More

    ನಮ್ಮ ಆಹಾರಸಂಸ್ಕೃತಿಯಲ್ಲೇ ಇದೆ ಆರೋಗ್ಯ!: ಕರೊನಾ ವಿರುದ್ಧ ಮನೆಮದ್ದಿನ ಪರಿಣಾಮಕಾರಿ ಹೋರಾಟ 

    ಭಾರತದ ಆಹಾರಪದ್ಧತಿ ಬರೀ ವೈವಿಧ್ಯಮಯವಲ್ಲ; ದೇಹದ ಚೈತನ್ಯವನ್ನು ಹೆಚ್ಚಿಸುವ ಸಂಜೀವಿನಿ. ಅದಕ್ಕೆಂದೇ ನಮ್ಮಲ್ಲಿ ಆಹಾರವನ್ನು ಅನ್ನಪೂರ್ಣೇಶ್ವರಿ ರೂಪದಲ್ಲಿ ಕಂಡು, ದೈವತ್ವದ ಸ್ಥಾನ ನೀಡಲಾಗಿದೆ. ಕರೊನಾ ಹೊತ್ತಿನಲ್ಲಿ ಜಗತ್ತಿನ ಮುಂದುವರಿದ ರಾಷ್ಟ್ರಗಳೂ ಭಾರಿ ನಷ್ಟ ಅನುಭವಿಸಿದರೂ, ಭಾರತವನ್ನು ಕಾಪಾಡಿದ್ದು ಊಟದ ಬುತ್ತಿ ಮತ್ತು ಜ್ಞಾನದ ಬುತ್ತಿ. ಹಾಗಾಗಿಯೇ, ಇಲ್ಲಿಯ ಆಹಾರಸಂಸ್ಕೃತಿಯನ್ನು ಅರಿತು ಅಳವಡಿಸಿಕೊಳ್ಳುವ ಆಕಾಂಕ್ಷೆ ವಿದೇಶಿಯರಲ್ಲೂ ಗರಿಗೆದರಿದೆ.

    * ರವೀಂದ್ರ ಎಸ್. ದೇಶಮುಖ್

    ಕಾಲದ ಓಟವೇ ಹಾಗೇ. ಅಲ್ಲಿ ಅಚ್ಚರಿಗಳು ಕಾಣಿಸಿಕೊಳ್ಳುತ್ತವೆ. ಸತ್ಯದ ಮೇಲೆ ಆವರಿಸಿಕೊಂಡಿದ್ದ ಮೋಡಗಳು ಚದುರಿ ಹೋಗುತ್ತವೆ. ನಮ್ಮತನದ ಅರಿವು ಮೂಡಿಸುತ್ತವೆ. ಕರೊನಾದ ಅವಧಿಯೂ ಹಾಗೆಯೇ. ಅದು ತಂದಿಟ್ಟ ಸಂಕಟಗಳಿಗೆ, ಕಲಿಸಿದ ಜೀವನಪಾಠಗಳಿಗೆ ಲೆಕ್ಕವೇ ಇಲ್ಲ. ಕಣ್ಣಿಗೆ ಕಾಣದ ವೈರಸ್ ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿಬಿಟ್ಟಾಗ ಇದರ ವಿರುದ್ಧ ಹೋರಾಡುವುದು ಹೇಗೆ ಎಂಬುದನ್ನೇ ಅರಿಯದ ಅನೇಕ ರಾಷ್ಟ್ರಗಳು ಭಾರತದತ್ತ ನೋಡಿದವು. ರಾಮ-ರಾವಣರ ಯುದ್ಧದಲ್ಲಿ ಲಕ್ಷ್ಮಣನು ಪ್ರಜ್ಞಾಹೀನನಾದಾಗ, ಅವನನ್ನು ಬದುಕಿಸಲು ಸಂಜೀವಿನಿ ಹೊತ್ತು ತಂದವನೇ ಹನುಮಂತ. ಆ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಅದ್ಭುತ ನಿಧಿ ನಮ್ಮಲ್ಲೇ ಇದೆ ಎಂದು ಸಾರಿ ಹೇಳಿದ. ಅಷ್ಟಕ್ಕೂ, ನಾವು ಸ್ವೀಕರಿಸುವ ಆಹಾರ ಅದು ಕೇವಲ ಬದುಕುವುದಕ್ಕಾಗಿ ಅಲ್ಲ. ಆರೋಗ್ಯವೇ ನಮ್ಮ ಊಟದ ತಟ್ಟೆಯಲ್ಲಿದೆ ಎಂದು ಹಿರಿಯರು ಸದಾ ಹೇಳುತ್ತಿದ್ದರು. ಕುಟುಂಬಸದಸ್ಯರ ಪೈಕಿ ಯಾರಾದರೂ ಹುಷಾರು ತಪ್ಪಿದರೆ, ‘ಚೆನ್ನಾಗಿ ಊಟ ಮಾಡು, ಹಣ್ಣು-ಹಂಪಲು ತಿನ್ನು’ ಎಂದ್ಹೇಳಿ, ಕೆಲ ಮನೆಮದ್ದುಗಳನ್ನು ಸೂಚಿಸುತ್ತಿದ್ದರು. ಅಂದರೆ, ನಾವು ಸ್ವೀಕರಿಸುವ ಆಹಾರವೇ ನಮ್ಮ ಚಿಂತನೆಗಳನ್ನು, ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಯೋಗವಿಜ್ಞಾನ ಹೇಳಿದ್ದರೆ, ನಮ್ಮ ಊಟವೇ ಔಷಧವಾಗುತ್ತದೆ, ಚೈತನ್ಯವಾಗುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದಿದೆ ಆಯುರ್ವೇದ.

    ತಲೆತಲಾಂತರಗಳಿಂದ ಪಾಲಿಸಿಕೊಂಡು ಬಂದ ಆರೋಗ್ಯಸಂಬಂಧಿ ಉಪಕ್ರಮ ಮತ್ತು ಉತ್ತಮ ಆಹಾರ ಪದ್ಧತಿ ಕರೊನಾ ಹೊತ್ತಿನಲ್ಲಿ ಭಾರತೀಯರಿಗೆ ವರದಾನವಾಗಿ ಪರಿಣಮಿಸಿತು. ನಮ್ಮ ದೇಶದಲ್ಲಿ ಸೋಂಕಿನಿಂದ ಸಾವು-ನೋವು ಸಂಭವಿಸಿದರೂ, ಅಮೆರಿಕ, ಬ್ರಿಟನ್‌ನಂಥ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ. ಇದಕ್ಕೆ ಕಾರಣ, ಮನೆಹಿರಿಯರ ಪಾರಂಪರಿಕ ಆರೋಗ್ಯಜ್ಞಾನ ಮತ್ತು ಆಹಾರಸಂಸ್ಕೃತಿ. ಆಯುರ್ವೇದವಂತೂ ಈ ಹೊತ್ತಲ್ಲಿ ತನ್ನ ಶಕ್ತಿ ಏನು ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟಿತು. ಜತೆಗೆ, ದೈಹಿಕ, ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಆಯುರ್ವೇದವೇ ಸೂಕ್ತ ಎಂಬ ಅರಿವು ವ್ಯಾಪಕವಾಯಿತು. ಮನೆಮದ್ದಿನ ಮಹತ್ವವೂ ಮನದಟ್ಟಾಯಿತು. ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆಮಾತು ಸುಳ್ಳಾಗಿ ಹಿತ್ತಲಿನ ಗಿಡಮೂಲಿಕೆ, ಸೊಪ್ಪು, ಔಷಧವೇ ಕರೊನಾ ವಿರೋಧಿ ಹೋರಾಟದ ಅಸಗಳಾದವು. ಅಡುಗೆಮನೆಯ ಪಂಚಪಾಳ (ಮಸಾಲೆ, ಸಾಂಬಾರ ಪದಾರ್ಥಗಳ ಡಬ್ಬಿ) ಭಾರಿ ಮಹತ್ವ ಪಡೆದುಕೊಂಡಿತು.

    ಇದೆಲ್ಲವೂ ದಿಢೀರನೇ ಸಂಭವಿಸಿದ ಜ್ಞಾನೋದಯವೇನಲ್ಲ. ನಮ್ಮ ಆಹಾರಪದ್ಧತಿಯನ್ನು, ಸಾಂಪ್ರದಾಯಿಕ ಅಡುಗೆಯ ಸತ್ವವನ್ನು, ಅಡುಗೆಮನೆಯ ಸರಳ ವಿಜ್ಞಾನವನ್ನು ಮರೆತು ನಮಗೆ, ಇಲ್ಲಿನ ವಾತಾವರಣಕ್ಕೆ ಒಗ್ಗದ ಪಾಶ್ಚಾತ್ಯ ತಿನಿಸುಗಳನ್ನು ನಮ್ಮದು ಮಾಡಿಕೊಳ್ಳಲು ಹೋಗಿ ಅನೇಕ ಸಮಸ್ಯೆಗಳನ್ನು ತಂದುಕೊಂಡಿದ್ದಾಯಿತು. ಕೊನೆಗೂ, ರೋಗನಿರೋಧಕ ಶಕ್ತಿ ಹೆಚ್ಚಿಸುವ ರಕ್ಷಾಕವಚ ನಮ್ಮ ಅಡುಗೆಮನೆ, ಸಾಂಪ್ರದಾಯಿಕ ಆಹಾರಕ್ರಮಗಳಲ್ಲೇ ಇದೆ ಎಂಬ ಅರಿವಿನ ಬೆಳಕು ಬದಲಾವಣೆಯತ್ತ ಕೊಂಡೊಯ್ದಿತು.

    ಋತುಮಾನಗಳಿಗೆ ತಕ್ಕ ಆಹಾರ: ಋತುಮಾನಗಳಿಗೆ ತಕ್ಕಂತೆ ಆಹಾರ ಸ್ವೀಕರಿಸುವ ಕ್ರಮ ನಮ್ಮಲ್ಲಿ ಮುಂಚೆಯಿಂದಲೂ ಇದೆ. ಬೇಸಿಗೆ ಕಾಲದಲ್ಲಿ ದೇಹಕ್ಕೆ ತಂಪು ನೀಡುವಂಥ ಪದಾರ್ಥಗಳು (ತಂಬುಳಿ, ಮಜ್ಜಿಗೆ, ಬಗೆಬಗೆಯ ಕೋಸಂಬರಿ, ಲಿಂಬೆಹಣ್ಣು, ಮಾವಿನಕಾಯಿ ಪಾನಕ ಇತ್ಯಾದಿ), ಮಳೆಗಾಲ, ಚಳಿಗಾಲದಲ್ಲಿ ದೇಹದ ಅಗ್ನಿಯ ಶಕ್ತಿ ಹೆಚ್ಚಿಸುವ ಪದಾರ್ಥಗಳನ್ನು (ಪಾಯಸ ಸೇರಿ ಕೆಲ ಸಿಹಿಖಾದ್ಯಗಳು, ಎಣ್ಣೆಅಂಶದ ಕೆಲ ಖಾದ್ಯಗಳು) ಸೇವಿಸಲಾಗುತ್ತಿತ್ತು. ಆಯಾ ಋತುವಿನಲ್ಲಿ ಬರುವ ಹಣ್ಣು, ತರಕಾರಿಗಳ ವ್ಯಾಪಕ ಬಳಕೆಯೇ ದೇಹಾರೋಗ್ಯವನ್ನು ಕಾಪಾಡುತ್ತಿತ್ತು.

    ಪ್ರಾದೇಶಿಕತೆಗೆ ಅನುಸಾರವಾದ ಆಹಾರ: ಆಯಾ ಪ್ರದೇಶದ ಹವಾಮಾನಕ್ಕೆ ತಕ್ಕಂತೆಯೇ ಆಹಾರವನ್ನು ತೆಗೆದುಕೊಳ್ಳುವ ಕ್ರಮ ತುಂಬ ಮಹತ್ವದ್ದು. ಕರ್ನಾಟಕದ್ದೇ ಉದಾಹರಣೆಯಾಗಿ ತೆಗೆದುಕೊಂಡರೆ, ಉತ್ತರ ಕರ್ನಾಟಕದ ಕಡೆಗೆ ಜೋಳ, ಗೋಧಿ, ಸಜ್ಜೆಯ (ರೊಟ್ಟಿ, ಚಪಾತಿ) ಬಳಕೆ ಹೆಚ್ಚು. ದಕ್ಷಿಣ ಕರ್ನಾಟಕದಲ್ಲಿ ರಾಗಿಯಾದರೆ, ಕರಾವಳಿ-ಮಲೆನಾಡಿನಲ್ಲಿ ಕುಚಲಕ್ಕಿ, ಕೆಂಪಕ್ಕಿ. ಎಲ್ಲ ಭಾಗಗಳಲ್ಲೂ ಸಾಂಬಾರ್ ಪದಾರ್ಥಗಳ ಅಂದರೆ ಅರಿಶಿನ, ಜಿರಿಗೆ, ಓಂಕಾಳು, ಒಣಶುಂಠಿ, ಹಸಿಶುಂಠಿ, ಮೆಂತೆ, ಕರಿಮೆಣಸು, ಬಿಳಿಮೆಣಸು, ಕರಿಬೇವು, ಕೊತ್ತಂಬರಿ, ಇಂಗು, ಲವಂಗ, ಏಲಕ್ಕಿ ಇವುಗಳ ಬಳಕೆ ರೂಢಿಯಲ್ಲಿದೆ. ಕರೊನಾ ಹೊತ್ತಿನಲ್ಲಿ ಜನರು ಇವುಗಳ ಮಹತ್ವವನ್ನು ಮತ್ತಷ್ಟು ಕಂಡುಕೊಂಡರು. ಶುಂಠಿ, ತುಳಸಿ, ಅರಿಶಿನ, ಅಮೃತಬಳ್ಳಿ, ಬಿಸಿನೀರು, ಹಾಲು ಇತ್ಯಾದಿ ಬಳಸಿ ಮಾಡಿಕೊಳ್ಳುತ್ತಿದ್ದ ಕಷಾಯ ಭಾರಿ ಜನಪ್ರಿಯವಾಯಿತು. ಮಲೆನಾಡಿನ ಜನರಿಗೆ ಕಷಾಯ ಹೊಸದಲ್ಲವಾದರೂ, ಬಯಲುಸೀಮೆ ಕಡೆಯ ಜನರೂ ಕಷಾಯ ಸೇವನೆ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ದೈನಂದಿನ ಬದುಕಿನಲ್ಲಿ ಶಿಸ್ತಿನಿಂದ ಅಳವಡಿಸಿಕೊಂಡರು.

    ಆಯುರ್ವೇದದಲ್ಲಿ ಹೇಳಿದಂತೆ ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯದಲ್ಲಿ ಆಹಾರ ಸ್ವೀಕರಿಸಿದರೆ ಬಹುತೇಕ ಕಾಯಿಲೆಗಳಿಂದ ದೂರವಿರಬಹುದು. ಹಬ್ಬ-ಹರಿದಿನಗಳಲ್ಲಿ ಮಾಡುವ ಅಡುಗೆಯೂ ಆಯಾ ಋತುಗಳಿಗೆ ಹೊಂದುವಂಥದ್ದಾಗಿರುತ್ತದೆ ಮತ್ತು ದೇಹಕ್ಕೆ ಪುಷ್ಟಿ ನೀಡುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞ ಡಾ.ಅಶ್ವಿನ್.

    ಏನೆಲ್ಲ ಉಪಯೋಗ?: ಸಾಂಬಾರ ಪದಾರ್ಥಗಳ ರಾಜ ಎಂದು ಬಿಂಬಿತವಾಗಿರುವ ಕರಿಮೆಣಸು ಕಷಾಯಗಳ ರಾಜನಾಗಿಯೂ ಮೆರೆಯಿತು. ಕೆಮ್ಮು, ಕ, ಶೀತ, ಗಂಟಲುಕೆರೆತ, ಅಜೀರ್ಣ, ಅಗ್ನಿಮಾಂದ್ಯ, ಹೊಟ್ಟೆಯುಬ್ಬರ ಇತ್ಯಾದಿ ಕಾಯಿಲೆಗಳ ಉಪಚಾರಕ್ಕೆ ಬಳಸುವ ಕಾಳುಮೆಣಸು ಅಥವಾ ಕರಿಮೆಣಸಿಗೆ ಅಡುಗೆಮನೆಯಲ್ಲಿ ಯಾವಾಗಲೂ ಭದ್ರಸ್ಥಾನ. ಕರಿಮೆಣಸು ನೋವುನಿವಾರಕ, ಜಂತುನಿವಾರಕ ಮತ್ತು ರೋಗನಿರೋಧಕವೂ ಹೌದು. ಕ ಮತ್ತು ವಾತದೋಷವನ್ನು ನಿವಾರಿಸುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.

    ಕ್ಯಾಲಶಿಯಂ, ಪೊಟ್ಯಾಶಿಯಂ, ಐರನ್ ಖನಿಜಗಳನ್ನು ಹೊಂದಿರುವ ಲವಂಗ ವಿಟಮಿನ್ ಎ, ಸಿ ಜೀವಸತ್ವಗಳನ್ನೂ ಒದಗಿಸುತ್ತದೆ. ಲವಂಗದ ಎಣ್ಣೆ ಹಲ್ಲುನೋವಿಗೆ ರಾಮಬಾಣ. ಜೀರ್ಣಕ್ರಿಯೆಗೂ ಸಹಕಾರಿ. ಅಡುಗೆಯಲ್ಲಿ ನಿಯಮಿತವಾಗಿ ಲವಂಗ ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸಬಹುದು. ಜೀರಿಗೆ ಶ್ವಾಸಕೋಶದ ಸೂಕ್ಷ್ಮನಾಳಗಳನ್ನು ಹಿಗ್ಗಿಸುತ್ತದೆ. ಇದು ಕೆಮ್ಮು, ಅಸ್ತಮಾ ಗುಣಪಡಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ಅಗ್ನಿದೀಪನ, ಅಗ್ನಿವರ್ಧನ ಗುಣ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಉದರಸಂಬಂಧಿ ಔಷಧಗಳಲ್ಲಿ ಓಂಕಾಳಿನ ಬಳಕೆ ವ್ಯಾಪಕ. ಮೆಂತ್ಯ ಸೊಪ್ಪು ವಿಟಮಿನ್ ಎ, ಬಿ ಹೊಂದಿದೆ.

    ಉದ್ಯಮಸ್ವರೂಪ ಬದಲು: ಜನರು ಶುಚಿ-ರುಚಿಯಾದ ಸಾಂಪ್ರದಾಯಿಕ ಆಹಾರಪದ್ಧತಿಗೆ ಮರಳಿದ ಪರಿಣಾಮ ಹಲವು ರಾಜ್ಯಗಳಲ್ಲಿ ಹೋಟೆಲ್‌ಉದ್ಯಮದ ಸ್ವರೂಪವೂ ಬದಲಾಯಿತು. ಹೋಟೆಲ್‌ಗಳು ಸಹ ಪೌಷ್ಟಿಕಾಂಶದ ಖಾದ್ಯಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸಿದವು. ಹೆಸರುಕಾಳಿನ ದೋಸೆ, ರಾಗಿದೋಸೆ, ಮೆಂತ್ಯಸೊಪ್ಪಿನ ಪರೋಠಾ ಹೀಗೆ ಬಗೆಬಗೆಯ ಖಾದ್ಯಗಳು ಮೆನುವಿನಲ್ಲಿ ಪ್ರವೇಶ ಪಡೆದವು.

    ಬದಲಾವಣೆಯ ಸಮಯ: ಅಂಧಾನುಕರಣೆಯ ಚಾಳಿ ಆಹಾರಪದ್ಧತಿಗೂ ಆವರಿಸಿಕೊಂಡಿದ್ದು ವಿಪರ್ಯಾಸ. ವಿದೇಶಗಳ ಖಾದ್ಯಗಳು ಇಲ್ಲಿ ಲಗ್ಗೆ ಇಟ್ಟಿದ್ದು, ಮಾತ್ರವಲ್ಲ ಅನಾರೋಗ್ಯವನ್ನೂ ಹೊತ್ತು ತಂದವು. ನಮ್ಮ ದೇಹಕ್ಕೆ ಪೂರಕವಾಗುವ ಆಹಾರವನ್ನು ಸ್ವೀಕರಿಸಬೇಕೆ ಹೊರತು ಪ್ರತಿಕೂಲವಾದದ್ದಲ್ಲ ಎಂಬುದನ್ನು ಆಯುರ್ವೇದ ಸ್ಪಷ್ಟವಾಗಿ ಹೇಳುತ್ತದೆ. ವರ್ಷದ ಹನ್ನೆರಡೂ ತಿಂಗಳು ಒಂದೇ ಬಗೆಯ ಆಹಾರ, ಜಂಕುಡ್‌ಗಳ ಸೇವನೆ ಅತಿಯಾದ ಪರಿಣಾಮ ನಾಲಿಗೆಗಳು ನಮ್ಮ ಮನೆಗಳ ಸ್ವಾದವನ್ನೇ ತಿಳಿಯದಂತಾದವು. ಅದನ್ನು ಮನದಟ್ಟು ಮಾಡಿಸಲು ಕರೊನಾ ನೆಪವಾಯಿತು. ಮನೆಊಟವೇ ಮುಖ್ಯವಾಯಿತು. ಅದೇನಿದ್ದರೂ, ನಮ್ಮ ತಟ್ಟೆಯಲ್ಲಿನ ಆರೋಗ್ಯವನ್ನು, ಅಡುಗೆಮನೆಯಲ್ಲಿನ ವಿಜ್ಞಾನವನ್ನು ಅರಿತುಕೊಂಡು, ಅಳವಡಿಸಿಕೊಳ್ಳಲು ಕರೊನಾ ಕಾಲಘಟ್ಟ ನೆರವಾಯಿತು. ಪ್ರೊಟಿನ್, ವಿಟಮಿನ್, ಜೀವಸತ್ವಗಳ ಸಂಗಮವೇ ನಮ್ಮ ಸಾಂಪ್ರದಾಯಿಕ ಆಹಾರ. ಹಿರಿಯರು ಏನೋ ಹೇಳುತ್ತಾರೆ, ಅವರ ಕಾಲದ್ದನ್ನೇ ನಮಗೂ ಅನ್ವಯಿಸುತ್ತಾರೆ ಎಂಬ ಉಡಾೆ ಬದಿಗಿರಿಸಿ ಸಾಂಪ್ರದಾಯಿಕ ಆಹಾರಪದ್ಧತಿಯ ಮೊರೆ ಹೋಗುವ, ಆ ಮೂಲಕ ಸ್ವಸ್ಥಮಯ ಜೀವನ ನಮ್ಮದಾಗಿಸಿಕೊಳ್ಳುವ ಅಗತ್ಯತೆ ಇದೆ. ಯುಗಾದಿಗೆ ಸೇವಿಸುವ ಬೇವು-ಬೆಲ್ಲ, ಪಾನಕಕ್ಕೂ ಅದರದ್ದೇ ಆದ ಮಹತ್ವ ಇದ್ದು, ಇದು ಕೂಡ ರೋಗನಿರೋಧಕ ಶಕ್ತಿ ಹೊಂದಿದೆ.

    ಆಹಾರಕ್ರಮವನ್ನು ಸರಿಯಾಗಿ ಅನುಸರಿಸೋಣ

    ಸಂಪ್ರದಾಯ ಎಂಬುದೇ ಅದ್ಭುತ ವಿಜ್ಞಾನ. ಸಂಪ್ರದಾಯ ಎಂಬುದು ಎಂದೆಂದಿಗೂ ಒಳ್ಳೆಯದನ್ನು ಸ್ವೀಕರಿಸುತ್ತ, ಕೆಟ್ಟದ್ದನ್ನು ತ್ಯಜಿಸುತ್ತ ಬಂದಿದೆ. ಅಡುಗೆ ವಿಷಯದಲ್ಲೂ ಹೀಗೇ. ನಾವು ಏನು ತಿನ್ನುತ್ತೇವೆಯೋ ಅದೇ ನಾವು ಆಗುತ್ತೇವೆ. ಆಹಾರ ಎಂದರೆ ಅದು ಕೇವಲ ದೈಹಿಕ ಅವಶ್ಯಕತೆಯಲ್ಲ. ಶೇಕಡ 50 ಮನಸ್ಸಿನ ಭಾಗ ದೇಹದ ಶಕ್ತಿಯೇ ಎಂದು ಆಯುರ್ವೇದ ಸ್ಪಷ್ಟವಾಗಿ ಹೇಳಿದೆ. ನಮ್ಮ ಶರೀರದಲ್ಲಿ ತೆಗೆದುಕೊಂಡ ಆಹಾರ ಜೀರ್ಣವಾಗಿ, ರಕ್ತವಾಗಿ, ಸ್ಥೂಲವಾಗಿರುವ ಮಾಂಸಾದಿ ಧಾತುಗಳಾಗುತ್ತವೆ. ಶರೀರದಲ್ಲಿ ಏಳು ಧಾತುಗಳಿದ್ದು, ಎಲ್ಲ ಧಾತುಗಳ ಉತ್ಕಷ್ಟಭಾವವೇ ಓಜಸ್ಸು. ಆ ಓಜಸ್ಸೇ ಒಂದು ಹಂತದಲ್ಲಿ ಪ್ರಾಣವಾಗಿ, ಒಂದು ಭಾಗ ಮನಸ್ಸಾಗಿ ಪರಿವರ್ತನೆ ಹೊಂದುತ್ತದೆ. ಬಿತ್ತಿದಂತೆ ಬೆಳೆ ಎಂಬಂತೆ, ನಾವು ಯಾವ ಬಗೆಯ ಆಹಾರ ಸ್ವೀಕರಿಸುತ್ತೇವೆಯೋ ಹಾಗೆಯೇ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ನಮ್ಮ ತಾಯಂದಿರು ಅಡುಗೆಮನೆ ವಿಜ್ಞಾನವನ್ನು ತುಂಬ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಋತು ಬದಲಾವಣೆ, ದೇಹಸ್ಥಿತಿಯ ಬದಲಾವಣೆ ಇದನ್ನೆಲ್ಲ ನೋಡಿಕೊಂಡು ಸ್ವಾಸ್ಥ್ಯಕ್ಕೆ ಪೂರಕವಾದ ಅಡುಗೆ ತಯಾರಿಸುವಲ್ಲಿ ಅವರು ಸಿದ್ಧಹಸ್ತರು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಾಕೃತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಬಿಟ್ಟು, ಅಪ್ರಾಕೃತವಾಗಿ ಆಸ್ಪತ್ರೆಯಲ್ಲಿ ಆರೋಗ್ಯವನ್ನು ಕಂಡುಕೊಳ್ಳುವ ಸ್ಥಿತಿ ಬಂದಿದೆ. ಆಹಾರ ವಿಜ್ಞಾನವನ್ನು ಯಾವ ಸಂಪ್ರದಾಯ ತುಂಬ ಚೆನ್ನಾಗಿ ಅನುಸರಿಸುತ್ತೋ, ಅವರಿಗೆ ವೈದ್ಯರ ಅವಶ್ಯಕತೆ ತುಂಬ ಕಡಿಮೆ. ತಾಯಂದಿರು ಅಥವಾ ಗೃಹಿಣಿಯರು ತಯಾರಿಸುವ ಮನೆಊಟ ಗುಣಮಟ್ಟದಾಗಿರುತ್ತದೆ ಅಲ್ಲದೆ, ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿಯೇ, ಊಟ ಬಲ್ಲವನಿಗೆ ರೋಗ ಇಲ್ಲ ಎಂದು ಹೇಳಲಾಗಿದೆ. ಯಾವ ಸಮಯದಲ್ಲಿ ಯಾವ ಆಹಾರವನ್ನು ಸ್ವೀಕರಿಸಬೇಕು ಎಂದು ನಮ್ಮ ಸಂಪ್ರದಾಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದನ್ನು ಅನುಸರಿಸಬೇಕು. ವಿರುದ್ಧಾಹಾರಗಳು, ಋತುಮಾನ ವಿರೋಧಿ ಖಾದ್ಯಗಳನ್ನು ಸ್ವೀಕರಿಸಬಾರದು. ಕರಿಬೇವು, ಕರಿಮೆಣಸು, ಮೆಂತ್ಯ, ಜಿರಿಗೆ, ಅರಿಶಿಣ ಸೇರಿದಂತೆ ಸಾಂಬಾರ ಪದಾರ್ಥಗಳು, ಸೊಪ್ಪುಗಳು ರೋಗನಿರೋಧಕಗಳಾಗಿ ಕೆಲಸ ಮಾಡುತ್ತವೆ. ಇವು ಮುಂಚೆಯಿಂದಲೂ ಭಾರತೀಯರ ಅಡುಗೆಯ ಪ್ರಮುಖ ಭಾಗ. ಯಾವುದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು? ಯಾವ ಆಹಾರದೊಂದಿಗೆ ಬಳಸಬೇಕು? ಎಂಬುದನ್ನೂ ಸ್ಪಷ್ಟವಾಗಿ ನಮ್ಮ ಸಂಪ್ರದಾಯದಲ್ಲಿ ಹೇಳಿಕೊಂಡು ಬರಲಾಗಿದೆ. ಈ ಪ್ರಮಾಣ ಹೆಚ್ಚು-ಕಡಿಮೆಯಾದರೆ ದೇಹಕ್ಕೆ ಪ್ರಯೋಜನದ ಬದಲು ತೊಂದರೆಯೇ ಜಾಸ್ತಿ. ಅದೇನಿದ್ದರೂ, ಕರೊನಾ ಹೊತ್ತಿನಲ್ಲಿ ಮನೆಊಟದ, ಸಾಂಪ್ರದಾಯಿಕ ಆಹಾರದ ಮಹತ್ವ ಜನರಿಗೆ ಗೊತ್ತಾಗಿರುವುದು ಉತ್ತಮ ಬೆಳವಣಿಗೆ. ಇನ್ನಾದರೂ, ಉತ್ತಮ ಆಹಾರವನ್ನು ಸ್ವೀಕರಿಸುವ ಪ್ರಮಾಣ ಹೆಚ್ಚಿದರೆ ಕರೊನಾ ಹೊತ್ತಿನ ಜಾಗೃತಿ ಸಾರ್ಥಕ.

    – ಡಾ.ಅಶ್ವಿನ್ ಶಾಸ್ತ್ರಿ, ಡಾ.ಶುಭಾ ಶಾಸ್ತ್ರಿ, ಸಂಸ್ಥಾಪಕರು, ಆರೋಗ್ಯನಿಕೇತನ ಆಯುರ್ವೇದ ಚಿಕಿತ್ಸಾಲಯ, ಹರಿಹರಪುರ

    (೨೦೨೧ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts