More

    ಭತ್ತ ಬೆಳೆಗಾರರ ಬವಣೆ

    ರಾಣೆಬೆನ್ನೂರ: ‘ಭತ್ತ ಸಂಪೂರ್ಣ ತೆನೆ ಕಟ್ಟಿದ್ದು, ಕಟಾವು ಮಾಡಿಕೊಂಡು ಬಂದು ರಸ್ತೆ ಬದಿ ಒಣ ಹಾಕಿದ್ದೇವೆ. ಜನತಾ ಕರ್ಫ್ಯೂನಿಂದಾಗಿ ಯಾರೂ ಖರೀದಿಗೆ ಬರುತ್ತಿಲ್ಲ. ಮತ್ತೊಂದೆಡೆ ವಾಯುಭಾರ ಕುಸಿತದಿಂದ ಮಳೆ ಶುರುವಾಗಿದೆ. ಕಣ್ಣೀರು ಕಪಾಳಕ್ಕೆ ಬರುತ್ತಿದೆ’…

    ಇದು ತಾಲೂಕಿನ ಭತ್ತ ಬೆಳೆಗಾರರ ನೋವಿನ ಮಾತು. ತಾಲೂಕಿನ ಚಂದಾಪುರ, ಚಿಕ್ಕಕುರವತ್ತಿ, ಹರನಗಿರಿ, ಚೌಡಯ್ಯದಾನಪುರ, ಕುದರಿಹಾಳ, ಹಿರೇಬಿದರಿ, ಮೇಡ್ಲೇರಿ, ಐರಣಿ, ಮಾಕನೂರ ಸೇರಿ ತುಂಗಭದ್ರಾ ನದಿಪಾತ್ರದ 25ಕ್ಕೂ ಅಧಿಕ ಗ್ರಾಮಗಳ ರೈತರು 7500 ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದರು. ಸದ್ಯ ಭತ್ತ ಸಂಪೂರ್ಣ ಬೆಳೆದು ನಿಂತಿದ್ದು, ರೈತರು ಬೆಳೆ ಕಟಾವು ಮಾಡಿ ರಸ್ತೆ ಬದಿ ಒಣಹಾಕಿದ್ದಾರೆ.

    ರಾಣೆಬೆನ್ನೂರ ಭಾಗದಲ್ಲಿ ಬೆಳೆದ ಭತ್ತವನ್ನು ಹೆಚ್ಚಾಗಿ ದಾವಣಗೆರೆ ಎಪಿಎಂಸಿ ಖರೀದಿದಾರರೇ ಹೆಚ್ಚಾಗಿ ಖರೀದಿ ಮಾಡುತ್ತಿದ್ದರು. ಆದರೆ, ಜನತಾ ಕರ್ಫ್ಯೂ ನೆಪ ಹೇಳುತ್ತಿರುವ ಖರೀದಿದಾರರು ಈ ಬಾರಿ ಬರುತ್ತಿಲ್ಲ. ಅಲ್ಲದೆ, ಫೋನ್ ಮಾಡಿ ಬರಲು ಹೇಳಿದರೆ, ‘1200 ರೂಪಾಯಿಗೆ ಒಂದು ಕ್ವಿಂಟಾಲ್​ನಂತೆ ಖರೀದಿಸುತ್ತೇವೆ’ ಎಂದು ಹೇಳುತ್ತಿದ್ದಾರೆ.

    ಒಂದು ಎಕರೆ ಭತ್ತ ಬೆಳೆಯಲು ನಾಟಿ ಮಾಡುವುದು, ಔಷಧ ಸಿಂಪಡಣೆ ಹಾಗೂ ಕೂಲಿ ಕಾರ್ವಿುಕರ ಖರ್ಚು ಸೇರಿ 35 ಸಾವಿರ ರೂಪಾಯಿವರೆಗೂ ಖರ್ಚು ಬರುತ್ತದೆ. ಎಕರೆಗೆ 75 ಕೆ.ಜಿ. ತೂಕದ 35 ಚೀಲ ಭತ್ತ ಬರುತ್ತದೆ. ಇದನ್ನು 1200 ರೂಪಾಯಿಗೆ ಕ್ವಿಂಟಾಲ್​ನಂತೆ ಮಾರಾಟ ಮಾಡಿದರೆ, ಭತ್ತ ನಾಟಿ ಮಾಡಲು ಮಾಡಿದ ಖರ್ಚೂ ಬರುವುದಿಲ್ಲ ಎಂಬುದು ರೈತರ ಅಳಲು.

    ರೈತರು ಭತ್ತ ಕಟಾವು ಮಾಡಿ ರಸ್ತೆ ಬದಿ ರಾಶಿ ಮಾಡಿಕೊಂಡು ಒಣ ಹಾಕಿದ್ದಾರೆ. ಆದರೆ, ವಾಯುಭಾರ ಕುಸಿತದಿಂದ ತಾಲೂಕಿನಲ್ಲಿ ಬಿಸಿಲು ಮಾಯವಾಗಿದ್ದು, ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಮಳೆ ಸುರಿಯುತ್ತಿದೆ. ಇದರಿಂದಾಗಿ ರಸ್ತೆ ಬದಿ ಭತ್ತ ಒಣ ಹಾಕಿದ ರೈತರಿಗೆ ಬೆಳೆದ ಭತ್ತವನ್ನು ಸಂರಕ್ಷಿಸಿಟ್ಟುಕೊಳ್ಳುವುದೂ ಸವಾಲಿಗೆ ಕೆಲಸವಾಗಿದೆ.

    ಭತ್ತ ನಾಟಿ ಮಾಡುವುದರಿಂದ ಹಿಡಿದು ಕಟಾವು ಮಾಡುವ ಯಂತ್ರದವರಿಗೂ ಉದ್ರಿ ಹೇಳಿದ್ದೇವೆ. ಫಸಲು ಉತ್ತಮವಾಗಿ ಬಂದಿದೆ. ಆದರೆ, ಖರೀದಿಗೆ ಯಾರೂ ಬರುತ್ತಿಲ್ಲ. ಬಂದವರು 1200 ರೂಪಾಯಿಗೆ ಕ್ವಿಂಟಾಲ್​ನಂತೆ ಕೊಡಲು ಹೇಳುತ್ತಿದ್ದಾರೆ. ಈ ಬೆಲೆಯಲ್ಲಿ ಭತ್ತ ಮಾರಾಟ ಮಾಡಿದರೆ, ನಾಟಿ ಮಾಡಿದ ಖರ್ಚೂ ಬರುವುದಿಲ್ಲ. ಆದ್ದರಿಂದ ಸರ್ಕಾರ ಕೂಡಲೆ 2500 ರೂಪಾಯಿ ಬೆಂಬಲ ಬೆಲೆ ಘೊಷಿಸಿ ಖರೀದಿಗೆ ಮುಂದಾಗಬೇಕು.

    | ಸೋಮಪ್ಪ ಬಾಡಿನ, ಭತ್ತ ಬೆಳೆಗಾರ ಚಂದಾಪುರ

    ಭತ್ತ ಖರೀದಿಗೆ ಸರ್ಕಾರದಿಂದ ಈವರೆಗೂ ಯಾವುದೇ ಆದೇಶ ಬಂದಿಲ್ಲ. ತಾಲೂಕಿನಲ್ಲಿ ಭತ್ತ ಬೆಳೆದವರ ಸ್ಥಿತಿ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಮುಂದಿನ ದಿನದಲ್ಲಿ ಸರ್ಕಾರದಿಂದ ಯಾವ ತೀರ್ವನವಾಗಲಿದೆ ಎಂಬುದನ್ನು ತಿಳಿದು ಕ್ರಮ ಜರುಗಿಸಲಾಗುವುದು.

    | ಶಂಕರ ಜಿ.ಎಸ್., ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts