More

    ಜಿಲ್ಲೆಯ ಅಭಿವೃದ್ಧಿಯಲ್ಲಿ ನಮ್ಮ ಕುಟುಂಬದ ಶ್ರಮ

    ಬೇಲೂರು: ಸ್ವಾರ್ಥಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಂಬಂಧ ಬೆಳೆಸಿಲ್ಲ. ದೇಶದ 150 ಕೋಟಿ ಜನರಿಗಾಗಿ ಸಂಬಂಧ ಬೆಳೆಸಿದ್ದೇನೆ. ದೇಶವನ್ನು ಪ್ರಧಾನಿ ಮೋದಿಯಲ್ಲದೆ, ಮಮತಾ ಬ್ಯಾನರ್ಜಿ, ಸ್ಟಾಲಿನ್ ಕೂಡ ಸಮರ್ಥವಾಗಿ ನಡೆಸುತ್ತಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.


    ಪಟ್ಟಣದ ಕೋಟೆ ಬಯಲು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರಾಷ್ಟ್ರ ರಾಜಕಾರಣ ವಿಭಿನ್ನವಾಗಿದೆ. ನಾನು 15 ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತು, ಗೆದ್ದಿದ್ದೇನೆ. ಎಚ್.ಡಿ.ಕುಮಾರಸ್ವಾಮಿ 9 ತಿಂಗಳು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸಗಳನ್ನು ಜನತೆ ನೆನೆಯಬೇಕು. ಅವರು ರೈತರ ಸಾಲ ಮನ್ನಾ ಮಾಡಿದರು. ಜಿಲ್ಲೆಯ ಅಭಿವೃದ್ಧಿಯಲ್ಲಿ ನಮ್ಮ ಕುಟುಂಬದ ಶ್ರಮವಿದೆ ಎಂದರು.


    ನಮ್ಮ ಕುಟುಂಬ ಯಾರಿಗೂ ಅನ್ಯಾಯ ಮಾಡಿಲ್ಲ. ನಾವು ರೈತರ ಮಕ್ಕಳು. ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ. ನಾನು ಇಲ್ಲಿಗೆ ಸಭೆ ನಿಲ್ಲಿಸುವುದಿಲ್ಲ. ಪ್ರತಿ ತಾಲೂಕಿಗೂ ಬರುತ್ತೇನೆ. ಎರಡೆರಡು ಬಾರಿ ನಿಮ್ಮ ರಕ್ಷಣೆಗೆ ನನ್ನ ಶರೀರ ತ್ಯಾಗ ಮಾಡಿದ್ದೇನೆ. ಯಾರೂ ಕೆಟ್ಟ ಅಪಪ್ರಚಾರಗಳಿಗೆ ಮಾರುಹೋಗದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.


    ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಸೋತಿರಬಹುದು. ಆದರೆ ಶಕ್ತಿ ಕುಂದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದೇವೆ. ಅಲ್ಲದೆ, ನನ್ನ 5 ವರ್ಷದ ಸಂಸದರ ಅವಧಿಯಲ್ಲಿ ಏನು ಕೆಲಸ ಮಾಡಿದ್ದೇವೆ ಎನ್ನುವುದು ಗೊತ್ತಿದೆ. ನಾನು ದೇವೇಗೌಡರ ಆಶೀರ್ವಾದ, ರೇವಣ್ಣ ಅವರ ಸಹಕಾರ ಮತ್ತು ಕಾರ್ಯಕರ್ತರ ಆಶೀರ್ವಾದದಿಂದ 10 ಸಾವಿರ ಕೋಟಿ ರೂ. ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಜತೆಗೆ, ಬೇಲೂರು-ಹಾಸನ ಚತುಷ್ಪಥ ರಸ್ತೆಗೆ 480 ಕೋಟಿ ರೂ., ಬೇಲೂರು ಕ್ಷೇತ್ರದ ಅಭಿವೃದ್ಧಿಗೆ 1750 ಕೋಟಿ ರೂ. ಅನುದಾನ ತಂದು ಕೆಲಸ ಮಾಡಿಸಿದ್ದೇನೆ ಎಂದರು.


    ಹಾಸನ-ಸಕಲೇಶಪುರ ರಸ್ತೆ ಅಭಿವೃದ್ಧಿ ಕೆಲಸ ಮಾಡಿಸಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಬೆಲೆ ಕೊಟ್ಟು ಕೇಂದ್ರ ಸರ್ಕಾರ ತೆಂಗು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿಗೆ ಮುಂದಾಗಿದೆ. ಆದರೆ ರಾಜ್ಯ ಸರ್ಕಾರ ಏನ್ಮಾಡ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಜತೆಗೆ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬೇಲೂರು ಕ್ಷೇತ್ರಕ್ಕೆ 1100 ಕೋಟಿ ರೂ. ಅನುದಾನ ತಂದು ಕೆಲಸ ಮಾಡಿಸಿದ್ದೇವೆ. ತಾಲೂಕಿಲ್ಲಿ ಎಲ್ಲ ಗ್ರಾಮಗಳ ರಸ್ತೆ ಅಭಿವೃದ್ಧಿ ಮಾಡಿಸಲಾಗಿದೆ. ಆದರೆ ನಾವು ಪ್ರಚಾರ ಮಾಡಲಿಲ್ಲ. ಅಲ್ಲದೆ, ಸಂಘಟನಾತ್ಮಕವಾಗಿ ಕೆಲಸ ಮಾಡದ ಕಾರಣ ಇಲ್ಲಿ ಸೋತೆವು. ಆದರೆ ಮುಂದಿನ ಚುನಾವಣೆಯಲ್ಲಿ ನಾವು ಒಗ್ಗಟ್ಟಾಗಿ ಮತ್ತೊಮ್ಮೆ ಬೇಲೂರಿನಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಕೆಲಸ ಮಾಡುತ್ತೇವೆ ಎಂದರು.


    ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಎಷ್ಟು ಸೀಟ್ ಕೊಡ್ತಾರೆ ಅನ್ನೋದು ಮುಖ್ಯವಲ್ಲ. ದೇಶದ ಉಳಿವಿಗಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ಮುಖ್ಯ. ನಮಗೆ ಹಿಂದುಗಳು ಬೇರೆ ಅಲ್ಲ, ಮುಸ್ಲಿಮರು ಬೇರೆ ಅಲ್ಲ. ಮೋದಿಯವರು ಹತ್ತು ವರ್ಷಗಳಲ್ಲಿ ಅಯೋಧ್ಯೆ, ಕಾಶಿ, ಗಂಗಾ ನದಿಯ ಸ್ವರೂಪವನ್ನು ಬದಲಿಸಿ, ರಸ್ತೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ ಎಂದು ತಿಳಿಸಿದರು.
    ಕಾಂಗ್ರೆಸ್ ಇಂದು ಗಾಂಧಿ, ನೆಹರೂ ಪಕ್ಷವಾಗಿ ಉಳಿದಿಲ್ಲ. ಕಾಂಗ್ರೆಸ್‌ನವರು ಬೇಕಾದಾಗ ಉಪಯೋಗಿಸಿಕೊಂಡು ಬೇಡವಾದಾಗ ಕಸದಂತೆ ಎಸೆಯುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುವ ಪಕ್ಷ. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿಗಳು ಎಲ್ಲಿ ಹೋಗುತ್ತವೋ ಏನೋ? ಅಧಿಕಾರಿಗಳಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಕಾರಿಗೆ ಡೀಸೆಲ್ ಹಾಕಿಸಿಕೊಳ್ಳಲು ಹಣ ಕೊಡ್ತಿಲ್ಲ ಎಂದರು.


    ಮೋದಿ ಅವರು ಎಚ್.ಡಿ.ದೇವೇಗೌಡರಿಗೆ ವಿಶೇಷವಾದ ಗೌರವ ನೀಡುತ್ತಾರೆ. ನಿಮ್ಮ ಮಾರ್ಗದರ್ಶನ ಬೇಕು ಎನ್ನುತ್ತಾರೆ. ಜೆಡಿಎಸ್ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದಿದ್ದು ರಸ್ತೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಸಿದ್ದೇವೆ. ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದೇವೆ ಎಂದರು.


    ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ, ಜಿಪಂ ಮಾಜಿ ಅಧ್ಯಕ್ಷರಾದ ಚಂದ್ರೇಗೌಡ, ಜಿ.ಡಿ.ಇಂದಿರಾ, ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ್, ಹಾಲಿ ನಿರ್ದೇಶಕ ಎಂ.ಎ.ನಾಗರಾಜ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸುಭಾಷ್, ಟಿಎಪಿಸಿಎಂಎಸ್ ಅಧ್ಯಕ್ಷ ಸೋಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts