More

    ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೂ ಜಿಲ್ಲಾಡಳಿತದಿಂದಲೇ ಆಮ್ಲಜನಕ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿದೆ. ಇದೇ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಯವರು ಸೋಂಕಿತರ ದಾಖಲಾತಿಗೆ ಹಿಂದೇಟು ಹಾಕುವಂತಾಗಿದೆ.

    ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಹೊರತು ಪಡಿಸಿ 5ಕ್ಕೂ ಅಧಿಕ ಖಾಸಗಿ ಕೋವಿಡ್ ಆಸ್ಪತ್ರೆಗಳಿವೆ. ಅವುಗಳಿಗೆ ನಿತ್ಯವೂ ಒಂದು ಟನ್ ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯಿದೆ. ಜತೆಗೆ ಸರ್ಕಾರಿ ಆಸ್ಪತ್ರೆಗಳಿಗೆ 7 ಟನ್ ಆಕ್ಸಿಜನ್ ಸಿಲಿಂಡರ್ ಬೇಕು. ಸದ್ಯ ಸರ್ಕಾರಿ ಆಸ್ಪತ್ರೆ ಹಾಗೂ ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ಜಿಲ್ಲಾಡಳಿತವೇ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಜಿಲ್ಲೆಗೆ ಬಳ್ಳಾರಿಯ ಜಿಂದಾಲ್​ನಿಂದ ನಿತ್ಯವೂ 7 ಟನ್ ಆಕ್ಸಿಜನ್ ಪೂರೈಕೆ ಆಗುತ್ತಿದೆ. ಅದನ್ನು ಗ್ರಾಸೀಂ ಫ್ಯಾಕ್ಟರಿಯ ಟ್ಯಾಂಕರ್​ನಲ್ಲಿ ಸಂಗ್ರಹಿಸಿಟ್ಟು ಅವಶ್ಯಕತೆ ಆಧಾರದ ಮೇಲೆ ಎಲ್ಲ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಅದರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಒಂದು ಟನ್ ಬೇಡಿಕೆಯಿದ್ದರೆ, ಅವರಿಗೆ ಶೇ. 75ರಷ್ಟು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ರಾಣೆಬೆನ್ನೂರ ನಗರದ ಓಂ ಕೋವಿಡ್ ಆಸ್ಪತ್ರೆಯವರು ಮಾತ್ರ ನಿತ್ಯವೂ ಎರಡು ಸಿಲಿಂಡರ್​ಗಳನ್ನು ಬಳ್ಳಾರಿಯಿಂದ ವೈಯಕ್ತಿಕ ಪರಿಚಯದಿಂದ ತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

    ಸಮಸ್ಯೆ ಏಕೆ…?: ಈ ಹಿಂದೆ ಖಾಸಗಿ ಆಸ್ಪತ್ರೆಯವರು ಆಯಾ ನಗರದ ಚಿಕ್ಕಪುಟ್ಟ ಏಜೆನ್ಸಿಗಳ ಮೂಲಕ ಆಕ್ಸಿಜನ್ ಸಿಲಿಂಡರ್​ಗಳನ್ನು ನೇರವಾಗಿ ಖರೀದಿಸುತ್ತಿದ್ದರು. ಆದರೀಗ ಏಜೆನ್ಸಿಯವರು ಸರ್ಕಾರಕ್ಕೆ ಹೊರತುಪಡಿಸಿ ಯಾರಿಗೂ ಸಿಲಿಂಡರ್ ವಿತರಣೆ ಮಾಡುವಂತಿಲ್ಲ್ಲ ಖಾಸಗಿ ಆಸ್ಪತ್ರೆಯವರು ಜಿಲ್ಲಾಡಳಿತ ನೀಡಿದ ಬಳಿಕವೇ ಆಕ್ಸಿಜನ್ ತೆಗೆದುಕೊಳ್ಳಬೇಕಿದೆ. ಆದರೆ, ಜಿಲ್ಲಾಡಳಿತ ನಿತ್ಯವೂ ಸರ್ಕಾರಿ ಆಸ್ಪತ್ರೆಗಳಿಗೆ ಕನಿಷ್ಠ ರೂಪದಲ್ಲಿ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಇಂಥ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಹೇಗೆ ಸಾಧ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ. ಖಾಸಗಿ ಆಸ್ಪತ್ರೆಗಳಿಗೆ ನಿತ್ಯವೂ ಜಿಲ್ಲಾಡಳಿತದಿಂದ ಆಕ್ಸಿಜನ್ ದೊರೆಯುತ್ತದೆ ಎನ್ನುವ ಗ್ಯಾರಂಟಿಯೂ ಇಲ್ಲ.

    ಜಿಲ್ಲೆಯ ಕರೊನಾ ಬೆಡ್​ವುಳ್ಳ ಖಾಸಗಿ ಆಸ್ಪತ್ರೆಗೆ ನಿತ್ಯವೂ ಒಂದು ಟನ್ ಆಕ್ಸಿಜನ್ ಅವಶ್ಯಕತೆಯಿದೆ. ಜಿಲ್ಲಾಡಳಿತದಿಂದ ಶೇ. 75ರಷ್ಟು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಿತ್ಯವೂ ಇಷ್ಟು ಆಕ್ಸಿಜನ್ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆಯವರು ಆಕ್ಸಿಜನ್ ಅವಶ್ಯವಿರುವ ಕರೊನಾ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸುವ ಸಲುವಾಗಿ ಸರ್ಕಾರ ರಾಜ್ಯಮಟ್ಟದಲ್ಲಿಯೇ ಎಲ್ಲ ಆಸ್ಪತ್ರೆಗಳ ಮಾಹಿತಿ ಪಡೆದು, ಆಯಾ ಜಿಲ್ಲೆಯ ಖಾಸಗಿ ಏಜೆನ್ಸಿ ಮೂಲಕ ಅವರಿಗೆ ಆಕ್ಸಿಜನ್ ಸಿಲಿಂಡರ್​ಗಳನ್ನು ನೇರವಾಗಿ ಪೂರೈಸಲು ಕ್ರಮ ಕೈಗೊಳ್ಳಲಿದೆ. ಎರಡ್ಮೂರು ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ.

    | ಸಂಜಯ ಶೆಟ್ಟೆಣ್ಣವರ, ಹಾವೇರಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts