದೆ ಎಲ್ಲ ಧರ್ಮದ ಆರಾಧ್ಯ ವೀರಪುರುಷರು. ಅವರ ಜನ್ಮಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ಸಂತಸದ ವಿಚಾರ. ಈಗ ನಾಗಬ್ರಹ್ಮರ ಗುಡಿ, ನಾಗದೇವರ ಗುಡಿ ಪೂರ್ಣಗೊಂಡಿದ್ದು, ಮುಂದೆ ಅರಮನೆ, ಕಂಬಳ ಗದ್ದೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಪಡುಮಲೆ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಸಮಾಜದ ಎಲ್ಲರ ಸಹಕಾರ ಅಗತ್ಯ. ಪಡುಮಲೆ ಕ್ಷೇತ್ರವನ್ನು ಪ್ರಚಾರಕ್ಕಿಂತ, ಭಕ್ತಿಯ ಮೂಲಕ ನಿರ್ಮಾಣಗೊಳಿಸಿ ಜಗತ್ತಿನ ಪ್ರವಾಸಿ ತಾಣವಾಗಿಸೋಣ ಎಂದರು.
    ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ವಿದ್ವಾಂಸರು ಬರೆದ ಚರಿತ್ರೆ ಯಾವತ್ತೂ ಸುಳ್ಳಾಗುವುದಿಲ್ಲ. ನಾವು ಕೋಟಿ-ಚೆನ್ನಯರ ಚರಿತ್ರೆಯ ಆಧಾರದಲ್ಲೇ ಕೋಟಿ ಚೆನ್ನಯರ ಜನ್ಮಸ್ಥಾನ ಪಡುಮಲೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.

    ಪಡುಮಲೆ ಕ್ಷೇತ್ರದ ಆಡಳಿತ ಮೊಕ್ತೇಸರ ವಿನೋದ್ ಆಳ್ವ ಮಾತನಾಡಿ, ದೈವ-ದೇವರ ಸಂಕಲ್ಪದಂತೆ ಪಡುಮಲೆಯಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದೆ. ಇದು ನಮಗೆ ಸಿಕ್ಕಿದ ಒಂದು ಸೌಭಾಗ್ಯ ಎಂದು ತಿಳಿದುಕೊಳ್ಳುತ್ತೇವೆ. ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅಧ್ಯಕ್ಷತೆ ವಹಿಸಿದ್ದರು. ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಉಪಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಯೋಗೀಶ್ ಕುಮಾರ್, ಕಾರ್ಯದರ್ಶಿ ಶ್ರೀಧರ ಪಟ್ಲ, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ, ರೋಹಿನಾಥ್ ಪಾದೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಟ್ರಸ್ಟ್ ಸದಸ್ಯರಾದ ರತ್ನಾಕರ್ ಜೈನ್, ಶೇಖರ್ ನಾರಾವಿ, ರಂಜನ್ ಮಿಜಾರು, ಹಿಂದುಳಿದ ವರ್ಗಗಳ ನಿಗಮ ಸದಸ್ಯ ಕೆ.ಟಿ. ಸುವರ್ಣ, ಕುದ್ರೋಳಿ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ವೇದನಾಥ್ ಸುವರ್ಣ ಉಪಸ್ಥಿತರಿದ್ದರು. ಟ್ರಸ್ಟ್‌ನ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಸೊರಕೆ ಸ್ವಾಗತಿಸಿದರು. ಚರಣ್ ಪಡುಮಲೆ ಕ್ಷೇತ್ರದ ವಿವರ ನೀಡಿದರು.

    ಅಷ್ಟಮಂಗಲ ಪ್ರಶ್ನೆಯಂತೆ ಮೊದಲ ಜೀರ್ಣೋದ್ಧಾರ ಕಾರ್ಯ ಮುಗಿದ ಬಳಿಕ ಅರಮನೆ ಸೇರಿದಂತೆ ಇತರ ಜೀರ್ಣೋದ್ಧಾರ ಕೆಲಸಗಳು ಸುಮಾರು 8ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಸಮಾಜದ ಎಲ್ಲರ ಸಹಕಾರ ಅಗತ್ಯ.
    – ಹರಿಕೃಷ್ಣ ಬಂಟ್ವಾಳ್, ಅಧ್ಯಕ್ಷ, ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts