More

    20 ಕ್ಷೇತ್ರಗಳ ಪೈಕಿ 8 ಹಾಲಿ ಸಂಸದರಿಗೆ ಟಿಕೆಟ್​ ಮಿಸ್​ ಆಗಿದ್ದೇಕೆ? ಯಾರ ಬದಲಿಗೆ ಯಾರು ಕಣಕ್ಕೆ?

    ನವದೆಹಲಿ: ಲೋಕಸಭೆ ಚುನಾವಣೆಗೆ ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದೆ. ಕೆಲವು ಪ್ರಮುಖರಿಗೆ ಟಿಕೆಟ್​ ನಿರಾಕರಣೆ ಮತ್ತು ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಅಚ್ಚರಿಯ ಅಂಶಗಳು ಈ ಪಟ್ಟಿಯಲ್ಲಿವೆ. ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದರಿಗೂ ಕೊಕ್​ ನೀಡಲಾಗಿದೆ.

    ಈಗ ಅಭ್ಯರ್ಥಿ ಘೋಷಿಸಲಾಗಿರುವ 20 ಕ್ಷೇತ್ರಗಳ ಪೈಕಿ 8 ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಲಾಗಿರುವ ದಿಟ್ಟ ನಿಲುವನ್ನು ಬಿಜೆಪಿ ಹೈಕಮಾಂಡ್​ ಪ್ರದರ್ಶಿಸಿದೆ.

    ಬೆಂಗಳೂರು ಉತ್ತರ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮೈಸೂರು ಸಂಸದ, ಪ್ರತಾಪ್‌ ಸಿಂಹ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಹಾವೇರಿ ಸಂಸದ ಶಿವಕುಮಾರ್‌ ಉದಾಸಿ (ಇವರು ಸ್ಪರ್ಧೆಗೆ ನಿರಾಸಕ್ತಿ ತೋರಿದ್ದರು), ತುಮಕೂರು ಸಂಸದ ಜಿಎಸ್‌ ಬಸವರಾಜು ( ಇವರು ನಿವೃತ್ತಿ ಘೋಷಿಸಿದ್ದರು) ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (ಇವರು ನಿವೃತ್ತಿ ಘೋಷಿಸಿದ್ದರು), ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಬಿಜೆಪಿ ನಾಯಕರು 72 ಅಭ್ಯರ್ಥಿಗಳಿರುವ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕ 20 ಅಭ್ಯರ್ಥಿಗಳು ಒಳಗೊಂಡಿದ್ದಾರೆ.

    ಕೆಲವು ಹಾಲಿ ಸಂಸದರಿಗೆ ಕೊಕ್​ ನೀಡಲಾಗಿರುವುದರಿಂದ ಹೊಸ ಮುಖಗಳಿಗೆ ಹಾಗೂ ರಾಜ್ಯ ಘಟಕದ ಹಿರಿಯ ನಾಯಕರಿಗೆ ಮಣೆ ಹಾಕಲಾಗಿದೆ.

    ಯಾರ ಬದಲಿಗೆ ಯಾರಿಗೆ?:

    ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್​ ಬದಲಿಗೆ ಬ್ರಿಜೇಶ್​ ಚೌಟಾಗೆ ಟಿಕೆಟ್ ನೀಡಲಾಗಿದೆ. ಕಟೀಲ್​ ಅವರಿಗೆ ಟಿಕೆಟ್​ ನಿರಾಕರಿಸುವ ಸುಳಿವು ಮೊದಲೇ ಇತ್ತು. ಹೀಗಾಗಿಯೇ ಸ್ವತಃ ಕಟೀಲ್​ ಅವರು “ನಾವು ಪಕ್ಷ ಏನೇ ಹೇಳಿದರೂ ಮಾಡುತ್ತೇವೆ. ಪಕ್ಷದವರು ನಮ್ಮ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ. ಒರೆಸು ಎಂದು ಹೇಳಿದರೆ ಒರೆಸುತ್ತೇವೆ. ನಮಗೆ ಅಧಿಕಾರವೇ ಪ್ರಾಮುಖ್ಯ ಅಲ್ಲ. ಏನು ಬದಲಾವಣೆ ಮಾಡಬೇಕೋ ಅದನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳ ಚರ್ಚೆ ಬಗ್ಗೆ ನಾನು ಹೆಚ್ಚು ತಲೆಕಡಿಸಿಕೊಳ್ಳುವುದಿಲ್ಲ. ನಾವು ಕಾರ್ಯವನ್ನು ನಂಬಿರುವಂಥವರು. ಕಾರ್ಯಕರ್ತರ ಆಧಾರದಲ್ಲಿ ಬೆಳೆದವರು” ಎಂದು ಭಾವುಕರಾಗಿ ಹೇಳಿದ್ದರು.

    ಕರಾವಳಿಯ ಬಿಜೆಪಿ ನಾಯಕ ಮತ್ತು ನಿವೃತ್ತ ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರನ್ನು ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈಗ ಅವರಿಗೆ ಟಿಕೆಟ್​ ಒಲಿದು ಬಂದಿದೆ.

    8 ಗೂರ್ಖಾ ರೈಫಲ್ಸ್‌ನ 7 ನೇ ಬೆಟಾಲಿಯನ್‌ನ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಚೌತಾ ಅವರು ಸ್ವಯಂ ನಿವೃತ್ತಿಯನ್ನು ಆರಿಸಿಕೊಂಡ ನಂತರ 2011 ರಲ್ಲಿ ಸ್ವಗ್ರಾಮಕ್ಕೆ ಮರಳಿದ್ದರು. ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪಕ್ಷದ ಉಸ್ತುವಾರಿ ವಹಿಸಿದ್ದರು.

    ಮೈಸೂರಿನಲ್ಲಿ ಪ್ರತಾಪ್​ ಸಿಂಹ ಬದಲು ರಾಜವಶಂಸ್ಥ ಯದುವೀರ ಒಡೆಯರ್​ ಅವರಿಗೆ ಮಣೆ ಹಾಕಲಾಗಿದೆ. ಪ್ರತಾಪ್​ಗೆ ಕೂಡ ಟಿಕೆಟ್​ ತಪ್ಪುವ ನಿರೀಕ್ಷೆ ಮೊದಲೇ ಇತ್ತು. ಕೆಲ ದಿನಗಳ ಹಿಂದೆ ಲೋಕಸಭೆ ಚೇಂಬರ್​ಗೆ ಅಕ್ರಮವಾಗಿ ನುಗ್ಗಿ ಗಲಾಟೆ ನಡೆಸಿದವರಿಗೆ ಸಂಸತ್​ ಪ್ರವೇಶದ ಪಾಸ್​ ಕೊಟ್ಟಿದ್ದು ಪ್ರತಾಪ್​ ಸಿಂಹ ಅವರೇ ಎಂದು ಬಹಿರಂಗವಾದ ನಂತರ ಈ ಟಿಕೆಟ್​ ತಪ್ಪುವ ಸುಳಿವು ಲಭ್ಯವಾಗಿತ್ತು.

    ಬಳ್ಳಾರಿಯಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ಬದಲಿಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶ್ರೀರಾಮುಲು ಅವರಿಗೆ ಮಣೆ ಹಾಕಿರುವುದು ಕೂಡ ನಿರೀಕ್ಷಿತವೇ ಆಗಿದೆ.

    ಹಾವೇರಿಯಲ್ಲಿ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರು ಈ ಮೊದಲೇ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಈ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಲಭ್ಯ ಇಲ್ಲದ್ದರಿಂದ, ಈ ಕ್ಷೇತ್ರ ವ್ಯಾಪ್ತಿಯ ಶಿಗ್ಗಾಂವಿ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡುವ ಜಾಣ್ಮೆಯನ್ನು ಬಿಜೆಪಿ ಹೈಕಮಾಂಡ್​ ಮೆರೆದಿದೆ.

    ತುಮಕೂರಿನಲ್ಲಿ ಹಾಲಿ ಸಂಸದ ಜಿ.ಎಸ್​.ಬಸವರಾಜು ಬದಲು ಮಾಜಿ ಸಚಿವ ವಿ. ಸೋಮಣ್ಣ; ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲು ಡಾ.ಬಸವರಾಜ​ ಕ್ಯಾವಟರ್ ಅವರಿಗೆ ಟಿಕೆಟ್​ ನೀಡಲಾಗಿದೆ. ಚಾಮರಾಜನಗರದಿಂದ ವಿ.ಶ್ರೀನಿವಾಸ​ ಪ್ರಸಾದ್​ ಬದಲಿಗೆ ಎಸ್​.ಬಾಲರಾಜುಗೆ ಅವರು ಸ್ಪರ್ಧಿಸಲಿದ್ದಾರೆ. ಶ್ರೀನಿವಾಸ ಅವರು ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ.

    ಇನ್ನು ಹಾಲಿ ಸಂಸದ ಹಾಗೂ ಮಾಜಿ ಸಂಸದ ಸದಾನಂದಗೌಡರಿಗೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್​ ಕೈತಪ್ಪಿರುವುದು ಕೂಡ ನಿರೀಕ್ಷಿತವೇ ಆಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರದಿಂದ ಕಣಕ್ಕೆ ಇಳಿಯುವುದು ಅಚ್ಚರಿದಾಯಕ ಬೆಳವಣಿಗೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿಧಾನ ಪರಿಷತ್​ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಣಕ್ಕಿಳಿಯಲಿದ್ದಾರೆ.

    ಇನ್ನು ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ ಅವರು ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರದಿಂದ ಕಣಕ್ಕೆ ಇಳಿಯುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

    ಇನ್ನು ದಾವಣಗೆರೆಯಲ್ಲಿ ಸಿದ್ದೇಶ್ವರ ಅವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಲಾಗಿದೆ.

    ಮಂಡ್ಯ, ಹಾಸನ, ಕೋಲಾರ ಈ ಮೂರು ಕ್ಷೇತ್ರಗಳನ್ನು ಮಿತ್ರಪಕ್ಷವಾದ ಜೆಡಿಎಸ್​ಗೆ ಬಿಜೆಪಿ ಬಿಟ್ಟುಕೊಡುತ್ತಿದೆ. ಇನ್ನು 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.

    5 ರೈಲ್ವೆ ಕಂಪನಿಗಳ ಷೇರುಗಳ ಬೆಲೆ ಒಂದೇ ದಿನದಲ್ಲಿ ಅಪಾರ ಕುಸಿತ: ಹೂಡಿಕೆದಾರರನ್ನು ನಿರಂತರವಾಗಿ ಶ್ರೀಮಂತಗೊಳಿಸಿದ ಸ್ಟಾಕ್​ಗಳಲ್ಲಿ​ ಏಕಾಏಕಿ ನಷ್ಟ

    6 ತಿಂಗಳಲ್ಲಿಯೇ 1 ಲಕ್ಷವಾಯ್ತು 14.85 ಲಕ್ಷ ರೂಪಾಯಿ: ಒಂದಕ್ಕೆ 6 ಬೋನಸ್​ ಷೇರು ನೀಡುತ್ತಿದೆ ಕಂಪನಿ; ಹೂಡಿಕೆದಾರರಿಗೆ ಹಣದ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts