More

    ಅಕಾಲಿಕ ಮಳೆಗೆ ಭತ್ತದ ಬಣವೆ ಜಲಾವೃತ

    ಹಾನಗಲ್ಲ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಹೊಲ-ಗದ್ದೆಗಳು ಜಲಾವೃತವಾಗಿದ್ದು, ಭತ್ತದ ಬಣವೆಗಳಲ್ಲಿ ನೀರಿಳಿದು ಕಷ್ಟಪಟ್ಟು ಬೆಳೆದ ಫಸಲು ರೈತನ ಕೈ ಸೇರದಂತಾಗಿದೆ.

    ವಾಯುಭಾರ ಕುಸಿತದಿಂದಾಗಿ ಅಕಾಲಿಕವಾಗಿ ಮಳೆ ಆರಂಭಗೊಂಡಿದ್ದು, ತಾಲೂಕಿನ ದಕ್ಷಿಣ ಸಮ್ಮಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಸಮ್ಮಸಗಿ, ಚಿಕ್ಕಾಂಶಿ ಹೊಸೂರು, ಕೋಣನಕೊಪ್ಪ, ಕ್ಯಾಸನೂರು, ಮತ್ತಿಹಳ್ಳಿ, ಹುನುಗನಹಳ್ಳಿ, ಬೊಮ್ಮನಹಳ್ಳಿ ಹೋಬಳಿಯ ಗ್ರಾಮಗಳಲ್ಲಿಯೂ ಬುಧವಾರ ರಾತ್ರಿ ಭಾರಿ ಮಳೆ ಸುರಿದಿದೆ.

    ಮಳೆಯಿಂದ ಭತ್ತದ ಬಣವೆಯಲ್ಲಿ ನೀರಿಳಿದಿದ್ದರಿಂದ ಭತ್ತದ ಗುಣಮಟ್ಟ ಕಡಿಮೆಯಾಗುವ ಆತಂಕ ಎದುರಾಗಿದೆ. ಭತ್ತ ಕಂದು ಬಣ್ಣಕ್ಕೆ ತಿರುಗುವುದರಿಂದ ದರ ಕುಸಿತಗೊಳ್ಳಲಿದೆ. ಕೋಣನಕೊಪ್ಪ ಗ್ರಾಮದ ರೈತರಾದ ವೀರಬಸನಗೌಡ ಪಾಟೀಲ, ಮಂಜಪ್ಪ ಕೊರ್ಲಕಟ್ಟಿ, ಶೀಲಾವತಿ ಪಾಟೀಲ, ಭದ್ರಗೌಡ ಪಾಟೀಲ, ನಾಗಪ್ಪ ಕೊರ್ಲಕಟ್ಟಿ, ಸದಣ್ಣ ಅರಿಷಣಗುಪ್ಪಿ, ಬಸನಗೌಡ ಪಾಟೀಲ, ಕ್ಯಾಸನೂರಿನ ಜಯಶೀಲಗೌಡ ಪಾಟೀಲ ಅವರುಗಳು ಒಕ್ಕಲು ಮಾಡಿಟ್ಟಿದ್ದ ಭತ್ತದ ಕಾಳಿನ ಬಣವೆಗಳು ಜಲಾವೃತಗೊಂಡಿವೆ. ಕೋಣನಕೊಪ್ಪ ಗ್ರಾಮದ ದೊಡ್ಡಕೆರೆ ತುಂಬಿದೆ. ಸೋಮವಾರ ಒಂದೇ ದಿನ ಸುರಿದ ಮಳೆಗೆ ಕೆರೆಯ ಹೆಚ್ಚುವರಿ ನೀರು ಹೊಲ-ಗದ್ದೆಗಳಿಗೆ ನುಗ್ಗಿ ಹೊಲಗಳು ಜಲಾಶಯದಂತೆ ಭಾಸವಾಗುತ್ತಿವೆ.

    ಕೆಲವು ಗ್ರಾಮಗಳಲ್ಲಿ ಮಳೆಯ ರಭಸಕ್ಕೆ ಬಾಳೆಯ ತೋಟದಲ್ಲಿ ಗಿಡಗಳು ನೆಲಕ್ಕುರುಳಿವೆ. ಮಾವಿನ ಫಸಲು ಆರಂಭದ ಹಂತದಲ್ಲಿದ್ದು ಹೂವು-ಕಾಯಿಗಳೆಲ್ಲ ಉದುರಿದ್ದರಿಂದ ರೈತರು ಭಾರಿ ಹಾನಿ ಅನುಭವಿಸುವಂತಾಗಿದೆ. ಮಂಗಳವಾರವೂ ರಾತ್ರಿ ತಾಲೂಕಿನ ಕೆಲವು ಭಾಗಗಳಲ್ಲಿ ಮಳೆ ಸುರಿದಿತ್ತು. ಬುಧವಾರ ಬಂದ ಮಳೆ ರೈತರಲ್ಲಿ ಆತಂಕ ಸೃಷ್ಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts