More

    ಶಬರಿಮಲೆ ಪಾದಯಾತ್ರಿಗೆ ಬೈಂದೂರಲ್ಲಿ ಸ್ವಾಗತ: ವೈಷ್ಣೋದೇವಿ ದರ್ಶನ ಪಡೆದು ಜಮ್ಮು ಕಾಶ್ಮೀರದಿಂದ ಯಾತ್ರೆ ಆರಂಭ

    ಬೈಂದೂರು: ಕಳೆದ ಹತ್ತು ವರ್ಷಗಳಿಂದ ನಿರಂತರ ಶಬರಿಮಲೆಗೆ ಪಾದಯಾತ್ರೆ ನಡೆಸುತ್ತಿರುವ ಭಕ್ತರೊಬ್ಬರು ಈ ವರ್ಷ ಜಮ್ಮು ಕಾಶ್ಮೀರದಿಂದ ಯಾತ್ರೆ ಆರಂಭಿಸಿದ್ದಾರೆ. ಗುರುವಾರ ಬೈಂದೂರಿಗೆ ಆಗಮಿಸಿದ ಅವರನ್ನು ಇಲ್ಲಿನ ಅಯ್ಯಪ್ಪ ಸ್ವಾಮಿ ಭಕ್ತವೃಂದದವರು ಗೌರವದಿಂದ ಸ್ವಾಗತಿಸಿ ಬರಮಾಡಿಕೊಂಡರು.

    ಮಂಗಳೂರಿನ ಪ್ರಭಾತ್ ಕುಮಾರ್ ಕರಿಯಪ್ಪ ಅಯ್ಯಪ್ಪ ಸ್ವಾಮಿ ವ್ರತಧಾರಿ. 10 ವರ್ಷಗಳಿಂದ ಪಾದಯಾತ್ರೆ ಕೈಗೊಂಡಿರುವ ಇವರು ಈ ಬಾರಿ ಕಾಶ್ಮೀರದಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಅ.24ರಂದು ತವರಿನಲ್ಲಿ ಮಾಲಾಧಾರಣೆ ಮಾಡಿ ಅ.28ರಂದು ವಿಮಾನದ ಮೂಲಕ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಮಾತಾ ವೈಷ್ಣೋದೇವಿ ದರ್ಶನ ಪಡೆದು ಅ.31ರಂದು ಇರುಮುಡಿ ಹೊತ್ತು ಅಲ್ಲಿಂದ ಪಾದಯಾತ್ರೆ ಆರಂಭಿಸಿದ್ದಾರೆ.

    ಸತತ 101 ದಿನಗಳ ಕಾಲ ಪಾದಯಾತ್ರೆ ಮೂಲಕ ಈಗಾಗಲೇ ಸುಮಾರು 3,600 ಕಿ.ಮೀ ಕ್ರಮಿಸಿ ಗುರುವಾರ ಬೈಂದೂರು ವತ್ತಿನಕಟ್ಟೆ ಅಯ್ಯಪ್ಪ ಸ್ವಾಮಿ ಭಕ್ತವೃಂದ ಆಶ್ರಮಕ್ಕೆ ಆಗಮಿಸಿದರು. ರಾಜು ಗುರುಸ್ವಾಮಿ, ಗೋಪಾಲ, ರಾಮ, ನಾಗರಾಜ, ಮದನ್, ಕಾರ್ತಿಕ್, ನವೀನ್, ಕೇಶವ, ವ್ರತಧಾರಿಗಳು ಅವರನ್ನು ಗೌರವಿಸಿದರು.

    ಮಂಗಳೂರಿನ ಶಿವಪದವು ಶ್ರೀ ಪಂಚಮುಖಿ ಮಹಾಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಚರಣ್ ಮಹಾರಾಜರ ಮಾರ್ಗದರ್ಶನದಲ್ಲಿ ಮಂಗಳೂರು, ಕಾಸರಗೋಡು ಮಾರ್ಗವಾಗಿ ಸುಮಾರು 4 ಸಾವಿರ ಕಿ.ಮೀ. ಕ್ರಮಿಸಿ ಜ.10ರಂದು ಶಬರಿಮಲೆಗೆ ತಲುಪಿ ಮಣಿಕಂಠನ ದರ್ಶನ ಪಡೆದ ನಂತರ ಪಾದಯಾತ್ರೆ ಸಂಪನ್ನಗೊಳ್ಳಲಿದೆ. ಪ್ರತಿನಿತ್ಯ 25-30 ಕಿ.ಮೀ. ಸಾಗುವ ಈ ಯಾತ್ರೆ ಕಷ್ಟಕರವಾಗಿದ್ದರೂ, ಒಂದು ರೀತಿ ಮನಃಶಾಂತಿ ನೀಡಿದೆ. ದಾರಿಯುದ್ದಕ್ಕೂ ಜನರ ಸಹಾಯ, ಕಾಣದ ಕೈಗಳಿಂದ ದಾನ ಪಡೆಯುತ್ತಾ ಸಾಗುತ್ತಿರುವ ಪಾದಯಾತ್ರೆ ಜೀವನದಲ್ಲಿ ಮರೆಯಲು ಅಸಾಧ್ಯ ಎನ್ನುತ್ತಾರೆ ಪ್ರಭಾತ್ ಕುಮರ್ ಕರಿಯಪ್ಪ.

    ಭೂಮಂಡಲದ 84 ಲಕ್ಷ ಜೀವರಾಶಿಗಳ ಸುಖ, ಶಾಂತಿಗಾಗಿ ಕಳೆದ ಹತ್ತು ವರ್ಷಗಳಿಂದ ಶಬರಿಮಲೆ ಯಾತ್ರೆ ಮಾಡುತ್ತಾ ಬಂದಿದ್ದೇನೆ. ವಿವಿಧ ಪುಣ್ಯಕ್ಷೇತ್ರಗಳಿಂದ ಐದು ಬಾರಿ ಪಾದಯಾತ್ರೆ ಮೂಲಕ ಶಬರಿಗಿರಿಗೆ ತೆರಳಿದ್ದು, ಈ ಬಾರಿ ಜಮ್ಮು-ಕಾಶ್ಮೀರದ ವೈಷ್ಣೋದೇವಿ ಕ್ಷೇತ್ರದಿಂದ ಪಾದಯಾತ್ರೆ ಮೂಲಕ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದೇನೆ.
    ಪ್ರಭಾತ್ ಕುಮರ್ ಕರಿಯಪ್ಪ, ಶಬರಿಮಲೆ ವ್ರತಧಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts