More

    ಪಚ್ಚನಾಡಿ ತ್ಯಾಜ್ಯ ಕುಸಿತಕ್ಕೆ 9 ತಿಂಗಳು, ಪುನರ್‌ವಸತಿ, ತ್ಯಾಜ್ಯ ವಿಲೇ ಆಗಿಲ್ಲ

    ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್‌ನ ತ್ಯಾಜ್ಯ ಕುಸಿತ ಉಂಟಾಗಿ 9 ತಿಂಗಳು ಕಳೆಯಿತು. ಮಂದಾರದಿಂದ ಸ್ಥಳಾಂತರಗೊಂಡಿದ್ದ 27 ಕುಟಂಬಗಳಿಗೆ ಇನ್ನೂ ಪುನರ್ ವಸತಿ ಕಲ್ಪಿಸಿಲ್ಲ. ಮತ್ತೊಂದು ಮಳೆಗಾಲ ಎದುರಾದರೂ, ನಾಶವಾದ ಕೃಷಿ ಭೂಮಿಗೆ ಪರಿಹಾರ ಸಿಕ್ಕಿಲ್ಲ. ಈ ನಡುವೆ ಕರೊನಾ ಬಾಧೆಯಿಂದ ಇವರ ಬದುಕು ಇನ್ನಷ್ಟು ಜರ್ಝರಿತವಾಗಿದೆ.

    2019 ಆಗಸ್ಟ್ 6ರಂದು ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನ ತ್ಯಾಜ್ಯ ಕುಸಿದು ದೈವಸ್ಥಾನ, ನಾಗಬನ, ಅಡಕೆ, ತೆಂಗಿನ ತೋಟ, ಪಾರಂಪರಿಕ ಮಂದಾರ ಮನೆ ಸಹಿತ 27 ಮನೆಗಳು ಪೂರ್ಣ ಹಾಗೂ 27 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿತ್ತು. ಪೂರ್ಣವಾಗಿ ಸಂತ್ರಸ್ತರಾದ 27 ಕುಟುಂಬಗಳಿಗೆ ಬೈತುರ್ಲಿಯಲ್ಲಿರುವ ಗೃಹಮಂಡಳಿಯ ವಸತಿ ಸಮುಚ್ಚಯದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

    ಸಂತ್ರಸ್ತರ ಪೈಕಿ ಕೆಲವರಿಗೆ ಕೃಷಿ ಪರಿಹಾರ ಲಭಿಸಿದೆ. ಕೆಲವು ಕೃಷಿ ಕುಟುಂಬಗಳ ದಾಖಲೆ ಪತ್ರ ಸರಿ ಇಲ್ಲ ಎಂಬ ಕಾರಣ ನೀಡಿ ಪರಿಹಾರ ಮುಂದೂಡಿದ್ದಾರೆ. ನಷ್ಟವಾದ ಕೃಷಿ ಭೂಮಿ, ಕೆರೆ ಬಾವಿಗಳು, ಮನೆ ಪರಿಹಾರ, ಭೂ ಪರಿವರ್ತಿತ ಭೂಮಿಯಲ್ಲಿರುವ ಮನೆ ಕಟ್ಟಿಕೊಂಡಿರುವವರಿಗೆ ನಷ್ಟದ ಪ್ರಮಾಣ ಮತ್ತು ಪರಿಹಾರ ಎಷ್ಟು ಎಂಬುದು ನಿಗದಿಯಾಗಿಲ್ಲ. ಆಗ ಭರವಸೆ ನೀಡಿದ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಅಧಿಕಾರಿಗಳು ಬೇರೆ ಕಡೆ ವರ್ಗಾವಣೆಗೊಂಡಿದ್ದಾರೆ. ಆ ಬಳಿಕ ಬಂದ ಅಧಿಕಾರಿಗಳಿಗೆ ಇಲ್ಲಿನ ನಿವಾಸಿಗಳು ಸಮಸ್ಯೆಯನ್ನು ವಿವರಿಸಿ ಪರಿಹಾರಕ್ಕೆ ಮನವಿ ಮಾಡಿದ್ದು, ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಇಲ್ಲಿನ ನಿವಾಸಿ ಮಂದಾರ ರಾಜೇಶ್ ಭಟ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ನಾಶವಾದ ದೈವಸ್ಥಾನ, ನಾಗಬನ, ಪಾರಂಪರಿಕ ಮನೆ ಮರು ನಿರ್ಮಾಣದ ನಿರ್ಧಾರ ಆಗಬೇಕಿದೆ. ಮಂದಾರ ಪ್ರದೇಶವನ್ನು ನಾಶ ಮಾಡಿದ ಸುಮಾರು 10 ಲಕ್ಷ ಟನ್ ಘನ ತ್ಯಾಜ್ಯ ವಿಲೇವಾರಿ ಆಗಬೇಕಿದೆ. ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಈ ವರ್ಷ ಮತ್ತೊಂದು ದುರಂತ ಸಂಭವಿಸಬಾರದು. ಇನ್ನಷ್ಟು ಸಂತ್ರಸ್ತರ ಹುಟ್ಟಿಗೆ ತ್ಯಾಜ್ಯ ಕಾರಣವಾಗಬಾರದು ಎಂದವರು ಅಳಲು ವ್ಯಕ್ತಪಡಿಸಿದ್ದಾರೆ.

    ಬೆಂಕಿಗೆ ತೋಟ ನಾಶ: ಕಸದ ತ್ಯಾಜ್ಯಕ್ಕೆ ಆಗಾಗ ಬೆಂಕಿ ಬೀಳುತ್ತಿದೆ. ಕೆಲವು ದಿನಗಳ ಹಿಂದೆ ಬೆಂಕಿ ವ್ಯಾಪಿಸಿ ಹರಿಶ್ಚಂದ್ರ, ಕರುಣಾಕರ, ನಾಗೇಶ್ ಎಂಬವರ ಅಡಕೆ ತೋಟಕ್ಕೆ ಬೆಂಕಿ ಬಿದ್ದು ನಾಶವಾಗಿದೆ.

    ಪ್ರಚಾರ ಪಡೆದವರು ಮೌನ: ಅಂದು ಆಡಳಿತ ಪಕ್ಷ, ಪ್ರತಿಪಕ್ಷ, ಅಧಿಕಾರಿಗಳು ಮಂದಾರ ಪ್ರದೇಶಕ್ಕೆ ಸ್ಪರ್ಧೆಗೆ ಬಿದ್ದಂತೆ ಬಂದಿದ್ದರು. ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿ ಪ್ರಚಾರ ಪಡೆದುಕೊಂಡಿದ್ದರು. ಇಂದು ಅವರ‌್ಯಾರು ಕೂಡ ಮಂದಾರ ಸಂತ್ರಸ್ತರ ಜತೆಗಿಲ್ಲ. ಸರ್ಕಾರ ಪ್ರತಿ ತಿಂಗಳು ಖರ್ಚಿಗೆ ತಲಾ 10 ಸಾವಿರ ರೂ. ನೀಡುವುದಾಗಿ 27 ಕುಟುಂಬಗಳಿಗೆ ಭರವಸೆ ನೀಡಿತ್ತು. ಆಗಸ್ಟ್ ತಿಂಗಳಿನಲ್ಲಿ ಒಂದು ಕಂತು ಬಿಟ್ಟರೆ ಆ ಬಳಿಕ ಹಣ ನೀಡಿಲ್ಲ. ಕೆಲವು ಸಂಘ ಸಂಸ್ಥೆಗಳು, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರು ಜೀವನಾವಶ್ಯಕ ಸಾಮಗ್ರಿಗಳನ್ನು ಒದಗಿಸಿ ಕೊಟ್ಟಿದ್ದಾರೆ. ಪ್ರಸ್ತುತ ಕೃಷಿ ಆದಾಯವೂ ಇಲ್ಲದೆ, ಉದ್ಯೋಗವೂ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.

    ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನ ತ್ಯಾಜ್ಯ ಕುಸಿತ ಉಂಟಾದ ಮಂದಾರ ಪ್ರದೇಶದ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದ ನಿರ್ಧಾರ ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿದೆ. ತ್ಯಾಜ್ಯ ಮತ್ತಷ್ಟು ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದೊಳಗೆ ಪೂರ್ಣಗೊಳ್ಳಲಿದೆ. ಕರೊನಾ ಒತ್ತಡ ಕಡಿಮೆಯಾದ ತಕ್ಷಣ ಸಂತ್ರಸ್ತರ ಸಭೆ ನಡೆಸಲಾಗುವುದು.
    ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಮನಪಾ

    ತ್ಯಾಜ್ಯ ಕುಸಿತದಿಂದ ಸಂತ್ರಸ್ತರಾದವರ ಪೈಕಿ ಬಹುತೇಕ ಮಂದಿ ಕೃಷಿಯನ್ನೇ ನಂಬಿದ್ದವರು. ಅವರಿಗೆ ಹೊರಗಡೆ ಹೋಗಿ ಬೇರೆ ಕೆಲಸ ಮಾಡಿ ಗೊತ್ತಿಲ್ಲ. ಇದೀಗ ಕೃಷಿ ಭೂಮಿಯನ್ನು ಕಳೆದುಕೊಂಡ ಅವರು ಜೀವನ ನಿರ್ವಹಣೆ ಮಾಡಲು ಪರದಾಡುವಂತಾಗಿದೆ. ಕರೊನಾ ಲಾಕ್‌ಡೌನ್‌ನಿಂದ ಇಲ್ಲಿನ ನಿವಾಸಿಗರ ಜೀವನ ಇನ್ನಷ್ಟು ಕಷ್ಟವಾಗಿದೆ.
    ಮಂದಾರ ರಾಜೇಶ್ ಭಟ್, ಸಂತ್ರಸ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts