More

    ಖಾಸಗಿ ಪ್ರಯೋಗಕ್ಕೆ ಪಚ್ಚನಾಡಿ, ಮನಪಾದ ಜಾಗ ನೀಡಲು ಒತ್ತಡ

    – ಪಿ.ಬಿ.ಹರೀಶ್ ರೈ ಮಂಗಳೂರು

    ಪಚ್ಚನಾಡಿಯ ತ್ಯಾಜ್ಯ ದುರಂತದಿಂದ ಪಾಠ ಕಲಿಯದ ಮಂಗಳೂರು ಮಹಾನಗರ ಪಾಲಿಕೆ ಈಗ ತ್ಯಾಜ್ಯ ಸಂಸ್ಕರಣಾ ಘಟಕವನ್ನೇ ಖಾಸಗಿ ಸಂಸ್ಥೆಗೆ ಪ್ರಯೋಗಕ್ಕೆ ನೀಡಲು ಮುಂದಾಗಿದೆ.

    ಯಾವುದೇ ಟೆಂಡರ್ ಆಹ್ವಾನಿಸದೆ, ಆಡಳಿತಾತ್ಮಕ ಮಂಜೂರಾತಿ ಪಡೆಯದೆ ಪಾಲಿಕೆಯ ಜಾಗವನ್ನು ಖಾಸಗಿ ಸಂಸ್ಥೆಗೆ ನೀಡುವ ಪ್ರಯತ್ನ ನಡೆದಿದೆ. ಸಾಮಾನ್ಯವಾಗಿ ತೆರೆಮರೆಯಲ್ಲಿ ಜನಪ್ರತಿನಿಧಿಗಳ ಶಿಫಾರಸಿನ ಮೇರೆಗೆ ಇಂತಹ ಕೆಲಸ ನಡೆಯುತ್ತದೆ. ಆದರೆ ಇಲ್ಲಿ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಒತ್ತಡ ಹೇರಿದ್ದಾರೆ ಎನ್ನುವ ಮಾಹಿತಿ ಇದೆ.

    ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ಗೆ ಪ್ರತಿದಿನ 100 ಟನ್ ಹಸಿ ತ್ಯಾಜ್ಯ ಸಹಿತ ಸುಮಾರು 350 ಟನ್ ತ್ಯಾಜ್ಯ ಬಂದು ಬೀಳುತ್ತಿದೆ. ತ್ಯಾಜ್ಯ ಸಂಸ್ಕರಣೆ ಗುತ್ತಿಗೆ ವಹಿಸಿದ್ದ ದಿಲ್ಲಿ ಮೂಲದ ಯುನಿಕ್ ವೇಸ್ಟ್ ಪ್ರೊಸೆಸಿಂಗ್‌ನ ಗುತ್ತಿಗೆ ಅವಧಿ ಮುಗಿದಿದೆ. ಈಗ ಪಾಲಿಕೆ ವತಿಯಿಂದಲೇ ಅಲ್ಪಪ್ರಮಾಣದ ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ.

    ಅನುಭವ ಇಲ್ಲದ ಸಂಸ್ಥೆ: ಕೇವಲ ಎರಡು ತಿಂಗಳ ಹಿಂದೆ ಸ್ಥಾಪನೆಯಾದ, ಯಾವುದೇ ಅನುಭವ ಇಲ್ಲದ ಸಂಸ್ಥೆಗೆ ತ್ಯಾಜ್ಯ ಸಂಸ್ಕರಣೆಯ ಪ್ರಯೋಗಕ್ಕೆ ಜಾಗ ನೀಡಲು ಮನಪಾ ಮುಂದಾಗಿದೆ. ಈ ಹಿಂದೆ ಗುಜರಾತ್‌ನ ರಾಜ್‌ಕೋಟ್, ಅಹಮದಾಬಾದ್, ವಡೋದರ ಮುಂತಾದ ನಗರಗಳಲ್ಲಿ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಿದ ಅಬೆಲಾನ್ ಹೆಸರಿನ ಸಂಸ್ಥೆ ಪಚ್ಚನಾಡಿಯಲ್ಲಿ ಘಟಕ ಸ್ಥಾಪಿಸುವ ಬಗ್ಗೆ ಸಮಗ್ರ ಯೋಜನಾ ವರದಿ ಸಲ್ಲಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಅನುಮತಿ ದೊರೆತಿಲ್ಲ.

    ಗೂಗಲ್ ನಕಲಿನ ವರದಿ: ಈಗ ಮಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದು ಕಪ್ಪು ಸೈನಿಕ ನೊಣ(ಬ್ಲಾಕ್ ಸೋಲ್ಜರ್ ಫ್ಲೈ) ಸಂತಾನೋತ್ಪತ್ತಿ ಮೂಲಕ ಹಸಿ ಕಸ ಸಂಸ್ಕರಣೆ ಮಾಡುವುದಾಗಿ ಪಾಲಿಕೆಗೆ ಸಲ್ಲಿಸಿದ ಸಮಗ್ರ ಯೋಜನಾ ವರದಿ ‘ವಿಜಯವಾಣಿ’ಗೆ ಲಭ್ಯವಾಗಿದೆ. ಪಾಲಿಕೆಗೆ ವರದಿ ನೀಡಿರುವ ಖಾಸಗಿ ಸಂಸ್ಥೆ ಹಲವಾರು ಪಾಲಿಕೆ, ನಗರ ಸ್ಥಳೀಯಾಡಳಿತ ಜತೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದೆ. ಆದರೆ ಪಾಲಿಕೆಯ ಹೆಸರುಗಳನ್ನು ಉಲ್ಲೇಖಿಸಿಲ್ಲ. ಇನ್ನು ಕಪ್ಪು ಸೈನಿಕ ನೊಣದ ಪುಟಗಟ್ಟಲೆ ಮಾಹಿತಿ ಒದಗಿಸಿದೆ. ಎಲ್ಲವೂ ಗೂಗಲ್‌ನಿಂದ ಯಥಾವತ್ ನಕಲು.

    ಏನಿದು ನೊಣ?: ಕಪ್ಪು ಸೈನಿಕ ನೊಣ ಬಾಲ್ಯಾವಸ್ಥೆಯಲ್ಲಿ ಹಸಿಕಸವನ್ನು ತಿಂದು ಪೋಷಕಾಂಶಭರಿತ ಗೊಬ್ಬರ ನೀಡುತ್ತದೆ. ಇದರ ಲಾರ್ವಾ ಸಾಕುಪ್ರಾಣಿಗಳ ಆಹಾರವಾಗಿ ಬಳಕೆಯಾಗುತ್ತದೆ. ಸ್ವಚ್ಛತಾ ಆಂದೋಲನದಲ್ಲಿ ಹೊಸ ಕ್ರಾಂತಿ ಮಾಡಿರುವ ಮಂಗಳೂರಿನ ರಾಮಕೃಷ್ಣ ಮಠದವರು ಕಪ್ಪು ಸೈನಿಕ ನೊಣದ ಮರಿ ಹುಳ ಬಳಸಿ ಮಡಕೆ ಗೊಬ್ಬರ ತಯಾರಿಯನ್ನು ಪರಿಚಯಿಸಿದ್ದರು.

    10 ವರ್ಷ ಅವಧಿಗೆ: ಪಾಲಿಕೆಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು 10 ವರ್ಷ ಗುತ್ತಿಗೆ ನೀಡುವಂತೆ ಖಾಸಗಿ ಸಂಸ್ಥೆ ತಿಳಿಸಿದೆ. 24 ಸಾವಿರ ಚದರ ಅಡಿಯ 8 ಶೆಡ್, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಎಲ್ಲವನ್ನೂ ಪಾಲಿಕೆ ಕಲ್ಪಿಸಬೇಕು. ಖಾಸಗಿ ಸಂಸ್ಥೆ ಇದರಲ್ಲಿ ಪ್ರಯೋಗ ಮಾಡಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

    ತ್ಯಾಜ್ಯ ಘಟಕವನ್ನು ಪ್ರಯೋಗಾರ್ಥ ಮೂರು ತಿಂಗಳ ಅವಧಿಗೆ ಖಾಸಗಿ ಸಂಸ್ಥೆಗೆ ನೀಡಲಾಗುತ್ತಿದೆ. ತ್ಯಾಜ್ಯ ಸಂಸ್ಕರಣೆ ಬಗ್ಗೆ ಸಂಸ್ಥೆ ಸಮಗ್ರ ವರದಿ ನೀಡಿದೆ. ಅದನ್ನು ಮೇಯರ್ ಪರಿಶೀಲಿಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಅನುಮತಿ ನೀಡಲಾಗುವುದು.

    ಅಕ್ಷಿ ಶ್ರೀಧರ್, ಆಯುಕ್ತರು, ಮನಪಾ

    ತ್ಯಾಜ್ಯ ಘಟಕವನ್ನು ಏಕಾಏಕಿ ಖಾಸಗಿ ಸಂಸ್ಥೆಗೆ ನೀಡುವಂತಿಲ್ಲ. ಪಾಲಿಕೆಗೆ ತನ್ನದೇ ಆದ ನಿಯಮ ಇದೆ. ಆಯುಕ್ತರು ನೀಡಿದ ವರದಿಯನ್ನು ಪರಿಶೀಲಿಸಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು.

    ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್

    ಹಸಿ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಖಾಸಗಿ ಸಂಸ್ಥೆ ನೀಡಿದ ವರದಿಯನ್ನು ಮೇಯರ್ ನನ್ನ ಗಮನಕ್ಕೆ ತಂದಿದ್ದಾರೆ. ನೇರವಾಗಿ ಖಾಸಗಿ ಸಂಸ್ಥೆಯ ಪ್ರಯೋಗಕ್ಕೆ ಪಾಲಿಕೆ ಜಾಗವನ್ನು ನೀಡಲು ಅವಕಾಶ ಇಲ್ಲ. ನಿಯಮ ಬಾಹಿರವಾಗಿ ಸರ್ಕಾರದ ಜಾಗವನ್ನು ನೀಡಲು ಸಾಧ್ಯವೇ ಇಲ್ಲ.

    ಡಾ.ವೈ.ಭರತ್ ಶೆಟ್ಟಿ ಶಾಸಕರು, ಮಂಗಳೂರು ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts