More

    ಯಲ್ಲಾಪುರ ಆಸ್ಪತ್ರೆಯಲ್ಲೇ ಆಮ್ಲಜನಕ ತಯಾರಿಕೆ ಘಟಕ


    ಯಲ್ಲಾಪುರ: ಪಿಎಂ ಕೇರ್ ನಿಧಿಯಿಂದ ಯಲ್ಲಾಪುರದಲ್ಲೆ ಆಮ್ಲಜನಕ ಸಿದ್ಧಪಡಿಸುವ ಘಟಕ ತಯಾರಾಗಿದೆ. ಇದು ಒಂದು ನಿಮಿಷಕ್ಕೆ 100 ಲೀ. ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
    ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಮುಖ್ಯಮಂತ್ರಿಗಳು ಇಂದು ಎಲ್ಲ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಿ, ಕರೊನಾ ನಿಯಂತ್ರಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ರ್ಚಚಿಸಿದ್ದಾರೆ. 5 ಕೋಟಿ ರೂ. ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಕೊರತೆ ಇಲ್ಲ. ಆಮ್ಲಜನಕ ಕೊರತೆ ಇಲ್ಲ. ವೆಂಟಿಲೇಟರ್ ಇದ್ದರೂ ಅದರ ಅವಶ್ಯಕತೆ ಬಂದಿಲ್ಲ. ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಕೊರತೆಯಾಗದಂತೆ ಶೀಘ್ರ ವ್ಯವಸ್ಥೆ ಮಾಡಲಾಗುವುದು. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ರಕ್ಷಣೆಗಾಗಿ ಮೇಲ್ಛಾವಣಿ ನಿರ್ವಿುಸಲಾಗಿದೆ. ಅಲ್ಲಿ 250-300 ಬೆಡ್​ಗಳ ವ್ಯವಸ್ಥೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ವಿವಿಧ ತಂಡಗಳನ್ನು ರಚಿಸಿ, ಕೋವಿಡ್ ನಿಯಂತ್ರಣಕ್ಕೆ ಕಂಕಣಬದ್ಧರಾಗಿದ್ದೇವೆ ಎಂದರು.
    ಎಚ್ಚರ ವಹಿಸಿ: ಕೋವಿಡ್ ಬಗ್ಗೆ ಎಚ್ಚರ ವಹಿಸಿ. ದೇಹದಲ್ಲಿ 94ಕ್ಕಿಂತ ಆಮ್ಲಜನಕ ಪ್ರಮಾಣ ಕಡಿಮೆಯಾದರೆ ತಕ್ಷಣ ಆಸ್ಪತ್ರೆಗೆ ಬನ್ನಿ ಎಂದು ಹೆಬ್ಬಾರ ಜನರಲ್ಲಿ ಮನವಿ ಮಾಡಿದರು. ಕೇವಲ ಸರ್ಕಾರದಿಂದ ಇಂತಹ ರೋಗವನ್ನು ನಿಯಂತ್ರಿಸುವುದು ಕಷ್ಟ. ಸಾರ್ವಜನಿಕರ ಸಹಕಾರ ತೀರಾ ಅಗತ್ಯವಾಗಿದೆ. ಅಧಿಕಾರಿಗಳು ಪ್ರತಿಹಂತದಲ್ಲಿ ಕೋವಿಡ್ ಸ್ಥಿತಿ-ಗತಿಯನ್ನು ಗಮನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲು ನಿರ್ದೇಶಿಸಲಾಗಿದೆ. ಆದರೆ ಸಾರ್ವಜನಿಕರು ಗೋವಾ, ಮುಂಬೈ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ವಾಸಿಸುತ್ತಿರುವವರು ತಮ್ಮ ಊರೆಂದು ಮನೆಗೆ ಬಂದವರು ಕುಟುಂಬ ಸದಸ್ಯರ ಸಂಪರ್ಕದಿಂದ ಒಂದು ವಾರ ಕಾಲ ದೂರವಿದ್ದು, ಅಗತ್ಯ ಬಿದ್ದರೆ ಚಿಕಿತ್ಸೆ ಪಡೆದುಕೊಳ್ಳಿ. ಎಲ್ಲ ಔಷಧಗಳು ಲಭ್ಯವಿದೆ. ಆದರೆ ಇಲ್ಲಿಗೆ ಬಂದವರು ಕುಟುಂಬಕ್ಕೆ ಮಾತ್ರ ರೋಗವನ್ನು ಹರಡಬೇಡಿ ಎಂದು ಶಿವರಾಮ ಹೆಬ್ಬಾರ ವಿನಂತಿಸಿದರು.
    ಖಾಸಗಿ ಆಸ್ಪತ್ರೆ ಅಸಮಾಧಾನ: ಜಿಲ್ಲೆಯ ಕೆಲವೇ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ಇಟ್ಟುಕೊಂಡು ಕೊನೆ ಕ್ಷಣದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸುತ್ತಿರುವುದು ತೀರಾ ನೋವನ್ನು ತರುತ್ತಿದೆ. ದಯವಿಟ್ಟು ರೋಗಿಗಳನ್ನು ಮೊದಲೇ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸುವುದರಿಂದ ಅವರಿಗೆ ಸರಿಯಾದ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ತಹಸೀಲ್ದಾರ ಶ್ರೀಕೃಷ್ಣ ಕಾಮಕರ್, ಗ್ರೇಡ್-2 ತಹಸೀಲ್ದಾರ್ ಸಿ.ಜಿ.ನಾಯ್ಕ, ತಾಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ, ಆಡಳಿತ ವೈದ್ಯಾಧಿಕಾರಿ ಡಾ.ರಾಮಾ ಹೆಗಡೆ, ಡಾ.ಸೌಮ್ಯಾ ಕೆ.ವಿ., ಕ್ಷ-ಕಿರಣ ತಜ್ಞ ಜಿ.ಎಂ.ಭಟ್ಟ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ.ಭಟ್ಟ, ಸಹಾಯಕ ಅಧಿಕಾರಿ ಪ್ರವೀಣ ಇನಾಮದಾರ, ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ.ಪಂ. ಮಾಜಿ ಅಧ್ಯಕ್ಷ ಶಿರೀಷ ಪ್ರಭು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts