More

    ಹೊರರಾಜ್ಯದ ವ್ಯಾಪಾರಿಗಳನ್ನು ತಡೆಯೋಣ

    ಹಿರೇಬಾಗೇವಾಡಿ: ಸ್ಥಳೀಯ ವ್ಯಾಪಾರಸ್ಥರು ಬದುಕಬೇಕಿದ್ದರೆ ಹೊರರಾಜ್ಯಗಳಿಂದ ಬರುವ ವ್ಯಾಪಾರಸ್ಥರನ್ನು ತಡೆಗಟ್ಟುವ ಕೆಲಸ ಮಾಡಬೇಕಿದೆ ಎಂದು ಇಲ್ಲಿಯ ಮಾಜಿ ಸೈನಿಕ, ಕಿರಾಣಿ ಅಂಗಡಿ ಮಾಲೀಕ ಬಿ.ಬಿ. ಬಾಗೇವಾಡಿ ಹೇಳಿದ್ದಾರೆ.

    ಇಲ್ಲಿಯ ಪಡಿಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸ್ಥಳೀಯ ಎಲ್ಲ ವ್ಯಾಪಾರಸ್ಥರ ಸಭೆಯಲ್ಲಿ ಅವರು ಮಾತನಾಡಿ, ಕಡಿಮೆ ದರದಲ್ಲಿ ಸಾಮಗ್ರಿ ಕೊಡುವ ಆಸೆ ತೋರಿಸುವ ಮೂಲಕ ಹೊರರಾಜ್ಯದ ವ್ಯಾಪಾರಸ್ಥರು ನಮ್ಮ ಉದ್ಯೋಗಕ್ಕೆ ಸಂಚಕಾರ ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಣ ಮಾಡುವ ಉದ್ದೇಶವೊಂದನ್ನೇ ಹೊಂದಿರುವ ಅವರು, ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ದಿನಸಿ ಮಾರಾಟ ಮಾಡುತ್ತಿದ್ದಾರೆ. ಅವರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ನಷ್ಟವಾಗುತ್ತಿದೆ. ಹೀಗಾಗಿ ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಬದಿಗೊತ್ತಿ ಪಕ್ಷಾತೀತವಾಗಿ ಸಂಘಟಿತರಾಗಬೇಕು. ಈ ವಿಚಾರವಾಗಿ ಸಂಘ ರಚಿಸಿ, ಪಂಚಾಯಿತಿ ಅಥವಾ ತಹಸೀಲ್ದಾರ್‌ಗೆ ಮನವಿ ಸಲ್ಲಿಸೋಣ ಎಂದರು.

    ಆಹಾರ ಇಲಾಖೆಗೆ ತಿಳಿಸೋಣ: ಇನ್ನೋರ್ವ ಕಿರಾಣಿ ಅಂಗಡಿಕಾರ ಬಸವರಾಜ ಪಾಶ್ಚಾಪುರ ಮಾತನಾಡಿ, ಒಬ್ಬ ವ್ಯಾಪಾರಿಗೆ ಭಾರತದಾದ್ಯಂತ ಎಲ್ಲಿಬೇಕೆಂದರಲ್ಲಿ ವ್ಯಾಪಾರ ಮಾಡುವ ಹಕ್ಕಿದೆ. ಹೀಗಾಗಿ ಅದನ್ನು ತಡೆಯುವುದು ಕಷ್ಟ. ಅವರು ಕಳಪೆ ದಿನಸಿ ಮಾರಾಟ ಮಾಡುತ್ತಿರುವ ಬಗ್ಗೆ ಅದಕ್ಕೆಂದೇ ಮೀಸಲಿರುವ ಆಹಾರ ಇಲಾಖೆಗೆ ತಿಳಿಸಿ ಸರಿಪಡಿಸೋಣ. ಅವರು ಬೇಡ ಇವರು ಬೇಡ ಎನ್ನುವುದಾದರೆ ಸಂಘಟನೆ ಬೇಡ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಈರಣ್ಣ ರೊಟ್ಟಿ, ಹೊರರಾಜ್ಯಗಳ ವ್ಯಾಪಾರಸ್ಥರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗಂಡಾಂತರ ಸಂಭವಿಸಲಿವೆ. ಹೀಗಾಗಿ ಅದನ್ನು ತಪ್ಪಿಸಲು ನಮಗೆ ಸಂಘಟನೆ ಅವಶ್ಯವಿದೆ ಎಂದರು. ಎಲ್.ಡಿ. ಪಾಶ್ಚಾಪುರ, ಬಸವರಾಜ ಗುಗ್ಗರಿ, ರಾಜು ಬಾವಿಮನಿ ಮಾತನಾಡಿದರು. ಶಿವರಾಯಗೌಡ ಪಾಟೀಲ, ಇಮ್ರಾನ್ ಸೈಯ್ಯದ್ ಸೋಮಶೇಖರ ಬೆಟಗೇರಿ, ಚಂದ್ರಕಾಂತ ಅಂಗಡಿ, ಪ್ರಭು ಮುರಗೋಡ, ಬಸವರಾಜ ವಾಲಿ, ಸಿ.ಎಂ.ಕುಂಬಾರ, ಜಯರಾಮ ಶೆಟ್ಟಿ, ಚನ್ನಬಸವ ಗಾಣಿಗೇರ, ಉಲ್ಲಾಸ ಯಲಿಗಾರ ಸೇರಿದಂತೆ ಇನ್ನೂರಕ್ಕೂ ಹೆಚ್ಚು ವ್ಯಾಪಾರಸ್ಥರು, ಗ್ರಾಮದ ಹಿರಿಯರು ಮತ್ತಿತರರು ಉಪಸ್ಥಿತರಿದ್ದರು.

    ಮೊದಲು ಗ್ರಾಮದ ವ್ಯಾಪಾರಿಗಳಿಗೆ ಆದ್ಯತೆ ಕೊಡೋಣ. ವ್ಯಾಪಾರ ಪ್ರಕ್ರಿಯೆ ನಮ್ಮವರೊಂದಿಗೇ ಆಗಲಿ. ಒಂದಾಗಿ ಒಳ್ಳೆಯ ಬೆಲೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ದಿನಸಿ ವಿತರಿಸುವಂತಾಗಬೇಕು.
    | ಅಶ್ರಫ್‌ಪೀರಾ ಕಾದ್ರಿ ಕಾದ್ರಿ ದರ್ಗಾದ ಕಿರಿಯ ಪೀಠಾಧಿಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts