More

    ಮಳೆಯಿಂದ ಗದ್ದೆಯಲ್ಲೇ ಉಳಿದ ಭತ್ತ ಪೈರು

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್

    ಒಂದೆಡೆ ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆ, ಇನ್ನೊಂದೆಡೆ ಕೂಲಿ ಕಾರ್ಮಿಕರ ಕೊರತೆ, ಜತೆಗೆ ನಿತ್ಯ ಸುರಿಯುವ ಮಳೆಯಿಂದ ಕಟಾವಿಗೆ ಸಿದ್ಧವಾದ ಭತ್ತ ಗದ್ದೆಯಲ್ಲೇ ಉಳಿಯುವಂತಾಗಿದೆ.
    ಕಾರ್ಕಳ ತಾಲೂಕಾದ್ಯಂತ ಕಳೆದ ಒಂದು ವಾರದಿಂದ ರಾತ್ರಿ ಸುರಿಯುವ ಮಳೆಯಿಂದ ಕಟಾವು ಮಾಡಲಾದ ಭತ್ತ ಗದ್ದೆಯಲ್ಲಿ ನೀರಿನಲ್ಲಿದೆ. ತಮಿಳುನಾಡು ಮೂಲದ ಬಹುತೇಕ ಭತ್ತ ಕಟಾವು ಯಂತ್ರಗಳು ಕರಾವಳಿ ಭಾಗಕ್ಕೆ ಬಂದರೂ ಇಲ್ಲಿನ ಮಧ್ಯವರ್ತಿಗಳ ಕಾಟದಿಂದ ಕಟಾವಿಗೆ ದುಬಾರಿ ಮೊತ್ತ ಪಡೆಯುತ್ತಿದ್ದಾರೆ. ಸರಿಯಾದ ಸಮಯಕ್ಕೆ ಯಂತ್ರಗಳು ದೊರಕದೆ ಕಟಾವಿಗೆ ಸಿದ್ಧವಾದ ಪೈರು ಗದ್ದೆಯಲ್ಲೇ ಉದುರಿ ಬೀಳುವಂತಾಗಿದೆ.

    ಕಟಾವು ಮಾಡಲಾದ ಭತ್ತ ಮನೆಯ ಅಂಗಳ ಸೇರಿದರೂ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಪೈರು ಒದ್ದೆಯಾಗುತ್ತಿದೆ. ತಾಲೂಕಾದ್ಯಂತ ಭತ್ತ ಬೆಳೆಗಾರರು ಈಗಾಗಲೇ ಶೇ.30ರಷ್ಟು ಕಟಾವು ಮಾಡಿದ್ದಾರೆ. ಹಲವು ಕಡೆಗಳಲ್ಲಿ ಪೈರು ಸಂಪೂರ್ಣ ನೆಲಕಚ್ಚಿದೆ. ಭತ್ತ ಉದುರಿ ಮಣ್ಣು ಸೇರುತ್ತಿದೆ. ರೈತರು ಈ ಬಾರಿ ಆರಂಭದಿಂದಲೂ ಸಾಕಷ್ಟು ನಷ್ಟ ಅನುಭವಿಸಿದ್ದು, ಕಳೆದ ಒಂದು ತಿಂಗಳ ಹಿಂದೆ ಸುರಿದ ಭಾರಿ ಮಳೆ ರೈತರನ್ನು ಮತ್ತಷ್ಟು ಕಂಗಾಲಾಗಿಸಿದೆ.

    ಸ್ವಲ್ಪ ಭಾಗದಲ್ಲಿ ಕಟಾವು ಕಾರ್ಯ ಮುಗಿದಿದೆ. ಆದರೆ ಇನ್ನೂ ಹಲವೆಡೆ ಕಟಾವಿಗೆ ಸಿದ್ಧವಾದ ಭತ್ತ ಗದ್ದೆಯಲ್ಲೇ ಉದುರುತ್ತಿದೆ. ಮಳೆಯಿಂದಾಗಿ ಕಟಾವು ಮಾಡಲು ವಿಳಂಬವಾಗುತ್ತಿದೆ.
    ಸುಧಾಕರ್ ಸಾಲ್ಯಾನ್, ಕೃಷಿಕ

    ಶೇಕಡ 50ರಷ್ಟು ಕೃಷಿಕರು ಇನ್ನೂ ಕಟಾವು ಕಾರ್ಯ ಮಾಡಿಲ್ಲ. ಕಟಾವು ಯಂತ್ರದ ದುಬಾರಿ ವೆಚ್ಚದ ಸಮಸ್ಯೆ ಒಂದೆಡೆಯಾದರೆ, ರಾತ್ರಿ ಹೊತ್ತಿನಲ್ಲಿ ಸುರಿಯುವ ತುಂತುರು ಮಳೆಯಿಂದಾಗಿ ನಿದ್ದೆ ಬಿಟ್ಟು ಕಟಾವು ಮಾಡಲಾದ ಭತ್ತದ ಪೈರು ಕಾಯುವಂತಾಗಿದೆ.
    ವಸಂತ್ ಬೋಂಟ್ರ ಕೃಷಿಕ ನಂದಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts